‘ಬಾಟಲ್ ನೆಕ್’ ಎಲ್ಲಿದೆಯೋ ಅಲ್ಲಿದೆ ಕೋಚಿಂಗ್ ವ್ಯವಹಾರ!

ಇರುವ ಸೀಮಿತ ಅವಕಾಶಗಳಲ್ಲಿ ಒಳಗೊಳ್ಳುವಿಕೆಯ ಕೊರತೆ, ಲಾಭದ ದೃಷ್ಟಿಯ ಕಾರಣದಿಂದಾಗಿ ಬಡವರು-ಸಿರಿವಂತರ ನಡುವೆ ತಾರತಮ್ಯ ಮತ್ತು ಎಳವೆಯಲ್ಲೇ ಕೌಶಲಗಳನ್ನು ಗುರುತಿಸಿ ಒರಿಯಂಟ್ ಮಾಡುವ ವ್ಯವಸ್ಥೆ ಇಲ್ಲದಿರುವುದು ಶಿಕ್ಷಣ ಕ್ಷೇತ್ರದಲ್ಲಿನ ಮೂಲಭೂತ ಕೊರತೆಗಳು. ಸೀಮಿತ ವ್ಯವಸ್ಥೆಗಳಿರುವಾಗ ಇಂತಹ ತಳಮಟ್ಟದ ಸುಧಾರಣೆಗಳು ಇಲ್ಲದಿದ್ದರೆ, ಅನಗತ್ಯ ಬಾಟಲ್‌ನೆಕ್‌ಗಳು ರೂಪುಗೊಳ್ಳುವುದು ಮತ್ತು ಆ ಬಾಟಲ್‌ನೆಕ್‌ಗಳನ್ನು ದಾಟುವ ವ್ಯವಹಾರದಲ್ಲಿ ಕಾಸು ಗೋರುವವರು ಅವಕಾಶಗಳಿಗೆ ಹುಡುಕಾಡುವುದನ್ನು ತಪ್ಪಿಸುವುದು ಅಸಾಧ್ಯ.;

Update: 2025-02-22 09:45 IST
‘ಬಾಟಲ್ ನೆಕ್’ ಎಲ್ಲಿದೆಯೋ ಅಲ್ಲಿದೆ ಕೋಚಿಂಗ್ ವ್ಯವಹಾರ!
  • whatsapp icon

ನೀವು ಸೂಕ್ಷ್ಮವಾಗಿ ಗಮನಿಸಿದರೆ, ಭಾರತದಲ್ಲಿ ಖಾಸಗೀಕರಣ ಪ್ರಕ್ರಿಯೆಗೆ ಒಂದು ಪ್ಯಾಟರ್ನ್ ಇದೆ. ಮೊದಲಿಗೆ ಏನೋ ಅದ್ಭುತವಾದದ್ದು ಘಟಿಸಲಿದೆ ಎಂಬ ಕನಸು ಹುಟ್ಟಿಸುವುದು, ಆ ಬಳಿಕ ಹಾಲಿ ಇರುವ ವ್ಯವಸ್ಥೆಯನ್ನು ಸಂಪೂರ್ಣ ಕೆಡಿಸಿ, ಅದರ ಮೇಲೆ ಸಾರ್ವಜನಿಕ ರೇಜಿಗೆ ಹುಟ್ಟುವಂತೆ ಮಾಡಿ, ಅದಕ್ಕೆ ಖಾಸಗೀಕರಣವೊಂದೇ ಪರಿಹಾರ ಎಂಬ ನಂಬಿಕೆ ಹುಟ್ಟಿಸುವುದು ಮತ್ತು ಖಾಸಗೀಕರಣವನ್ನು ಸಾಧಿಸಿದ ಬಳಿಕ, ಅಲ್ಲಿಂದ ಸಲೀಸು ಸುಲಿಗೆಗೆ ಹಾದಿ ತೆರೆಯುವುದು-ಕಳೆದ 35 ವರ್ಷಗಳಲ್ಲಿ ರಸ್ತೆ ಇರಲಿ, ವಿದ್ಯುತ್ ಇರಲಿ, ಬ್ಯಾಂಕಿಂಗ್ ಇರಲಿ, ವಿಮೆ ಇರಲಿ... ಎಲ್ಲದರದೂ ಇದೇ ಕಥೆ. ಶಿಕ್ಷಣ ರಂಗದಲ್ಲಿ ಖಾಸಗೀಕರಣ ಮತ್ತು ಅದರಿಂದ ಉಂಟಾಗಿರುವ ಬಾಟಲ್‌ನೆಕ್‌ಗಳು ಹಾಗೂ ಈ ಬಾಟಲ್‌ನೆಕ್ ಬಳಸಿಕೊಂಡು ನಡೆದಿರುವ ಸುಲಿಗೆಗಳತ್ತ ಕಣ್ಣಾಡಿಸಿದರೆ, ಇಲ್ಲೂ ಅದೇ ಪ್ಯಾಟರ್ನ್ ಕಾಣಿಸತೊಡಗುತ್ತದೆ.

