ಮೋದಿಯವರ ಬೂಟಿನೊಳಗೆ ಸಿದ್ದರಾಮಯ್ಯನವರ ಕಾಲು

ಕೇಂದ್ರದಲ್ಲಿನ ಖಾಸಗೀಕರಣ ನೀತಿಯನ್ನು ಪ್ರತೀ ಹಂತದಲ್ಲೂ ಟೀಕಿಸುವ ಪ್ರತಿಪಕ್ಷಗಳು, ತಮ್ಮದೇ ಸರಕಾರಗಳು ಇರುವಲ್ಲಿಯಾದರೂ ಅದಕ್ಕೆ ಪರ್ಯಾಯ ಏನೆಂಬುದನ್ನು ಯೋಚಿಸಬೇಕು. ಅದಿಲ್ಲವಾದರೆ, ಅವರಿಗೂ ಇವರಿಗೂ ವ್ಯತ್ಯಾಸ ಏನೂ ಇಲ್ಲ. ಇಬ್ಬರದೂ ಬಾಯುಪಚಾರ ಮಾತ್ರ ಆಗಿ ಉಳಿಯುತ್ತದೆ.;

Update: 2025-03-29 10:20 IST
ಮೋದಿಯವರ ಬೂಟಿನೊಳಗೆ ಸಿದ್ದರಾಮಯ್ಯನವರ ಕಾಲು
  • whatsapp icon

ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರಕಾರವು ರಾಜ್ಯದಲ್ಲಿ ಮೂಲಸೌಕರ್ಯ ಯೋಜನೆಗಳಿಗಾಗಿ ಪಿಪಿಪಿ (ಸಾರ್ವಜನಿಕ-ಖಾಸಗಿ ಸಹಭಾಗಿತ್ವ) ಕಾರ್ಯನೀತಿ - 2025ನ್ನು ಈ ವರ್ಷ ಜನವರಿ 30ರಂದು ಸಚಿವ ಸಂಪುಟ ಸಭೆಯಲ್ಲಿ ಅನುಮೋದಿಸಿದ್ದು (ವಿಷಯ ಸಂಖ್ಯೆ: ಸಿ-41/2025), ಬಳಿಕ ಫೆಬ್ರವರಿ 24ರಂದು ಆದೇಶದ ಮೂಲಕ ಜಾರಿಗೊಳಿಸಿದೆ (ಆದೇಶ ಸಂಖ್ಯೆ: IDD 30 ITS 2021 ದಿ:24.02.2024ರ ಅನುಬಂಧ-1). ಈ ಬಗ್ಗೆ ಕರ್ನಾಟಕ ರಾಜ್ಯಪತ್ರದಲ್ಲೂ 24-03-2025ರಂದು ಅಧಿಕೃತ ಪ್ರಕಟಣೆ ಹೊರಬಿದ್ದಿದೆ. ಆ ಮೂಲಕ, ರಾಜ್ಯದಲ್ಲೂ ಸರಕಾರಿ ಆಸ್ತಿಗಳಲ್ಲಿ ಖಾಸಗಿಯವರಿಗೆ ಲಾಭ ಮಾಡಿಕೊಳ್ಳಲು ಅವಕಾಶ ನೀಡುವ ಪಿಪಿಪಿ ವ್ಯವಸ್ಥೆಗೆ ಸಿದ್ದರಾಮಯ್ಯ ಸರಕಾರ ಹೊಸ ವೇಗ ನೀಡಿದಂತಾಗಿದೆ. ಈ ರೀತಿಯ ಖಾಸಗೀಕರಣಗಳನ್ನು ಕಳೆದ 11 ವರ್ಷಗಳಲ್ಲಿ ಭಾರತ ಸರಕಾರ ಬಾಜಾ ಭಜಂತ್ರಿಯೊಂದಿಗೆ ಮಾಡಿದಾಗಲೆಲ್ಲ ಅದನ್ನು ರಾಜಕೀಯ ನೆಲೆಯಲ್ಲಿ ಉಗ್ರವಾಗಿ ಖಂಡಿಸುತ್ತಿದ್ದ ಸಿದ್ದರಾಮಯ್ಯ ಮತ್ತವರ ಸರಕಾರ ಈಗ ಈ ಟೀಕೆಗಳನ್ನು ಮಾಡುವ ನೈತಿಕತೆ ಕಳೆದುಕೊಂಡಂತಾಗಿದೆ.

