ಕಡಲು ನುಂಗಲು ಬರಲಿದ್ದಾರೆ... ಎಚ್ಚರ!

ಕಡಲಿನ ಬದುಕನ್ನು ಸರಕಾರ ಈಗ ಕೃಷಿಯೆಂದೇ ಪರಿಗಣಿಸುತ್ತಿದೆ. ಈ ಹಿನ್ನೆಲೆಯಲ್ಲಿ, ಕೃಷಿ ನೀತಿಗೆ ಅನ್ವಯವಾಗುವ ಎಲ್ಲ ಅಂಶಗಳೂ ಕಡಲಿಗೂ ಅನ್ವಯ ಆಗತೊಡಗಿದ್ದು, ಅದರ ಆರಂಭಿಕ ಹಂತದ ಲಕ್ಷಣಗಳು ಈಗ ಕಾಣಿಸತೊಡಗಿವೆ.;

Update: 2025-04-19 12:05 IST
ಕಡಲು ನುಂಗಲು ಬರಲಿದ್ದಾರೆ... ಎಚ್ಚರ!
  • whatsapp icon

ಭಾರತ ಸರಕಾರದ ಉದಾರೀಕರಣ ನೀತಿಯ ಕಾರಣಕ್ಕೆ ಕೃಷಿ ಕ್ಷೇತ್ರದಲ್ಲಿ ಆಗಿರುವ ಬದಲಾವಣೆಗಳನ್ನು ಗಮನಿಸುತ್ತಿದ್ದೀರಾ? ಸಣ್ಣಗಾತ್ರದ ಕೃಷಿ ಹಿಡುವಳಿಗಳು ಲಾಭದಾಯಕ ಅಲ್ಲದಿರುವುದರಿಂದ, ಕೃಷಿ ಕ್ಷೇತ್ರವನ್ನು ಕಾರ್ಪೊರೇಟೀಕರಣಗೊಳಿಸಿ, ಸೂಟುಬೂಟಿನ ರೈತರು ರಂಗ ಪ್ರವೇಶ ಮಾಡಬೇಕು ಮತ್ತು ಸಣ್ಣ ರೈತರು- ಭೂರಹಿತ ಕೃಷಿ ಕಾರ್ಮಿಕರನ್ನು ಹಂತ ಹಂತವಾಗಿ ಕೃಷಿಯಿಂದ ದೂರಮಾಡಿ, ಅವರ ಕೌಶಲಗಳನ್ನು ಮರುನೇರ್ಪು ಮಾಡಬೇಕು ಹಾಗೂ ಕಾರ್ಪೊರೇಟ್ ಕೃಷಿ ಕಂಪೆನಿಗಳಲ್ಲಿ ಅವರಿಗೆ ಉದ್ಯೋಗ ನೀಡಬೇಕು ಎಂಬುದು ಹೊಸ ಕೃಷಿ ನೀತಿಯ ಸಾರಾಂಶ. ಆ ಕೃಷಿ ಕಾಯ್ದೆಗಳು ಈಗಿಲ್ಲದಿದ್ದರೂ, ಈ ನೀತಿಯಲ್ಲಿ ಏನೂ ಬದಲಾವಣೆ ಆಗಿಲ್ಲ. ಇಂಚಿಂಚಾಗಿ ಈ ಸುಧಾರಣೆಗಳು ಇನ್ನೆಂದೂ ಹಿಮ್ಮುಖ ಚಲನೆ ಸಾಧ್ಯವಾಗದಂತೆ ಮುಂದುವರಿಯುತ್ತಿವೆ.

