ಬಡವರು ಭಾರತದಿಂದ ತೊಲಗಿಯಾಗಿದೆ!

Update: 2025-03-15 10:21 IST
ಬಡವರು ಭಾರತದಿಂದ ತೊಲಗಿಯಾಗಿದೆ!
  • whatsapp icon

ಮೊನ್ನೆ ಮುಂಬೈಯ ಇಂಡಿಯನ್ ಮರ್ಚಂಟ್ಸ್ ಚೇಂಬರಿನ ಆಶ್ರಯದಲ್ಲಿ ಪಿ.ವಿ. ಗಾಂಧಿ ಪೀಠದ ಉಪನ್ಯಾಸ ಕಾರ್ಯಕ್ರಮದಲ್ಲಿ ‘ವಿಷನ್ ಆಫ್ ವಿಕಸಿತ ಭಾರತ್ 2047’ ಎಂಬ ವಿಷಯದ ಕುರಿತು ಮಾತನಾಡಿದ ನೀತಿ ಆಯೋಗದ ಸದಸ್ಯ ಅರವಿಂದ ವೀರಮಣಿ (ಇವರು 2007-09ರ ನಡುವೆ ಭಾರತದ ಮುಖ್ಯ ಆರ್ಥಿಕ ಸಲಹೆಗಾರರೂ ಆಗಿದ್ದರು) ಅವರು, ಭಾರತದಲ್ಲಿ ಈಗ ಕಡುಬಡವರ ಪ್ರಮಾಣ ಶೇ. 1ಕ್ಕಿಂತ ಕಡಿಮೆಗೆ ಇಳಿದಿದೆ ಎಂದಿದ್ದಾರೆ.

‘‘ಕಳೆದ 50 ವರ್ಷಗಳಿಂದ ದೇಶದಲ್ಲಿ ಚರ್ಚೆ ಆಗುತ್ತಿದ್ದ ಕಡುಬಡತನ ಈಗ ಉಳಿದಿಲ್ಲ. ಹಾಲಿ ಸರಕಾರದ 11ವರ್ಷಗಳ ಆಡಳಿತಾವಧಿಯಲ್ಲಿ ಕಡುಬಡತನ ಶೇ. 12.2ರಿಂದ ಶೇ. 2.3ಕ್ಕೆ ಇಳಿದಿದ್ದು, ಈಗ ಅದು ಶೇ. 1ಕ್ಕಿಂತಲೂ ಕಡಿಮೆ ಇದೆ. ಈ ಶೇ. 1 ಜನ ಎಲ್ಲೋ ತೀರಾ ಗುಡ್ಡಗಾಡುಗಳಲ್ಲಿ, ತಲುಪಲಾಗದ ಜಾಗಗಳಲ್ಲಿ ಇರಬಹುದು. ಅವರನ್ನು ಹುಡುಕಿಕೊಂಡು ಹೋಗಬೇಕು. ಅವರಿಗಾಗಿ ಎಲ್ಲರಿಗೂ ಅನ್ವಯ ಆಗಬಲ್ಲ ‘ಬಡತನ ನಿವಾರಣೆ ನೀತಿ’ ರೂಪಿಸುವುದು ಈಗ ಅಗತ್ಯ ಇಲ್ಲ’’ ಎಂದು ಅವರು ಫರ್ಮಾನು ಹೊರಡಿಸಿದ್ದಾರೆ.

