ಉದ್ಘಾಟನೆಗೊಂಡರೂ ಉಪಯೋಗಕ್ಕೆ ಬಾರದ ಬಿ.ಸಿ.ರೋಡ್ ಹೈಟೆಕ್ ಬಸ್ ನಿಲ್ದಾಣ!
ಜನ ಸಂಚಾರವಿಲ್ಲದೆ ಅಂಗಡಿ ತೆರೆಯಲು ಉತ್ಸಾಹ ತೋರಿಸದ ಮಾಲಕರು
ಬಂಟ್ವಾಳ, ಜೂ. 4: ಎಂಟು ತಿಂಗಳ ಹಿಂದೆ ಬಿ.ಸಿ. ರೋಡ್‌ನಲ್ಲಿ ಕಾರ್ಯಾರಂಭಗೊಂಡ ನೂತನ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಸಾರ್ವಜನಿಕರ ಉಪ ಯೋಗಕ್ಕೆ ಬಾರದೆ ನಿರುಪಯುಕ್ತವಾಗಿ ನಿಂತಿದ್ದು, ಸದ್ಯ ಪ್ರಯಾಣಿಕರು ಬಾರದೇ ನಿಲ್ದಾಣ ಬಿಕೋ ಎನ್ನುತ್ತಿದೆ.
ಬಂಟ್ವಾಳ ತಾಲೂಕಿನಲ್ಲಿ ಸರಿಯಾದ ಬಸ್ ನಿಲ್ದಾಣ ವಿಲ್ಲ ಎನ್ನುವ ಕೊರಗಿಗೆ ಅಂದಿನ ಶಾಸಕರಾಗಿದ್ದ ಬಿ.ರಮಾನಾಥ ರೈ ಸುಮಾರು 7.39 ಕೋ.ರೂ. ಅನುದಾನ ಮೀಸಲಿಡುವ ಮೂಲಕ 2015ರಲ್ಲಿ ಇದರ ಕಾಮಗಾರಿ ಆರಂಭಿಸಿದ್ದರು. 2017ರ ಅಕ್ಟೋಬರ್ 22ಕ್ಕೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಸುಸಜ್ಜಿತ ಬಸ್ ನಿಲ್ದಾಣದವನ್ನು ಉದ್ಘಾಟಸಿ ಲೋಕಾರ್ಪಣೆ ಮಾಡಿದ್ದರು. ಆದರೆ ಇದುವರೆಗೂ ಈ ನಿಲ್ದಾಣ ಸಮರ್ಪಕವಾಗಿ ಬಸ್‌ಗಳ ನಿಲುಗಡೆ ತಾಣವಾಗಿಲ್ಲ.
ಈ ಬಸ್ ನಿಲ್ದಾಣವು ಪುತ್ತೂರು ವಿಭಾಗೀಯ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದೆ. ಕೆಲ ತಿಂಗಳ ಹಿಂದೆ ಇಲ್ಲಿಂದ ಕಾಸರಗೋಡಿಗೆ ಬಸ್ ಸರ್ವಿಸ್ ಹಾಗೂ ರಾತ್ರಿ ಬೆಂಗಳೂರಿಗೆ ಸ್ಲೀಪರ್ ಸರ್ವಿಸ್ ಬಸ್‌ಗಳ ಸಂಚಾರಕ್ಕೂ ಚಾಲನೆ ನೀಡಲಾಗಿದೆ. ಇಷ್ಟೆಲ್ಲಾ ಸೌಲಭ್ಯಗಳಿದ್ದರೂ ಇಲ್ಲಿನ ಬಸ್ ನಿಲ್ದಾಣ ಉಪಯೋಗ ಶೂನ್ಯವಾಗಿದೆ.