ಭಾರತವು ಜಗತ್ತಿನ 2ನೇ ಅತಿದೊಡ್ಡ ಮೀನು ಉತ್ಪಾದಕ ದೇಶವಾಗಿದ್ದು, ಜಗತ್ತಿನ ಒಟ್ಟು ಮೀನು ಉತ್ಪಾದನೆಯಲ್ಲಿ ಶೇ. 8 ಷೇರು ಭಾರತದ್ದು. ಸಾಂಪ್ರದಾಯಿಕವಾಗಿ ಮೀನುಗಾರಿಕೆ ಇಂದು ಉದಾರೀಕರಣದ ಬಳಿಕ ವಾಣಿಜ್ಯೀಕರಣಗೊಂಡಿದೆ. 1950-51ರಲ್ಲಿ 7.52ಲಕ್ಷ ಟನ್ ಮೀನು ಉತ್ಪಾದನೆ ಹೊಂದಿದ್ದ ಭಾರತದಲ್ಲಿ ಈಗ ಮೀನು ‘ಉತ್ಪಾದನೆ’ 23 ಪಟ್ಟು ಹೆಚ್ಚಿದ್ದು, 2023-24ರಲ್ಲಿ 174.45 ಲಕ್ಷ ಟನ್ಗಳಿಗೆ ಏರಿದೆ.

ಕಡಲಿನ ಬದುಕನ್ನು ಸರಕಾರ ಈಗ ಕೃಷಿಯೆಂದೇ ಪರಿಗಣಿಸುತ್ತಿದೆ. ಈ ಹಿನ್ನೆಲೆಯಲ್ಲಿ, ಕೃಷಿ ನೀತಿಗೆ ಅನ್ವಯವಾಗುವ ಎಲ್ಲ ಅಂಶಗಳೂ ಕಡಲಿಗೂ ಅನ್ವಯ ಆಗತೊಡಗಿದ್ದು, ಅದರ ಆರಂಭಿಕ ಹಂತದ ಲಕ್ಷಣಗಳು ಈಗ ಕಾಣಿಸತೊಡಗಿವೆ.

ಭಾರತ ಸರಕಾರವು ಈ ವರ್ಷ ಮಾರ್ಚ್ 6ರಂದು, ಭಾರತ ಒಳನಾಡು ಜಲಮಾರ್ಗ ಪ್ರಾಧಿಕಾರ ಕಾಯ್ದೆ 1985ರ ಅಡಿಯಲ್ಲಿ ರೂಪಿಸಲಾಗಿರುವ ನಿಯಮಗಳನ್ನು ಪ್ರಕಟಿಸಿದ್ದು, ಆ ನಿಯಮಗಳ ಅಡಿಯಲ್ಲಿ [ರಾಷ್ಟ್ರೀಯ ಜಲಮಾರ್ಗ (ಜೆಟ್ಟಿಗಳ/ಟರ್ಮಿನಲ್ಗಳ ನಿರ್ಮಾಣ) ನಿಯಮಗಳು 2025] ದೇಶದಾದ್ಯಂತ ರಾಷ್ಟ್ರೀಯ ಜಲಮಾರ್ಗಗಳಲ್ಲಿ ಜೆಟ್ಟಿಗಳು ಮತ್ತು ಟರ್ಮಿನಲ್ಗಳನ್ನು ರಚಿಸಲು ಖಾಸಗಿ, ಸಾರ್ವಜನಿಕ ಹಾಗೂ ಜಂಟಿ ವಲಯಗಳಿಗೆ ಅವಕಾಶ ತೆರೆಯಲಾಗಿದೆ. ಈ ಅವಕಾಶವನ್ನು ಬಳಸಿಕೊಂಡು ಜೆಟ್ಟಿ ನಿರ್ಮಾಣಕ್ಕೆ ಹೊರಟಿರುವ ಖಾಸಗಿ ವಲಯದ ವಿರುದ್ಧ ಗೋವಾ ರಾಜ್ಯದ ಮೀನುಗಾರರು ತಿರುಗಿ ಬಿದ್ದಿದ್ದಾರೆ.

ಗೋವಾದ ಮಾಲಿಮ್ನಲ್ಲಿ ಮುಂಬೈ ಮೂಲದ ಮರೀನಾ ಇಂಡಿಯಾ ಇನ್ಫ್ರಾಸ್ಟ್ರಕ್ಚರ್ಸ್ ಪ್ರೈ.ಲಿ. ಎಂಬ ಖಾಸಗಿ ಸಂಸ್ಥೆಗೆ 8 ಕೋಟಿ ರೂ. ವೆಚ್ಚದಲ್ಲಿ ಖಾಸಗಿ ಜೆಟ್ಟಿ ನಿರ್ಮಾಣಕ್ಕೆ ಭಾರತದ ಒಳನಾಡು ಜಲಮಾರ್ಗ ಪ್ರಾಧಿಕಾರ (IWAI) ನಿರಾಕ್ಷೇಪಣಾ ಪತ್ರ ನೀಡಿರುವುದರ ವಿರುದ್ಧ, ಗೋವಾದ ಉತ್ತರ ಕರಾವಳಿಯ ಮೀನುಗಾರರು ರಾಷ್ಟ್ರೀಯ ಹಸಿರು ನ್ಯಾಯಪೀಠದ ಬಾಗಿಲು ತಟ್ಟಿದ್ದಾರೆ.