ರಾಜಕಾರಣದ ಭಾಷೆಯಲ್ಲಿ ‘ಅಭಿವೃದ್ಧಿಗೆ’ ಪಿಪಿಪಿ ವಿಧಾನ ಬಳಕೆಯೇನೂ ಕರ್ನಾಟಕದಲ್ಲಿ ಹೊಸದಾಗಿ ಆರಂಭಗೊಂಡದ್ದಲ್ಲ. 1997ರಲ್ಲಿ ಮುಖ್ಯಮಂತ್ರಿಗಳಾಗಿದ್ದ ಜೆ.ಎಚ್. ಪಟೇಲರ ಕಾಲದಲ್ಲೇ ಇದಕ್ಕೆ ಶ್ರೀಕಾರ ಬಿದ್ದಿತ್ತು. ಮೂಲಸೌಕರ್ಯಗಳಲ್ಲಿ ಖಾಸಗಿ ಹೂಡಿಕೆಗೆ ಸರಕಾರ ಅವಕಾಶ ತೆರೆದಿತ್ತು. ದೇಶದಲ್ಲಿ ಉದಾರೀಕರಣದ ಅಲೆಗಳು ಏಳತೊಡಗಿದಂತೆಲ್ಲ ಈ ವಿಧಾನ ಪರಿಷ್ಕರಣಗೊಳ್ಳತೊಡಗಿತು. ಪಟೇಲರ ನೀತಿಯನ್ನು, 2007ರಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರ ಸಮ್ಮಿಶ್ರ ಸರಕಾರ ಪರಿಷ್ಕರಿಸಿತು. ಬಳಿಕ 2015ರಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಸರಕಾರ, ಆಗಲೇ ಪಿಪಿಪಿಗೆ ತೆರೆದುಕೊಂಡಿದ್ದ 10 ರಂಗಗಳಿಗೆ ಮತ್ತೆ 4 ರಂಗಗಳನ್ನು ಸೇರಿಸಿ, ಅದರ ವ್ಯಾಪ್ತಿಯನ್ನು ವಿಸ್ತರಿಸಿತು. ಹಾಲಿ ಸಿದ್ದರಾಮಯ್ಯ ಸರಕಾರವು ತನ್ನ ನೀತಿಯನ್ನು ಈಗ ಮತ್ತೆ ಪರಿಷ್ಕರಿಸುವ ಮೂಲಕ, ಖಾಸಗೀಕರಣದಲ್ಲಿ ಕರ್ನಾಟಕ ಸರಕಾರಕ್ಕೂ, ಭಾರತ ಸರಕಾರಕ್ಕೂ ವ್ಯತ್ಯಾಸವೇನಿಲ್ಲ ಎಂಬುದನ್ನು ಖಚಿತಪಡಿಸಿದೆ. ಈಗ ಪಿಪಿಪಿಗೆ ತೆರೆದುಕೊಂಡಿರುವ ಹದಿನಾಲ್ಕು ಮೂಲಸೌಕರ್ಯ ವಲಯಗಳೆಂದರೆ ಕೃಷಿ, ಶಿಕ್ಷಣ, ಇಂಧನ, ಆರೋಗ್ಯ, ಕೈಗಾರಿಕೆ, ನೀರಾವರಿ, ಸಾರ್ವಜನಿಕ ಮಾರುಕಟ್ಟೆ, ಪ್ರವಾಸೋದ್ಯಮ, ಸಾರಿಗೆ ಮತ್ತು ಸರಕು ಸಾಗಣೆ, ನಗರ ಮತ್ತು ಪೌರಾಡಳಿತ, ಕ್ರೀಡೆ ಮತ್ತು ಯುವಜನ ಸೇವೆ, ವಸತಿ, ಗ್ರಾಮೀಣಾಭಿವೃದ್ಧಿ ಹಾಗೂ ದೂರಸಂಪರ್ಕ.

