ವಾಟ್ ಆನ್ IDEA ಸರ್‌ಜೀ!

ಡಿಜಿಟಲ್ ಸಾಕ್ಷರತೆ ಇಲ್ಲದ ಬಹುಪಾಲು ರೈತರು, ತಮ್ಮ ಖಾಸಗಿತನದ ಹಕ್ಕುಗಳ ಬಗ್ಗೆ ಅರಿವು ಹೊಂದಿಲ್ಲದಿರುವುದು ಸರಕಾರಕ್ಕೆ ವರವಾಗಿ ಪರಿಣಮಿಸಿದಂತಿದೆ. ಹಾಗಾಗಿ, ಈ ಇಡಿಯ ಡಿಜಿಟಲ್ ಪಬ್ಲಿಕ್ ಇನ್‌ಫ್ರಾಸ್ಟ್ರಕ್ಚರ್ ಒಂದು ವನ್‌ವೇ ಟ್ರಾಫಿಕ್ ಆಗಲಿದೆ; ಇದರ ನೇರ ಫಲಾನುಭವಿಗಳು ಕಾರ್ಪೊರೇಟ್ ನವಕೃಷಿಕರು.;

Update: 2025-01-18 10:35 IST
ವಾಟ್ ಆನ್ IDEA ಸರ್‌ಜೀ!
  • whatsapp icon

ಭಾರತ ಸರಕಾರ ರೈತ ಕಾಯ್ದೆಗಳನ್ನು 2021ರ ಡಿಸೆಂಬರ್ 1ರಂದು ಹಿಂದೆಗೆದುಕೊಂಡಿರುವುದು ಈಗ ಇತಿಹಾಸ. ಆದರೆ, ಈ ಹಿಂದೆಗೆದುಕೊಳ್ಳುವಿಕೆ ಹೇಗಾಗಿದೆ ಎಂದರೆ, ನಿಮ್ಮ ಕಂಪ್ಯೂಟರಿನ ಡೆಸ್ಕ್‌ಟಾಪಿನಲ್ಲಿ ಕಾಣಿಸುತ್ತಿರುವ ಒಂದು ಅನಗತ್ಯ ಸಾಫ್ಟ್‌ವೇರ್ ಐಕಾನ್ ಅನ್ನು ಡಿಲೀಟ್ ಮಾಡಿ, ಅದನ್ನು ಮೂಲದಲ್ಲಿ ‘ಅನ್ ಇನ್‌ಸ್ಟಾಲ್’ ಮಾಡದಿದ್ದರೆ, ಅದು ಹೇಗೆ ಹಿನ್ನೆಲೆಯಲ್ಲಿ ತನ್ನ ಕೆಲಸಗಳನ್ನು ಯಾವತ್ತಿನಂತೆಯೇ ಮಾಡುತ್ತಿರುತ್ತದೆಯೋ ಹಾಗೇ ಆಗಿದೆ. ಅಂದರೆ, ಮೇಲುನೋಟಕ್ಕೆ ರೈತ ಕಾಯ್ದೆಗಳು ‘ಡಿಲೀಟ್’ ಆಗಿವೆಯೇ ಹೊರತು, ಸಿಸ್ಟಮ್‌ನಿಂದ ‘ಅನ್‌ಇನ್‌ಸ್ಟಾಲ್’ ಆಗಿಲ್ಲ. ಡಿಲೀಟ್ ಆಗಿದೆ ಎಂದು ಸಂಭ್ರಮದಲ್ಲಿರುವವರು ಈ ಕಟು ವಾಸ್ತವವನ್ನು ಮರೆತೇ ಬಿಟ್ಟಿದ್ದಾರೆ!