‘‘ಈ ಕಡು ಬಡವರು, ದಿನಕ್ಕೆ 1.9 ಡಾಲರ್ (ಅಂದಾಜು 170ರೂ.)ಗಿಂತ ಕಡಿಮೆ ಆದಾಯ ಇರುವವರು. ಇದಲ್ಲದೆ, ಬಡತನಕ್ಕೆ ಸುಲಭ ತುತ್ತಾಗಬಲ್ಲವರು (ದಿನಕ್ಕೆ 3.2 ಡಾಲರ್ ಆದಾಯ = ಅಂದಾಜು 250 ರೂ.) 4 ವರ್ಷಗಳ ಹಿಂದೆ ದೇಶದ ಜನಸಂಖ್ಯೆಯ ಶೇ. 54 ಇದ್ದಲ್ಲಿಂದ ಶೇ.21ಕ್ಕೆ ಇಳಿದಿದ್ದು, ಈಗವರ ಪ್ರಮಾಣ ಶೇ.15ಕ್ಕಿಂತ ಕಡಿಮೆ ಇದೆ. ಈ ಎರಡು ವರ್ಗಗಳಲ್ಲೂ ಬಡತನವು ಇನ್ನು 7ವರ್ಷಗಳಲ್ಲಿ ಸಂಪೂರ್ಣ ನಿವಾರಣೆ ಆಗಲಿದೆ’’ ಎಂದು ಅವರು ಹೇಳಿರುವುದನ್ನು ಮಾದ್ಯಮಗಳು ಸಂಭ್ರಮದಿಂದ ವರದಿ ಮಾಡಿವೆ.

ಕಳೆದ ವರ್ಷ ಸಾರ್ವತ್ರಿಕ ಚುನಾವಣೆಗಳಿಗೆ ಕೇವಲ ಎರಡು ತಿಂಗಳು ಇರುವಾಗ, ಮನೆವಾರ್ತೆಯ ಬಳಕೆ ವೆಚ್ಚಗಳ ಸಮೀಕ್ಷೆ (ಎಚ್‌ಸಿಇ) 2022-23ನ್ನು ಬಿಡುಗಡೆಗೊಳಿಸಿ, ದೇಶದಲ್ಲಿ ಬಡತನದ ಸ್ಥಿತಿಯ ಬಗ್ಗೆ ಮಾತನಾಡಿದ್ದ ನೀತಿ ಆಯೋಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಬಿ.ವಿ.ಆರ್. ಸುಬ್ರಹ್ಮಣ್ಯಂ ಅವರು, ದೇಶದಲ್ಲಿ ಬಡತನದ ಪ್ರಮಾಣವು ಶೇ. 5ಕ್ಕಿಂತ ಕಡಿಮೆ ಇದೆ ಎಂದು ಹೇಳಿದ್ದರು. ಅದನ್ನು ಸರಕಾರ ಮತ್ತು ಅದರ ಊಳಿಗದಲ್ಲಿರುವ ಮಾಧ್ಯಮಗಳು ಭಾರೀ ಅಬ್ಬರದೊಂದಿಗೆ ಪ್ರಚಾರ ಮಾಡಿದ್ದವು. ಅದಾಗಿ ಒಂದೇ ವರ್ಷದಲ್ಲಿ, ಈಗ ಬಡತನವು ಶೇ. 1ಕ್ಕಿಂತ ಕೆಳಗಿಳಿದಿರುವುದು ಪವಾಡವೇ ಸರಿ.