ಸರಕಾರಗಳು ತಮ್ಮ ಜವಾಬ್ದಾರಿಗಳಿಂದ ಕಳಚಿಕೊಂಡು, ಎಲ್ಲವನ್ನೂ ಖಾಸಗಿಯವರ ಕೈಗೆ ಒಪ್ಪಿಸಿ, ತಾವು ‘ಹನಿಟ್ರ್ಯಾಪ್’, ‘ಸೀಡಿ ರಾಜಕಾರಣ’, ‘ಗುಂಪುಗಾರಿಕೆ’, ‘ಪರಸ್ಪರ ಕೆಸರೆರಚಾಟ’ ಮತ್ತು ‘ಭ್ರಷ್ಟಾಚಾರ’ ಮೊದಲಾದ ಘನಕಾರ್ಯಗಳಲ್ಲಿ ತೊಡಗಿಕೊಳ್ಳುವುದೇ ಸದ್ಯಕ್ಕೆ ಶಾಸಕಾಂಗದ ಜವಾಬ್ದಾರಿ ಅಂದುಕೊಂಡಂತಿದೆ. ರಾಜ್ಯದ ಜಿಡಿಪಿ ಹೆಚ್ಚುತ್ತಿರುವುದರಿಂದ ಆ ಮಟ್ಟಕ್ಕೆ ಅಗತ್ಯವಿರುವ ಮೂಲಸೌಕರ್ಯ ಒದಗಿಸಲು ಮತ್ತು ಸರಕಾರ ತನ್ನ ಸಂಪನ್ಮೂಲಗಳ ಹಂಚಿಕೆಯಲ್ಲಿ ಸಂತುಲನ ಸಾಧಿಸಲು ಪಿಪಿಪಿ ಅಗತ್ಯ ಎಂದು ವಕೀಲಿಕೆ ಮಾಡುತ್ತಿರುವ ಕರ್ನಾಟಕ ಸರಕಾರ, ಬೆಂಗಳೂರು ವಿಮಾನ ನಿಲ್ದಾಣದ ಪಿಪಿಪಿ ಮಾದರಿಯನ್ನು ಮುಂದಿಟ್ಟುಕೊಂಡು ಮಾರ್ಕೆಟಿಂಗ್ ಮಾಡುತ್ತಿದೆ. ಆದರೆ ನಮ್ಮಲ್ಲೇ, ನೈಸ್ ರಸ್ತೆಯಂತಹ ನೂರಾರು ವಿಫಲ ಪಿಪಿಪಿ ಮಾದರಿಗಳನ್ನು ಪರದೆಯ ಹಿಂದೆ ಮುಚ್ಚಿಡಲಾಗುತ್ತಿದೆ. ಸಿದ್ದರಾಮಯ್ಯ ಸಂಪುಟದ ಸದಸ್ಯರು ಚುನಾವಣೆಗಳ ವೇಳೆ ಪ್ರಧಾನಿ ನರೇಂದ್ರಮೋದಿಯವರ ನೇತೃತ್ವದ ಭಾರತ ಸರಕಾರದ ಖಾಸಗೀಕರಣ ನೀತಿಯ ವಿರುದ್ಧ ತಾವು ಆಡಿದ್ದ ಮಾತುಗಳನ್ನು ನೆನಪಿಸಿಕೊಂಡರೆ, ಪಿಪಿಪಿ ಮಾದರಿಯ ಬಗ್ಗೆ ಹೆಚ್ಚು ಹೇಳಬೇಕಾಗುವುದಿಲ್ಲ.

ಪಿಪಿಪಿ ವ್ಯವಸ್ಥೆಯ ತುರೀಯ ಹೇಗಿರುತ್ತದೆ ಎಂಬುದಕ್ಕೆ ಒಂದು ಉದಾಹರಣೆ ಗಮನಿಸಿ: ಇನ್ನು 10 ವರ್ಷಗಳ ಬಳಿಕ ಭಾರತದ ವಿದ್ಯುತ್ ಉತ್ಪಾದನೆ (ಜಲ, ಉಷ್ಣ, ಸೌರ, ನ್ಯೂಕ್ಲಿಯರ್ ಇತ್ಯಾದಿ ಸಮಗ್ರ), ಸರಬರಾಜು, ವಿತರಣೆ, ವಿದ್ಯುತ್ ಚಾಲಿತ ವಾಹನಗಳು, ಬ್ಯಾಟರಿ, ಚಾರ್ಜಿಂಗ್ ಕೇಂದ್ರಗಳು, ರಸ್ತೆ, ಬಂದರು, ರೈಲು, ವಿಮಾನ, ವಿಮಾನ ನಿಲ್ದಾಣ, ದಾಸ್ತಾನು ಕೇಂದ್ರಗಳು... ಹೀಗೆ, ಸರಕಾರವೊಂದು ಇಲ್ಲಿಯ ತನಕ ತಾನೇ ನಿರ್ವಹಿಸಿಕೊಂಡು ಬರುತ್ತಿದ್ದ ವ್ಯವಸ್ಥೆಗಳನ್ನೆಲ್ಲ ಭಾರತದಲ್ಲಿ ಕೇವಲ ಒಂದು ಅಥವಾ ಎರಡು ಖಾಸಗಿ ಕಾರ್ಪೊರೇಟ್‌ಗಳು ತಮ್ಮ ಹತೋಟಿಗೆ ತೆಗೆದುಕೊಂಡು ನಿರ್ವಹಿಸತೊಡಗಿದಾಗ, ಒಂದು ವೇಳೆ ಮುಂದೆ ಸರಕಾರಕ್ಕೂ-ಈ ಖಾಸಗಿ ಸಂಸ್ಥೆಗಳಿಗೂ ಅಥವಾ ನಾಗರಿಕರಿಗೂ-ಈ ಖಾಸಗಿ ಸಂಸ್ಥೆಗಳಿಗೂ ಭಿನ್ನಾಭಿಪ್ರಾಯಗಳು ಉಂಟಾಗುವ ಸನ್ನಿವೇಶ ಎದುರಾದರೆ, ಖಾಸಗಿಯವರು ಮುನಿದು ತಮ್ಮ ಕೆಲಸ ನಿಲ್ಲಿಸಿದರೆ, ಆಗ ದೇಶದ ಪರಿಸ್ಥಿತಿ ಹೇಗಿರಬಹುದು ಊಹಿಸಿಕೊಳ್ಳಿ! ಇಂತಹದೊಂದು ಸ್ಥಿತಿ ಈಗ ಹೈಪೋಥೆಟಿಕಲ್ ಅಲ್ಲ- ತೀರಾ ಸಂಭವನೀಯ!

