ಎಷ್ಟು ಕಾಲ ಕಣ್ಣು ಮುಚ್ಚಿರುವಿರಿ... ಸರಕಾರ್?
ಜಿಬಿಎಸ್ ಬಗ್ಗೆ ಸಂಸತ್ತಿನಲ್ಲಿ ಸಂಸದರು ಪ್ರಶ್ನೆಗಳನ್ನೆತ್ತಿದರೆ ಒಕ್ಕೂಟ ಸರಕಾರವು ರಾಜ್ಯ ಸರಕಾರಗಳತ್ತವೂ ರಾಜ್ಯ ಸರಕಾರಗಳು ಒಕ್ಕೂಟ ಸರಕಾರದತ್ತಲೂ ಬೊಟ್ಟು ಮಾಡಿ, ಎದ್ದಿರುವ ಪ್ರಶ್ನೆಗಳಿಗೆ ಉತ್ತರಿಸದೆ ಜಾರಿಕೊಳ್ಳುತ್ತಿವೆ. ಈ ರೋಗದ ಅಡ್ಡಪರಿಣಾಮ ವರದಿ ಮಾಡುವ ವ್ಯವಸ್ಥೆಯಲ್ಲಿ ಪಾರದರ್ಶಕತೆ, ನೈತಿಕತೆ, ನ್ಯಾಯಬದ್ಧತೆಗಳ ಕೊರತೆ ಇರುವುದು ಎದ್ದು ಕಾಣಿಸುತ್ತಿದೆ.;

ಇತ್ತೀಚೆಗಿನ ತನಕವೂ ಗಿಲಾನ್ ಬಾರೆ ಸಿಂಡ್ರೋಮ್ (ಜಿಬಿಎಸ್) ಭಾರತದಲ್ಲಿ ತೀರಾ ಅಪರೂಪದ ನರಸಂಬಂಧಿ ರೋಗ. ಎಷ್ಟು ಅಪರೂಪ ಎಂದರೆ, ಒಂದು ಲಕ್ಷಕ್ಕೆ ಇಬ್ಬರಿಗಿಂತಲೂ ಕಡಿಮೆ ಜನರಲ್ಲಿ ಕಾಣಿಸಿಕೊಳ್ಳುವಷ್ಟು ಅಪರೂಪ. ಆದರೆ ಕಳೆದ 3-4 ವರ್ಷಗಳಿಂದೀಚೆಗೆ, ಸ್ವತಃ ದೇಹದ ರೋಗನಿರೋಧಕ ವ್ಯವಸ್ಥೆಯೇ ದೇಹದ ನರತಂತುಗಳ ಮೇಲೆ ಶತ್ರುವೆಂದು ಭ್ರಮಿಸಿ ದಾಳಿ ನಡೆಸುವ ಈ ರೋಗ, ದೇಶದಾದ್ಯಂತ ವ್ಯಾಪಕ ಪ್ರಮಾಣದಲ್ಲಿ ಕಾಣಿಸಿಕೊಳ್ಳತೊಡಗಿದೆ. ಮಹಾರಾಷ್ಟ್ರದಲ್ಲಿ ಒಂದೇ ಕಡೆ ದೊಡ್ಡ ಪ್ರಮಾಣದಲ್ಲಿ ಕಾಣಿಸಿಕೊಂಡಿರುವ ಕಾರಣಕ್ಕಾಗಿ, ಈ ರೋಗ ಸದ್ದು ಮಾಡತೊಡಗಿದೆ. ಅಲ್ಲಿನ ಸರಕಾರ ಮಾತನಾಡುವುದು ಅನಿವಾರ್ಯ ಆಗಿದೆ.