ತಮಾಷೆ ಎಂದರೆ, ದೇಶದಲ್ಲಿ ಬಡವರೇ ಇಲ್ಲ ಎಂಬ ತನ್ನ ವಾದವನ್ನು ಸಮರ್ಥಿಸಿಕೊಳ್ಳಲು ಆಧಾರಗಳನ್ನು ಮುಂದಿಡುವುದಕ್ಕಾಗಿ ತಿಣುಕಾಡುವ ಭಾರತ ಸರಕಾರ ಮತ್ತದರ ಥಿಂಕ್ ಟ್ಯಾಂಕ್‌ಗಳು, ಈಗಲೂ ಕಾನೇಶುಮಾರಿ ಪ್ರಕ್ರಿಯೆಯನ್ನು ಚುರುಕುಗೊಳಿಸುವ ಯೋಚನೆಯಲ್ಲಿಲ್ಲ. ನ್ಯಾಷನಲ್ ಸ್ಟಾಟಿಸ್ಟಿಕಲ್ ಆಫೀಸ್ (ಎನ್‌ಎಸ್‌ಒ) (ಹಿಂದಿನ ಎನ್‌ಎಸ್‌ಎಸ್‌ಒ) ನಡೆಸಬೇಕಿದ್ದ ಕನ್ಸೂಮರ್ ಎಕ್ಸ್‌ಪೆಂಡಿಚರ್ ಸರ್ವೇಗಳು ಹಲವು ವರ್ಷಗಳಿಂದ ಲಭ್ಯವಿರಲಿಲ್ಲ. 2017-18ರಲ್ಲಿ ಅದು ನಡೆಸಿದ್ದ ಇಂತಹದೊಂದು ಪ್ರಯತ್ನವನ್ನು, ‘ಡೇಟಾ ಗುಣಮಟ್ಟ ಚೆನ್ನಾಗಿಲ್ಲ’ ಎಂಬ ಕಾರಣಕ್ಕೆ ಕಡೆಗಳಿಗೆಯಲ್ಲಿ ಭಾರತ ಸರಕಾರ ಬಿಡುಗಡೆ ಮಾಡಿಲ್ಲ! ಕಡೆಗೆ ಅದು ಬಿಡುಗಡೆ ಆದದ್ದು, ಮೊನ್ನೆ (2022-23) ಸಾರ್ವತ್ರಿಕ ಚುನಾವಣೆಗಳಿಗೆ ಮುನ್ನ, ದೇಶದಲ್ಲಿ ಬಡವರ ಪ್ರಮಾಣವು ಜನಸಂಖ್ಯೆಯ ಶೇ. 5ಕ್ಕಿಂತ ಕೆಳಗಿದೆ ಎಂದು ಬೆನ್ನುತಟ್ಟಿಕೊಳ್ಳಲು.

