‘ಶಿವ’ನ ಕಥೆ-ವ್ಯಥೆ

Update: 2018-10-20 18:39 GMT
‘ಶಿವ’ನ ಕಥೆ-ವ್ಯಥೆ
  • whatsapp icon

ನಾಟಕ ಇರಲಿ ಅಥವಾ ಕಥೆ-ಕಾದಂಬರಿ ಯಾವುದೇ ಇರಲಿ, ಅದರಲ್ಲಿ ಸಮಸ್ಯೆ ಯಾವ ರೀತಿ ಬಿಂಬಿತವಾಗಿದೆ- ಸಹಾನುಭೂತಿಪರವಾಗಿದೆಯೇ, ಶೈಕ್ಷಣಿಕವಾಗಿದೆಯೇ ಅಥವಾ...ಅಶ್ಲೀಲವಾಗಿದೆಯೇ/ಯಾವುದೇ ಸಮುದಾಯವನ್ನು ನೋಯಿಸುವ ಉದ್ದೇಶದಿಂದ ಕೂಡಿದೆಯೇ ಎಂಬುದನ್ನೆಲ್ಲ ನೋಡಿ/ಓದಿ ಮುಕ್ತ ಮನಸ್ಸಿನಿಂದ ವಿಚಾರ ಮಾಡಿ ತೀರ್ಮಾನಕ್ಕೆ ಬರಬೇಕು. ಇದಾವುದನ್ನೂ ಮಾಡದೆ ಒಂದೇ ಪಟ್ಟಿಗೆ ಬಹಿಷ್ಕಾರ ಹಾಕುವುದು, ಹೆದರಿಸುವುದು-ಬೆದರಿಸುವುದು ಅವಿವೇಕದ ಪರಮಾವಧಿಯಾಗುತ್ತದೆ.


ಸಂವಿಧಾನದತ್ತವಾದ ಅಭಿವ್ಯಕ್ತಿ ಸ್ವಾತಂತ್ರ್ಯ ಅಬಾಧಿತ.ಅದನ್ನು ಯಾವ ರಾಜಕೀಯ ಶಕ್ತಿಯಿಂದಲೂ ಹತ್ತಿಕ್ಕಲಾಗದು ಎಂದು ನಮ್ಮ ನ್ಯಾಯಾಂಗ ಹಲವು ಬಾರಿ ಸಾಹಿತಿ ಕಲಾವಿದರಿಗೆ ಅಭಯ ನೀಡಿದೆಯಾದರೂ ಈ ಸ್ವಾತಂತ್ರ್ಯಹರಣದ ಕತ್ತಿ ನಮ್ಮ ಮೇಲೆ ತೂಗುತ್ತಲೇ ಇದೆ. ಧರ್ಮ ಮತ್ತು ಸಮಾಜದ ಸ್ವಾಸ್ಥ್ಯ ಕಾಪಾಡುವ ಗುತ್ತಿಗೆ ಹಿಡಿದಂತೆ ವರ್ತಿಸುವ ಬಲಪಂಥೀಯ ಶಕ್ತಿಗಳ ಮಿತಿಮೀರಿದ ವರ್ತನೆಗಳು ಹಾಗೂ ಅವುಗಳನ್ನು ನಿಯಂತ್ರಿಸುವುದರಲ್ಲಿ ಸರಕಾರ ನಿಷ್ಕ್ರಿಯವಾಗಿರುವುದರಿಂದಾಗಿ ವ್ಯಕ್ತಿ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ ಇಂದು ಗಂಡಾಂತರ ಸ್ಥಿತಿಯನ್ನು ಎದುರಿಸುತ್ತಿದೆ ಎಂದರೆ ಅದು ಉತ್ಪ್ರೇಕ್ಷೆಯಲ್ಲ, ಕಟುವಾಸ್ತವ. ಇದಕ್ಕೆ ಇತ್ತೀಚಿನ ನಿದರ್ಶನ ಬೆಂಗಳೂರಿನಲ್ಲಿ ವಿಶ್ವಹಿಂದೂ ಪರಿಷತ್ತಿನವರು ನಾಟಕ ಪ್ರದರ್ಶನವೊಂದನ್ನು ಆಗ್ರಹಪೂರ್ವಕವಾಗಿ ನಿಲ್ಲಿಸಿರುವುದು.