ಮಹಾರಾಷ್ಟ್ರದ ಪುಣೆಯಲ್ಲಿ, ಜನವರಿ 9ರಿಂದ ಈಚೆಗೆ ಏಕಾಏಕಿ ಜಿಬಿಎಸ್ ರೋಗ ಸ್ಫೋಟಗೊಂಡಿದ್ದು, ಸದ್ಯಕ್ಕೆ 163 ಪ್ರಕರಣಗಳು ರಾಜ್ಯ ಸರಕಾರದ ಗಮನಕ್ಕೆ ಬಂದಿವೆ. 7 ಮಂದಿ ಮೃತಪಟ್ಟಿದ್ದು, 50ಕ್ಕೂ ಮಿಕ್ಕಿ ಮಂದಿ ವೆಂಟಿಲೇಟರ್ನಲ್ಲಿ ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಜನವರಿ 31ರಂದು, ಚೆನ್ನೈನಲ್ಲಿ ಒಬ್ಬ ಬಾಲಕ ಮೃತಪಟ್ಟಿರುವುದು ಕೂಡ ತಮಿಳುನಾಡಿನ ಸರಕಾರಿ ಕಡತಗಳಲ್ಲಿ ದಾಖಲಾಗಿದೆ. ಕೋಲ್ಕತಾ, ಗುರ್ಗಾಂವ್.. ಹೀಗೆ ದೇಶದ ಎಲ್ಲೆಡೆಯಿಂದ ಚದುರಿದಂತೆ ಜಿಬಿಎಸ್ ರೋಗಿಗಳ ಕುರಿತು ವರದಿಗಳು ಬರಲಾರಂಭಿಸಿವೆ. ಕರ್ನಾಟಕದಲ್ಲೂ ಹಲವು ಜಿಬಿಎಸ್ ಪ್ರಕರಣಗಳು ಚದುರಿದಂತೆ ಕಾಣಿಸಿಕೊಳ್ಳುತ್ತಿದ್ದು, ಸಾವು ನೋವುಗಳೂ ಸಾಕಷ್ಟು ಸಂಭವಿಸಿದಂತಿದೆ; ಆದರೆ ಇವು ಇನ್ನೂ ಕರ್ನಾಟಕ ಸರಕಾರದ ಗಮನಕ್ಕೆ ಬಂದಂತಿಲ್ಲ. ಇದು ಬಹಳ ಆತಂಕದ ಸಂಗತಿ.
ಏನಿದು ಜಿಬಿಎಸ್
Guillian-Barre (ಗೀ -ಯಾ-ಬರೇ) ಎಂಬುದು ನರಮಂಡಲದಲ್ಲಿ ಆಗುವ ಹಾನಿಯ ಕಾರಣದಿಂದಾಗಿ ದೈಹಿಕ ದೌರ್ಬಲ್ಯ, ಮರಗಟ್ಟುವಿಕೆ ಅಥವಾ ಪಾರ್ಶ್ವವಾತ ಕಾಣಿಸಿಕೊಳ್ಳುವ ಸ್ಥಿತಿ. ಕೈ-ಕಾಲುಗಳಲ್ಲಿ ದೌರ್ಬಲ್ಯ; ಇರುವೆ ಹರಿದಾಡಿದಂತೆ ಅನ್ನಿಸುವುದರೊಂದಿಗೆ ಕಾಣಿಸಿಕೊಳ್ಳುವ ಈ ರೋಗಕ್ಕೆ ಜಠರ-ಕರುಳಿನ ಸೋಂಕುಗಳು ಅಥವಾ ಕೋವಿಡ್ -19, ಜೀಕಾ ವೈರಸ್ ಸೇರಿದಂತೆ ಹಲವು ಶ್ವಾಸಕೋಶದ ಸೋಂಕುಗಳು ಕೂಡ ಕಾರಣ ಆಗಬಹುದು ಎಂದು ಅಧಿಕೃತ ವೈದ್ಯಕೀಯ ಮಾಹಿತಿಗಳು ಹೇಳುತ್ತವೆ.