ರೈತ ಕಾಯ್ದೆಗಳ ಹಿಂದಿನ ಮೂಲ ಉದ್ದೇಶ ಇದ್ದುದು, ಕೃಷಿ ಆದಾಯವನ್ನು ‘ದುಪ್ಪಟ್ಟು’ ಮಾಡುವುದಕ್ಕಾಗಿ ಸಣ್ಣ ಗಾತ್ರದ ಕೃಷಿ ಭೂಮಿಗಳನ್ನು ಪೂಲಿಂಗ್ ಮಾಡುವುದು ಮತ್ತು ದೊಡ್ಡ ಕಾರ್ಪೊರೇಟ್‌ಗಳ ಮೂಲಕ ಕೃಷಿಯನ್ನು ಲಾಭದಾಯಕ ವ್ಯವಹಾರ ಆಗಿಸುವುದು, ಈ ರೀತಿಯ ಕಾರ್ಪೊರೇಟೀಕರಣಕ್ಕೆ ಅಗತ್ಯವಿರುವ ಡೇಟಾ-ಮಾರುಕಟ್ಟೆ- ಸಾಗಣೆ-ದಾಸ್ತಾನು-ಭೂ ದಾಖಲೆಪತ್ರಗಳನ್ನು ಆ ಅಗತ್ಯಕ್ಕೆ ತಕ್ಕಂತೆ ಮಾರ್ಪಡಿಸುವುದು; ಮಾತ್ರವಲ್ಲದೆ, ಈ ಬೆಳವಣಿಗೆಗಳಿಂದ ತಳತಪ್ಪುವ ಸಣ್ಣ ರೈತರು-ಕೃಷಿ ಕಾರ್ಮಿಕರಿಗೆ ಕೃಷಿ ರಂಗದಿಂದ ಹೊರಗೆ ಪರ್ಯಾಯ ಬದುಕು ಕಟ್ಟಿಕೊಳ್ಳಲು ‘ಕೌಶಲ’ಗಳನ್ನು ಒದಗಿಸುವುದು.

ಇಂದು ರೈತ ಕಾಯ್ದೆಗಳು ಜಾರಿಯಲ್ಲಿ ಇಲ್ಲದಿದ್ದರೂ, ಮೇಲೆ ವಿವರಿಸಿರುವ ಎಲ್ಲ ಉದ್ದೇಶಗಳನ್ನು ಸಾಧಿಸುವ ನಿಟ್ಟಿನಲ್ಲಿ ಬದಲಾವಣೆಗಳು ದೇಶದಾದ್ಯಂತ ವೇಗವಾಗಿ ನಡೆಯುತ್ತಿವೆ. ಈ ಹೆಚ್ಚಿನ ಬದಲಾವಣೆಗಳೆಲ್ಲ ಇರ್ರಿವರ್ಸಿಬಲ್.

2022ರ ಆಗಸ್ಟ್ ತಿಂಗಳಿನಲ್ಲಿ ಭಾರತ ಸರಕಾರವು ಇಂಡಿಯನ್ ಡಿಜಿಟಲ್ ಎಕೊಸಿಸ್ಟಮ್ ಆಫ್ ಅಗ್ರಿಕಲ್ಚರ್ (IDEA) ವ್ಯವಸ್ಥೆಗೆ ಅಂತಿಮ ರೂಪು ನೀಡಿದ್ದು, (ವಿವರಗಳಿಗೆ PIB Release ID: 1847506), ಡಿಜಿಟಲ್ ಅಗ್ರಿಕಲ್ಚರ್ ಮಿಷನ್ ಸಜ್ಜುಗೊಂಡಿದೆ. ಅದರ ಅಡಿಯಲ್ಲಿ ‘ಅಗ್ರಿಸ್ಟ್ಯಾಕ್ (Agristack)’ ಎಂಬ ಡಿಜಿಟಲ್ ಸಾರ್ವಜನಿಕ ಮೂಲ ಸೌಕರ್ಯ ಪ್ಲಾಟ್‌ಪಾರ್ಮ್ ಕೂಡ ರೂಪುಗೊಂಡಿದ್ದು, ಅಲ್ಲಿ ರೈತರು, ಅವರ ನೆಲ, ಮಣ್ಣು ಗುಣಮಟ್ಟ, ಹವಾಮಾನ, ಬೆಳೆ ಮಾಹಿತಿ, ಪೂರ್ವಾನುಮಾನಗಳು... ಎಲ್ಲವೂ ಒಂದೇ ಜಾಗದಲ್ಲಿ ಲಭ್ಯವಾಗಲಿವೆ. ಮೇಲುನೋಟಕ್ಕೆ ಬಹಳ ಸುಂದರವಾಗಿ, ‘‘ಆಹಾ! ಅನ್ನಿಸುವಂತೆ’’ ಕಾಣಿಸುವ ಈ ವ್ಯವಸ್ಥೆ ನಿಜಕ್ಕೂ ಏನು ಎಂಬುದನ್ನು ಅರ್ಥ ಮಾಡಿಕೊಳ್ಳಲು ಸ್ವಲ್ಪ ಆಳಕ್ಕಿಳಿದು ನೋಡಬೇಕಾಗುತ್ತದೆ.