ಈ ಲೆಕ್ಕಾಚಾರಗಳಿಗೆಲ್ಲ ತಾಳಿತಂತಿಯೇ ಇಲ್ಲ ಎಂಬುದನ್ನು ವಿವರಿಸಲು ಹೆಚ್ಚು ಶ್ರಮವೇನೂ ಅಗತ್ಯವಿಲ್ಲ. ನೋಟುರದ್ದತಿ, ಆ ಬಳಿಕ ಕೋವಿಡ್ ಕಾಲಗಳಲ್ಲಿ ಉಂಟಾದ ಆರ್ಥಿಕ ಸಂಕಷ್ಟದ ಕಾರಣಕ್ಕೆ ದೇಶದಲ್ಲಿ ಅಂದಾಜು 26ಕೋಟಿ ಮಂದಿ ಬಡತನದ ರೇಖೆಗಿಂತ ಕೆಳಗೆ ಜಾರಿದ್ದಾರೆ ಎಂದು ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ (ಯುಎನ್‌ಡಿಪಿ) ಅಂದಾಜಿಸಿತ್ತು. ಕೋವಿಡ್ ಕಾಲದ ಲಾಕ್‌ಡೌನ್, ಆರ್ಥಿಕ ಸಂಕಷ್ಟಗಳು, ಉದ್ಯೋಗ ನಷ್ಟಗಳ ಸರಮಾಲೆಯಿಂದ ದೇಶ ಈಗಷ್ಟೇ ಹೊರಬರುತ್ತಿದೆ ಎಂಬುದನ್ನು ಸ್ವತಃ ದೇಶದ ಹಣಕಾಸು ಸಚಿವರೇ ಹಲವು ಬಾರಿ ಒಪ್ಪಿಕೊಂಡಿದ್ದಾರೆ. ದೇಶದ ಜನ ಹಸಿವಿನಿಂದ ಬಳಲುವುದು ಬೇಡ ಎಂಬ ಕಾರಣಕ್ಕೆ, ಕೋವಿಡ್ ಆತ್ಮನಿರ್ಭರ ಪ್ಯಾಕೇಜಿನ ಅಡಿಯಲ್ಲಿ 80 ಕೋಟಿ ಬಡವರಿಗೆ ಅನ್ವಯ ಆಗುವಂತೆ, ಉಚಿತ ಆಹಾರ ಧಾನ್ಯಗಳನ್ನು ವಿತರಿಸಲಾಗಿತ್ತು. ಈಗಲೂ ಪ್ರತೀ ತಿಂಗಳು 80 ಕೋಟಿ ಜನರಿಗೆ ಪಡಿತರ ವಿತರಣೆ ಮುಂದುವರಿದಿದ್ದು, ಸರಕಾರ ಅದಕ್ಕಾಗಿ ವಾರ್ಷಿಕ 2 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚು ವೆಚ್ಚ ಮಾಡುತ್ತಿದೆ ಎಂದು ಅಧಿಕೃತ ಸರಕಾರಿ ದಾಖಲೆಗಳೇ ಹೇಳುತ್ತಿವೆ. ಇದಲ್ಲದೆ, ಕರ್ನಾಟಕದಂತಹ ರಾಜ್ಯಗಳು ಬಡವರಿಗಾಗಿ ‘ಗ್ಯಾರಂಟಿ’ ಹೆಸರಿನಲ್ಲಿ ‘ಯೂನಿವರ್ಸಲ್ ಬೇಸಿಕ್ ಇನ್‌ಕಂ’ ಒದಗಿಸುತ್ತಿವೆ. ಕುಟುಂಬಕ್ಕೆ ಅವುಗಳಿಂದಾಗಿ ಒಟ್ಟು ತಿಂಗಳಿಗೆ ಸುಮಾರು 5-6 ಸಾವಿರ ರೂ.ಗಳ ಆದಾಯ ಬರುತ್ತಿದೆ. ಇವೆಲ್ಲ ಸೇರಿ, ಈಗ ಬಡತನ ನಿವಾರಣೆ ಆಗಿದೆಯೇ ಎಂಬುದು ಸ್ಪಷ್ಟವಿಲ್ಲ.

ದೇಶ ಕೋವಿಡ್ ಕಾಲದಿಂದೀಚೆಗೆ ಆರ್ಥಿಕ ಸಂಕಷ್ಟದಲ್ಲಿ ಇರುವ ಬಗ್ಗೆ ಸರಕಾರಕ್ಕೇನೂ ಗೊಂದಲ ಇಲ್ಲ. ಹಣಕಾಸು ಸಚಿವರು, ಮುಖ್ಯ ಆರ್ಥಿಕ ಸಲಹೆಗಾರರಿಂದಾದಿಯಾಗಿ ಎಲ್ಲರೂ ಈ ಬಗ್ಗೆ ಅಧಿಕೃತವಾಗಿಯೇ (ಆದರೆ, ಅದೆಲ್ಲ ಇತಿಹಾಸಕ್ಕೆ ಸಂದು ಹೋದದ್ದನ್ನು ಖಚಿತಪಡಿಸಿಕೊಂಡ ಬಳಿಕ!) ಹೇಳಿಕೆ ನೀಡುತ್ತಿದ್ದಾರೆ. ಪ್ರತೀ ವರ್ಷ ಇನ್ನೇನು ಆರ್ಥಿಕತೆ ಪುಟಿದೇಳುತ್ತಿದೆ ಎಂಬ ಆಸೆ ಮೂಡಿಸಿ, ಹಾಗಾಗದಿರುವುದಕ್ಕೆ, ಜಾಗತಿಕ ವಿದ್ಯಮಾನಗಳತ್ತ ಬೊಟ್ಟು ಮಾಡಲಾಗುತ್ತದೆ ಮತ್ತು ಜಗತ್ತೆಲ್ಲ ಆರ್ಥಿಕ ಹಿಂಜರಿಕೆಯಲ್ಲಿದ್ದರೂ ಭಾರತ ಮಾತ್ರ ವೇಗವಾಗಿ ಪುಟಿದೇಳುವತ್ತ ನಡೆದಿದೆ ಎಂದು ಅಡಿಗೆಬಿದ್ದಲ್ಲಿಂದಲೇ ಮೂಗು ಮೇಲೇರಿಸಿಟ್ಟುಕೊಳ್ಳಲಾಗುತ್ತಿದೆ.