ಕೈಕಾಲುಗಳಲ್ಲಿ ಇರುವೆ ಹರಿದಾಡಿದಂತೆ ಅನ್ನಿಸಿ, ಆ ಲಕ್ಷಣಗಳು ದೇಹದಲ್ಲಿ ಕ್ಷಿಪ್ರವಾಗಿ ಹರಡತೊಡಗಿದರೆ, ಅದು ಜಿಬಿಎಸ್ ಲಕ್ಷಣ ಆಗಿರಬಹುದು. ಉಸಿರಾಟಕ್ಕೆ ಕಷ್ಟ ಅನ್ನಿಸುವುದು, ಎಂಜಲು ಗಂಟಲಿನಲ್ಲಿ ಸಿಕ್ಕಿ ಹಾಕಿಕೊಳ್ಳುವುದು, ಮಲ-ಮೂತ್ರ ನಿಯಂತ್ರಣದಲ್ಲಿ ತೊಂದರೆ, ಮುಖದ ಚಲನೆಗಳು ಸಾಧ್ಯವಾಗದಿರುವುದು, ಮಾತು-ಆಹಾರ ಜಗಿಯುವಿಕೆ-ನುಂಗುವಿಕೆಗೆ ತೊಂದರೆ, ಕಣ್ಣುಗಳ ಚಲನೆಗೆ ಸಮಸ್ಯೆ ಮತ್ತು ದೃಶ್ಯಗಳು ಎರಡಾಗಿ ಕಾಣಿಸುವುದು, ವೇಗದ ಎದೆಬಡಿತ - ರಕ್ತದೊತ್ತಡ ಏರುಪೇರು ಇವೆಲ್ಲ ಈ ರೋಗದ ಆರಂಭಿಕ ಲಕ್ಷಣಗಳು. ಬಹಳ ಮಂದಿ ಈ ರೋಗದಿಂದ ಗುಣಮುಖರಾಗುತ್ತಾರಾದರೂ, ರೋಗಲಕ್ಷಣಗಳ ಸುಧಾರಣೆಗೆ ಕೆಲವೊಮ್ಮೆ ಹಲವು ವರ್ಷಗಳೇ ಬೇಕಾಗಬಹುದು; ಇಲ್ಲವೇ ಅವು ಶಾಶ್ವತವಾಗಿ ಉಳಿದುಬಿಡಬಹುದು. ಕೆಲವರಿಗೆ ಈ ರೋಗ ಗಂಭೀರ ಸ್ವರೂಪದಲ್ಲಿ ಕಾಣಿಸಿಕೊಂಡಾಗ, ಮಾರಣಾಂತಿಕ ಆಗಬಲ್ಲದು.
ಕೋವಿಡ್-19 ವೈರಸ್, ಕಂಪೈಲೊಬ್ಯಾಕ್ಟರ್ ಜೆಜುನಿ, ಜೀಕಾ ವೈರಸ್, ಇನ್ಫ್ಲುಯೆಂಜಾ ವೈರಸ್ ಸೇರಿದಂತೆ ಹಲವು ಬ್ಯಾಕ್ಟೀರಿಯಾ ಅಥವಾ ವೈರಸ್ಗಳು ಈ ರೋಗಕ್ಕೆ ಕಾರಣ ಆಗಬಹುದು ಎಂದು ಸಂಶೋಧನೆಗಳು ಕಂಡುಕೊಂಡಿವೆ. ಅವು ದೇಹಕ್ಕೆ ಸೋಂಕಿದಾಗ, ದೇಹದ ರೋಗನಿರೋಧಕ ವ್ಯವಸ್ಥೆಯು ಹದ ತಪ್ಪಿ, ನರತಂತುಗಳ ಹೊರಕವಚದ (ಮಯೆಲಿನ್ ಶೀತ್) ಮೇಲೆ ದಾಳಿ ನಡೆಸಿ ಹಾನಿಗೀಡು ಮಾಡುವುದರಿಂದ ಜಿಬಿಎಸ್ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
ಬೆನ್ನುಹುರಿಯ ದ್ರವದ ತಪಾಸಣೆ, ನರಗಳ ಚಟುವಟಿಕೆಗಳ ಮಾಪನ ಮಾಡುವ ಇಲೆಕ್ಟ್ರೊ ಮಯೋಗ್ರಫಿ, ನರಗಳ ಪ್ರೇಷಣಾ ಸಾಮರ್ಥ್ಯ ತಪಾಸಣೆಗಳ ಮೂಲಕ ಈ ರೋಗವನ್ನು ಪತ್ತೆ ಮಾಡಲಾಗುತ್ತದೆ. ಪ್ಲಾಸ್ಮಾ ವಿನಿಮಯ (ಪ್ಲಾಸ್ಮಾ ಫೆರೆಸಿಸ್), ಇಮ್ಯುನೊಗ್ಲಾಬ್ಯುಲಿನ್ ತೆರಪಿ ಈ ರೋಗಕ್ಕೆ ಪ್ರಮುಖ ಚಿಕಿತ್ಸೆಗಳು. ಮೊದಲ ನಾಲ್ಕಾರು ವಾರಗಳ ಬಳಿಕ ನಿಧಾನಕ್ಕೆ ರೋಗಲಕ್ಷಣಗಳು ತಗ್ಗುತ್ತಾ ಬರುತ್ತವೆ.