ಕಾರಣವೇನು?: ಮಂಗಳೂರಿಗೆ ತೆರಳುವ ಬಸ್‌ಗಳು ಮೇಲ್ಸೆತುವೆ ಮಾರ್ಗವಾಗಿ ಚಲಿಸುತ್ತವೆ. ಇದರಿಂದ ಪ್ರಯಾಣಿಕರು ಬಿ.ಸಿ.ರೋಡ್ ನಾರಾಯಣ ಗುರು ವೃತ್ತದ ಕೊಂಚ ದೂರದಲ್ಲಿ ನಿಲ್ಲುತ್ತಾರೆ. ಅಲ್ಲದೆ, ಇನ್ನು ಕೆಲವು ಬಸ್‌ಗಳು ಸರ್ವಿಸ್ ರಸ್ತೆಯ ಮೂಲಕ ಸಂಚರಿಸುತ್ತವೆ. ಈ ರಸ್ತೆಯಲ್ಲಿ ಸಂಚಾರವೂ ಇಕ್ಕಟಾಗಿದ್ದು,ಟ್ರಾಫಿಕ್ ಜಾಮ್ ಕೂಡಾ ಆಗುತ್ತದೆ. ಇದರಿಂದ ಪ್ರಯಾಣಿಕರು ಅಂಗಡಿಮುಗ್ಗಟ್ಟು ಹಾಗೂ ಎಲ್ಲಿಂದರಲ್ಲಿ ನಿಂತು ಬಸ್ ಏರುತ್ತಾರೆ. ಆದ್ದರಿಂದ ಇಲ್ಲಿನ ಬಸ್‌ಗಳು ಟಿಸಿಯ ನೋಂದಣಿಗಷ್ಟೇ ಬಸ್ ನಿಲ್ದಾಣಕ್ಕೆ ತೆರಳುತ್ತವೆ.
''ಎಲ್ಲ ಬಸ್‌ಗಳು ಮೇಲ್ಸೇತುವೆ ಅಡಿಭಾಗದಲ್ಲಿ ಬಂದು ನಿಲ್ಲುತ್ತವೆ. ಇದರಿಂದ ಬಿಸಿಲೇ ಇರಲಿ, ಮಳೆಯೇ ಇರಲಿ ನಾವು ಇಲ್ಲಿಂದಲೇ ಬಸ್ ಹತ್ತುತ್ತೇವೆ. ಅಲ್ಲದೆ, ಕೆಲವೊಂದು ಸಲ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಪ್ರಯಾಣಿಕರನ್ನು ಇಳಿಸಿ ಹೋಗುತ್ತವೆ. ಬಸ್ ನಿಲ್ದಾಣದ ಒಳಗಡೆ ಹೋಗುವ ಪ್ರಯತ್ನವೇ ಮಾಡುವುದಿಲ್ಲ'' ಎಂದು ಪ್ರಯಾಣಿಕರೊಬ್ಬರು ಆರೋಪಿಸುತ್ತಾರೆ.
ಅಲ್ಲದೆ, ಧರ್ಮಸ್ಥಳ, ಪುತ್ತೂರು, ಮಡಿಕೇರಿ, ಮೈಸೂರು ಹಾಗೂ ಬೆಂಗಳೂರು ಕಡೆ ತೆರಳುವ ಬಸ್‌ಗಳು ಬಿ.ಸಿ.ರೋಡ್ ಬಸ್ ನಿಲ್ದಾಣಕ್ಕೆ ತೆರಳದೆ ನೇರವಾಗಿ ಹೋಗುತ್ತಿದ್ದು, ಈ ಭಾಗದ ಪ್ರಯಾಣಿಕರಿಗೆ ಬಸ್ ನಿಲ್ದಾಣವೇ ಇಲ್ಲದಂತಾಗಿದೆ.
ತೆರೆಯದ ಅಂಗಡಿಗಳು
ಪ್ರಯಾಣಿಕರು ಹಾಗೂ ಗ್ರಾಹಕರಿಲ್ಲದೆ ಬಿಕೋ ಎನ್ನುತ್ತಿರುವ ಈ ನಿಲ್ದಾಣದಲ್ಲಿ ಇಲ್ಲಿನ ಅಂಗಡಿಗಳು, ಹೊಟೇಲ್‌ಗಳು ಇನ್ನೂ ತೆರೆದಿಲ್ಲ. ಕಟ್ಟಡದ ಅಂಗಡಿಗಳಿಗೆ ಟೆಂಡರ್ ಯೋಜನೆ ರೂಪಿಸಿದರೂ, ಮಾಲಕರು ಹರಾಜಿಗೆ ಉತ್ಸಾಹ ತೋರಿಸಿಲ್ಲ. ಇದರಿಂದ ಕಳೆದ 7 ತಿಂಗಳಿನಿಂದ ಇದಕ್ಕೆ ಬೀಗ ಹಾಕಲಾಗಿದೆ ಎಂದು ಇಲ್ಲಿನ ಅಧಿಕಾರಿಯೊಬ್ಬರು ಮಾಹಿತಿ ನೀಡುತ್ತಾರೆ. ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಮುಂಭಾಗದಲ್ಲಿರುವ ಡಿವೈಡರ್ ಅನ್ನು ತೆರವುಗೊಳಿಸಿಲ್ಲ. ಇದರಿಂದ ಬಸ್‌ಗಳು ಇಲ್ಲಿನ ಮೇಲ್ಸೆತುವೆ ಬಳಿ ಬಂದು ಹರ ಸಾಹಸಪಟ್ಟು ಬಸ್‌ಗಳನ್ನು ತಿರುಗಿಸಲಾಗುತ್ತದೆ. ಅಲ್ಲದೆ, ಈ ಇಕ್ಕಟ್ಟಾದ ಜಾಗದಲ್ಲಿ ಬಸ್ ತಿರುಗಿಸಲು ಸಾಧ್ಯವಾಗದ ಕಾರಣ ಐರಾವತದಂತಹ ಬಸ್‌ಗಳು ಬಸ್ ನಿಲ್ದಾಣವನ್ನು ಪ್ರವೇಶಿಸುವುದಿಲ್ಲ. ಒಂದು ವೇಳೆ ಬಸ್ ನಿಲ್ದಾಣದ ಮುಂಭಾಗದ ಡಿವೈಡರ್ ಅನ್ನು ತೆರವುಗೊಳಿಸಿದರೆ, ಮಂಗಳೂರಿನಿಂದ ಬರುವ ಎಲ್ಲ ಬಸ್‌ಗಳು ನಿಲ್ದಾಣಕ್ಕೆ ನೇರವಾಗಿ ಪ್ರವೇಶಿಸಬಹುದು. ಪ್ರಯಾಣಿಕರು ಇಲ್ಲಿಂದಲೇ ಸುರಕ್ಷಿತವಾಗಿ ಬಸ್‌ಗಳನ್ನು ಹಿಡಿಯಬಹುದು ಎಂಬುವುದು ಪ್ರಜ್ಞ್ಞಾವಂತ ನಾಗರಿಕರ ಅಭಿಪ್ರಾಯವಾಗಿದೆ.
ಸೌಲಭ್ಯವಿದ್ದರೂ ಸದುಪಯೋಗವಾಗುತ್ತಿಲ್ಲ
ಸುಮಾರು 1.5 ಎಕ್ರೆ ವಿಸ್ತೀರ್ಣದ ಜಾಗದಲ್ಲಿ ನೆಲ ಅಂತಸ್ತು, ಮೊದಲ ಮಹಡಿ ಒಳಗೊಂಡಿದ್ದು, ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಒಂದು ಸೂಪರ್ ಮಾರ್ಕೆಟ್, ಅಥವಾ ದೊಡ್ಡ ರೆಸ್ಟಾರೆಂಟ್ ನಿರ್ವಹಿಸುವಷ್ಟು ಜಾಗ, ಸುಮಾರು ನಾಲ್ಕೈದು ವಾಣಿಜ್ಯ ವ್ಯವಹಾರ ನಡೆಸುವಷ್ಟು ಸ್ಥಳಾವಕಾಶ ಇಲ್ಲಿದೆ. ಪ್ರಯಾಣಿಕರ ಹಿತದೃಷ್ಟಿಯನ್ನಿಟ್ಟುಕೊಂಡು ಕಟ್ಟಡ ನಿರ್ಮಿಸಲಾಗಿದೆ. ಅಂಗವಿಕಲರಿಗೆ ರ್ಯಾಂಪ್, ಪಬ್ಲಿಕ್ ರೆಸ್ಟ್‌ರೂಮ್, ಮಳೆನೀರು ಕೊಯ್ಲು, ಎಲ್‌ಇಡಿ ದೀಪಗಳ ಮೂಲಕ ವಿದ್ಯುತ್ ಉಳಿತಾಯ ಹೀಗೆ ಬಸ್ ನಿಲ್ದಾಣದ ಒಳಗೆ ಪ್ರಯಾಣಿಕರಿಗೆ ಬೇಕಾದ ಸಕಲ ಸೌಕರ್ಯಗಳು ಇದ್ದು, ಕೂಡಾ ಪ್ರಯಾಣಿಕರು ಮಾತ್ರ ಬಿ.ಸಿ.ರೋಡ್‌ನ ಅಂಗಡಿಮುಂಗಟ್ಟುಗಳ ಅಕ್ಕಪಕ್ಕದಲ್ಲಿ ಹಾಗೂ ಮೇಲ್ಸೆತುವೆ ಕೆಳಭಾಗದಲ್ಲಿ ನಿಲ್ಲುವ ಮೂಲಕ ಬಸ್‌ಗಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.