ಉತ್ಪಾದಕತೆ ತಗ್ಗಿರುವುದು, ಹವಾಮಾನ ಬದಲಾವಣೆ, ಮಾರುಕಟ್ಟೆ ಕೈಗೆಟುಕದಿರುವುದು, ಮೂಲ ಸೌಕರ್ಯಗಳ ಕೊರತೆ, ಸಾಲ ಮತ್ತಿತರ ಮಾನಸಿಕ ಒತ್ತಡಗಳು-ಇವೆಲ್ಲ ಬಹುತೇಕ ಎಲ್ಲ ಭಾರತೀಯ ರೈತರ ಸಮಸ್ಯೆಗಳು. 2015-16ರ ಕೃಷಿ ಸೆನ್ಸಸ್ ಅನ್ವಯ ಭಾರತದಲ್ಲಿ 14.65 ಕೋಟಿ ಕೃಷಿ ಹಿಡುವಳಿಗಳಿವೆ. ಅವರಲ್ಲಿ, ಕೃಷಿ ಆಧರಿತ ಬದುಕು ಕಟ್ಟಿಕೊಳ್ಳುತ್ತಿರುವವರ ಸಂಖ್ಯೆ ಸುಮಾರು 4 ಕೋಟಿ ಇರಬಹುದು. ಈ ನಾಲ್ಕು ಕೋಟಿ ಮಂದಿಯಲ್ಲಿ ಸಾಕ್ಷರರು ಮತ್ತು ಡಿಜಿಟಲ್ ಸಾಕ್ಷರರ ಸಂಖ್ಯೆ ಎಷ್ಟು ಎಂಬುದು, ಭಾರತದ ಸನ್ನಿವೇಶ ಗೊತ್ತಿರುವವರಿಗೆಲ್ಲ ಚೆನ್ನಾಗಿ ತಿಳಿದಿರುತ್ತದೆ. 2060ರ ಹೊತ್ತಿಗೆ ಸುಮಾರು 170 ಕೋಟಿ ಭಾರತೀಯರಿಗೆ ಆಹಾರ ಉತ್ಪಾದಿಸುವ ಗುರುತರ ಹೊಣೆ ರೈತರ ಮೇಲಿದೆ ಎಂಬ ಸತ್ಯವನ್ನು ಮುಂದಿಟ್ಟುಕೊಂಡೇ, ಈಗಿನ ಕೃಷಿ ಡಿಜಿಟೈಸೇಷನ್ ಪ್ರಕ್ರಿಯೆಯನ್ನು ಕಂಡಾಗ, ಇದೆಲ್ಲ ನಡೆದಿರುವುದು ಬಡ ರೈತಾಪಿಗಳ ಉದ್ಧಾರಕ್ಕಾಗಿ ಅಲ್ಲ; ಬದಲಾಗಿ ಸೂಟುಬೂಟಿನ ನವ ಕಾರ್ಪೊರೇಟ್ ರೈತರ ಅನುಕೂಲಕ್ಕಾಗಿ ಎಂಬ ಸತ್ಯ ಅನಾವರಣಗೊಳ್ಳುತ್ತದೆ.

