ಪ್ರವಾಸಿಗರನ್ನು ಸೆಳೆಯುತ್ತಿದೆ ಮಣಿಪಾಲದ ಅರ್ಬಿ ಜಲಪಾತ
ಮಣಿಪಾಲ, ಜೂ.12: ಮುಂಗಾರು ಮಳೆ ಧರೆಗುರು ಳುತ್ತಿದ್ದಂತೆ ಪ್ರಕೃತಿಯ ಮಡಿಲಲ್ಲಿ ಹುಟ್ಟಿಕೊಳ್ಳುವ ಜಲಧಾರೆಯೊಂದು ಮಳೆ ಮುಗಿಯುತ್ತಿದ್ದಂತೆ ಕಣ್ಮರೆ ಯಾಗುತ್ತದೆ. ಕೇವಲ ನಾಲ್ಕೈದು ತಿಂಗಳು ಮೈದುಂಬಿ ಹರಿದು ತನ್ನ ಸೊಬಗನ್ನು ಪ್ರದರ್ಶಿಸುವ ಈ ಜಲಧಾರೆ ‘ಮಳೆಗಾಲದ ಜಲಪಾತ’ ಎಂದೇ ಖ್ಯಾತವಾಗಿದೆ. ಮಣಿಪಾಲ ಸಮೀಪದ ದಶರಥ ನಗರದ ಅರ್ಬಿ ಕೋಡಿಯಲ್ಲಿರುವ ಈ ಅರ್ಬಿ ಜಲಪಾತ ಇದೀಗ ಪ್ರವಾಸಿಗರ ಆಕರ್ಷಕ ತಾಣವಾಗಿದೆ.
ನೂರಾರು ಅಡಿ ಎತ್ತರದ ಬೆಟ್ಟದಲ್ಲಿರುವ ಬಂಡೆ ಕಲ್ಲುಗಳ ಮಧ್ಯೆ ಒರತೆಯ ನೀರಿನಿಂದ ಹುಟ್ಟಿಕೊಳ್ಳುವ ಈ ಜಲಪಾತ, ಬಂಡೆ ಮರಗಳ ಮಧ್ಯೆ ಹಲವು ಕವಲು ಗಳಾಗಿ ಹರಿದು ಬರುತ್ತದೆ. ಮರಗಳಿಂದ ಕೂಡಿದ ತಂಪಾದ ವಾತಾವರಣದ ಮಧ್ಯೆ ಕ್ಷೀರಧಾರೆಯಾಗಿ ಇಳಿದು ಬರುವ ಈ ಜಲಪಾತ ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ. ಮಣಿಪಾಲದಿಂದ ಎರಡು ಕಿ.ಮೀ. ದೂರದಲ್ಲಿರುವ 80 ಬಡಗಬೆಟ್ಟು ಗ್ರಾಪಂ ವ್ಯಾಪ್ತಿಯ ದಶರಥ ನಗರದಲ್ಲಿರುವ ಅರ್ಬಿಕೋಡಿ ವೈಷ್ಣವಿ ದುರ್ಗಾ ದೇವಸ್ಥಾನದ ಬಳಿಯ ಶ್ರೀಬಹ್ಮರಾಮೇಶ್ವರ ಭಜನಾ ಮಂದಿರದ ಹಿಂಬದಿಯ ಗುಡ್ಡದಲ್ಲಿ ಈ ಜಲಧಾರೆಯು ಹರಿಯುತ್ತಿದೆ. ಮಣಿಪಾಲದಿಂದ ಮಂಚಿಗೆ ಹೋಗುವ ಬಸ್ಸಿನಲ್ಲಿ ಬಂದರೆ ದಶರಥ ನಗರದಲ್ಲಿ ಇಳಿದು ಸುಮಾರು ಅರ್ಧ ಕಿ.ಮೀ. ದೂರ ಸಾಗಬೇಕಾಗುತ್ತದೆ.
ಮೇ ಅಥವಾ ಜೂನ್‌ನಲ್ಲಿ ಮಳೆಗಾಲ ಆರಂಭ ವಾಗುತ್ತಿದ್ದಂತೆ ಹುಟ್ಟಿಕೊಳ್ಳುವ ಈ ಜಲಪಾತವು ಅಕ್ಟೋಬರ್- ನವೆಂಬರ್ ತಿಂಗಳಲ್ಲಿ ಮಳೆ ಕಡಿಮೆ ಆಗು ತ್ತಿದ್ದಂತೆ ಕಣ್ಮರೆಯಾಗುತ್ತದೆ. ಆದರೆ ಜನವರಿವರೆಗೂ ಸಣ್ಣ ತೊರೆಯಲ್ಲಿ ನೀರು ಹರಿಯುತ್ತಿರುತ್ತದೆ. ಜೂನ್‌ನಿಂದ ಅಕ್ಟೋಬರ್ ತಿಂಗಳು ಪ್ರವಾಸಿಗರು ಇಲ್ಲಿಗೆ ಆಗಮಿಸಲು ಸೂಕ್ತ ಸಮಯವಾಗಿದೆ. ಈವರೆಗೆ ಪ್ರಚಾರಕ್ಕೆ ಬಾರದ ಈ ಜಲಪಾತ ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚು ಸಂಖ್ಯೆಯ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ.
ಹತ್ತಿರದಲ್ಲೇ ಇರುವ ಮಣಿಪಾಲ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಗೆ ಇದು ಪ್ರಮುಖ ಆಕರ್ಷಣೀಯ ತಾಣವಾಗಿದೆ. ಶನಿವಾರ ಹಾಗೂ ರವಿವಾರ ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಇಲ್ಲಿಗೆ ಬಂದು ಮೋಜು ಮಸ್ತಿಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಅದೇ ರೀತಿ ಉಡುಪಿ, ಕುಂದಾಪುರ, ಮಣಿಪಾಲ, ಪರ್ಕಳ ಪರಿಸರದ ಜನರು ಕೂಡ ಕುಟುಂಬ ಸಮೇತರಾಗಿ ಈ ಜಲಪಾತದ ವೀಕ್ಷಣೆಗೆ ಬರುತ್ತಿದ್ದಾರೆ. ಎಲ್ಲಿಯೂ ಆಳ ಇಲ್ಲದೆ ಕೇವಲ ನೆಲಮಟ್ಟದಲ್ಲಿ ಹರಿದು ಬರುವ ಈ ಜಲಪಾತದಿಂದ ಪ್ರಾಣಕ್ಕೆ ಯಾವುದೇ ಅಪಾಯ ಇಲ್ಲ. ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಮಹಿಳೆಯರು ಈ ಜಲಧಾರೆಯನ್ನು ಆಸ್ವಾದಿಸುತ್ತಿದ್ದಾರೆ. ಒಟ್ಟಾರೆ ಈ ಅರ್ಬಿ ಜಲಪಾತವು ಒಂದು ಆಕರ್ಷಣೀಯ ಪ್ರವಾಸಿ ತಾಣವಾಗಿ ಬೆಳೆಯುತ್ತಿದೆ. ‘ಬೆಟ್ಟದ ಬಂಡೆಕಲ್ಲುಗಳ ಅಡಿಯ ಒಸರು ನೀರಿನಿಂದ ಹರಿಯುವ ಈ ಶುದ್ಧ ನೀರು ಕುಡಿಯಲು ಕೂಡ ಯೋಗ್ಯವಾಗಿದೆ. ಅಲ್ಲದೆ ಬಡಗಬೆಟ್ಟು ಗ್ರಾಮಕ್ಕೆ ಹರಿದು ಹೋಗುವ ಈ ಜಲಪಾತವು ಕೃಷಿಭೂಮಿಗೆ ನೀರುಣಿಸುವ ಕೆಲಸ ಮಾಡುತ್ತಿದೆ. ಯಾವುದೇ ಪ್ರಾಣ ಹಾನಿಯಾಗುವ ಭಯ ಇಲ್ಲದೆ ನಿರ್ಭೀತರಾಗಿ ಕುಟುಂಬ ಸಮೇತ ಆಗಮಿಸಿ ಈ ಜಲಧಾರೆಯ ಸೌಂದರ್ಯ ವೀಕ್ಷಿಸ ಬಹುದಾಗಿದೆ’ ಎನ್ನುತ್ತಾರೆ ಸ್ಥಳೀಯರಾದ ಮುರಳಿ ನಾಯಕ್.