ಬೆಂಗಳೂರಿನ ಜಾಗೃತಿ ಥಿಯೇಟರ್ ಒಂದು ಹವ್ಯಾಸಿ ನಾಟಕ ತಂಡ. ಈ ತಂಡ ಅ.13ರಂದು ನಗರದಲ್ಲಿ ಅಭಿನಯಿಸಬೇಕಿದ್ದ ‘ಶಿವ’ ನಾಟಕದ ಪ್ರದರ್ಶನವನ್ನು ವಿಶ್ವ ಹಿಂದೂ ಪರಿಷತ್ತಿನ ನಾಯಕತ್ವದ ಬಲಪಂಥೀಯ ಗುಂಪುಗಳ ಒತ್ತಡ ಹಾಗೂ ಬೆದರಿಕೆಯಿಂದಾಗಿ ನಿಲ್ಲಿಸಬೇಕಾಯಿತು. ವಿಶ್ವ ಹಿಂದೂ ಪರಿಷತ್ತಿನ ನಾಯಕತ್ವದಲ್ಲಿ ಮೂರು ಬಲಪಂಥೀಯ ಸಂಘಟನೆಗಳು ‘ಶಿವ’ ನಾಟಕ ಪ್ರದರ್ಶನಗೊಳ್ಳಬೇಕಿದ್ದ ವೈಟ್‌ಫೀಲ್ಡಿನ ರಂಗಮಂದಿರಕ್ಕೆ ತೆರಳಿ ನಾಟಕ ಪ್ರದರ್ಶನ ನಿಲ್ಲಿಸುವಂತೆ ಆಗ್ರಹಪಡಿಸಿದ್ದಾರೆ. ನಾಟಕದ ವಸ್ತು ಮತ್ತು ನಾಟಕದ ಹೆಸರಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಈ ಸಂಘಟನೆಗಳು ನಾಟಕವನ್ನು ಪ್ರದರ್ಶಿಸಿದಲ್ಲಿ ತೊಂದರೆಯುಂಟುಮಾಡುವುದಾಗಿ ಬೆದರಿಕೆ ಹಾಕಿದರೆಂದೂ ಅವರ ಆಂಗಿಕ ಭಾಷೆ ಬೆದರಿಕೆಕಾರಿಯಾಗಿದ್ದುದರಿಂದ ನಾಟಕದ ಪ್ರದರ್ಶನವನ್ನು ಅನಿವಾರ್ಯವಾಗಿ ನಿಲ್ಲಿಸಬೇಕಾಯಿತೆಂದೂ ಜಾಗೃತಿ ಥಿಯೇಟರಿನ ಕಲಾ ನಿರ್ದೇಶಕಿ ಅರುಂಧತಿ ರಾಜಾ ತಿಳಿಸಿದ್ದಾರೆ. ‘ಶಿವ’ ಈ ನಾಟಕದ ಶೀರ್ಷಿಕೆ. ಈ ಹೆಸರಿನಲ್ಲಿ, ಈ ನಾಟಕದಲ್ಲಿ ಆಕ್ಷೇಪಾರ್ಹವಾದುದು ಏನಿದೆ? ಏನಿದೆಯೋ ಆ ‘ಶಿವ’ನಿಗೇ ಗೊತ್ತು. ಈ ನಾಟಕದ ಕರ್ತೃ ಯಾರೆಂಬುದು ತಿಳಿಯದು. ಈ ನಾಟಕ ಪ್ರಕಟವಾಗಿರುವಂತೆ ಕಾಣುತ್ತಿಲ್ಲ. ಇನ್ನೂ ಪ್ರಕಟವಾಗದ, ರಂಗದ ಮೇಲೆ ಅಭಿನಯಗೊಳ್ಳದ ನಾಟಕದಲ್ಲಿ ಆಕ್ಷೇಪಾರ್ಹವಾದುದು ಇದೆ ಎಂಬುದು ಪ್ರದರ್ಶನ ರದ್ದಿಗೆ ಆಗ್ರಹಪಡಿಸಿದ ಸಂಘಟನಕಾರರರಿಗೆ ಹೇಗೆ ಗೊತ್ತಾಯಿತೋ ತಿಳಿಯದು. ಈ ಬಲಪಂಥೀಯ ಸಂಘಟನೆಗಳು ಒಪ್ಪಿಕೊಂಡಿರುವಂತೆ ಅವರು ನಾಟಕವನ್ನು ನೋಡಿಲ್ಲ. ನಾಟಕವನ್ನು ನೋಡದೆ, ಓದದೇ, ಅದರಲ್ಲಿ ಆಕ್ಷೇಪಾರ್ಹವಾದುದು ಇದೆ ಎನ್ನುವ ನಿರ್ಧಾರಕ್ಕೆ ಹೇಗೆ ಬರಲಾಯಿತು?

