ಕಾವಳಪಡೂರು ಗ್ರಾಮದ ಜನರ ನರಕಯಾತನೆ

Update: 2018-07-25 11:24 GMT

► ಪ್ರಾಣದ ಹಂಗು ತೊರೆದು ತೊರೆ ದಾಟುವ ಪರಿಸ್ಥಿತಿ

► ಅನುದಾನ ಮೀಸಲಿಟ್ಟಿದ್ದರೂ ಇನ್ನೂ ಆರಂಭವಾಗದ ಸೇತುವೆ ನಿರ್ಮಾಣ

ಬಂಟ್ವಾಳ, ಜು. 24: ಮಳೆಗಾಲವೆಂದರೆ ಅಲ್ಲಿನ ಜನರಿಗೆ ನರಕಯಾತನೆ. ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಸಂಚರಿಸಬೇಕಾದ ಪರಿಸ್ಥಿತಿ. ಆ ಊರಿನ ಮಕ್ಕಳ ಸಹಿತ ಹಿರಿಯರೆಲ್ಲರೂ ದಿನವೂ ತೀರಾ ಅಪಾಯಕಾರಿಯಾದ ಕಾಲುಸಂಕವನ್ನು ದಾಟಿಯೇ ಬರಬೇಕು. ಸ್ವಲ್ಪ ಎಡವಿದರೂ ಅಪಾಯ ತಪ್ಪಿದ್ದಲ್ಲ...

ಇದು ಬಂಟ್ವಾಳ ತಾಲೂಕಿನ ಕಾವಳಪಡೂರು ಗ್ರಾಪಂ ವ್ಯಾಪ್ತಿಯ ಕಾಡಬೆಟ್ಟು ಗ್ರಾಮದ ಮಾರಿಬೆಟ್ಟು-ಜಾರಬೆಟ್ಟು ಪ್ರದೇಶದ ಜನರ ದುಸ್ಥಿತಿಯಾಗಿದೆ. ಕಾವಳಪಡೂರು ಗ್ರಾಪಂ ವ್ಯಾಪ್ತಿಯ ಕಾಡಬೆಟ್ಟು ಗ್ರಾಮದ ಮಾರಿಬೆಟ್ಟು- ಜಾರಬೆಟ್ಟು ಪ್ರದೇಶಗಳನ್ನು ಸಂಪರ್ಕಿಸಲು ಜನರು ಬಿದಿರಿನ ಕಾಲುಸಂಕವನ್ನು ಅವಲಂಬಿಸಿದ್ದಾರೆ. ಈ ಭಾಗದ ಹಲವು ಮನೆಗಳಿಗೆ ಈ ಅಪಾಯಕಾರಿ ಕಾಲುಸಂಕವು ಸಂಪರ್ಕ ಕೊಂಡಿಯಾಗಿದೆ.

ಗ್ರಾಮಕ್ಕೆ ಸಂಪರ್ಕಿಸುವ ಪರ್ಯಾಯ ರಸ್ತೆಯೊಂದಿದ್ದರೂ ಅದರಲ್ಲಿ ಸುತ್ತು ಬಳಸಿ ಬರಬೇಕಾಗಿದೆ. ಆದರೆ, ಕಾಲುಸಂಕದ ಮೂಲಕ ಈ ತೊರೆಯನ್ನು ದಾಟಿ ಬಂದರೆ ಮೂರುವರೆ ಕಿ.ಮೀ. ಸುತ್ತುಬಳಸುವುದು ತಪ್ಪುತ್ತದೆ ಎನ್ನುವುದು ಸ್ಥಳೀಯ ನಿವಾಸಿಗಳ ಅಭಿಪ್ರಾಯ.

ರಾಷ್ಟ್ರೀಯ ಹೆದ್ದಾರಿ, ಪಂಚಾಯತ್ ಕಚೇರಿ, ಶಾಲೆಗೆ ಹತ್ತಿರದ ದಾರಿ ಇದಾಗಿರುವುದರಿಂದ ಗಾಮಸ್ಥರು ಅಪಾಯಕಾರಿಯಾದ ತೊರೆಯನ್ನು ದಾಟಿಯೇ ಬರುತ್ತಾರೆ. ಮಳೆಗಾಲದಲ್ಲಂತೂ ಜಾರುವ ಬಿದಿರಿನ ಮೇಲೆ ಒಂದೊಂದು ಹೆಜ್ಜೆಯನ್ನಿಟ್ಟು ದಡ ತಲುಪಲು ಹರಸಾಹಸ ಮಾಡಬೇಕು ಎನ್ನುತ್ತಾರೆ ಗ್ರಾಮಸ್ಥರು.

2 ವರ್ಷಕ್ಕೊಮ್ಮೆ ಕಾಲುಸಂಕ ನಿರ್ಮಾಣ

ಇಲ್ಲಿನ ಸ್ಥಳೀಯರು ಸೇರಿಕೊಂಡು ಪ್ರತೀ ಎರಡು ವರ್ಷಕ್ಕೊಮ್ಮೆ ಬಿದಿರಿನ ಕಾಲುಸಂಕ ನಿರ್ಮಿಸುತ್ತಾರೆ. ಇದು ಎಷ್ಟು ಗಟ್ಟಿಯಿದೆ? ಎಷ್ಟು ಸಮಯ ಬಾಳಿಕೆ ಬರುತ್ತದೆ? ಎನ್ನುವುದು ಗೊತ್ತಿಲ್ಲದಿದ್ದರೂ ತಮ್ಮ ದಿನ ನಿತ್ಯದ ಅಗತ್ಯಕ್ಕೆ ಪಟ್ಟಣಕ್ಕೆ ಬರಬೇಕಾದರೆ ಪ್ರಾಣದ ಹಂಗು ತೊರೆದು ತೊರೆ ದಾಟಿ ಬರಬೇಕಾಗಿದೆ.