ಕೋವಿಡ್ ಅಡ್ಡಪರಿಣಾಮ
ಅಮೆರಿಕದ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಆ್ಯಂಡ್ ಪ್ರಿವೆನ್ಶನ್ (ಸಿಡಿಸಿ) ಲಸಿಕೆ ಸುರಕ್ಷತೆಗಳ ಬಗ್ಗೆ ಅಧ್ಯಯನ ನಡೆಸಿದ್ದು, ಅದು ವ್ಯಾಕ್ಸಿನ್ ಸುರಕ್ಷತೆ ಡೇಟಾಲಿಂಕ್ (ವಿಎಸ್ಡಿ) ಮತ್ತು ಅಡ್ಡಪರಿಣಾಮ ವರದಿ ವ್ಯವಸ್ಥೆಯ (ವಿಎಇಆರ್ಎಸ್) ಡೇಟಾಗಳನ್ನಾಧರಿಸಿ, ಕೋವಿಡ್ ಸೋಂಕು, ಲಸಿಕೆ ಮತ್ತದರ ಗಂಭೀರ ಅಡ್ಡಪರಿಣಾಮಗಳ ಪಟ್ಟಿಯಲ್ಲಿ ಗಿಲಾನ್ ಬಾರೆ ಸಿಂಡ್ರೋಂಗೂ ಸ್ಥಾನ ನೀಡಿದೆ. ಇದಲ್ಲದೆ ಗಂಭೀರ ಅಲರ್ಜಿ (ಅನಾಫಿಲಾಕ್ಸಿಸ್), ಹೃದಯದ ಸ್ನಾಯುಗಳ ಉರಿಯೂತ (ಮಯೊಕಾರ್ಡೈಟಿಸ್), ಆಳದ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ (ತಾಂಬೊಸೈಟೊಪೀನಿಯಾ ಸಿಂಡ್ರೋಂ) ಇತ್ಯಾದಿ ಗಂಭೀರ ಅಡ್ಡಪರಿಣಾಮಗಳನ್ನೂ ಗುರುತಿಸಿದೆ.
ರೋಗ ವರದಿ ಚಿಕಿತ್ಸೆಗೆ ವ್ಯವಸ್ಥೆ
ಅಮೆರಿಕದಂತಹ ದೇಶಗಳು ಕೋವಿಡ್ ದೀರ್ಘಕಾಲಿಕ ಪರಿಣಾಮಗಳ ಕುರಿತು ಮತ್ತು ಅಡ್ಡಪರಿಣಾಮಗಳ ಕುರಿತು ಕೇಂದ್ರೀಕೃತ ವರದಿ ವ್ಯವಸ್ಥೆಯನ್ನು ಹೊಂದಿದ್ದು, ಅದು ಪಾರದರ್ಶಕ ವಾಗಿದೆ. ಭಾರತದಲ್ಲಿ ಕೋವಿಡ್ ಕಾಲದಲ್ಲಿ ಈ ವ್ಯವಸ್ಥೆ ಸ್ವಲ್ಪ ಪಾರದರ್ಶಕವಾಗಿತ್ತಾದರೂ, ಈಗ ಹಾಗೆ ಉಳಿದಿಲ್ಲ. ಜೊತೆಗೆ, ಹೃದಯಾಘಾತ, ಮೆದುಳಿನ ಆಘಾತಗಳ ಅಸಹಜ ಹೆಚ್ಚಳಗಳು, ಜಿಬಿಎಸ್ ಕಾಣಿಸಿಕೊಳ್ಳುತ್ತಿರುವ ಪ್ರಮಾಣದಲ್ಲಿ ಹೆಚ್ಚಳಗಳ ಹೊರತಾಗಿಯೂ ಇವೆಲ್ಲ ಸರಕಾರಿ ವ್ಯವಸ್ಥೆಗೆ ವರದಿ ಆಗುತ್ತಿರುವಂತೆ ಕಾಣಿಸುತ್ತಿಲ್ಲ.