ವಿಶ್ವ ಹಿಂದೂ ಪರಿಷತ್ತು ವೈಟ್‌ಫೀಲ್ಡ್ ಪೊಲೀಸ್ ಠಾಣೆಗೆ ನಾಟಕ ಪ್ರದರ್ಶನ ವಿರೋಧಿಸಿ ನೀಡಿರುವ ಅರ್ಜಿಯ ಪ್ರಕಾರ, ‘‘ನಾಟಕಕ್ಕೆ ನಮ್ಮ ದೇವರು ‘ಶಿವ’ನ ಹೆಸರಿನ ಶೀರ್ಷಿಕೆ ನೀಡಲಾಗಿದೆ. ಶಿವನನ್ನು ನಾವು ನಮ್ಮ ದೇವರು ಎಂದು ಆರಾಧಿಸುತ್ತೇವೆ. ನಾನು ಹಿಂದೂ ಧಾರ್ಮಿಕ ಹಿನ್ನೆಲೆಯಿಂದ ಬಂದವನು. ‘ಶಿವ’ ಲೈಂಗಿಕತೆ ಮತ್ತು ಲಿಂಗ ಸಂಬಂಧಿತ ಚಟುವಟಿಕೆಗಳನ್ನು ಕುರಿತದ್ದಾಗಿದೆ.’’ ಈ ತಕರಾರು ಅರ್ಜಿಯೇ ಅಸ್ಪಷ್ಟವಾಗಿದೆ. ಕೃತಿಯನ್ನು ಓದದೇ, ನೋಡದೆ ಹೇಳಿಕೆ ಮಾತನ್ನು ಕೇಳಿಕೊಂಡು ಬರೆದ ಮೂಗರ್ಜಿಯಂತಿದೆ ಇದು. ನಾಟಕ ನೋಡಿ ನಿಜಕ್ಕೂ ಅದರಲ್ಲಿ ಒಂದು ಸಮುದಾಯವನ್ನು ನೋಯಿಸುವಂತಹ ಸಂಗತಿಗಳಿವೆಯೇ, ಮಾತು-ಕ್ರಿಯಗಳಿವೆಯೇ ಎಂಬುದನ್ನು ಖಾತ್ರಿಮಾಡಿಕೊಂಡು ದೂರು ನೀಡಿದ್ದಿದ್ದರೆ, ಮುಂದಿನ ಪ್ರದರ್ಶನಗಳ ತಡೆಗೆ ಆಗ್ರಹಪಡಿಸಿದ್ದಿದ್ದರೆ ಅದಕ್ಕೊಂದು ಅರ್ಥವಿರುತ್ತಿತ್ತು. ಸ್ಪಷ್ಟ ಮಾಹಿತಿಯಿಲ್ಲದೆ, ಸತ್ಯಸಂಗತಿ ತಿಳಿಯದೆ ಹೀಗೆ ದೂಂಡಾವರ್ತಿಗಿಳಿಯುವುದು ದುರಹಂಕಾರ ಮತ್ತು ದುರಭಿಮಾನದ ವರ್ತನೆಯಾಗುತ್ತದೆ. ವಿಶ್ವ ಹಿಂದೂ ಪರಿಷತ್ತಿನ ಈ ವರ್ತನೆಯಿಂದ ನಾಟಕಕಾರ ಮತ್ತು ಕಲಾವಿದರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಚ್ಯುತಿಯಾಗಿದೆ ಹಾಗೂ ನೋಡುವವರ ವೀಕ್ಷಣಾ ಸ್ವಾತಂತ್ರ್ಯಕ್ಕೂ ಚ್ಯುತಿಯಾಗಿದೆ. ಅಲ್ಲದೆ ನಾಟಕ ತಂಡಕ್ಕೆ ಆರ್ಥಿಕವಾಗಿಯೂ ನಷ್ಟವಾಗಿದೆ.

