ನೇತ್ರಾವತಿ ನದಿಯಲ್ಲಿ ಭಾರೀ ಪ್ರಮಾಣದ ಕೋಳಿ ತ್ಯಾಜ್ಯ !

Update: 2018-08-12 07:59 GMT

ಬಂಟ್ವಾಳ, ಆ.11: ಕರಾವಳಿಯ ಜೀವನದಿ ನೇತ್ರಾವತಿ ಯು ತ್ಯಾಜ್ಯಗಳಿಂದ ಮಾಲಿನ್ಯಗೊಂಡಿದ್ದು, ಇದೀಗ ವಿಷಕಾರಿ ಕೋಳಿ ತ್ಯಾಜ್ಯದಿಂದ ನದಿಯ ನೀರು ಮತ್ತಷ್ಟು ಮಲಿನಗೊಂಡಿದ್ದು, ಪರಿಸರವಿಡೀ ದುರ್ನಾತ ಬೀರುತ್ತಿವೆ.

ನೇತ್ರಾವತಿ ನದಿಯ ತುಂಬೆ ಕಿಂಡಿ ಅಣೆಕಟ್ಟಿನ ಶುದ್ಧೀಕರಣ ಘಟಕದ ಸಮೀಪ, ಬಿ.ಮೂಡ ಗ್ರಾಮದ ತಲಪಾಡಿ ಮೇಲ್ಸೆತುವೆ ಹಾಗೂ ಕೆಳಸೇತುವೆಯ ನದಿಯ ನೀರಿನಲ್ಲಿ ಭಾರೀ ಪ್ರಮಾಣದ ಕೋಳಿ ತ್ಯಾಜ್ಯ ಗಳು ಹಾಗೂ ವಿಷಕಾರಿ ತ್ಯಾಜ್ಯಗಳು ಪತ್ತೆಯಾಗಿದ್ದು, ಇದರಿಂದ ನೇತ್ರಾವತಿ ನದಿಯು ಸಂಕಷ್ಟಕ್ಕೆ ಸಿಲುಕಿದ್ದು, ಇಲ್ಲಿನ ನಿವಾಸಿಗಳಿಗೆ ರೋಗ ಭೀತಿ ಎದುರಾಗಿದೆ.

ದಿನದಿಂದ ದಿನಕ್ಕೆ ವಿಷಕಾರಿ ತ್ಯಾಜ್ಯಗಳು ಹಾಗೂ ಭಾರೀ ಪ್ರಮಾಣದ ಕೋಳಿ ತ್ಯಾಜ್ಯಗಳು ಎಸೆಯು ದರಿಂದ ನೇತ್ರಾವತಿ ನದಿ ಸಮೀಪವಿರುವ ಶುದ್ಧೀಕರಣ ಘಟಕವು ಡಂಪಿಂಗ್ ಯಾರ್ಡ್ ಆಗಿ ಮಾರ್ಪಟ್ಟಿದೆ.

ಎರಡು ಸೇತುವೆಯಿಂದ ಎಸೆತ

ಕೋಳಿಯ ತ್ಯಾಜ್ಯವನ್ನು ರಾತ್ರಿಯ ಹೊತ್ತು ಕಿಡಿಗೇಡಿಗಳು ವಾಹನದಲ್ಲಿ ತುಂಬಿಸಿಕೊಂಡು ಬಂದು ರಾಷ್ಟ್ರೀಯ ಹೆದ್ದಾರಿಯ ತಲಪಾಡಿ ಸೇತುವೆಯ ಮೇಲಿನಿಂದ ಹಾಗೂ ಸರ್ವಿಸ್ ರಸ್ತೆಯಿಂದ ಕೆಳಕ್ಕೆ ನದಿಗೆ ಏಸೆದು ಪರಾರಿಯಾಗುತ್ತಿದ್ದಾರೆ. ನೀರು ಇಳಿದ ಸಂದರ್ಭ ಅದು ತೇಲಿಕೊಂಡು ದಡಕ್ಕೆ ಬಂದು ಬೀಳುತ್ತಿದೆ. ಈ ತ್ಯಾಜ್ಯದಿಂದಾಗಿ ಸುತ್ತಮುತ್ತಲಿನ ಪ್ರದೇಶ ಗಬ್ಬುನಾರುತ್ತಿದ್ದು, ನದಿ ಪಾತ್ರದ ಮನೆಯಲ್ಲಿ ಕುಳಿತುಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ನದಿ ಪಾತ್ರದ ನಿವಾಸಿಗಳು ಆಗ್ರಹಿಸಿದ್ದಾರೆ.

