ನಗರ ಸ್ಥಳೀಯ ಸಂಸ್ಥೆಗಳಲ್ಲಿ ಚುನಾವಣೆ ಗೌಜಿ ಶುರು

Update: 2018-08-04 10:25 GMT

ಉಡುಪಿ, ಆ.3: ಜಿಲ್ಲೆಯ ನಾಲ್ಕು ನಗರ ಸ್ಥಳೀಯ ಸಂಸ್ಥೆಗಳ ಒಟ್ಟು 97 ವಾರ್ಡ್‌ಗಳಿಗೆ ಮೀಸಲಾತಿ ಪ್ರಕಟಗೊಂಡ ಬೆನ್ನಲ್ಲೇ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಪ್ರಮುಖ ರಾಜಕೀಯ ಪಕ್ಷಗಳು ಹಾಗೂ ಆಕಾಂಕ್ಷಿ ಅಭ್ಯರ್ಥಿಗಳು ತಡಬಡಾಯಿಸಿಕೊಂಡು ಎದ್ದು ಚುನಾವಣೆಗೆ ಸಜ್ಜು ಗೊಳ್ಳತೊಡಗಿದ್ದಾರೆ.

 ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷ ಈ ಚುನಾವಣೆಗೆ ಸಣ್ಣ ಮಟ್ಟದ ತಯಾರಿಗೆ ಸಿದ್ಧತೆ ನಡೆಸುತ್ತಿದ್ದಂತೆ, ಪಕ್ಷ ಹಾಗೂ ಆಕಾಂಕ್ಷಿಗಳ ನಿರೀಕ್ಷೆಗೂ ಮೊದಲೇ ಚುನಾವಣೆಯ ಪ್ರಕಟನೆಯು ಹೊರಬಿದ್ದಿದೆ. ಇನ್ನೊಂದು ತಿಂಗಳೊಳಗೆ ಚುನಾವಣಾ ಪ್ರಕ್ರಿಯೆ ಮುಗಿದು ಹೊಸ ಅಭ್ಯರ್ಥಿಗಳ ಆಯ್ಕೆಗೆ ಮುಹೂರ್ತ ನಿಗದಿ ಆಗಿರುವುದರಿಂದ ಇವರೆಲ್ಲರೂ ಚುನಾವಣೆಗೆ ಸಜ್ಜಾಗಿ ಮತದಾರರ ಮುಂದೆ ನಿಲ್ಲಬೇಕಾದ ಅನಿವಾರ್ಯತೆ ಎದುರಾಗಿದೆ.

ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯು ಎಲ್ಲ ಪ್ರಮುಖ ಪಕ್ಷಗಳಿಗೂ ಅಗ್ನಿ ಪರೀಕ್ಷೆಯ ಕಣವಾಗಿದೆ. ಕಮ್ಯುನಿಸ್ಟ್ ಪಕ್ಷ ಕುಂದಾಪುರದಲ್ಲಿ ಕೆಲವು ಸ್ಥಾನಗಳನ್ನು ಪಡೆಯುವ ಸಾಧ್ಯತೆ ಇದ್ದರೂ, ಉಳಿದೆಡೆಗಳಲ್ಲಿ ಅವುಗಳ ಸಾಮರ್ಥ್ಯ ಇನ್ನೂ ಸಾಬೀತಾಗಿಲ್ಲ. ಕರಾವಳಿಯಲ್ಲಿ ಈವರೆಗೆ ಲೆಕ್ಕಕ್ಕಿಲ್ಲದಂತಿದ್ದ ಜೆಡಿಎಸ್, ರಾಜ್ಯ ರಾಜಕೀಯದ ಬದಲಾದ ಸನ್ನಿವೇಶದಲ್ಲಿ ಮೈಕೊಡವಿಕೊಂಡು ಎದ್ದು ಕುಳಿತಿದೆ.