ಈ ಬಗ್ಗೆ ಸಂಸತ್ತಿನಲ್ಲಿ ಸಂಸದರು ಪ್ರಶ್ನೆಗಳನ್ನೆತ್ತಿದರೆ ಒಕ್ಕೂಟ ಸರಕಾರವು ರಾಜ್ಯ ಸರಕಾರಗಳತ್ತವೂ ರಾಜ್ಯ ಸರಕಾರಗಳು ಒಕ್ಕೂಟ ಸರಕಾರದತ್ತಲೂ ಬೊಟ್ಟು ಮಾಡಿ, ಎದ್ದಿರುವ ಪ್ರಶ್ನೆಗಳಿಗೆ ಉತ್ತರಿಸದೆ ಜಾರಿಕೊಳ್ಳುತ್ತಿವೆ. ಈ ರೋಗದ ಅಡ್ಡಪರಿಣಾಮ ವರದಿ ಮಾಡುವ ವ್ಯವಸ್ಥೆಯಲ್ಲಿ ಪಾರದರ್ಶಕತೆ, ನೈತಿಕತೆ, ನ್ಯಾಯಬದ್ಧತೆಗಳ ಕೊರತೆ ಇರುವುದು ಎದ್ದು ಕಾಣಿಸುತ್ತಿದೆ.
ಜಿಬಿಎಸ್ನಲ್ಲಿ ರೋಗಲಕ್ಷಣಗಳು ಕಾಣಿಸಿಕೊಂಡ ಒಂದೆರಡು ವಾರಗಳ ಒಳಗೇ ರೋಗ ಪತ್ತೆ ಮಾಡಿ, ಸೂಕ್ತ ಚಿಕಿತ್ಸೆ ಸಿಗುವಂತಾದರೆ, ರೋಗದಿಂದ ಮುಕ್ತರಾಗುವ ಸಾಧ್ಯತೆಗಳು ಹೆಚ್ಚಿವೆ ಎಂಬುದು ಒಂದು ಸಂಗತಿಯಾದರೆ, ಈ ರೋಗಕ್ಕೆ ಚಿಕಿತ್ಸೆಯಾಗಿ ನೀಡುವ ಇಮ್ಯೂನೊಗ್ಲಾಬ್ಯುಲಿನ್ ಚುಚ್ಚುಮದ್ದುಗಳು ಡೋಸೊಂದರ 10-12 ಸಾವಿರ ರೂ. ಬೆಲೆ ಬಾಳುತ್ತವೆ. ಅವನ್ನು 5 ದಿನಗಳ ತನಕ ನೀಡಬೇಕಿರುತ್ತದೆ. ಗಂಭೀರ ಸ್ವರೂಪದ ರೋಗಿಗೆ ವೆಂಟಿಲೇಶನ್ ಅಗತ್ಯ ಬೀಳಬಹುದು, ಹಾಗಾಗಿ ಈ ರೋಗಕ್ಕೆ ಚಿಕಿತ್ಸೆ ಕೂಡ ದುಬಾರಿ. ರೋಗಿ ಗುಣಮುಖರಾಗಲು ಕನಿಷ್ಠ 4-6 ಲಕ್ಷ ರೂ. ಖರ್ಚು ಬರಬಹುದು. ಈ ನಿಟ್ಟಿನಲ್ಲಿ ಸರಕಾರಗಳು ಯೋಚನೆ ನಡೆಸುವ ತುರ್ತು ಇದೆ. ಕರ್ನಾಟಕ ಸರಕಾರವು ಈ ಚಿಕಿತ್ಸೆಯನ್ನು ಮೊನ್ನೆ, ಜನವರಿ ಕೊನೆಯ ವಾರದಲ್ಲಿ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಗೆ ಒಳಪಡಿಸಿದೆ.