ಸೂಕ್ಷ್ಮ ಪರಿಸರ ಇರುವ, ಮೀನುಗಳು ಸಂತಾನಾಭಿವೃದ್ಧಿ ನಡೆಸುವ, ಸಿಆರ್ಝಡ್ ಎಂದು ಗುರುತಿಸಲಾಗಿರುವ ಕಡಲಿನ ಜಾಗಗಳ ಬಳಿ ಕ್ರೂಸ್ ಪ್ರವಾಸೋದ್ಯಮ ಎಂಬ ಹೆಸರಿನಲ್ಲಿ ಮರೀನಾಗಳು, ಕ್ರೂಸ್ ಜೆಟ್ಟಿಗಳು ಬಂದರೆ, ಮೀನುಗಾರರ ಬದುಕು ಅತಂತ್ರ ಆಗಲಿದೆ; ಸಾಂಪ್ರದಾಯಿಕ ಮೀನುಗಾರರ ಚಲನವಲನಗಳಿಗೆ ಅಡ್ಡಿ ಆಗಲಿದೆ; ಮೇಲಾಗಿ, ಪರಿಸರ ನಾಶ ಆಗಲಿದೆ. IWAIನ ಈ ಕ್ರಮ ರಾಜ್ಯ ಸರಕಾರದ ಅಧಿಕಾರದಲ್ಲಿ ಹಸ್ತಕ್ಷೇಪವಾಗಿದ್ದು, ತಮಗದು ಸಮ್ಮತ ಇಲ್ಲ ಎಂದು ಗೋವಾ ಮೀನುಗಾರರು ಹೇಳಿದ್ದಾರೆ.

ಮಾಂಡೋವಿ ನದಿ ರಾಷ್ಟ್ರೀಕರಣ ಆಗಿರುವುದು ಹೌದಾದರೂ, IWAIಗೆ ಇಲ್ಲಿನ ಸ್ಥಳೀಯರ ಹಿತಾಸಕ್ತಿಗಳನ್ನು ಕಡೆಗಣಿಸಿ, ತಮ್ಮ ಮೂಗಿನ ನೇರಕ್ಕೆ ನಿರಾಕ್ಷೇಪಣಾ ಪತ್ರ ನೀಡುವ ಅಧಿಕಾರ ಇಲ್ಲ. ಅವರು ಹೆಚ್ಚೆಂದರೆ ನದಿಯ ಅಡ್ಡಲಾಗಿ ಸೇತುವೆ, ನದಿಯ ಆಳದಲ್ಲಿ ಪೈಪ್ಲೈನ್ಗಳಿಗೆ ನಿರಾಕ್ಷೇಪಣೆ ನೀಡಬಹುದು ಎಂದು ಮೀನುಗಾರರು ಹೇಳಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ, ಮಾರ್ಚ್ ೬ರಂದು ಹೊರಬಂದಿರುವ ಒಳನಾಡು ಜಲಮಾರ್ಗ ಸಂಬಂಧಿ ನಿಯಮಗಳು ರಾಜ್ಯ-ಕೇಂದ್ರ ಸಂಬಂಧಗಳಲ್ಲಿ ಮತ್ತೊಂದು ತಕರಾರು ತರುವ ಸಾಧ್ಯತೆಗಳು ನಿಚ್ಚಳವಾಗಿವೆ.