ಬಡವರ ಕಷ್ಟಕ್ಕೆ ಒದಗುವ ಏಕೈಕ ಆಸ್ತಿ ಎಂದರೆ ಮನೆಯಲ್ಲಿ ಇರುವ ‘ಚಿನ್ನದ ನೀರು’. 2024 ಮಾರ್ಚ್-ಜೂನ್ ನಡುವೆ ದೇಶದಲ್ಲಿ ಬ್ಯಾಂಕು ಮತ್ತು ಎನ್‌ಬಿಎಫ್‌ಸಿಗಳ ಚಿನ್ನದ ಸಾಲ ಮರುಪಾವತಿ ಸುಸ್ತಿಯಾಗಿರುವ (ಎನ್‌ಪಿಎ) ಪ್ರಮಾಣದಲ್ಲಿ ಶೇ. 18.14 ಏರಿಕೆ ಆಗಿದೆ, ದೇಶದ ಒಟ್ಟು ಎನ್‌ಪಿಎ ಅದೇ ಅವಧಿಯಲ್ಲಿ ಶೇ. 21 ಇದೆ ಎಂದು ಫೆ. 10ರಂದು ಭಾರತ ಸರಕಾರ ಸಂಸತ್ತಿಗೆ ತಿಳಿಸಿದೆ. ಜೊತೆಗೆ, 2022ರ ಜನವರಿಯಿಂದ 2024ರ ಜನವರಿ ತನಕದ ಚಿನ್ನದ ಸಾಲಗಳ ಗುಣಮಟ್ಟದ ಬಗ್ಗೆ ಸಮಗ್ರ ಸಮೀಕ್ಷೆ ನಡೆಸುವಂತೆ, ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಸರಕಾರ ಸೂಚಿಸಿತ್ತು.

ವೈಯಕ್ತಿಕ ಸಾಲಗಳು ಮತ್ತು ಕ್ರೆಡಿಟ್‌ಕಾರ್ಡ್ ಸಾಲಗಳಿಗೆ ಸಂಬಂಧಿಸಿದಂತೆ ಮಾರ್ಚ್ 2023ರಲ್ಲಿ 7,422 ಕೋಟಿ ರೂ. ಇದ್ದ ಸುಸ್ತಿ ಸಾಲದ ಪ್ರಮಾಣವು, ಶೇ. 51ರಷ್ಟು ಏರಿ, 2024ರ ಜೂನ್ ಹೊತ್ತಿಗೆ 11,210 ಕೋಟಿ ರೂ.ಗಳಿಗೆ ಏರಿದೆ ಎಂದು ಪತ್ರಿಕೆಯೊಂದು ರಿಸರ್ವ್ ಬ್ಯಾಂಕಿನ ಮಾಹಿತಿ ಹಕ್ಕು ಉತ್ತರವನ್ನಾಧರಿಸಿ ಡಿಸೆಂಬರ್‌ನಲ್ಲಿ ವರದಿ ಮಾಡಿತ್ತು.

2014ರ ಹೊತ್ತಿಗೆ ಕೇವಲ 48,338 ಕೋಟಿ ರೂ.ಗಳಿದ್ದ ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳ ಎನ್‌ಪಿಎ 2020ರ ಹೊತ್ತಿಗೆ 1,87,255 ಕೋಟಿ ರೂ.ಗಳಾಗಿದ್ದು, ಆ ಬಳಿಕ ಸ್ವಲ್ಪ ತಗ್ಗಿ, 2024ರ ವರ್ಷಾಂತ್ಯಕ್ಕೆ 1,25,217 ಕೋಟಿ ರೂ.ಗಳಾಗಿವೆ.