ನೀರು ಶುದ್ಧೀಕರಣ ಮಗ್ಗುಲಲ್ಲಿ ಡಂಪಿಂಗ್ ಯಾರ್ಡ್

ಒಂದೆಡೆ ರಾತ್ರಿ ಹೊತ್ತು ಕಿಡಿಗೇಡಿಗಳು ಸೇತುವೆ ಮೇಲಿನಿಂದ ನದಿಗೆ ಕೋಳಿ ತ್ಯಾಜ್ಯ ಎಸೆಯುತ್ತಿದ್ದರೆ, ಇನ್ನೊಂದೆಡೆ ವಾಹನದಲ್ಲಿ ಕಸವನ್ನು ತಂದು ಸೇತುವೆಯ ಮಗ್ಗುಲಲ್ಲಿ ಸುರಿದು ಹೋಗುತ್ತಿದ್ದಾರೆ. ಇದರಿಂದಾಗಿ ಸೇತುವೆ ಬಳಿ ಕಸದ ರಾಶಿ ಬಿದ್ದಿದ್ದು, ಡಂಪಿಂಗ್ ಯಾರ್ಡ್ ಆಗಿ ಮಾರ್ಪಟ್ಟಿದೆ. ಕೋಳಿ ತ್ಯಾಜ್ಯವನ್ನು ನಾಯಿಗಳು, ಜಾನುವಾರುಗಳು ತಿನ್ನುವ ಸಾಧ್ಯತೆಯಿದ್ದು, ಪರಿಣಾಮ ಅವುಗಳು ಅನಾರೋಗ್ಯಕ್ಕೆ ತುತ್ತಾಗಿ ಪ್ರಾಣ ಕಳೆದುಕೊಳ್ಳುವ ಆತಂಕವಿದೆ.

ಎಲ್ಲೆಲ್ಲಿ ಎಸೆಯಲಾಗುತ್ತಿದೆ?

ಬಂಟ್ವಾಳ, ತಲಪಾಡಿ, ಪಾಣೆಮಂಗಳೂರು, ಬಡ್ಡಕಟ್ಟೆ, ಗೂಡಿನಬಳಿ ಸೇರಿದಂತೆ ನೇತ್ರಾವತಿ ನದಿಯ ಆಯಕಟ್ಟಿನ ಪ್ರದೇಶಗಳಲ್ಲಿ ತ್ಯಾಜ್ಯಗಳನ್ನು ನದಿಗೆ ಎಸೆಯಲಾಗುತ್ತಿದ್ದು, ಇದರ ಬಗ್ಗೆ ಬಂಟ್ವಾಳ ಪುರಸಭೆ ಕಟ್ಟುನಿಟ್ಟಿನ ಸೂಚನೆ ನೀಡಿದರೂ ಇನ್ನೂ ಮುಕ್ತಿ ದೊರಕಿಲ್ಲ. ಅಲ್ಲದೆ ಇಲ್ಲಿನ ಸುತ್ತಮುತ್ತಲಿನ ಚರಂಡಿ, ಶೌಚಾಲಯದ ನೀರು, ಹಳ್ಳದ ನೀರು ನೇತ್ರಾವತಿ ನದಿಗೆ ಸೇರುವುದರಿಂದ ನೀರು ಸಂಪೂರ್ಣವಾಗಿ ಕಲುಷಿತಗೊಂಡಿದೆ. ಈ ದಾರಿಯಲ್ಲಿ ನಡೆದಾಡಲು, ವಾಹನದಲ್ಲಿ ಸಂಚರಿಸಲು ಸಾಧ್ಯವಾಗದಷ್ಟು ದುರ್ನಾತ ಬೀರುತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ಕೆಲ ತಿಂಗಳ ಹಿಂದೆ ಪುರಸಭೆಯ ಸಹಾಯದೊಂದಿಗೆ ಭಾರೀ ಪ್ರಮಾಣದ ಕಸವನ್ನು ತೆರವುಗೊಳಿಸಲಾಗಿತ್ತು. ಆದರೆ ಈಗ ಮತ್ತೆ ಅದೇ ರೀತಿ ಕಸ, ಮದ್ಯ ಬಾಟಲಿ ಗಳು, ವಾಹನದ ಟಯರ್‌ಗಳು, ಪ್ಲಾಸ್ಟಿಕ್‌ಗಳು ಹಾಗೂ ನ್ನಿತರ ಮನೆಯ ತ್ಯಾಜ್ಯಗಳು ಸಂಗ್ರಹವಾಗಿದೆ ಎಂದು ಆರೋಪಿಸುತ್ತಾರೆ ಸ್ಥಳೀಯ ನಿವಾಸಿ ಧರ್ಮರಾಜ್.

ಕೋಳಿ ತ್ಯಾಜ್ಯಗಳು, ಚರಂಡಿ ಹಾಗೂ ಶೌಚಾಲಯ ಗಳ ನೀರು ನೇತ್ರಾವತಿ ನದಿಯನ್ನು ಸಂಪೂರ್ಣವಾಗಿ ಕಲುಷಿತಗೊಳಿಸುವ ಭೀತಿ ಎದುರಾಗಿದ್ದು, ಈ ಮಾಲಿನ್ಯಕ್ಕೆ ಕಾರಣವನ್ನು ಪತ್ತೆ ಹಚ್ಚಿ ಅದಕ್ಕೆ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಜೀವ ನದಿಯನ್ನು ರಕ್ಷಿಸಬೇಕು ಎಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.