ಸಾಮಾಜಿಕ ಜಾಲತಾಣ, ಮಾಧ್ಯಮಗಳಲ್ಲಿ ಬಂದ ವರದಿಯನ್ನು ನೋಡಿ ಇದೇ ಮೊದಲ ಬಾರಿಗೆ ನಾವು ಇಲ್ಲಿಗೆ ಆಗಮಿಸಿದ್ದೇವೆ. ತುಂಬಾ ಸುಂದರವಾದ ಪ್ರವಾಸಿ ತಾಣ. ಈ ಜಲಪಾತವನ್ನು ನೋಡುವುದೇ ಒಂದು ಖುಷಿ. ಮಕ್ಕಳು, ಮಹಿಳೆಯರು ಯಾವುದೇ ಭಯ ಇಲ್ಲದೆ ಇಲ್ಲಿ ಎಂಜಾಯ್ ಮಾಡಬಹುದು’ ಎಂದು ಪ್ರವಾಸಿ ಕುಸುಮಾ ಉಡುಪಿ ಹೇಳುತ್ತಾರೆ.
ಅರ್ಬಿ ಜಲಪಾತವು ಇದೀಗ ಪ್ರೇಮಿಗಳು, ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ತಾಣವಾಗಿದೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಇದರ ಬಗ್ಗೆ ಮಾಹಿತಿ ಹರಿದಾಡುತ್ತಿರುವುದರಿಂದ ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಸಂಖ್ಯೆಯ ಯುವಕ ಯುವತಿಯ ದಂಡು ಇಲ್ಲಿಗೆ ಆಗಮಿಸುತ್ತಿದೆ. ಒಂದೆಡೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದರೆ ಇನ್ನೊಂದೆಡೆ ಪ್ಲಾಸ್ಟಿಕ್ ತ್ಯಾಜ್ಯಗಳು ಇಡೀ ಜಲಪಾತ ಪ್ರದೇಶವನ್ನು ಆವರಿಸುತ್ತಿದೆ. ಹೀಗಾಗಿ ಪ್ರವಾಸೋದ್ಯಮ ಇಲಾಖೆ ಇತ್ತ ಕಣ್ಣು ಹಾಯಿಸಿ ಪ್ರವಾಸಿಗರಲ್ಲಿ ಜಾಗೃತಿ ಮೂಡಿಸುವ ಫಲಕಗಳನ್ನು ಅಳವಡಿಸಬೇಕಾಗಿದೆ.
ಉಪೇಂದ್ರ ನಾಯಕ್, ಸ್ಥಳೀಯ ದೇವಸ್ಥಾನದ ಅರ್ಚಕ
ಮೂಲಭೂತ ಸೌಕರ್ಯ ಕಲ್ಪಿಸಿ
ಜಿಲ್ಲಾಡಳಿತ ಸೂಕ್ತ ಪೋಲೀಸ್ ಬಂದೋಬಸ್ತಿ ನೊಂದಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು. ಅರ್ಬಿ ಜಲಪಾತಕ್ಕೆ ಪ್ರವಾಸಿಗರು ಬರಲು ಅನುಕೂಲವಾಗುವಂತೆ ಮಾರ್ಗಸೂಚಿ, ಕ್ಯಾಂಟೀನ್ ವ್ಯವಸ್ಥೆ, ಶೌಚಾಲಯ ಮೊದಲಾ ದವುಗಳನ್ನು ಸ್ಥಾಪಿಸಿದರೆ ಈ ಜಲಪಾತ ಪ್ರವಾಸಿಗರನ್ನು ಆಕರ್ಷಿ ಸುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ಸರಳೇಬೆಟ್ಟು ಅಭಿಪ್ರಾಯಪಟ್ಟಿದ್ದಾರೆ.