2013ರ ಹಿನ್ನೋಟ: ಜಿಲ್ಲೆಯ ನಾಲ್ಕೂ ನಗರ ಸ್ಥಳೀಯ ಸಂಸ್ಥೆಗಳಿಗೆ 2013ರಲ್ಲಿ ನಡೆದ ಚುನಾವಣೆಯಲ್ಲಿ ಉಡುಪಿ ಮತ್ತು ಕಾರ್ಕಳಗಳಲ್ಲಿ ಕಾಂಗ್ರೆಸ್ ಮೇಲುಗೈ ಪಡೆದಿದ್ದರೆ, ಕುಂದಾಪುರ ಹಾಗೂ ಸಾಲಿಗ್ರಾಮಗಳಲ್ಲಿ ಬಿಜೆಪಿ ಜಯ ಗಳಿಸಿತ್ತು.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ರಾಜ್ಯದಲ್ಲಿ ಜಯಭೇರಿ ಬಾರಿಸಿದ ಬೆನ್ನಲ್ಲೇ ನಡೆದ 2013ರ ಚುನಾವಣೆಯಲ್ಲಿ ಉಡುಪಿ ನಗರಸಭೆಯಲ್ಲಿ ಕಾಂಗ್ರೆಸ್ 45 ವರ್ಷಗಳಲ್ಲಿ ಮೊದಲ ಬಾರಿ ಬಿಜೆಪಿಯನ್ನು ಹಿಮ್ಮೆಟ್ಟಿಸಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೇರಿತ್ತು. ಕಾಂಗ್ರೆಸ್ 35ರಲ್ಲಿ 22 ಸ್ಥಾನಗಳನ್ನು ಗೆದ್ದುಕೊಂಡಿತ್ತು. 12 ಸ್ಥಾನಗಳು ಬಿಜೆಪಿಯ ಪಾಲಾಗಿದ್ದವು. ಒಂದು ಸ್ಥಾನ ಸ್ವತಂತ್ರ ಅಭ್ಯರ್ಥಿ ಪಾಲಾಗಿದ್ದು, ಆತ ಆ ಬಳಿಕ ಬಿಜೆಪಿಗೆ ಸೇರ್ಪಡೆಗೊಂಡಿದ್ದರು.

ಕಾರ್ಕಳ ಟಿಎಂಸಿಯ 23 ಸ್ಥಾನಗಳಲ್ಲಿ ಕಾಂಗ್ರೆಸ್ 12 ಹಾಗೂ ಬಿಜೆಪಿ 11 ಸ್ಥಾನ ಪಡೆದಿತ್ತು. ಆದರೆ, ಕುಂದಾಪುರ ಪುರಸಭೆಯ 23 ವಾರ್ಡ್‌ಗಳಲ್ಲಿ ಬಿಜೆಪಿ 12ನ್ನು ತನ್ನದಾಗಿಸಿಕೊಂಡಿದ್ದರೆ, ಕಾಂಗ್ರೆಸ್ 9 ಹಾಗೂ ಸಿಪಿಎಂ 2 ಸ್ಥಾನಗಳನ್ನು ಪಡೆದಿದ್ದವು. ಸಾಲಿಗ್ರಾಮ ಪಟ್ಟಣ ಪಂಚಾಯತ್‌ನ 14 ಸ್ಥಾನಗಳಲ್ಲಿ ಬಿಜೆಪಿ 8 ಹಾಗೂ ಕಾಂಗ್ರೆಸ್ 6 ಸ್ಥಾನಗಳನ್ನು ಜಯಿಸಿದ್ದವು.

 2013ಕ್ಕೆ ಹೋಲಿಸಿದರೆ, ಎರಡು ತಿಂಗಳ ಹಿಂದೆ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆಯಲು ವಿಫಲವಾಗಿ ಜೆಡಿಎಸ್‌ನೊಂದಿಗೆ ಜೂನಿಯರ್ ಪಾರ್ಟನರ್ ಆಗಿ ಆಡಳಿತ ನಡೆಸುತ್ತಿದೆ. ಉಡುಪಿಯ ಐದೂ ವಿಧಾನಸಭಾ ಸ್ಥಾನಗಳು ಬಿಜೆಪಿಯ ಪಾಲಾಗಿವೆ. ಹೀಗಾಗಿ ಈ ಬಾರಿ ಉಡುಪಿ ನಗರಸಭೆಯಲ್ಲಿ ಕಾಂಗ್ರೆಸ್ ನಿಜವಾದ ಅಗ್ನಿಪರೀಕ್ಷೆಯನ್ನು ಎದುರಿಸುತ್ತಿದೆ.