ಮೊನ್ನೆ ಸಂಸತ್ತಿನಲ್ಲಿ ಪ್ರಶ್ನೆಯೊಂದಕ್ಕೆ (ಚುಕ್ಕೆರಹಿತ ಪ್ರಶ್ನೆ 1,104; ದಿನಾಂಕ 10-02-2025) ಉತ್ತರಿಸಿದ ಭಾರತ ಸರಕಾರದ ಶಿಕ್ಷಣ ಖಾತೆಯ ರಾಜ್ಯಸಚಿವ ಡಾ. ಸುಕಾಂತಾ ಮಜುಂದಾರ್ ಅವರು, ದೇಶದಾದ್ಯಂತ ಖಾಸಗಿ ಕೋಚಿಂಗ್ ಸಂಸ್ಥೆಗಳು ಯಾವುದೇ ನಿಯಂತ್ರಣ ಇಲ್ಲದೇ ವ್ಯವಹರಿಸುತ್ತಿದ್ದು, ವಿದ್ಯಾರ್ಥಿಗಳಿಂದ ಮನಬಂದಂತೆ ಶುಲ್ಕ ವಸೂಲಿ ಮಾಡುತ್ತಿವೆ. ಸುಳ್ಳು ಭರವಸೆಗಳನ್ನು ನೀಡಿ, ಪರೀಕ್ಷೆಗಳಲ್ಲಿ ಕಳ್ಳಹಾದಿಯನ್ನು ತೆರೆದುಕೊಡುತ್ತಿವೆ. ಇವುಗಳನ್ನೆಲ್ಲ ತಪ್ಪಿಸಲು 16.01.2024ರಂದು ಕೋಚಿಂಗ್ ಸೆಂಟರ್‌ಗಳ ನಿಯಂತ್ರಣಕ್ಕೆ ಮಾರ್ಗದರ್ಶಿ ಸೂತ್ರಗಳನ್ನು ಪ್ರಕಟಿಸಿರುವುದಾಗಿ ತಿಳಿಸಿದ್ದಾರೆ. ಶಿಕ್ಷಣವು ಸಂವಿಧಾನದ ಜಂಟಿಪಟ್ಟಿಯ ವಿಷಯವಾಗಿರುವುದರಿಂದ, ಎಲ್ಲ ರಾಜ್ಯಗಳೂ ಈ ನಿಟ್ಟಿನಲ್ಲಿ ಅಗತ್ಯವಿರುವ ಕಾನೂನಿನ ಚೌಕಟ್ಟನ್ನು ರೂಪಿಸಬೇಕು ಎಂದು ಅವರು ಸಂಸತ್ತಿನಲ್ಲಿ ಹೇಳಿದ್ದರು.

140 ಕೋಟಿ ಜನಸಂಖ್ಯೆ ಇರುವ ಭಾರತದಲ್ಲಿ, ಸಹಜವಾಗಿಯೇ ಶಿಕ್ಷಣದ, ಉದ್ಯೋಗದ ಅವಕಾಶಗಳು ಸೀಮಿತ. ಹಾಗಾಗಿ ಪ್ರತಿಯೊಂದೂ ಕ್ಷೇತ್ರದಲ್ಲಿನ ಸೀಮಿತ ಅವಕಾಶಗಳಿಗೆ ದೊಡ್ಡ ಸಂದಣಿಯ ಸ್ಪರ್ಧೆ ಏರ್ಪಡುವುದು, ಬಾಟಲ್‌ನೆಕ್ ಉಂಟಾಗುವುದು ಸಹಜ. ಇಂತಹ ಬಾಟಲ್‌ನೆಕ್‌ಗಳನ್ನು ದಾಟುವುದಕ್ಕೆ ಹೆಚ್ಚುವರಿ ಸಾಮರ್ಥ್ಯ ಗಳಿಸಿಕೊಳ್ಳುವುದನ್ನು ಬಾಲ್ಯದಿಂದಲೇ ಅಭ್ಯಾಸ ಮಾಡಿಕೊಂಡ ಎರಡು ತಲೆಮಾರುಗಳೇ ಈಗ ನಮ್ಮ ಮುಂದಿವೆ. ಪೂರ್ವಪ್ರಾಥಮಿಕ ಶಿಕ್ಷಣದ ಹಂತದಲ್ಲೇ ಟ್ಯೂಷನ್ ಕ್ಲಾಸುಗಳ/ಮನೆಪಾಠಗಳ ಅಭ್ಯಾಸ ಆಗಿರುವವರಿಗೆ ಸಹಜವಾಗಿಯೇ ಉನ್ನತ ಶಿಕ್ಷಣದ ಹೊತ್ತಿಗೆ ‘ಕೋಚಿಂಗ್’ ಊರುಗೋಲು ಅಗತ್ಯ ಆಗಿರುತ್ತದೆ.