‘ಶಿವ’ ನಾಟಕದ ನಿರ್ದೇಶಕ ದಯಾಸಿಂಧು ಸಕ್ರೆಪಟ್ಣ ಅವರ ಪ್ರಕಾರ ಈ ನಾಟಕದ ವಸ್ತು: ‘ಎಲ್‌ಜಿಬಿಟಿಕ್ಯುಐ’ ಸಮುದಾಯದ ಸಮಸ್ಯೆಗಳು ಮತ್ತು ಸಾಮಾಜಿಕ ತಾರತಮ್ಯಗಳು. ಈ ನಾಟಕವನ್ನು ಇಂಡಿಯಾ ಫೌಂಡೇಶನ್ ಫಾರ್ ಆರ್ಟ್ಸ್ ನೆರವಿನಿಂದ ಪ್ರದರ್ಶಿಸುವ ಏರ್ಪಾಟಾಗಿತ್ತು. ಏನಿದು ‘ಎಲ್‌ಜಿಬಿಟಿಕ್ಯುಐ’? ಲೆಸ್ಬಿಯನ್, ಗೇ, ಬೈಸೆಕ್ಷುಯಲ್, ಟ್ರಾನ್ಸ್ ಜೆಂಡರ್, ಕ್ವೆಶ್ಚನಿಂಗ್-ಅಂದರೆ, ಸಲಿಂಗ ಸ್ತ್ರೀಕಾಮಿಗಳು, ಸಲಿಂಗಕಾಮಿಗಳು, ಉಭಯಲಿಂಗಿಗಳು (ಗಂಡಸು-ಹೆಂಗಸು ಇಬ್ಬರಿಂದಲೂ ಆಕರ್ಷಿತರಾಗುವವರು), ಗಂಡೂ-ಹೆಣ್ಣೂ ಎರಡೂ ಅಲ್ಲದ ನಪುಂಸಕರು ಇವರ ಸಮಸ್ಯೆಗಳು ‘ಶಿವ’ ನಾಟಕದ ವಸ್ತು ಎಂದು ಊಹಿಸಬಹುದು. ಈ ಮಂದಿ ಇಪ್ಪತ್ತೊಂದನೆಯ ಶತಮಾನದಲ್ಲಿ ಎದುರಿಸುತ್ತಿರುವ ಲೈಂಗಿಕ ಆದ್ಯತೆ ಕುರಿತ ಸಮಸ್ಯೆಗಳ ಚರ್ಚೆ-ಸಂವಾದ- ಪರಿಹಾರ ಕುರಿತ ಅಂತರ್‌ರಾಷ್ಟ್ರೀಯ ಸಂಘಟನೆ ಈ ‘ಎಲ್‌ಜಿಬಿಟಿಕ್ಯುಐ’. ಇದೊಂದು ಗಂಭೀರ ಸಮಸ್ಯಯೇ. ಇದಕ್ಕೆ ಸಂಬಂಧಿಸಿದಂತೆ, ಸಲಿಂಗ ವಿವಾಹಕ್ಕೆ ಸಂಬಂಧಿಸಿದಂತೆ, ಸ್ತ್ರೀ ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆ ಈಚಿನ ದಿನಗಳಲ್ಲಿ ಪ್ರಗತಿಪರ ತೀರ್ಪುಗಳು ಬಂದಿದ್ದು ಮುಕ್ತ ಚರ್ಚೆಯಾಗುತ್ತಿದೆ. ಈ ಸಂದರ್ಭದಲ್ಲಿ ಕವಿಗಳು-ಕಲಾವಿದರು ತಮ್ಮ ಕೃತಿಗಳ ಮೂಲಕ ಈ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರೆ ಅದು ಸಹಜವೇ. ನಾಟಕ ಇರಲಿ ಅಥವಾ ಕಥೆ-ಕಾದಂಬರಿ ಯಾವುದೇ ಇರಲಿ, ಅದರಲ್ಲಿ ಸಮಸ್ಯೆ ಯಾವ ರೀತಿ ಬಿಂಬಿತವಾಗಿದೆ- ಸಹಾನುಭೂತಿಪರವಾಗಿದೆಯೇ, ಶೈಕ್ಷಣಿಕವಾಗಿದೆಯೇ ಅಥವಾ...ಅಶ್ಲೀಲವಾಗಿದೆಯೇ/ಯಾವುದೇ ಸಮುದಾಯವನ್ನು ನೋಯಿಸುವ ಉದ್ದೇಶದಿಂದ ಕೂಡಿದೆಯೇ ಎಂಬುದನ್ನೆಲ್ಲ ನೋಡಿ/ಓದಿ ಮುಕ್ತ ಮನಸ್ಸಿನಿಂದ ವಿಚಾರ ಮಾಡಿ ತೀರ್ಮಾನಕ್ಕೆ ಬರಬೇಕು. ಇದಾವುದನ್ನೂ ಮಾಡದೆ ಒಂದೇ ಪಟ್ಟಿಗೆ ಬಹಿಷ್ಕಾರ ಹಾಕುವುದು, ಹೆದರಿಸುವುದು-ಬೆದರಿಸುವುದು ಅವಿವೇಕದ ಪರಮಾವಧಿಯಾಗುತ್ತದೆ.