ಕೆಲಸ ಬಹಳ ಮುಂದೆ ಸಾಗಿಯಾಗಿದೆ

ಭಾರತ ಸರಕಾರ ಈಗಾಗಲೇ ಆಂಧ್ರ, ಅಸ್ಸಾಂ, ಬಿಹಾರ, ಛತ್ತೀಸ್‌ಗಡ, ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ರಾಜಸ್ಥಾನ, ಉತ್ತರಪ್ರದೇಶ- ಹೀಗೆ, ಹತ್ತು ರಾಜ್ಯಗಳಲ್ಲಿ ತನ್ನ PM-KISAN ಯೋಜನೆಗೆ ಫಲಾನುಭವಿಗಳಾಗಬೇಕಾದರೆ ‘ಕಿಸಾನ್ ಪೆಹಚಾನ್ ಪತ್ರ’ ಕಡ್ಡಾಯ ಎಂದಿದೆ. ಆ ಹತ್ತು ರಾಜ್ಯಗಳಲ್ಲೇ PM-KISAN ಯೋಜನೆಯ ಫಲಾನುಭವಿಗಳಲ್ಲಿ ಶೇ. 84 ಮಂದಿ ಇರುವುದು. ಆಧಾರ್ ಲಿಂಕ್ ಮಾಡಲಾಗಿರುವ ಈ ರೈತಗುರುತು ಪತ್ರದಲ್ಲಿ ರೈತನ ಭೂ ಹಿಡುವಳಿ, ಬೆಳೆ ಇತ್ಯಾದಿ ವಿವರಗಳೆಲ್ಲ ಇರುತ್ತವೆ. ಸರಕಾರಿ ಸವಲತ್ತುಗಳ ನೇರ ವರ್ಗಾವಣೆಗೆ (ಡಿಬಿಟಿ) ಎಂದು ಸಿದ್ಧಗೊಂಡಿರುವ ಈ ಕಿಸಾನ್ ಪೆಹಚಾನ್ ಪತ್ರ - ಅಗ್ರಿಸ್ಟ್ಯಾಕ್ ಪ್ಲಾಟ್‌ಫಾರಂನ ತಳಪಾಯ. ಈ ರೈತ ರಿಜಿಸ್ಟ್ರಿಯಲ್ಲಿ, ಬೆಳೆ ರಿಜಿಸ್ಟ್ರಿ, ರೈತನ ಹಿಡುವಳಿ ಮ್ಯಾಪ್, ಮಣ್ಣಿನ ಗುಣದ ಮ್ಯಾಪಿಂಗ್, ಕಿಸಾನ್ ಕಾರ್ಡ್, ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಇತ್ಯಾದಿ ಹತ್ತಾರು ಸಂಗತಿಗಳು ಪರಸ್ಪರ ಸಂಪರ್ಕಿತ-ಸಂಬಂಧಿತಗೊಳ್ಳಲಿವೆ.

ಎಲ್ಲ ಮಾಹಿತಿಗಳು ಒಂದೆಡೆ ಲಭ್ಯವಾದಾಗ, ಡಿಜಿಟೈಸ್‌ಗೊಂಡ ಭೂದಾಖಲೆಗಳು ರೈತರ ಭೂಮಿ ಪೂಲಿಂಗನ್ನು ಸುಗಮಗೊಳಿಸಲಿವೆ. ಇನ್ನು ಒಂದೆರಡು ತಲೆಮಾರಿನ ಬಳಿಕ ‘ಪೇಪರ್ ಗೋಲ್ಡ್’ ಬಾಂಡ್‌ಗಳ ರೀತಿಯಲ್ಲೇ ರೈತರ ಭೂ ಒಡೆತನವೂ ಕೇವಲ ‘ಪೇಪರ್’ ಮೇಲೆ ಎಂದಾಗಿಬಿಟ್ಟರೆ ಅಚ್ಚರಿ ಇಲ್ಲ. ಮೇಲಾಗಿ ಅಗ್ರಿಸ್ಟ್ಯಾಕ್‌ನಲ್ಲಿ, ಕಾರ್ಪೊರೇಟ್ ರೈತರಿಗೆ ಅಗತ್ಯ ಇರುವ ಬೆಳೆ, ಹವಾಮಾನ, ಮಣ್ಣು ಮಾಹಿತಿ, ಮಾರುಕಟ್ಟೆ ಮಾಹಿತಿ ಇತ್ಯಾದಿಗಳೆಲ್ಲ ಅಂಗೈಯೆಟುಕಿನಲ್ಲೇ ಲಭ್ಯವಾಗಲಿವೆ. ಡೇಟಾ ಮೈನಿಂಗ್, ಎಐ ತಂತ್ರಜ್ಞಾನಗಳು ಕಾರ್ಪೊರೇಟ್ ಕೃಷಿಗೆ ಅಗತ್ಯವಿರುವ ಎಲ್ಲ ಮಾಹಿತಿಗಳನ್ನು ಮೊಗೆದು ಕೊಡಲಿವೆ. ಹಾಗಾಗಿ, ಕೃಷಿ ಕಾಯ್ದೆಗಳು ಇಲ್ಲದಿದ್ದರೂ, ಕಾರ್ಪೊರೇಟ್ ಫಾರ್ಮಿಂಗ್ ಸಾಧ್ಯವಾಗತೊಡಗಿದರೆ ಏನೂ ಅಚ್ಚರಿ ಇಲ್ಲ.

