ಕಾಯಕಲ್ಪಕ್ಕಾಗಿ ಕಾಯುತ್ತಿವೆ ಬಂಟ್ವಾಳದ ಮೂರು ವಸತಿನಿಲಯಗಳು!

Update: 2018-07-07 09:58 GMT

ಬಂಟ್ವಾಳ, ಜು. 6: ಬಂಟ್ವಾಳ ತಾಲೂಕಿನ ಮೂರು ಸರಕಾರಿ ವಸತಿ ನಿಲಯಗಳು ಅವ್ಯವಸ್ಥೆಯಿಂದ ಕೂಡಿದ್ದು, ಇಲ್ಲಿನ ವಸತಿ ನಿಲಯದ ವಿದ್ಯಾರ್ಥಿಗಳು ಜೀವಭಯದಿಂದ ದಿನದೂಡುತ್ತಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಬಿ.ಸಿ. ರೋಡಿನಲ್ಲಿ 1 ರಿಂದ 5ನೇ ವರೆಗಿನ ವಸತಿ ಶಾಲೆ, ಮೊಡಂಕಾಪುವಿನಲ್ಲಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ ಹಾಗೂ ಪಾಣೆಮಂಗಳೂರಿನಲ್ಲಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯ ಕಾರ್ಯನಿರ್ವಹಿಸುತ್ತಿದ್ದು, ಈ ಮೂರು ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಎಲ್ಲ ಸೌಕರ್ಯಗಳು ಇದೆ. ಆದರೆ ಮೂಲಭೂತ ವ್ಯವಸ್ಥೆಯಲ್ಲೊಂದಾದ ವಸತಿ ನಿಲಯದ ಕಟ್ಟಡವೇ ಶಿಥಿಲಗೊಂಡಿವೆ. ಈ ಕಟ್ಟಡವು ಹಳೆಯದಾಗಿದ್ದು, ಅಪಾಯವನ್ನು ಎದುರಿಸುತ್ತಾ ವಿದ್ಯಾರ್ಥಿಗಳು ಜೀವಿಸುವಂತಾಗಿದೆ.

ನಾದುರಸ್ತಿಗೆ ತಲುಪಿರುವ ಕಟ್ಟಡ: 1972ರಲ್ಲಿ ಮೈಸೂರು ಸರಕಾರದ ಆಡಳಿತ ವಿದ್ದಾಗ ನಿರ್ಮಾಣಗೊಂಡಿರುವ ಮೊಡಂಕಾಪು ಮೆಟ್ರಿಕ್ ಪೂರ್ವ ಬಾಲಕರ ವಸತಿನಿಲಯವನ್ನು, ಅಂದಿನ ಸಮಾಜ ವಿಕಾಸ ಮತ್ತು ಸಮಾಜ ಕಲ್ಯಾಣ ಮಂತ್ರಿ ಎಂ.ಮಲ್ಲಿಕಾರ್ಜುನ ಉದ್ಘಾಟಿಸಿದ್ದರು. ಕಳೆದ ಜೂನ್‌ಗೆ 46 ವರ್ಷ ಪೂರೈಸಿರುವ ಈ ಕಟ್ಟಡ ನಾದುರಸ್ತಿ ಸ್ಥಿತಿಗೆ ತಲುಪಿರುವುದರಿಂದ ಹೊಸ ಕಟ್ಟಡ ಬೇಡಿಕೆಯನ್ನು ಇಲಾಖೆ ಮುಂದಿಟ್ಟಿದೆ.

ಹಂಚಿನ ಮೇಲ್ಛಾವಣಿಯಿರುವ ಈ ಕಟ್ಟಡದಲ್ಲಿ ಪದೇ ಪದೇ ಹೆಂಚು ಮುರಿಯುವುದು ಸಾಮಾನ್ಯ ಸಮಸ್ಯೆಯಾಗಿದೆ. ಇದರ ಜೊತೆಗೆ ಶೌಚಾಲಯದ ಬಾಗಿಲು ಮುರಿದು ಹೋಗಿದೆ. ಶೌಚಾಲಯಕ್ಕೆ ಅಳವಡಿಸಿರುವ ಟೈಲ್ಸ್ ಕಿತ್ತು ಹೋಗಿದ್ದು, ಹೆಂಚು ಜಾರಿ ಸಂದುಗಳಲ್ಲಿ ಬೆಳಕು ಬಿದ್ದು ಹಾಗೂ ಮಳೆ ನೀರು ಸೋರಿ ಕೊಠಡಿಗೆ ಬೀಳುವುದರಿಂದ, ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿವೆ. ಅಲ್ಲದೆ, ಈ ನಿಲಯದ ಪಕ್ಕದಲ್ಲಿಯೇ ನಿರ್ಮಿಸಿರುವ ಹೊಸ ಕಟ್ಟಡದಲ್ಲಿ ಮಳೆನೀರು ಚಿಮ್ಮುತ್ತಿದ್ದು, ಇದರಿಂದ ಕಟ್ಟಡದ ಒಳಭಾಗಕ್ಕೆ ನೀರು ಹರಿದು ಬರುತ್ತದೆ. ಅಲ್ಲದೆ, ಮಳೆಗಾಲ ಬಂದಾಗ ವಸತಿ ನಿಲಯಗಳ ಕೋಣೆಗಳ ಗೋಡೆ ತೇವಗೊಳ್ಳುತ್ತದೆ.