ಸಲಿಂಗ ಕಾಮ ಮತ್ತು ಸಲಿಂಗ ಕಾಮಿಗಳ ಸಮಸ್ಯೆಗಳು ನಮ್ಮ ಸಮಾಜಕ್ಕೆ ಹೊಸದೇನಲ್ಲ. ಆದರೆ ಕಳೆದ ಶತಮಾನದ ವರೆಗೆ ಗುಟ್ಟಿನ, ಸಂಕೋಚ-ಹೆದರಿಕೆಗಳ ವಿಷಯವಾಗಿದ್ದ ಸಲಿಂಗ ಕಾಮದ ಬಗ್ಗೆ, ವ್ಯಕ್ತಿಗತ ಇಷ್ಟ-ಅನಿಷ್ಟಗಳು ಏನೇ ಇರಲಿ, ಈಚಿನ ದಿನಗಳಲ್ಲಿ ಮಡಿವಂತಿಕೆ ಹೋಗಿ ಸಾರ್ವತ್ರಿಕವಾಗಿ ಮುಕ್ತ ಚಿಂತನೆಯ ಆರೋಗ್ಯಕರ ಪ್ರವೃತ್ತಿ ಕಂಡುಬರುತ್ತಿದೆ. ಇಂತಹ ಮುಕ್ತ ವಾತಾವರಣದ ಮತ್ತು ಸುಪ್ರೀಂ ಕೋರ್ಟಿನ ತೀರ್ಪುಗಳ ಹಿನ್ನೆಲೆಯಲ್ಲಿ, ಇಂತಹ ವಿಷಯಗಳ ಅಭಿವ್ಯಕ್ತಿಗೆ ಮತ್ತು ಸಲಿಂಗಕಾಮವನ್ನು ರಾಜಾರೋಷವಾಗಿ ಒಪ್ಪಿಕೊಳ್ಳುವುದಕ್ಕೆ ಇನ್ನೂ ವಿರೋಧ ಕಂಡುಬರುತ್ತಿರುವುದು ನಮ್ಮ ಸಮಾಜದಲ್ಲಿ ಉಳಿದಿರುವ ಅಜ್ಞಾನ ಮತ್ತು ಮಡಿವಂತಿಕೆಗಳ ಕಿಲುಬನ್ನು ತೋರಿಸುತ್ತದೆ. ಇಂಥ ಕಿಲುಬನ್ನು ಮುಕ್ತ ವಿಚಾರ ಮತ್ತು ಚಿಂತನೆಗಳಿಂದ ತೊಳೆದುಕೊಳ್ಳಬೇಕೇ ಹೊರತು ಅದನ್ನು ಧರ್ಮದ ಹೆಸರಿನಲ್ಲಿ ಬಹಿಷ್ಕರಿಸುವುದರಿಂದ ಏನೂ ಪ್ರಯೋಜನವಿಲ್ಲ. ಇಂಥ ಜ್ವಲಂತ ವಿಷಯಗಳಿಗೆ ತಮ್ಮ ಮಾಧ್ಯಮಗಳ ಮೂಲಕ ಅಭಿವ್ಯಕ್ತಿ ನೀಡುವುದು ಸಾಹಿತಿ-ಕಲಾವಿದರ ಕರ್ತವ್ಯವೇ ಆಗಿದೆ. ಸುಪ್ರೀಂ ಕೋರ್ಟ್ ತೀರ್ಪು ಸಲಿಂಗ ಕಾಮಿಗಳಿಗೆ ಹರ್ಷ ತಂದಿರುವುದು ಸಹಜ. ಆದರೆ ಸಲಿಂಗ ಕಾಮಿ ದಂಪತಿಗಳನ್ನು ಸಮಾಜದ ಮುಖ್ಯವಾಹಿನಿ ಅಷ್ಟು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ಮುಖ್ಯವಾಹಿನಿಗೆ ಸ್ವೀಕಾರಾರ್ಹವಾಗಲು ಅವರು ಇನ್ನು ಬಹಳಷ್ಟು ಹೋರಾಡಬೇಕಾಗಬಹುದು. ಸಲಿಂಗಕಾಮಿಗಳು ಮತ್ತು ಮಡಿವಂತ ಸಮಾಜಗಳ ನಡುವಣ ಕಂದರವನ್ನು ಮುಚ್ಚುವ ನಿಟ್ಟಿನಲ್ಲಿ ಕಲೆ ಮತ್ತು ಸಾಹಿತ್ಯ ಪರಿಣಾಮಕಾರಿ ಪಾತ್ರವಹಿಸಬಲ್ಲದು. ‘ಶಿವ’ ನಾಟಕದ ಪ್ರಯತ್ನವೂ ಸಲಿಂಗಕಾಮಿಗಳು ಮತ್ತು ಪ್ರತಿಬಂಧಕ ಮನಸ್ಸುಗಳ ನಡುವೆ ಸೇತುವೆಯಾಗುವುದೇ ಆಗಿದೆ ಎನ್ನುವ ನಿರ್ದೇಶಕರ ಮಾತು ವಿಚಾರಾರ್ಹವಾದದ್ದು. ‘ಶಿವ’ನ ಹೆಸರಿದ್ದ ಮಾತ್ರಕ್ಕೆ ಅದು ನಮ್ಮ ದೈವ ನಿಂದೆ ಎಂದು ನಾಟಕವನ್ನು ನೋಡದೇ ನಿರ್ಧಾರಕ್ಕೆ ಬರುವುದು ಅಪ್ರಬುದ್ಧತೆಯಾಗುತ್ತದೆ. ನಮ್ಮ ಪುರಾಣಗಳಲ್ಲೇ ಶಿವನನ್ನು ಅರ್ಧನಾರೀಶ್ವರನಾಗಿ ಚಿತ್ರಿಸಿಲ್ಲವೇ? ‘ಶಿವ’ ನಾಟಕವನ್ನು ಪ್ರದರ್ಶಿಸುವ ಹಕ್ಕು ಕಲಾವಿದರಿಗಿದೆ. ಆ ಹಕ್ಕಿನಿಂದ ಅವರು ವಂಚಿತರಾಗಿದ್ದಾರೆ. ನಾಟಕ ಪ್ರದರ್ಶನವನ್ನು ನೋಡಿದ ನಂತರ ಪಂಡಿತ ಪಾಮರರಾದಿ ಎಲ್ಲರಿಗೂ ತಮ್ಮದೇ ಆದ ನಿರ್ಧಾರಕ್ಕೆ ಬರುವ ಸ್ವಾತಂತ್ರ್ಯವಿದೆ.