ಆರಂಭದಲ್ಲಿ ಯುಪಿಎಸ್‌ಸಿ ನಡೆಸುವ ಭಾರತೀಯ ಆಡಳಿತಸೇವೆ (ಐಎಎಸ್, ಐಪಿಎಸ್ ಇತ್ಯಾದಿ) ಪರೀಕ್ಷೆಗಳಿಗೆ ‘ಕೋಚಿಂಗ್ ಸೆಂಟರ್’ಗಳು ಬ್ರ್ಯಾಂಡೆಡ್ ವ್ಯವಹಾರವಾಗಿ ರೂಪುಗೊಂಡಿದ್ದವು. ಕ್ರಮೇಣ ಶಿಕ್ಷಣಕ್ಷೇತ್ರದಲ್ಲಿ ಉದಾರೀಕರಣ, ವಾಣಿಜ್ಯೀಕರಣಗಳು ಅಬ್ಬರಿಸತೊಡಗಿದಂತೆ, ಸ್ಪರ್ಧಾತ್ಮಕ ಪರೀಕ್ಷೆಗಳು ಮುನ್ನೆಲೆಗೆ ಬರತೊಡಗಿದಂತೆ, ವೈದ್ಯಕೀಯ-ಇಂಜಿನಿಯರಿಂಗ್ ಇತ್ಯಾದಿ ಆಯಕಟ್ಟಿನ ಜಾಗಗಳನ್ನು ಹಿಡಿಯುವುದಕ್ಕೆ ‘ಕೋಚಿಂಗ್’ ಅನಿವಾರ್ಯ ಎನ್ನಿಸುವ ಸ್ಥಿತಿಯನ್ನು ಹುಟ್ಟುಹಾಕಲಾಯಿತು ಮತ್ತು ಅದನ್ನೊಂದು ಬೃಹತ್ ಮಾರುಕಟ್ಟೆಯನ್ನಾಗಿ ಬೆಳೆಸಲಾಯಿತು. ಗಮನಿಸಬೇಕಾದ ಸಂಗತಿ ಒಂದಿದೆ. ಅದೇನೆಂದರೆ, ಶಿಕ್ಷಣ ಕ್ಷೇತ್ರದಲ್ಲಿ ಈ ಖಾಸಗೀಕರಣದ ನಾಂದಿ ಹಾಡಿದ್ದು ‘ಬಿರ್ಲಾ-ಅಂಬಾನಿ ವರದಿ!’ ಉದ್ಯಮಪತಿಗಳಾದ ಕುಮಾರಮಂಗಲಂ ಬಿರ್ಲಾ ಮತ್ತು ರಿಲಯನ್ಸ್ ಬಳಗದ ಮಾಜಿ ಸ್ಟಾರ್ ಅನಿಲ್ ಅಂಬಾನಿ ಸಲ್ಲಿಸಿದ ವರದಿ (2000)!