ರಾಜ್ಯ ಸರಕಾರವು ಈಗಾಗಲೇ ತನ್ನ ‘ಬಳಕೆಯಲ್ಲಿಲ್ಲದ’ ಆಸ್ತಿಯನ್ನು ನಗದೀಕರಿಸಲು ಮತ್ತು ಮರುಬಳಕೆಗೆ ಸೊತ್ತುಗಳನ್ನು ಗುರುತಿಸಿ ಪಟ್ಟಿ ಮಾಡುವಂತೆ ಎಲ್ಲ ಸಂಬಂಧಿತ ಇಲಾಖೆಗಳಿಗೆ ಸೂಚನೆಯನ್ನು ಈ ಹೊಸ ಕಾರ್ಯನೀತಿಯ ಮೂಲಕ ನೀಡಿದೆ. ಜೊತೆಗೆ, ಈಗ 30 ವರ್ಷಗಳ ಅವಧಿಗಿರುವ ಈ ಪಿಪಿಪಿ ಗುತ್ತಿಗೆ ಅವಧಿಯನ್ನು 45 ವರ್ಷಗಳಿಗೆ ಏರಿಸುವ ಮೂಲಕ ಹೂಡಿಕೆದಾರರನ್ನು ಆಕರ್ಷಿಸುವ ಯೋಚನೆ ಮಾಡುತ್ತಿದೆ.