ಗೋವಾ ಮೀನುಗಾರರು ಹೇಳುವ ಮಾತುಗಳಲ್ಲಿ ತಥ್ಯವಿದೆ. ಹಾಲೀ ಇರುವ ಬಂದರುಗಳು, ಹೊಸ ಖಾಸಗಿ ಜೆಟ್ಟಿಗಳು, ಮರೈನ್ ಪ್ರವಾಸೋದ್ಯಮದ ಹೆಸರಿನಲ್ಲಿ ಶ್ರೀಮಂತರ ಮೋಜು-ಮಸ್ತಿಗಳು ಒಂದೆಡೆ ಸಾಂಪ್ರದಾಯಿಕ ಮೀನುಗಾರರ ಮುಕ್ತ ಕಡಲು ಪ್ರವೇಶಕ್ಕೆ ಅಡ್ಡಿಯಾಗುತ್ತಿವೆ; ಇನ್ನೊಂದೆಡೆ ಆಳ ಸಮುದ್ರ ಮೀನುಗಾರಿಕೆ, ಲೈಟ್ ಫಿಷಿಂಗ್ ಹೆಸರಿನಲ್ಲಿ ಇಡಿಯ ಸಮುದ್ರವನ್ನೇ ಗಾಳಿಸಿ ತೆಗೆದು ಮೀನುಗಳನ್ನು ಮರಿ-ಮೊಟ್ಟೆ ಎನ್ನದೆ ದೋಚಿ, ರಫ್ತು ಅಂಕಿ-ಸಂಖ್ಯೆಗಳನ್ನು ಹಿಗ್ಗಿಸಿಕೊಳ್ಳಲು ಹೊರಟ ಪರಿಣಾಮವಾಗಿ, ಸಾಂಪ್ರದಾಯಿಕ ಮೀನುಗಾರಿಕೆ ಈಗ ಲಾಭದಾಯಕವಾಗಿ ಉಳಿದಿಲ್ಲ.

2013-14ರಲ್ಲಿ 30,213 ಕೋಟಿ ರೂ.ಗಳ ಮೀನು ಉತ್ಪಾದನೆಗಳು ರಫ್ತಾಗಿದ್ದರೆ, 2023-24ರಲ್ಲಿ ಅದರ ಪ್ರಮಾಣ 60,523.89 ಕೋಟಿ ರೂ. ಗಳಿಗೆ ಏರಿದೆ. 129ಕ್ಕೂ ಮಿಕ್ಕಿ ದೇಶಗಳಿಗೆ ಭಾರತದ ಮೀನು ರಫ್ತಾಗುತ್ತಿದೆ! (PIB ರಿಲೀಸ್ ID: 2055709). ಆದರೆ, ಅವೈಜ್ಞಾನಿಕ ಮೀನುಗಾರಿಕಾ ಹಪಾಹಪಿಯ ಕಾರಣದಿಂದಾಗಿ, ಸಾಂಪ್ರದಾಯಿಕ ಮೀನುಗಾರಿಕೆಗೆ ಕರ್ನಾಟಕದ ಕರಾವಳಿಯಲ್ಲಿ ಬರ ಬಂದಿದೆ!

ರೈತ ಉತ್ಪಾದಕ ಸಂಸ್ಥೆಗಳ ರೀತಿಯಲ್ಲೇ ಮೀನುಗಾರರಲ್ಲೂ ಮೀನು ರೈತರ ಉತ್ಪಾದಕ ಸಂಸ್ಥೆ (FFPO)ಗಳಿಗೆ ಸರಕಾರ ಪ್ರೋತ್ಸಾಹ ನೀಡುತ್ತಿದ್ದು, ದೇಶದಲ್ಲಿಂದು 2,195 FFPOಗಳು ಸ್ಥಾಪನೆಗೊಂಡಿವೆ. ಭಾರತ ಸರಕಾರವು ಪ್ರಧಾನಮಂತ್ರಿ ಮತ್ಸ್ಯ ಸಂಪದಾ ಯೋಜನೆ (ಪಿಎಂಎಂಎಸ್ವೈ) ಅಡಿಯಲ್ಲಿ ಕಳೆದ 10 ವರ್ಷಗಳಲ್ಲಿ 38,572 ಕೋಟಿ ರೂ.ಗಳನ್ನು ವ್ಯಯಿಸಿದೆ.