ಭಾರತದಲ್ಲಿ ಇಂದು ಕೋಚಿಂಗ್ 58,000 ಕೋಟಿ ರೂ.ಗಳ ಮಾರುಕಟ್ಟೆ ಆಗಿದ್ದು, 2028ರ ಹೊತ್ತಿಗೆ ಇದು 1.3ಲಕ್ಷ ಕೋಟಿ ರೂ.ಗಳ ಮಾರುಕಟ್ಟೆ ಆಗಿ ಬೆಳೆದು ನಿಲ್ಲಲಿದೆ ಎಂದು ಪರಿಣತರು ಹೇಳುತ್ತಿದ್ದಾರೆ. ಕೇವಲ ಐದು ವರ್ಷಗಳ ಹಿಂದೆ (2019-20), ಕೋಚಿಂಗ್‌ನಿಂದ ಸರಕಾರಕ್ಕೆ ಬರುತ್ತಿದ್ದ ಜಿಎಸ್‌ಟಿ ಆದಾಯ 2,240 ಕೋಟಿ ರೂ. ಈಗ (2023-24) ಅದು 5,517 ಕೋಟಿ ರೂ.ಗಳಿಗೆ ಏರಿದೆ! 2011ರಲ್ಲಿ ಹುಟ್ಟಿಕೊಂಡ ಬೈಜುಸ್ ಎಂಬ ಬೃಹತ್ ಕೋಚಿಂಗ್ ವ್ಯವಹಾರ ಸಂಸ್ಥೆ, ಏಕಾಏಕಿ ಹಬ್ಬಿ ಬೆಳೆದು, ಕಡೆಗೆ 2021ರ ಹೊತ್ತಿಗೆ ಸಿಂಗಾಪುರದಲ್ಲಿ ಪಡೆದ 30 ಕೋಟಿ ಡಾಲರ್ ಸಾಲದ ಸುಳಿಗೆ ಸಿಲುಕಿ, ಹೂಡಿಕೆದಾರರ ವಿಶ್ವಾಸ ಕಳೆದುಕೊಂಡು ಕುಸಿದದ್ದು ಇನ್ನೂ ಭಾರತದ ಮಾರುಕಟ್ಟೆಯ ಮನಸ್ಸಿನಿಂದ ಮಾಸಿಲ್ಲ.

ಇಷ್ಟೆಲ್ಲ ಕಾರುಬಾರುಗಳಿರುವ ಕೋಚಿಂಗ್ ವ್ಯವಹಾರಗಳಿಗೆ ಕಾನೂನಿನ ಕಡಿವಾಣ ಹಾಕಲು 2007 ಮತ್ತು 2010ರಲ್ಲಿ, ಸಂಸತ್ತಿನಲ್ಲಿ ಸದಸ್ಯರು ಖಾಸಗಿ ವಿಧೇಯಕಗಳನ್ನು ಮಂಡಿಸಿದ್ದರಾದರೂ, ಅದನ್ನು ಸಂಸತ್ತು ಗಂಭೀರವಾಗಿ ಪರಿಗಣಿಸಿರಲಿಲ್ಲ. 2013ರಲ್ಲಿ ಎಸ್‌ಎಫ್‌ಐ ವರ್ಸಸ್ ಭಾರತ ಸರಕಾರ (WP 456 oಜಿ 2013) ಪ್ರಕರಣದಲ್ಲಿ ಸುಪ್ರೀಂಕೋರ್ಟು ನೀಡಿದ ಆದೇಶ, ಆ ಬಳಿಕ ರೂಪುಗೊಂಡ ಅಶೋಕ್ ಮಿಶ್ರಾ ಸಮಿತಿಯ ವರದಿ ಮಾತ್ರವಲ್ಲದೇ ರೋಹಿತ್ ವೇಮುಲ ಸಾವಿನ ಸಂದರ್ಭದಲ್ಲಿ ರಚಿತವಾಗಿದ್ದ ನ್ಯಾ.ಅಶೋಕ್ ಕುಮಾರ್ ರೂಪನ್‌ವಾಲಾ ಆಯೋಗದ ಶಿಫಾರಸುಗಳು (2016 ಫೆಬ್ರವರಿ 2) ಭಾರತದಲ್ಲಿ ಕೋಚಿಂಗ್ ವ್ಯವಹಾರಗಳ ನಿಯಂತ್ರಣಕ್ಕೆ ಹಾದಿ ತೆರೆದವು. ಮುಂದೆ ಹಲವಾರು ರಾಜ್ಯಗಳು ತಮ್ಮಲ್ಲಿನ ಸನ್ನಿವೇಶಗಳನ್ನು ಆಧರಿಸಿ, ಕೋಚಿಂಗ್ ನಿಯಂತ್ರಣಕ್ಕೆ ಕಾಯ್ದೆಗಳನ್ನು ತಂದವು. ಕರ್ನಾಟಕದಲ್ಲೂ ಈಗ ಕರ್ನಾಟಕ ಟ್ಯುಟೋರಿಯಲ್ ಸಂಸ್ಥೆಗಳ (ನೋಂದಣಿ ಮತ್ತು ನಿಯಂತ್ರಣ) ನಿಯಮಗಳು- 2021 ಜಾರಿಯಲ್ಲಿದೆ. ಆದರೆ ಇವೆಲ್ಲದರಿಂದ ಕೋಚಿಂಗ್ ವ್ಯವಹಾರದ ಭರಾಟೆ ನಿಯಂತ್ರಣಕ್ಕೆ ಬಂದಿದೆಯೇ? ಎಂದರೆ ಉತ್ತರ - ಇಲ್ಲ ಎಂದೇ ಬರುತ್ತದೆ.