ಪೊಲೀಸರು ಕೊಂಚ ಚಾಕಚಕ್ಯತೆಯಿಂದ ವರ್ತಿಸಿದ್ದಿದ್ದರೆ ನಾಟಕವನ್ನು ನಿಲ್ಲಿಸಬೇಕಾದ ಪ್ರಮೇಯ ಬರುತ್ತಿರಲಿಲ್ಲವೆನಿಸುತ್ತದೆ. ‘‘ಮೊದಲಿಗೆ ರಂಗಮಂದಿರದ ಬಳಿ ಮೂವರು ಪೊಲೀಸರನ್ನು ಗೊತ್ತುಪಡಿಸಲಾಗಿತ್ತು. ಪ್ರತಿಭಟನಾಕಾರರ ಸಂಖ್ಯೆ ಜಾಸ್ತಿಯಾದಂತೆ ಹೆಚ್ಚಿನ ಭದ್ರತೆ ನೀಡಲು ಪೊಲೀಸರು ನಿರಾಕರಿಸಿದ ಕಾರಣ ನಾಟಕ ಪ್ರದರ್ಶನವನ್ನು ರದ್ದುಗೊಳಿಸುವುದು ಅನಿವಾರ್ಯವಾಯಿತು’’ ಎಂದು ವ್ಯವಸ್ಥಾಪಕರು ಹೇಳಿದ್ದಾರೆ. ಪ್ರತಿಭಟನಾಕಾರರ ಸಂಖ್ಯೆ ಪೊಲೀಸರಿಂದ ನಿಭಾಯಿಸಲಾಗದಷ್ಟು ಹೆಚ್ಚಾಗಿತ್ತೆ ಎಂಬುದು ತಿಳಿಯದು. ‘‘ಮುಂದೆ ಈ ನಾಟಕದ ಪ್ರದರ್ಶನಕ್ಕೆ ಭದ್ರತೆ ಒದಗಿಸುವ ಮೊದಲು ವಸ್ತುವನ್ನು ಪರಾಮರ್ಶಿಸಬೇಕಾಗುತ್ತದೆ’’ ಎಂದು ಪೊಲೀಸ್ ಕಮಿಷನರ್ ಟಿ. ಸುನೀಲ್ ಕುಮಾರ್ ಹೇಳಿರುವುದಾಗಿ ವರದಿಯಾಗಿದೆ. ನಾಟಕವು ಧಾರ್ಮಿಕ ಭಾವನೆಗಳನ್ನು ನೋಯಿಸುವಂತಿದೆ ಎಂದು ಕೆಲವರು ಹೇಳಿರುವುದರಿಂದ ಶಾಂತಿಭಂಗ ಉಂಟಾಗಬಹುದು. ನಾಟಕ ನಿಜಕ್ಕೂ ಧಾರ್ಮಿಕ ಭಾವನೆಗಳನ್ನು ನೋಯಿಸುವುದೇ ಎಂಬುದನ್ನು ನೋಡಬೇಕಾಗಿದೆ. ಇಲ್ಲವಾದಲ್ಲಿ ಪ್ರದರ್ಶನಕ್ಕೆ ಭದ್ರತೆ ನೀಡಲಾಗುವುದು ಎಂದೂ ಕಮಿಷನರ್ ಅವರು ಹೇಳಿರುವುದಾಗಿ ವರದಿಯಾಗಿದೆ. ನಾಟಕದ ಶೀರ್ಷಿಕೆಯನ್ನು ಬದಲಾಯಿಸುವಂತೆ ಪೊಲೀಸ್ ಅಧಿಕಾರಿಗಳು ಸಲಹೆಮಾಡಿರುವುದಾಗಿಯೂ ವರದಿಯಾಗಿದೆ. ಇದು ನಿಜವಾಗಿದ್ದಲ್ಲಿ, ಇನ್ನು ಮುಂದೆ ಪೊಲೀಸರಿಗೆ ನಾಟಕದ ಪಠ್ಯವನ್ನು ಪೂರ್ವಪರಿಶೀಲನಗೆ (ಸೆನ್ಸಾರ್)ಒಪ್ಪಿಸ ಬೇಕಾಗುವಂಥ ಪರಿಸ್ಥಿತಿ ಉಂಟಾಗಬಹುದು. ಪೊಲೀಸರಿಗೆ ಈ ಸೆನ್ಸಾರ್ ಆಧಿಕಾರವನ್ನು ಯಾರು ಕೊಟ್ಟವರು? ಸಾಹಿತ್ಯ ಕೃತಿಯೊಂದನ್ನು ವಿಮರ್ಶಿಸುವ ಅರ್ಹತೆ ಪೊಲೀಸರಿಗಿದೆಯೇ?