ಇದೆಲ್ಲಕ್ಕಿಂತಲೂ ಮಹತ್ವದ್ದು, ಕಡಲ ಗಣಿಗಾರಿಕೆ. ಸಾಗರದಾಳದ ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ತಿದ್ದುಪಡಿ ಕಾಯ್ದೆ - 2023ರ ಅಡಿಯಲ್ಲಿ ಭಾರತದ 7,517 ಕಿ.ಮೀ. ಸಮುದ್ರ ತೀರ ಹಾಗೂ 1,382 ಸಣ್ಣ-ದೊಡ್ಡ ದ್ವೀಪಗಳಲ್ಲಿರುವ ಖನಿಜ ಸಂಪತ್ತನ್ನು ಗಣಿಗಾರಿಕೆ ಮಾಡಿ ತೆಗೆಯಲು ಯೋಜನೆಗಳು ಸಿದ್ಧಗೊಳ್ಳುತ್ತಿದ್ದು, 2016ರಲ್ಲಿ ಈ ಗಣಿಗಾರಿಕೆಗೆ ಭಾರತವು ಅಂತರ್ರಾಷ್ಟ್ರೀಯ ಸಮುದ್ರ ತಳ ಪ್ರಾಧಿಕಾರ (ಐಎಸ್ಎ)ದಿಂದ ಅನುಮತಿ ಪಡೆದ 25ನೇ ಲೈಸನ್ಸುದಾರ ದೇಶ ಅನ್ನಿಸಿದೆ. ಈ ಗಣಿಗಾರಿಕೆ ಇನ್ನೂ ಆರಂಭಿಕ ಹಂತದಲ್ಲಿದ್ದು, ಇದು ಕ್ರಮೇಣ, ರಾಜ್ಯದ ಕರಾವಳಿಯ ಎಷ್ಟು ಭಾಗವನ್ನು ನುಂಗಲಿದೆ ಎಂಬುದು ಇನ್ನೂ ಸ್ಪಷ್ಟವಿಲ್ಲ.

ಕರ್ನಾಟಕದಲ್ಲಿ ಎಚ್ಚರ ಯಾವಾಗ?

ಕರ್ನಾಟಕದ ಕರಾವಳಿ 320 ಕಿ.ಮೀ. ಉದ್ದ ಇದ್ದು ಇದರಲ್ಲಿ ದ.ಕ. ಜಿಲ್ಲೆಯ ಪಾಲು 62 ಕಿ.ಮೀ., ಉಡುಪಿ ಜಿಲ್ಲೆಯ ಪಾಲು 98 ಕಿ.ಮೀ. ಮತ್ತು ಉತ್ತರ ಕನ್ನಡದ ಪಾಲು 160 ಕಿ.ಮೀ.

ಕರ್ನಾಟಕದಲ್ಲೂ ಜಲಸಾರಿಗೆ ಮಂಡಳಿಯು ಮೀನುಗಾರಿಕೆಗೆ ಹೊರತಾದ ನೂರಾರು ಯೋಜನೆಗಳನ್ನು ಹರವಿಕೊಂಡು ಕುಳಿತಿದೆ. ಸಾಗರಮಾಲಾ ಯೋಜನೆಯ ಭಾಗವಾಗಿ ಕೇಂದ್ರ ಸರಕಾರದ ಹಲವು ಯೋಜನೆಗಳು ಕರಾವಳಿಯ ಉದ್ದಕ್ಕೂ ಬೇರೆ ಬೇರೆ ಹಂತಗಳಲ್ಲಿ ನಡೆಯುತ್ತಿವೆ. ಪ್ರವಾಸೋದ್ಯಮದ ಹೆಸರಿನಲ್ಲಿ ಉಡುಪಿಯ 17, ಮಂಗಳೂರಿನ 4 ಮತ್ತು ಉತ್ತರಕನ್ನಡದ 19 ಸೇರಿದಂತೆ ಒಟ್ಟು 40 ನೋಡ್ಗಳು (ಪ್ರತೀ ನೋಡ್ 3-15 ಕಿ.ಮೀ. ಉದ್ದದ್ದು!) ಖಾಸಗಿಯವರ ಪಾಲಾಗಲಿವೆ. ಮಲ್ಪೆಗೆ ವಕ್ಕರಿಸಿದ್ದ ಮರೀನಾ, ಅಲ್ಲಿಂದ ಹೊರದೂಡಿಸಿಕೊಂಡು, ಬೈಂದೂರು ಬಳಿ ಸಂಭ್ರಮದಿಂದ ಸಜ್ಜುಗೊಳ್ಳುತ್ತಿದೆ, ಉಳ್ಳಾಲದ ಬಳಿ ಒಂದು ಪ್ರತ್ಯೇಕ ಕ್ರೂಸ್ ಬಂದರು ಸಜ್ಜುಗೊಳ್ಳುತ್ತಿದೆ.