 ಎಲ್ಲ 35 ವಾರ್ಡ್‌ಗಳನ್ನು ಗೆಲ್ಲಬೇಕೆಂಬ ಸಂಕಲ್ಪದೊಂದಿಗೆ ಚುನಾವಣೆಗೆ ಸಜ್ಜಾಗಿರುವ ಬಿಜೆಪಿ, ವಿಧಾನಸಭಾ ಚುನಾವಣೆಯಲ್ಲಿ 35 ವಾರ್ಡ್‌ಗಳ ಪೈಕಿ 30 ವಾರ್ಡ್ ಗಳಲ್ಲಿ ಸಂಪೂರ್ಣ ಮೇಲುಗೈ ಪಡೆದಿರುವುದು ಅದರ ಗೆಲುವಿನ ನಿರೀಕ್ಷೆಗೆ ರೆಕ್ಕೆಪುಕ್ಕವನ್ನು ಮೂಡಿಸಿದೆ. ವಿಧಾನಸಭಾ ಚುನಾವಣೆಯಲ್ಲಿ ಕಳೆದುಕೊಂಡ ಸ್ಥಾನವನ್ನು ಉಳಿಸಿಕೊಳ್ಳುತ್ತೇವೆ ಎಂದು ಕಾಂಗ್ರೆಸ್ ವಿಶ್ವಾಸ ವ್ಯಕ್ತಪಡಿಸಿದೆ.

ಈ ಬಾರಿ ಉಡುಪಿ ನಗರಸಭೆ ಮಾತ್ರವಲ್ಲ ಕುಂದಾಪುರ, ಕಾರ್ಕಳದಲ್ಲೂ ಪಕ್ಷದ ಪರವಾಗಿ ಉತ್ತಮ ಫಲಿತಾಂಶ ಬರುವ ನಿರೀಕ್ಷೆ ಇದೆ. 

ಜನಾರ್ದನ ತೋನ್ಸೆ, ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಉಡುಪಿ

ನಗರ ಸ್ಥಳೀಯ ಸಂಸ್ಥೆ ಚುನಾವಣೆಗೆ ನಾವು ಸಜ್ಜಾಗಿದ್ದೇವೆ. ಎರಡು ತಿಂಗಳಿನಿಂದ ನಾವು ಪೂರ್ವ ತಯಾರಿ ನಡೆಸಿದ್ದೇವೆ. ಆ.15ರೊಳಗೆ ಉಡುಪಿ ಸೇರಿದಂತೆ ಕುಂದಾಪುರ, ಕಾರ್ಕಳ, ಸಾಲಿಗ್ರಾಮಗಳ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತೇವೆ.

ಮಟ್ಟಾರು ರತ್ನಾಕರ ಹೆಗ್ಡೆ, ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ

 ಉಡುಪಿ, ಕುಂದಾಪುರ, ಕಾರ್ಕಳ, ಸಾಲಿಗ್ರಾಮದ ಎಲ್ಲ ವಾರ್ಡ್ ಗಳ ಎಲ್ಲ ಸ್ಥಾನಗಳಿಗೂ ನಾವು ಈ ಬಾರಿ ಅಭ್ಯರ್ಥಿಗಳನ್ನು ನಿಲ್ಲಿಸುತ್ತೇವೆ. ಈ ಬಾರಿ ನಾವು ಕೆಲವು ಸ್ಥಾನಗಳನ್ನು ಗೆಲ್ಲುತ್ತೇವೆ. ಕಾರ್ಕಳ ಪುರಸಭೆಯಲ್ಲಿ ನಮಗೆ ಒಳ್ಳೆಯ ಅವಕಾಶವಿದೆ. ಕುಂದಾಪುರದಲ್ಲಿ ಸಿಪಿಎಂನೊಂದಿಗೆ ಹೊಂದಾಣಿಕೆಗೆ ಚಿಂತನೆ ನಡೆಯುತ್ತಿದೆ.

 ಯೋಗೀಶ್ ಶೆಟ್ಟಿ, ಜೆಡಿಎಸ್ ಉಡುಪಿ ಜಿಲ್ಲಾಧ್ಯಕ್ಷ

Writer - ಬಿ.ಬಿ.ಶೆಟ್ಟಿಗಾರ್

contributor

Editor - ಬಿ.ಬಿ.ಶೆಟ್ಟಿಗಾರ್

contributor

Similar News