ಪ್ರೊ.ಸಿ.ನಾಗಣ್ಣ, ಅಬ್ದುಲ್ ಹಮೀದ್ ಕ್ಕಲಡ್ಕ, ಪ್ರೊ.ಟಿ.ಯಲ್ಲಪ್ಪರಿಗೆ ವರ್ಧಮಾನ ಪ್ರಶಸ್ತಿ

Update: 2018-08-11 17:42 GMT

ಮೂಡುಬಿದಿರೆ, ಆ.11: ಕಳೆದ ಮೂವತ್ತೇಳು ವರುಷಗಳಿಂದ ಪ್ರತಿಷ್ಠಿತ ವರ್ಧಮಾನ ಸಾಹಿತ್ಯ ಪ್ರಶಸ್ತಿಗಳನ್ನು ನೀಡುತ್ತಾ ಬಂದಿರುವ ಮೂಡುಬಿದಿರೆಯ ವರ್ಧಮಾನ ಪ್ರಶಸ್ತಿ ಪೀಠವು 2017ರ ಸಾಲಿನಲ್ಲಿ ವರುಷದ ಶ್ರೇಷ್ಠ ಕನ್ನಡ ಸಾಹಿತ್ಯ ಕೃತಿಗೆ ನೀಡುವ ವರ್ಧಮಾನ ಸಾಹಿತ್ಯ ಪ್ರಶಸ್ತಿಯನ್ನು ಮೈಸೂರಿನ ಪ್ರೊ.ಸಿ.ನಾಗಣ್ಣ ಅವರ ’ಕಲ್ಲಲ್ಲ ಕಾಮನಬಿಲ್ಲು’ ಎನ್ನುವ ಲೇಖನ ಸಂಗ್ರಹಕ್ಕೆ ಮತ್ತು ವರುಷದ ಶ್ರೇಷ್ಠ ವರ್ಧಮಾನ ಉದಯೋನ್ಮುಖ ಸಾಹಿತ್ಯ ಕೃತಿಗೆ ನೀಡುವ ಪ್ರಶಸ್ತಿಯನ್ನು ಬೆಂಗಳೂರಿನ ಪ್ರೊ.ಟಿ.ಯಲ್ಲಪ್ಪ ಅವರ ’ಚಿಟ್ಟೆ ಮತ್ತು ಜೀವಯಾನ’ ಎನ್ನುವ ಕವನಸಂಕಲನಕ್ಕೆ ಹಾಗೂ ಮೂಡುಬಿದಿರೆಯ ಅಬ್ದುಲ್ ಹಮೀದ್ ಪಕ್ಕಲಡ್ಕ ಅವರ ’ಭ್ರಮೆ’ಎನ್ನುವ ಕಥಾಸಂಕಲನ ಕೃತಿಗೆ ನೀಡಲು ನಿರ್ಧರಿಸಿದೆ.

ಪೀಠದ ಅಧ್ಯಕ್ಷ ಎಸ್.ಡಿ.ಸಂಪತ್‌ಕುಮಾರ್ ಸಾಮ್ರಾಜ್ಯ ಅವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಭೆಯಲ್ಲಿ 2017ರ ಸಾಲಿನ ತೀರ್ಪುಗಾರ ಮಂಡಲಿಯ ಸದಸ್ಯರಾದ ಡಾ. ನೀಲಗಿರಿ ತಳವಾರ್, ಶ್ರೀ ಸುಬ್ರಾಯ ಚೊಕ್ಕಾಡಿ, ಡಾ.ಬಿ.ಜನಾರ್ದನ ಭಟ್ ಅವರ ತೀರ್ಪಿನ ಆಧಾರದಲ್ಲಿ ನಿರ್ಣಯವನ್ನು ಕೈಗೊಳ್ಳ ಲಾಗಿದೆ ಎಂದು ಪೀಠದ ಪ್ರಧಾನ ನಿರ್ದೇಶಕ ಡಾ.ನಾ.ಮೊಗಸಾಲೆ ತಿಳಿಸಿದ್ದಾರೆ.

ಪ್ರಶಸ್ತಿ ಪ್ರದಾನ ಸಮಾರಂಭವು ಮೂಡುಬಿದಿರೆಯ ಸಮಾಜಮಂದಿರದಲ್ಲಿ ಜರಗಲಿರುವ ದಸರಾ ಸಾಹಿತ್ಯೋತ್ಸವ ಸಂದರ್ಭದಲ್ಲಿ ನಡೆಸಲು ನಿರ್ಧರಿಸಲಾಗಿದೆ. ವರ್ಧಮಾನ ಸಾಹಿತ್ಯ ಪ್ರಶಸ್ತಿಯು ಇಪ್ಪತ್ತೈದು ಸಾವಿರದ ಗೌರವ ಸಂಭಾವನೆ, ತಾಮ್ರಪತ್ರ ಮತ್ತು ಸನ್ಮಾನವನ್ನು ಒಳಗೊಂಡಿದ್ದರೆ, ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿಯು ಹದಿನೈದು ಸಾವಿರದ ಗೌರವ ಸಂಭಾವನೆ (ಇಬ್ಬರಿಗೆ ತಲಾ ಏಳೂವರೆ ಸಾವಿರದ ಹಾಗೆ), ತಾಮ್ರಪತ್ರ ಸನ್ಮಾನವನ್ನು ಒಳಗೊಂಡಿದೆ. 2017ರ ಸಾಲಿನ ಪ್ರಶಸ್ತಿಗಳಿಗೆ 2012ರಲ್ಲಿ ಪ್ರಕಟವಾದ ಕೃತಿಗಳನ್ನು ಪರಿಶೀಲಿಸಲಾಗಿದೆ ಎಂದು ಪ್ರಶಸ್ತಿ ಪೀಠದ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News