ಶಾಶ್ವತವಾದ ಸಂಪರ್ಕ ಸೇತುವೆಗೆ ಬೇಡಿಕೆ

ಗ್ರಾಮಸ್ಥರ ಸುರಕ್ಷತೆ ಹಾಗೂ ಪ್ರತೀ ಎರಡು ವರ್ಷಕ್ಕೊಮ್ಮೆ ಬಿದಿರಿನ ಕಾಲುಸಂಕ ನಿರ್ಮಿಸುವ ಬದಲು ಶಾಶ್ವತವಾದ ಸಂಪರ್ಕ ಸೇತುವೆಯನ್ನು ನಿರ್ಮಿಸಬೇಕೆನ್ನುವುದು ಇಲ್ಲಿನ ಜನರ ಬೇಡಿಕೆ. ಈ ಬಗ್ಗೆ ಗ್ರಾಮಸ್ಥರು ಸ್ಥಳೀಯ ಪಂಚಾಯತ್‌ಗೆ ಮನವಿಯನ್ನು ಸಲ್ಲಿಸಿದ್ದಾರೆ.

ನೀರು ಹೆಚ್ಚಾದಾಗ ಇಲ್ಲಿನ ಕಾಲುಸಂಕಗಳು ಕೊಚ್ಚಿ ಹೋದ ಉದಾಹರಣೆಗಳೂ ಸಾಕಷ್ಟಿದೆ. ಆದರೂ ಮಳೆಯ ನೀರಿಗೆ ಜಾರುವ, ಶಿಥಿಲಗೊಂಡ ಕಾಲುಸಂಕವನ್ನೇ ಅವಲಂಬಿಸಬೇಕಾದ ಅನಿವಾರ್ಯತೆ. ವೃದ್ಧರು, ಗರ್ಭಿಣಿಯರು, ಅನಾರೋಗ್ಯ ಪೀಡಿತರ ಪಾಡಂತೂ ಹೇಳತೀರದು. ಮಳೆಗಾಲದಲ್ಲಿ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಸಂಚರಿಸುವ ಈ ನರಕಯಾತನೆಗೆ ಮುಕ್ತಿ ಯಾವಾಗ? ಎಂಬುವುದು ಗ್ರಾಮಸ್ಥರ ಪ್ರಶ್ನೆ.

ಈ ಭಾಗದ ಜನರು ತಮ್ಮ ದಿನನಿತ್ಯದ ಅಗತ್ಯಕ್ಕೆಈ ಬಿದಿರಿನ ಕಾಲುಸಂಕವನ್ನು ಅವಲಂಬಿಸಿಕೊಂಡಿದ್ದು, ಮಕ್ಕಳು, ವೃದ್ಧರು, ಮಹಿಳೆಯರು ಕಾಲುಸಂಕ ದಾಟುವುದನ್ನ್ನು ನೋಡಿದಾಗ ಭಯವಾಗುತ್ತದೆ. ಮಳೆಗಾಲದಲ್ಲಿ ತೊರೆ ತುಂಬಿ ಹರಿಯುತ್ತಿದ್ದು, ಪ್ರಾಣವನ್ನೂ ಒತ್ತೆ ಇಟ್ಟು ತೊರೆ ದಾಟಬೇಕಾಗುತ್ತದೆ.

ಹರೀಶ್ ಜಾರಬೆಟ್ಟು, ಸ್ಥಳೀಯ ನಿವಾಸಿ 

ಈ ಎರಡೂ ಪ್ರದೇಶಗಳಿಗೆ ಜಮೀನಿಗೆ ಸಂಬಂಧಪಟ್ಟ ಸಮಸ್ಯೆಯಿದ್ದು, ಎರಡೂ ಕಡೆಯವರನ್ನು ಸೇರಿಸಿ ಸಮಸ್ಯೆ ಬಗೆಹರಿಸುವ ಪ್ರಯತ್ನದಲ್ಲಿದ್ದೇವೆ. ಸೇತುವೆ ನಿರ್ಮಾಣಕ್ಕೆ 2 ಲಕ್ಷ ರೂ. ಅನುದಾನವನ್ನು ಮೀಸಲಿಟ್ಟಿದ್ದೇವೆ. ಸಮಸ್ಯೆ ಬಗೆಹರಿಸಿ ಸೇತುವೆ ನಿರ್ಮಾಣ ಮಾಡಲಿದ್ದೇವೆ.

ಪ್ರಮೋದ್ ಕುಮಾರ್ ರೈ, ಅಧ್ಯಕ್ಷರು ಕಾವಳಪಡೂರು ಗ್ರಾಪಂ

Writer - ಅಬ್ದುಲ್ ರಹಿಮಾನ್ ತಲಪಾಡಿ

contributor

Editor - ಅಬ್ದುಲ್ ರಹಿಮಾನ್ ತಲಪಾಡಿ

contributor

Similar News