ಭಾರತ ಸರಕಾರ ಈ ವ್ಯವಸ್ಥೆಗೆ ಈಗಾಗಲೇ 2,817 ಕೋಟಿ ರೂ.ಗಳ ಅನುದಾನ ನಿಗದಿ ಮಾಡಿದೆ; ಅದರಲ್ಲಿ ಕೇಂದ್ರದ ಪಾಲು 1,940 ಕೋಟಿ ರೂ. ಉಳಿದುದು ರಾಜ್ಯಗಳ ಹೊರೆ. ಉತ್ತರ ಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶಗಳಲ್ಲಿ ಈಗಾಗಲೇ ಯೋಜನೆ ಅನುಷ್ಠಾನ ಹಂತದಲ್ಲಿದ್ದು, 2027ರ ಹೊತ್ತಿಗೆ 11 ಕೋಟಿ ರೈತರು ಈ ಪ್ಲಾಟ್‌ಫಾರಂನ ಭಾಗ ಆಗಬೇಕೆಂಬುದು ಸರಕಾರದ ಗುರಿ.

ಆಕ್ಷೇಪಗಳೇನು?

ಸರಕಾರ ಈ ಮಹತ್ವದ ಯೋಜನೆಯನ್ನು ರೂಪಿಸುವಾಗ ಪ್ರಮುಖ ಸ್ಟೇಕ್ ಹೋಲ್ಡರ್ ಆದ ರೈತರನ್ನು ನಿಮಗೇನು ಬೇಕು ಎಂದು ಕೇಳಿಲ್ಲ. ಎಲ್ಲವೂ ಕಾರ್ಪೊರೇಟ್‌ಗಳಿಗೆ ಬೇಕಾದಂತೆಯೇ ಸಿದ್ಧಗೊಂಡಿವೆ. ಈ ಯೋಜನೆಯ ತಯಾರಿಗಳಿಗೆ ಮೈಕ್ರೊಸಾಫ್ಟ್, ಅಮೆಝಾನ್, ಪತಂಜಲಿಯಂತಹ ಕಾರ್ಪೊರೇಟ್ ಸಂಸ್ಥೆಗಳ ಜೊತೆ 2021ರಲ್ಲೇ ಸರಕಾರ ಒoU ಮಾಡಿಕೊಂಡಿದೆ. ಅವರಿಗೆಲ್ಲ ಈ ರೈತ ಡೇಟಾಗಳಿಗೆ ಪ್ರವೇಶ ಇದೆ. ಇಲ್ಲಿ ರೈತ ಸಂಘಟನೆಗಳ ಪ್ರತಿನಿಧಿಗಳಿಗೆ ಯಾವುದೇ ಪಾತ್ರ ಇಲ್ಲ. ಸರಕಾರ ತನ್ನನ್ನು ಡಿಪಿಡಿಪಿ ಕಾಯ್ದೆಯ (ಡೇಟಾ ಖಾಸಗಿತನದ ಕಾಯ್ದೆ) ಹೊರಗಿರಿಸಿಕೊಂಡಿರುವುದರಿಂದ, ಈ ಮಹತ್ವದ ಡೇಟಾಗಳು ಕಾರ್ಪೊರೇಟ್‌ಗಳ ಕೈಗೆ ಎಟುಕುವುದರಿಂದ ಆಗಬಹುದಾದ ಪರಿಣಾಮಗಳನ್ನು ವಿವರವಾಗಿ ಪರಿಶೀಲಿಸಬೇಕಾಗುತ್ತದೆ.