ಸರಕಾರಗಳು ಈ ಕ್ರಮವನ್ನು ಇಷ್ಟಕ್ಕೆ ಸೀಮಿತಗೊಳಿಸಿಕೊಳ್ಳದೆ ಜಿಬಿಎಸ್, ಹೆಚ್ಚುತ್ತಿರುವ ಹಠಾತ್ ಕುಸಿದು ಸಾವು, ಹೃದಯಾಘಾತದಂತಹ ಪ್ರಕರಣಗಳಲ್ಲಿ ತನ್ನ ಸಮಗ್ರ ರೋಗ ಸರ್ವೇಕ್ಷಣೆ ಯೋಜನೆ (ಐಡಿಎಸ್ಪಿ) ಅನ್ವಯ ಇಂತಹ ಪ್ರಕರಣಗಳನ್ನು ದಾಖಲಿಸಿಕೊಳ್ಳಬೇಕು (ಪುಣೆಯಲ್ಲಿ ಈಗಾಗಲೇ ಈ ಪ್ರಕರಣಗಳನ್ನು ಐಡಿಎಸ್ಪಿ ದಾಖಲಿಸಿಕೊಂಡಿದೆ.), ಇದು ದೇಶದಾದ್ಯಂತ ನಡೆಯಬೇಕು. ಈ ಅಂಕಿಸಂಖ್ಯೆಗಳನ್ನು ಸಕಾಲದಲ್ಲಿ ವಿಶ್ಲೇಷಿಸಬೇಕು ಮತ್ತು ಪ್ರಕರಣಗಳಿಗೆ ಖಚಿತ ಕಾರಣಗಳನ್ನು ಗುರುತಿಸಿ, ಸಾಧ್ಯವಿದ್ದಲ್ಲಿ ಇನ್ನಷ್ಟು ಜನರು ಈ ರೀತಿಯ ತೊಂದರೆಗಳಿಗೆ ಒಳಗಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು; ಅಕಾರಣ ಜೀವನಷ್ಟ ತಡೆಯಬೇಕು.
ಈ ವಿಚಾರಗಳಲ್ಲಿ ಸರಕಾರಗಳು ಕಣ್ಣು ಮುಚ್ಚಿ ಕುಳಿತಿದ್ದರೆ, ಇದು ಗಂಭೀರವಾದ ಸಮಸ್ಯೆಗಳಿಗೆ ಹಾದಿ ಮಾಡಿಕೊಡಬಹುದು; ಸರಕಾರ ಮತ್ತು ವ್ಯವಸ್ಥೆಗಳ ಮೇಲೆಯೇ ಜನತೆಗೆ ಭ್ರಮನಿರಸನ ಉಂಟಾಗ ಬಹುದು. ಜನರ ಜೀವಗಳ ಹೊಣೆ ಹೊತ್ತಿರುವ ಸರಕಾರವೊಂದು ತನ್ನ ಪ್ರಜೆಗಳ ‘ಬದುಕುವ ಹಕ್ಕನ್ನು’ ಸಂರಕ್ಷಿಸುವ ಸಂವಿಧಾನಬದ್ಧ ಜವಾಬ್ದಾರಿಯನ್ನು ಹೊಂದಿರುತ್ತದೆ ಎಂಬುದನ್ನು ಮರೆಯುವಂತಿಲ್ಲ.