ಬಿ.ಸಿ.ರೋಡಿನ ವಸತಿ ಶಾಲೆಯಲ್ಲಿಯೂ ಇದೇ ಸ್ಥಿತಿ ಇದ್ದು, ಮಳೆಯಿಂದ ಗೋಡೆ ಒದ್ದೆಯಾಗಿ ಎಲ್ಲಿ ಬೀಳುತ್ತದೋ ಎನ್ನುವ ಆತಂಕವೂ ಇಲ್ಲಿನ ವಿದ್ಯಾರ್ಥಿ ಗಳನ್ನು ಕಾಡುತ್ತಿವೆ. ಅಲ್ಲದೆ ಇಲ್ಲಿನ ತರಗತಿಯ ಕೋಣೆಯ ಸೀಲಿಂಗ್‌ನ ಕಾಂಕ್ರಿಟ್ ಬಿರುಕು ಬಿಟ್ಟು ಒಳ ಭಾಗದ ಕಬ್ಬಿಣದ ಸರಳುಗಳು ಕಂಡು ಬರುತ್ತಿದ್ದು, ಕಟ್ಟಡದ ಬಾಳಿಕೆಯ ಬಗ್ಗೆ ಸಂಶಯ ಮೂಡಿಸುತ್ತದೆ. ಪಾಣೆಮಂಗಳೂರಿನಲ್ಲಿರುವ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯವು ಹೆಂಚಿನ ಛಾವಣಿಯ ಕಟ್ಟಡವಾಗಿದ್ದು ಅಸುರಕ್ಷಿತವಾಗಿದೆ. ಇಲ್ಲಿನ ಕೊಠಡಿಗಳ ಹೆಂಚುಗಳು ಕೂಡ ಮುರಿದು ಜಾರಿ ಬಿದ್ದಿವೆ. ಬಂಟ್ವಾಳದ ಸಮಾಜ ಕಲ್ಯಾಣ ಇಲಾಖೆಯ ಕೆಲ ವಸತಿ ನಿಲಯ ಹಾಗೂ ವಸತಿ ಶಾಲೆಯ ಸದ್ಯದ ಸ್ಥಿತಿ ಇದಾಗಿದ್ದು, ಕಟ್ಟಡದಲ್ಲಿರುವ ವಸತಿ ನಿಲಯಗಳು ಕಾಯಕಲ್ಪಕ್ಕೆ ಕಾಯುತ್ತಿವೆ.

ತಾಲೂಕಿನಲ್ಲಿ ವಿದ್ಯಾರ್ಥಿ ನಿಲಯ ಹಾಗೂ ವಸತಿ ಶಾಲೆಗಳ ವ್ಯವಸ್ಥೆಯು ಶೋಚನೀಯವಾಗಿದ್ದು, ಈ ಅವ್ಯವಸ್ಥೆಯಿಂದ ಮಕ್ಕಳ ಕಲಿಕೆಯ ಮೇಲೆ ಪ್ರಭಾವ ಬೀರಲಿದೆ. ಅಲ್ಲದೆ ಸಮಾಜ ಕಲ್ಯಾಣ ಇಲಾಖೆ ಈ ಕುರಿತು ಹೆಚ್ಚಿನ ಮುತುವರ್ಜಿ ವಹಿಸಿ, ಹೊಸ ಕಟ್ಟಡ ನಿರ್ಮಾಣಕ್ಕೆ ಶೀಘ್ರ ಅನುದಾನ ಮಂಜೂರುಗೊಳಿಸಬೇಕಾಗಿದೆ.

ನಬೀಲ್ ರಹ್ಮಾನ್, ಸಿಎಫ್‌ಐ, ಬಂಟ್ವಾಳ ತಾಲೂಕು ಅಧ್ಯಕ್ಷ

ಮೊಡಂಕಾಪುವಿನ ಮೆಟ್ರಿಕ್ ಪೂರ್ವ ವಸತಿ ನಿಲಯಕ್ಕೆ ಹೊಸ ಕಟ್ಟಡದ ಬೇಡಿಕೆ, ಬಿ.ಸಿ.ರೋಡ್‌ನ ವಸತಿ ಶಾಲೆಯ ದುರಸ್ತಿಗೆ ಅನುದಾನ ಒದಗಿಸುವಂತೆ ಸರಕಾರಕ್ಕೆ ಮೂರು ಬಾರಿ ಪ್ರಸ್ತಾವ ಸಲ್ಲಿಸಲಾಗಿದೆ. ಈ ಬಗ್ಗೆ ತಾಪಂ ಸಾಮಾನ್ಯ ಸಭೆಯಲಿಯೂ ನಿರ್ಣಯ ಕೈಗೊಳ್ಳಲಾ ಗಿದ್ದು, ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಮೋಹನ್ ಕುಮಾರ್, ತಾಲೂಕು ಸಮಾಜ ಕಲ್ಯಾಣಾಧಿಕಾರಿ

Writer - ಅಬ್ದುಲ್ ರಹಿಮಾನ್ ತಲಪಾಡಿ

contributor

Editor - ಅಬ್ದುಲ್ ರಹಿಮಾನ್ ತಲಪಾಡಿ

contributor

Similar News