ಈ ಪ್ರಕರಣ ಬಹಳ ಹಿಂದೆ ಇದ್ದ ಬ್ರಿಟಿಷರ ಕಾಲದ ಇಂಥ ಕಾನೂನೊಂದನ್ನು ನೆನಪಿಗೆ ತರುತ್ತದೆ. ಹತ್ತೊಂಬತ್ತನೆ ಶತಮಾನದಲ್ಲಿ ಬೆಳಗಾವಿಯಲ್ಲಿ ಪತ್ತಾರ ಮಾಸ್ತರ ಎಂಬವರು ಬರೆದ ‘ಸಂಗ್ಯಬಾಳ್ಯ’ ನಾಟಕ ಪ್ರದರ್ಶನ ದ್ವೇಷಕೊಲೆಗಳಿಗೆ ಪ್ರಚೋದಿಸಿತೆಂಬ ಕಾರಣದಿಂದ ಆಗಿನ ಬ್ರಿಟಿಷ್ ಸರಕಾರ ನಾಟಕ ಪ್ರದರ್ಶನಕ್ಕೆ ಪೂರ್ವಭಾವಿಯಾಗಿ ನಾಟಕದ ಕೃತಿಯನ್ನು ಪೊಲೀಸರ ಪರಾಮರ್ಶೆಗೊಪ್ಪಿಸಿ ಅವರ ಅನುಮತಿ ಪಡೆಯಬೇಕೆಂಬ ಕರಾಳ ಕಾನೂನೊಂದನ್ನು ಜಾರಿಗೆ ತಂದಿತು. ಸ್ವಾತಂತ್ರ್ಯ ಬಂದ ನಂತರವೂ ಆ ಕಾನೂನು ಉಳಿದುಕೊಂಡಿದ್ದು ನಾಟಕ ತಂಡಗಳು ಪ್ರತಿಪ್ರದರ್ಶನಕ್ಕೂ ಪೊಲೀಸ್ ಇಲಾಖೆಯಿಂದ ಪೂರ್ವಾನುಮತಿ ಪಡೆಯುವ ಅನಿವಾರ್ಯ ಉಂಟಾಗಿತ್ತು. ವಿಶೇಷವಾಗಿ ಉತ್ತರ ಕರ್ನಾಟಕದ ನಾಟಕದ ಕಂಪೆನಿಗಳು ಮತ್ತು ಹವ್ಯಾಸಿ ತಂಡಗಳು ಇದರಿಂದಾಗಿ ಪೊಲೀಸ್ ಇಲಾಖೆ ಅನುಮತಿ ಪಡೆಯುವುದರಲ್ಲಿ ಬಹಳಷ್ಟು ತೊಂದರೆ ಅನುಭವಿಸುತ್ತಿದ್ದವು. ಇದರ ವಿರುದ್ಧ ಕಳೆದ ಎಪ್ಪತ್ತು-ಎಂಬತ್ತರ ದಶಕದಲ್ಲಿ ನಾಟಕ ತಂಡಗಳು ಮತ್ತು ಕರ್ನಾಟಕ ನಾಟಕ ಅಕಾಡಮಿ ಚಳವಳಿ ನಡೆಸಿದ ಫಲವಾಗಿ ಈ ಪದ್ಧತಿ ನಿಂತುಹೋಗಿತ್ತು. ಈಗ ನೋಡಿದರೆ, ‘ಹೋದೆಯಾ ಪಿಶಾಚಿ ಎಂದರೆ ಬಂದೆ ಗವಾಕ್ಷಿಯಲ್ಲಿ’ ಎನ್ನುವಂಥ ಪರಿಸ್ಥಿತಿ ತಲೆದೋರುತ್ತಿರುವಂತಿದೆ. ಯಾವುದೇ ಕಾರಣಕ್ಕೂ ಇಂಥ ಪೊಲೀಸ್ ಸೆನ್ಸಾರ್ ಪದ್ಧತಿ ಬರಬಾರದು. ಯಾವುದೇ ನಾಟಕದ ಗುಣಾವಗುಣಗಳು ಮತ್ತು ಸಾಮಾಜಿಕ ಬದ್ಧತೆಗಳ ವಿಮರ್ಶೆಗೆ ಜನಮಾನಸವೇ ಮಾನದಂಡವಾಗಬೇಕು. ತಮಗೆ ಬೇಡವಾದ್ದನ್ನು ತಿರಸ್ಕರಿಸಲಿಕ್ಕಾಗದಷ್ಟು ಅಪ್ರಬುದ್ಧರಲ್ಲ ನಮ್ಮ ಪ್ರೇಕ್ಷಕರು. ಧಾರ್ಮಿಕ ಭಾವನೆಗಳನ್ನು ನೋಯಿಸುತ್ತದೆ ಎಂಬುದೆಲ್ಲ ಪಟ್ಟಭದ್ರ ರಾಜಕೀಯ ಹಿತಾಸಕ್ತಿಗಳ ಸಮಾಜ ಒಡೆಯುವ ಹುನ್ನಾರವಷ್ಟೆ.

Writer - ಜಿ.ಎನ್.ರಂಗನಾಥ ರಾವ್

contributor

Editor - ಜಿ.ಎನ್.ರಂಗನಾಥ ರಾವ್

contributor

Similar News