ಪ್ರತಿದಿನ ಪತ್ರಿಕೆಗಳಲ್ಲಿ ಬರುವ ಬ್ಯಾಂಕುಗಳಲ್ಲಿ ಸಾಲ ಮರುಪಾವತಿ ಮಾಡದವರ ಫೋಟೊ ಸಹಿತ ಲಿಲಾವು ಹರಾಜು ಪ್ರಕಟಣೆಗಳು, ಖಾಸಗಿ ಫೈನಾನ್ಸ್ ಗಳ ಪುಟಗಟ್ಟಲೆ ಚಿನ್ನ ಏಲಂ ಪ್ರಕಟನೆಗಳು-ಎಲ್ಲವೂ ಬೊಟ್ಟು ಮಾಡುತ್ತಿರುವುದು ಒಂದೇ ದಿಕ್ಕಿನತ್ತ. ಅದು, ಆರ್ಥಿಕ ಸಂಕಷ್ಟದತ್ತ. ಇದಲ್ಲದೆ, ಕೋವಿಡ್ ಬಳಿಕದ ಎರಡು ವರ್ಷಗಳಲ್ಲಿ ಆರ್ಥಿಕ ಸಂಕಷ್ಟಕ್ಕೆ ಈಡಾಗಿ ಆತ್ಮಹತ್ಯೆಯಂತಹ ವಿಪರೀತ ನಿರ್ಧಾರ ತಳೆದವರ ಸಂಖ್ಯೆಯೂ ಕಡಿಮೆಯೇನಿಲ್ಲ.

ಹೀಗೆ ಬಡತನದ ರೇಖೆಯಿಂದ ಕೆಳದೂಡಿಸಿಕೊಂಡವರು ಮತ್ತು ಈಗಾಗಲೇ ಆ ರಸಾತಳದಲ್ಲಿ ಇರುವವರು ದೇಶದ ಜನಸಂಖ್ಯೆಯ ಕೇವಲ ಶೇ. 1 ಜನ ಎಂಬುದು ತೀರಾ ‘ಅಸಹಜ ಲೆಕ್ಕಾಚಾರ’ ಎಂದು ಮೇಲುನೋಟಕ್ಕೇ ಅನ್ನಿಸಿಬಿಡುತ್ತದೆ. ಸರಕಾರದ ಈ ಹೇಳಿಕೆ ಸತ್ಯ ಆಗಿದ್ದರೆ, ಭಾರತ ಸರಕಾರವು ಕೋವಿಡ್ ಬಳಿಕ 80 ಕೋಟಿ ಮಂದಿಗೆ ಉಚಿತ ಪಡಿತರ ನೀಡುತ್ತಿರುವುದನ್ನು ಮುಂದುವರಿಸುತ್ತಿರುವುದಕ್ಕೆ ಯಾವುದೇ ಸಮರ್ಥನೆ ಇಲ್ಲ. ಸರಕಾರದ ಈ ರೀತಿಯ ಕೋವಿಡೋತ್ತರ ಮಾತು-ಕೃತಿಗಳೆಲ್ಲ ‘ಬಡತನ ನಿರ್ಮೂಲನ’ಕ್ಕಿಂತ ಹೆಚ್ಚಾಗಿ ‘ಬಡವರ ನಿರ್ಮೂಲನ’ ಕಾರ್ಯಕ್ರಮದಂತೆ ಕಾಣಿಸತೊಡಗಿದರೆ ಅಚ್ಚರಿ ಇಲ್ಲ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ರಾಜಾರಾಂ ತಲ್ಲೂರು

contributor

Similar News