ವೈವಿಧ್ಯಮಯ ಗುತ್ತಿಗೆ ಒಪ್ಪಂದಗಳ ಮೂಲಕ, ಹೇಗಾದರೂ ಮಾಡಿ ಖಾಸಗಿ ಹೂಡಿಕೆಯನ್ನು ಆಕರ್ಷಿಸುವ ಈ ಪಿಪಿಪಿ ಒಪ್ಪಂದಗಳಲ್ಲಿ ಹೂಡಿಕೆ ಮಾಡುವವರೇನೂ ದೇಶಸೇವೆಗೆ ಬಂದಿರುವುದಿಲ್ಲ. ಅವರು ಹಾಕಿದ ದುಡ್ಡು ಬಡ್ಡಿ ಸಮೇತ, ಲಾಭದೊಂದಿಗೆ ವಾಪಸ್ ಬರಬೇಕೆಂದು ಬಯಸುವವರು. ಹಾಗಾಗಿ, ಖಾಸಗಿಯವರ ಯೋಜನಾ ವೆಚ್ಚಗಳು ಸರಕಾರ ನಿರ್ವಹಿಸುತ್ತಿದ್ದ ವೆಚ್ಚಗಳಿಗೆ ಹೋಲಿಸಿದರೆ ಹೆಚ್ಚಾಗಿರುವುದು ಸಹಜ. ಈ ಖಾಸಗಿ ವ್ಯವಸ್ಥೆಗಳೆಲ್ಲ ವನ್-ವೇ ಟ್ರಾಫಿಕ್‌ನಂತಿದ್ದು, ಅಲ್ಲಿ ಬಳಕೆದಾರರಿಗೆ ಹಿಂದಿರುಗಿ ಬರುವ ಅವಕಾಶ ಇರುವುದಿಲ್ಲ (ಇದನ್ನು ಹೆದ್ದಾರಿ ಟೋಲ್ ವ್ಯವಸ್ಥೆ ಮತ್ತು ಅದರಲ್ಲಿ ಸಂಭವಿಸುತ್ತಿರುವ ‘ವಿಕಾಸ’ಗಳು ಮತ್ತೆ ಮತ್ತೆ ಸಾಬೀತು ಪಡಿಸುತ್ತಿವೆ.) ಸರಕಾರದ ನಿಯಂತ್ರಣ-ಪಾರದರ್ಶಕತೆಯನ್ನು ಕೇಳಲೇ ಬೇಡಿ. ಹಿತಾಸಕ್ತಿ ಸಂಘರ್ಷಗಳು ತೀರಾ ಸಹಜ. ಪಿಪಿಪಿ ಯೋಜನೆಗಳಲ್ಲಿ ಖಾಸಗಿ ಗುರಿಗಳೇ ಆದ್ಯತೆ ಆಗಿರುವುದರಿಂದ ಅವರು ಲಾಭ ಇರುವುದನ್ನು ಮಾತ್ರ ಇಟ್ಟುಕೊಂಡು, ಲಾಭ ಇಲ್ಲದ್ದನ್ನು ನಿಧಾನ ವಿಷ ಉಣ್ಣಿಸಿ ಕೊಲ್ಲುತ್ತಾರೆ (ಹೆಚ್ಚಿನ ಜನಪರ ಯೋಜನೆಗಳು ಲಾಭದಾಯಕ ಅಲ್ಲ!). ಸರಕಾರಗಳೂ ಕೂಡ, ಖಾಸಗಿಯವರಿಗೆ ನಷ್ಟ ಆಗದಂತೆ ಅವರ ಹಿತಾಸಕ್ತಿಗಳನ್ನು ಕಾಪಾಡಲು, ವಯಬಿಲಿಟಿ ಗ್ಯಾಪ್ ಫಂಡಿಂಗ್ ಸಹಿತ ಸಿದ್ಧವಾಗಿ ನಿಂತಿದೆ. ಈ ಪ್ರತಿಯೊಂದು ಬೆಳವಣಿಗೆಗೂ, ಈಗಾಗಲೇ ಎದುರಿರುವ ಸನ್ನಿವೇಶಗಳಿಂದ ಹತ್ತಾರು ಉದಾಹರಣೆಗಳನ್ನು ಕೊಡಬಹುದು.

ಇದೆಲ್ಲದಕ್ಕಿಂತ ಹೆಚ್ಚಾಗಿ, ಆಯ್ದ ಕ್ರೋನಿಗಳಿಗೆ ಈ ರೀತಿಯ ಗುತ್ತಿಗೆಗಳನ್ನು ವಹಿಸಿಕೊಡುವ ಪ್ರಕ್ರಿಯೆಯು ಆರ್ಥಿಕ ಅಸಮಾನತೆಯನ್ನು ಇನ್ನಷ್ಟು ಹೆಚ್ಚಿಸಲಿದೆ. ಸಮಸಮಾಜದ ಕನಸಿನ ಬಗ್ಗೆ ಮತ್ತೆ ಮತ್ತೆ ಹೇಳುವ ಸಿದ್ದರಾಮಯ್ಯ ಸರಕಾರಕ್ಕೆ ಪಿಪಿಪಿಯ ಈ ಮಗ್ಗುಲು ಯಾಕೆ ಕಾಣಿಸಲಿಲ್ಲವೋ ಗೊತ್ತಾಗಲಿಲ್ಲ. ಪ್ರತೀ ಐದು-ಹತ್ತು ವರ್ಷಗಳಿಗೆಲ್ಲ ತಂತ್ರಜ್ಞಾನ, ಸಾಮಾಜಿಕ ಸಂರಚನೆಗಳೆಲ್ಲ ಆಮೂಲಾಗ್ರವಾಗಿ ಬದಲಾಗುತ್ತಿರುವ ಈ ಕಾಲಘಟ್ಟದಲ್ಲಿ, 40-45ವರ್ಷಗಳ ಅವಧಿಯ ಈ ಪಿಪಿಪಿ ಗುತ್ತಿಗೆ ಒಪ್ಪಂದಗಳು - ರಾಜಕೀಯ ಬದಲಾವಣೆಗಳಾದಾಗ, ಕಾನೂನು ಸಮಸ್ಯೆಗಳು ತಲೆದೋರಿದಾಗ ಹೇಗೆ ಅವನ್ನು ಮುಖಾಮುಖಿ ಆಗಲಿವೆ ಎಂಬುದು ಇನ್ನೂ ಅಸ್ಪಷ್ಟವಿದೆ. ಮೂಲಸೌಕರ್ಯಗಳು ಸುಧಾರಣೆ ಆಗಬೇಕು, ಹೌದು. ಆದರೆ, ಅವನ್ನೆಲ್ಲ ಖಾಸಗಿಯವರಿಗೆ ಹರಿವಾಣದಲ್ಲಿಟ್ಟು ಅರ್ಪಿಸಿದರೆ ಮಾತ್ರ ಅವು ಸುಧಾರಣೆ ಆಗುತ್ತವೆ ಎಂಬುದು ಮೂಢನಂಬಿಕೆ.

