ಇತಿಹಾಸದ ಭಾರ ವರ್ತಮಾನದ ಮೇಲೆ ಹೇರಿಕೆ ದೊಡ್ಡ ಕ್ರೌರ್ಯ: ಪ್ರೊ. ರಹಮತ್ ತರೀಕೆರೆ

Update: 2018-08-11 09:17 GMT

ಮಂಗಳೂರು, ಆ.11: ಸಮಾಜದಲ್ಲಿಂದು ಇತಿಹಾಸದ ಭಾರವನ್ನು ವರ್ತಮಾನದ ಮೇಲೆ ಹೇರಿಕೆ ಮಾಡುವ ಪ್ರಸಂಗಗಳು ಹೆಚ್ಚುತ್ತಿದ್ದು ಇದು ಅತಿ ದೊಡ್ಡ ಕ್ರೌರ್ಯ. ಇಂತಹ ಸನ್ನಿವೇಶದಲ್ಲಿ ಇತಿಹಾಸದ ಪುಸ್ತಕಗಳ ಓದು ಪೂರ್ವಾಗ್ರಹವನ್ನು ದೂರೀಕರಿಸುತ್ತದೆ ಎಂದು ಪ್ರೊ. ರಹಮತ್ ತರೀಕೆರೆ ಅಭಿಪ್ರಾಯಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಸಾಹಿತ್ಯದ ಓದು ಕ್ಷೀಣಿಸುತ್ತಿದೆ. ವ್ಯಕ್ತಿಗಳನ್ನು ವಿಜೃಂಭಿಸುವ ಈ ಕಾಲಘಟ್ಟದಲ್ಲಿ ಇತಿಹಾಸದ ಘಟನೆಗಳಿಗೆ ಸಾಕ್ಷಿಯಾಗಿರುವ ಪುಸ್ತಕಗಳಿಗೆ ಒತ್ತು ನೀಡಿ ನಡೆಸುವ ಇಂತಹ ಕಾರ್ಯಕ್ರಮ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಧರ್ಮ ಒಂದು ಆಯುಧವಾಗಿ ತನ್ನದೇ ದೇಶದ ನಾಗರಿಕರ ನಡುವೆ ಪರಸ್ಪರ ಯುದ್ಧದ ವಾತಾವರಣವನ್ನು ಸೃಷ್ಟಿಸುವ ನತದೃಷ್ಟ ದೇಶಗಳಲ್ಲಿ ನಮ್ಮದೂ ಒಂದು. ಇತಿಹಾಸ ಮತ್ತು ಧರ್ಮ ರಾಜಕಾರಣ ಸೃಷ್ಟಿ ಮಾಡಿರುವ ಹಿಂಸೆಗೆ ಎಲ್ಲ ಪ್ರದೇಶಗಳ, ಭಾಷೆಯ ಜನರು ಬೆಲೆ ತೆರುತ್ತಿದ್ದಾರೆ. ತಮ್ಮ ವಿಚಾರವನ್ನು ಮಂಡಿಸಿದಕ್ಕಾಗಿಯೇ ಜ್ಞಾನ ಪೀಠ ಪುರಸ್ಕೃತರಾಗಿರುವಂತಹ ಲೇಖಕರು ಕೊಲೆಗೀಡಾಗುವುದು, ಹಿಟ್ ಲಿಸ್ಟ್‌ನಲ್ಲಿರುವುದು ಆತಂಕಕಾರಿ ಬೆಳವಣಿಗೆ. ಧರ್ಮದ ಹೆಸರಿನಲ್ಲಿ ವ್ಯವಸ್ಥಿತವಾದ ಒಂದು ಪಡೆ ಸಮಾಜವನ್ನು ಆಕ್ರಮಿಸುತ್ತಿರುವಾಗ ಪುಸ್ತಕದ ಓದಿನ ಮೂಲಕ ಸಮಾಜಕ್ಕೆ ದಾರಿದೀಪವಾಗುತ್ತಿರುವುದು ಬಿರುಗಾಳಿಯ ಎದುರು ಸಣ್ಣ ದೀಪದ ರೀತಿಯ ಹೋರಾಟವೇ ಸರಿ ಎಂದು ಅಭಿಪ್ರಾಯಿಸಿದರು.

ಸಮುದಾಯ, ಧರ್ಮವನ್ನು ಬೇರೆಯವರು ಕಟ್ಟಿಕೊಟ್ಟ ಗ್ರಹಿಕೆ, ಚೌಕಟ್ಟು, ಕಥನಗಳ ಮೂಲಕ ಅರ್ಥ ಮಾಡಿಕೊಳ್ಳುವುದು, ಸಮುದಾಯದ ದುಷ್ಟತನವನ್ನು ಹುಡುಕುವುದು ಇಂದು ಸಮಾಜದಲ್ಲಿ ಅತಿಯಾಗುತ್ತಿದೆ. ಇದರ ಭಾಗವಾಗಿ ಇದೀಗ ಗಾಂಧಿ, ನೆಹರೂವಿನಂತಹ ಮಹಾನ್ ನಾಯಕರನ್ನೂ ದುಷ್ಟೀಕರಿಸುವ ಕಾರ್ಯ ನಡೆಯುತ್ತಿದೆ. ಟಿಪ್ಪು ಸುಲ್ತಾನನ ಮತಾಂತರದ ಬಗ್ಗೆ ಮಾತನಾಡುವವರು, ಶೃಂಗೇರಿ ಗುರುಗಳಿಗೆ ಪತ್ರ ಬರೆದ ಬಗ್ಗೆ ಮೌನ ವಹಿಸುತ್ತಾರೆ ಎಂದರು.

ಬ್ರಾಹ್ಮಣರು ಜಾತಿವಾದಿಗಳು, ಮುಸ್ಲಿಮರು ಕ್ರೂರಿಗಳು, ದಲಿತರು ಕೊಳಕರು ಎಂಬ ಪಡಿಯಚ್ಚುಗಳು ಇತಿಹಾಸದಲ್ಲಿ ತುಂಬಿ ಹೋಗಿದ್ದು, ಅವುಗಳನ್ನು ಒಡೆಯಬೇಕಾದ ಕೆಲಸವನ್ನು ನಾವಿಂದು ಮಾಡಬೇಕಾಗಿದೆ. ಎಲ್ಲಾ ಧರ್ಮ, ಸಮುದಾಯಗಳಲ್ಲೂ ಒಳ್ಳೆಯವರು, ಕೆಟ್ಟವರು ಇರುತ್ತಾರೆ. ಸಮಾಜದ ಜನ ಬದಲಾಗುತ್ತಾರೆ ಎಂಬ ಇತಿಹಾಸದ ಸತ್ಯಗಳನ್ನು ಪುಸ್ತಕಗಳು ಕಟ್ಟಿ ಕೊಡುತ್ತವೆ. ಹಾಗಾಗಿ ಸತ್ಯವನ್ನು ಆತ್ಮಾವಲೋಕಿಸುವುದು ಇಂದಿನ ಅತೀ ಅಗತ್ಯಗಳಲ್ಲಿ ಒಂದು. ಇತಿಹಾಸ ವರ್ತಮಾನದಲ್ಲಿ ಭವಿಷ್ಯವನ್ನು ರೂಪಿಸುವಂತಾಗಬೇಕೇ ಹೊರತು ಸಮಾಜವನ್ನು ಒಡೆಯುವ ಆಯುಧವಾಗಬಾರದು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News