ಇನ್ನು ರೈತರಿಗೆ ಸಾಲ ನೀಡುವ ಬ್ಯಾಂಕುಗಳು, ಬೆಳೆಗಳಿಗೆ ವಿಮೆ ಒದಗಿಸುವ ವಿಮಾ ಸಂಸ್ಥೆಗಳಿಗೆ, ವಿದ್ಯುತ್ ಒದಗಿಸುವ ಡಿಸ್ಕಾಂಗಳಿಗೆ, ಗೊಬ್ಬರ, ಕೃಷಿ ಉಪಕರಣ, ಬೀಜ ಕಂಪೆನಿಗಳಿಗೆ ಈ ಡೇಟಾ ಲಭ್ಯವಾದಾಗ, ಅದು ರೈತರ ಮೇಲೆ ಯಾವ ಪರಿಣಾಮಗಳನ್ನು ಬೀರಲಿವೆ ಎಂಬುದು ಪಾರದರ್ಶಕವಾಗಿರಬೇಕಾಗುತ್ತದೆ. ಆ ವ್ಯವಸ್ಥೆ ಸದ್ಯಕ್ಕೆ ಕಾಣಿಸುತ್ತಿಲ್ಲ.

ಡಿಪಿಡಿಪಿ ಕಾಯ್ದೆಯ ಮಹತ್ವದ ಅಂಶ ಎಂದರೆ ಡೇಟಾ ಬಳಕೆಗೆ ಡೇಟಾದಾರರ ಒಪ್ಪಿಗೆ ಪಡೆಯುವುದು. ಆದರೆ, ಸರಕಾರ ತನ್ನನ್ನು ಕಾಯ್ದೆಯ ವ್ಯಾಪ್ತಿಯಿಂದ ಹೊರಗಿರಿಸಿಕೊಂಡಿರುವುದರಿಂದ, ಹೆಚ್ಚಿನಂಶ ರೈತರ ಒಪ್ಪಿಗೆ ಪಡೆಯದೆ, ಅವರ ಕಿಸಾನ್ ಪೆಹಚಾನ್ ಪತ್ರದ ಡೇಟಾಗಳನ್ನು ನೇರವಾಗಿ ಅಗ್ರಿಸ್ಟ್ಯಾಕ್ ರಿಜಿಸ್ಟ್ರಿಗೆ ವರ್ಗಾಯಿಸಲಾಗಿದೆ. ಅದಕ್ಕಾಗಿ PM-KISAN ಯೋಜನೆಯ ಲಾಭದ ಆಸೆ ತೋರಿಸಿ, ಅದು ಬೇಕಾದರೆ ಇದು ಕಡ್ಡಾಯ ಎಂದು ಮೂಗು ಒತ್ತಿ ಬಾಯಿ ಕಳೆಯಲಾಗಿದೆ.

ಡಿಜಿಟಲ್ ಸಾಕ್ಷರತೆ ಇಲ್ಲದ ಬಹುಪಾಲು ರೈತರು, ತಮ್ಮ ಖಾಸಗಿತನದ ಹಕ್ಕುಗಳ ಬಗ್ಗೆ ಅರಿವು ಹೊಂದಿಲ್ಲದಿರುವುದು ಸರಕಾರಕ್ಕೆ ವರವಾಗಿ ಪರಿಣಮಿಸಿದಂತಿದೆ. ಹಾಗಾಗಿ, ಈ ಇಡಿಯ ಡಿಜಿಟಲ್ ಪಬ್ಲಿಕ್ ಇನ್‌ಫ್ರಾಸ್ಟ್ರಕ್ಚರ್ ಒಂದು ವನ್‌ವೇ ಟ್ರಾಫಿಕ್ ಆಗಲಿದೆ; ಇದರ ನೇರ ಫಲಾನುಭವಿಗಳು - ಕಾರ್ಪೊರೇಟ್ ನವಕೃಷಿಕರು. ಸರಕಾರ ಬಹಿರಂಗವಾಗಿಯೇ ಈ ಎಲ್ಲ ತಯಾರಿಗಳು ತನ್ನ ಕೃಷಿ ನೀತಿಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಎಂದು ಹೇಳಿಕೊಂಡಿದೆ. ಹಾಲಿ ಸರಕಾರದ ಕೃಷಿ ನೀತಿ ಏನೆಂದು ಗೊತ್ತಿರುವವರಿಗೆ ಇದೆಲ್ಲ ಏನು ಎಂಬುದನ್ನು ಹೆಚ್ಚು ವಿವರಿಸುವ ಅಗತ್ಯ ಇಲ್ಲ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ರಾಜಾರಾಂ ತಲ್ಲೂರು

contributor

Similar News