ಕೇಂದ್ರದಲ್ಲಿನ ಖಾಸಗೀಕರಣ ನೀತಿಯನ್ನು ಪ್ರತೀ ಹಂತದಲ್ಲೂ ಟೀಕಿಸುವ ಪ್ರತಿಪಕ್ಷಗಳು, ತಮ್ಮದೇ ಸರಕಾರಗಳು ಇರುವಲ್ಲಿಯಾದರೂ ಅದಕ್ಕೆ ಪರ್ಯಾಯ ಏನೆಂಬುದನ್ನು ಯೋಚಿಸಬೇಕು. ಅದಿಲ್ಲವಾದರೆ, ಅವರಿಗೂ ಇವರಿಗೂ ವ್ಯತ್ಯಾಸ ಏನೂ ಇಲ್ಲ. ಇಬ್ಬರದೂ ಬಾಯುಪಚಾರ ಮಾತ್ರ ಆಗಿ ಉಳಿಯುತ್ತದೆ. ಉದಾರೀಕರಣದ ಹಾದಿಯಲ್ಲಿ 35 ವರ್ಷ ಸಾಗಿ ಬಂದ ಬಳಿಕ, ಈಗ ಹಿಂದಿರುಗಿ ಹೋಗಿ ಬೇರೆ ಹಾದಿ ಹಿಡಿಯುವುದು ಕಾರ್ಯಸಾಧು ಅಲ್ಲ. ಕರ್ನಾಟಕಕ್ಕೆ ಸಹಕಾರ ಚಳವಳಿಯ ಬಲುದೊಡ್ಡ ಇತಿಹಾಸ ಇದೆ, ಯಶಸ್ವೀ ಮಾಡೆಲ್‌ಗಳೂ ಇವೆ. ಅವು ನಿಜ ಅರ್ಥದಲ್ಲಿ ಜನ ಭಾಗೀದಾರಿಕೆಯ ಯಶಸ್ಸುಗಳು. ಉದಾರೀಕರಣದ ಅರ್ಥ ಕೇವಲ ಕಾರ್ಪೊರೇಟೀಕರಣ ಅಲ್ಲ. ಸಹಕಾರಿ ಚಳವಳಿಯಲ್ಲಿ ಬದಲಾದ ಕಾಲಘಟ್ಟಕ್ಕೆ ತಕ್ಕಂತೆ ಅಗತ್ಯ ಮಾರ್ಪಾಡುಗಳನ್ನು ಮಾಡಿಕೊಂಡು, ನಿಜ ಅರ್ಥದಲ್ಲಿ ಜನಭಾಗೀದಾರಿಕೆ ಇರುವಂತಹ ಮೂಲಸೌಕರ್ಯ ಸುಧಾರಣೆಯ ಚಳವಳಿಗೆ ನಾಂದಿ ಹಾಡುವ ಮೂಲಕ ಉದಾರೀಕರಣಕ್ಕೆ ಹೊಸ ವ್ಯಾಖ್ಯಾನ ಬರೆಯುವುದಕ್ಕೆ ಇದೊಂದು ಸದವಕಾಶ. ಕರ್ನಾಟಕ ಸರಕಾರ ಆ ನಿಟ್ಟಿನಲ್ಲಿ ಯೋಚಿಸಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ರಾಜಾರಾಂ ತಲ್ಲೂರು

contributor

Similar News