ಹೀಗೆ ಇಂಚಿಂಚಾಗಿ ಸಮುದ್ರ ತೀರವನ್ನು ಖಾಸಗಿ ಸುಪರ್ದಿಗೆ ನೀಡುತ್ತಾ ಹೋದರೆ, ಅದು ಶಾಶ್ವತವಾಗಿ ಸಾರ್ವಜನಿಕರ ಮತ್ತು ಮೀನುಗಾರರ ಕೈ ತಪ್ಪಿದಂತೆ. 30 ವರ್ಷಗಳ ಹಿಂದೆ ನಮ್ಮ ಕಡಲ ತೀರ ಎಷ್ಟು ಮುಕ್ತವಾಗಿತ್ತೆಂದು ಯೋಚಿಸಿದರೆ, ನಾವೀಗ ಎಲ್ಲಿಗೆ ತಲುಪಿದ್ದೇವೆ ಎಂಬುದು ಅರ್ಥವಾಗುತ್ತದೆ.

ಕಡಲ ತೀರವನ್ನು ಖಾಸಗಿಗೆ ವಹಿಸಿಕೊಟ್ಟು, ಅಲ್ಲಿ ಸಾಂಪ್ರದಾಯಿಕ ಮೀನುಗಾರಿಕೆಯಲ್ಲಿ ತೊಡಗಿರುವವರಿಗೆ ಸಣ್ಣ ಪ್ರಮಾಣದ ಮೀನುಗಾರಿಕೆ ಲಾಭದಾಯಕ ಅಲ್ಲ ಎಂಬುದನ್ನು ಮತ್ತೆ ಮತ್ತೆ ತಲೆಗೆ ತುಂಬಿ ಸಾಬೀತು ಮಾಡಲಾಗುತ್ತಿದೆ. ಹಾಗಾಗಿ, ಮೀನುಗಾರರು ಕಡಲಿನಿಂದ ಈಚೆ ಹೊಸ ಕೌಶಲಗಳನ್ನು ಕಲಿತು, ಬದುಕು ಕಟ್ಟಿಕೊಳ್ಳುವುದನ್ನು ಅನಿವಾರ್ಯ ಗೊಳಿಸುವಂತಹ ಸನ್ನಿವೇಶ ಏರ್ಪಾಡಾಗುತ್ತಿದೆ.

ಪುಟ್ಟ ರಾಜ್ಯ ಗೋವಾದಲ್ಲಿ ಈ ಆಪತ್ತುಗಳ ಸರಮಾಲೆ ಸುಲಭವಾಗಿ ಅರ್ಥವಾದ ಕಾರಣ, ಕೇಂದ್ರ ದಲ್ಲಿ ಸ್ವತಃ ಅವರದೇ ಪಕ್ಷದ ಸರಕಾರ ಇರುವುದರ ಹೊರತಾಗಿಯೂ, ಅಲ್ಲಿನ ಸರಕಾರ ಮತ್ತು ಜನತೆ ಎಚ್ಚೆತ್ತು ಪ್ರತಿಭಟನೆಯ ಧ್ವನಿ ಎತ್ತಲಾರಂಭಿಸಿದ್ದಾರೆ. ಕರ್ನಾಟಕದಲ್ಲಿ ಇಂತಹದೊಂದು ಎಚ್ಚರ ಮೂಡು ವುದು ಯಾವಾಗ?

Tags:    

Writer - ವಾರ್ತಾಭಾರತಿ

contributor

Editor - Naufal

contributor

Contributor - ರಾಜಾರಾಂ ತಲ್ಲೂರು

contributor

Similar News