ಮಕ್ಕಳಿಗೆ ಬೀದಿನಾಯಿಗಳ ಕಾಟ

ನೇತ್ರಾವತಿ ನದಿತೀರದಲ್ಲಿ ಹೋಗುವವರು ಮೂಗು ಮುಚ್ಚಿಕೊಂಡೇ ಸಾಗಬೇಕಾದ ಪರಿಸ್ಥಿತಿಯಿದೆ. ಕಸ ಹಾಕಬೇಡಿ ಎಂದು ಸೂಚನಾ ಫಲಕ ಹಾಕಿದರೂ ನಿಷ್ಪ್ರಯೋಜಕವಾಗಿದೆ. ಅಲ್ಲದೆ, ಹಾಕಿದ್ದ ಸೂಚನಾ ಫಲಕವೂ ನಾಪತ್ತೆಯಾಗಿದೆ. ಕೋಳಿ ತ್ಯಾಜ್ಯಗಳ ಬಳಿ ಬೀದಿನಾಯಿಗಳು ಕಾಟವು ಎದುರಾಗಿದ್ದು, ಇದೇ ದಾರಿಯಲ್ಲಿ ಹೋಗುವ ಶಾಲಾ ಮಕ್ಕಳು ಭಯಭೀತರಾಗಿದ್ದಾರೆ. ಇದೀಗ ನದಿಯ ಬದಿ ಹಾಕಿದ್ದ ಭಾರೀ ಪ್ರಮಾಣದ ತ್ಯಾಜ್ಯಗಳು ಮಳೆಗೆ ಕೊಚ್ಚಿಹೋಗಿ ನದಿ ಸೇರಿದ್ದು, ಇನ್ನು ಕೆಲವು ನದಿದಡದಲ್ಲಿ ಉಳಿದಿವೆ. ಮಾಲಿನ್ಯ ನಿಯಂತ್ರಣ ಮಂಡಳಿ ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸಾಮಾಜಿಕ ಹೋರಾಟಗಾರ ಲತೀಫ್ ಕೆ.ಎಚ್. ಹೇಳಿದರು.

ಬಂಟ್ವಾಳದ ಮುಖ್ಯ ನಗರಗಳಲ್ಲಿ ಸರಿಯಾದ ತ್ಯಾಜ್ಯ ಸಂಗ್ರಹದ ವ್ಯವಸ್ಥೆಯಿಲ್ಲ. ಪರಿಣಾಮ ತ್ಯಾಜ್ಯಗಳನ್ನು ರಸ್ತೆ ಬದಿ ಎಸೆಯುವ ಪ್ರವೃತ್ತಿ ಮುಂದುವರಿದಿದೆ. ಇದಕ್ಕೆ ಮುಕ್ತಿ ಎಂಬಂತೆ ಕಂಚಿನಪದವಿನಲ್ಲಿ ತ್ಯಾಜ್ಯ ವಿಲೇವಾರಿ ಘಟಕವನ್ನು ನಿರ್ಮಿಸಿ, ಪೈರೋಲಿಸಿಸ್ ಯಂತ್ರದ ಮೂಲಕ ವಿಲೇವಾರಿ ಮಾಡಲಾಗುವುದು ಎಂದು ಪುರಸಭೆಯಲ್ಲಿ ಗಂಭೀರ ಚರ್ಚೆ ನಡೆದರೂ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ.
- ಮಮ್ತಾಝ್ ಲತೀಫ್, ಪುರಸಭಾ ಸದಸ್ಯೆ

ರಾತ್ರಿ ಹೊತ್ತು ತಲಪಾಡಿ ಸರ್ವಿಸ್ ರಸ್ತೆಯಿಂದ ಕೆಳಕ್ಕೆ, ರಾಷ್ಟ್ರೀಯ ಹೆದ್ದಾರಿ ತಲಪಾಡಿ ಸೇತುವೆಯ ಮೇಲಿನಿಂದ ಭಾರೀ ಪ್ರಮಾಣದಲ್ಲಿ ತ್ಯಾಜ್ಯಗಳನ್ನು ವಾಹನಗಳಲ್ಲಿ ತಂದು ಎಸೆಯುತ್ತಿದ್ದಾರೆಂದು ಪೊಲೀಸ್ ಬೀಟ್‌ನಲ್ಲಿಯೂ ದೂರಿಕೊಂಡಿದ್ದೇವೆ. ತ್ಯಾಜ್ಯ ಎಸೆಯುವ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಸಂಬಂಧಿತ ಅಧಿಕಾರಗಳ ಗಮನಕ್ಕೆ ತಂದರೂ, ಸಕಾರಾತ್ಮಕ ಸ್ಪಂದನೆಯಿಲ್ಲ.

-ಶಾಹುಲ್ ಹಮೀದ್ ಬಿ.ಸಿ.ಆರ್., ಗ್ರಾಮಸ್ಥ

Writer - ಅಬ್ದುಲ್ ರಹಿಮಾನ್ ತಲಪಾಡಿ

contributor

Editor - ಅಬ್ದುಲ್ ರಹಿಮಾನ್ ತಲಪಾಡಿ

contributor

Similar News