ಅತ್ಯಂತ ಹೆಚ್ಚಿನ ಬಾಟಲ್‌ನೆಕ್ ಇರುವ, ವೈದ್ಯಕೀಯ ಶಿಕ್ಷಣ ಕ್ಷೇತ್ರಕ್ಕೆ ಬಾಗಿಲು ತೆರೆಯುವ ನೀಟ್ ಪರೀಕ್ಷೆಗಳಿಗೆ ಸಂಬಂಧಿಸಿದಂತೆ, ಈ ಕೋಚಿಂಗ್ ಭರಾಟೆ ಬೇರೆಯದೇ ಮಜಲು ತಲುಪಿದೆ. ನೀಟ್ ಬಾಟಲ್‌ನೆಕ್ ಪಾರು ಮಾಡಿಸುವ ರಾಜಸ್ಥಾನದ ಕೋಚಿಂಗ್ ‘ಬ್ರ್ಯಾಂಡ್’ಗಳನ್ನು ಈಗ ‘ಕೋಟಾ ಫ್ಯಾಕ್ಟರಿ’ ಎಂದೇ ಕರೆಯಲಾಗುತ್ತಿದೆ. ಅಲ್ಲಿ ಕಳೆದ ಏಳೆಂಟು ವರ್ಷಗಳಲ್ಲಿ, ಕಲಿಕೆಯ ಒತ್ತಡ ತಡೆಯಲಾರದೇ ಆತ್ಮಹತ್ಯೆ ಮಾಡಿಕೊಂಡಿರುವ ಎಳೆಯ ಮಕ್ಕಳ ಸಂಖ್ಯೆ ದಂಗುಬಡಿಸುವಷ್ಟಿದೆ. ಈ ಅಕಾಡಮಿಕ್ ವರ್ಷದಲ್ಲೇ ಅಲ್ಲಿ 29ಕ್ಕೂ ಮಿಕ್ಕಿ ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿಮ್ಮ ಮಕ್ಕಳಿಗೆ ಮೆಡಿಕಲ್ ಸೀಟು ಗ್ಯಾರಂಟಿ ಮಾಡುತ್ತೇವೆ ಎಂಬ ಪೊಳ್ಳು ಭರವಸೆಗಳೊಂದಿಗೆ ಹೆತ್ತವರಿಂದ ಪ್ರತೀವರ್ಷ ಲಕ್ಷಾಂತರ ರೂಪಾಯಿಗಳನ್ನೂ, ವಿದ್ಯಾರ್ಥಿಗಳ ಬದುಕಿನ ಅಮೂಲ್ಯ ಕ್ಷಣಗಳನ್ನೂ ಕಿತ್ತುಕೊಳ್ಳುವ ಈ ನೀಟ್ ಕೋಚಿಂಗ್ ಅಂಗಡಿಗಳು, ತಮ್ಮ ಉದ್ದೇಶ ಸಾಧನೆಗೆ ಬಾನಗಡಿಗಳಿಗೂ ಹೇಸುವುದಿಲ್ಲ ಎಂಬುದು ಸ್ವತಃ ಸರಕಾರಗಳಿಗೂ ಗೊತ್ತಿದೆ. 2024ರ ನೀಟ್ ಪರೀಕ್ಷೆಯ ಗೋಲ್‌ಮಾಲ್‌ಗಳು ಸುಪ್ರೀಂಕೋರ್ಟಿಗೂ ತಲುಪಿದ್ದು, ಸಾರ್ವಜನಿಕ ಪರೀಕ್ಷೆಗಳನ್ನು ನಡೆಸುವ ಎನ್‌ಟಿಎ ವ್ಯವಸ್ಥೆಯ ಸುಧಾರಣೆಗಾಗಿ ಇಸ್ರೋ ಮಾಜಿ ಅಧ್ಯಕ್ಷ ರಾಧಾಕೃಷ್ಣನ್ ನೇತೃತ್ವದ ಉನ್ನತಮಟ್ಟದ ಸಮಿತಿಯಿಂದ ವರದಿಯನ್ನು ಭಾರತ ಸರಕಾರ ಪಡೆದಿತ್ತು. ಕಡೆಗೆ ಸಾರ್ವಜನಿಕ ಪರೀಕ್ಷೆಗಳು (ಅನ್ಯಾಯದ ಹಾದಿಗಳ ಪ್ರತಿಬಂಧ) ಕಾಯ್ದೆ 2024ನ್ನು ಜಾರಿಗೆ ತರಲಾಗಿದೆ, ಅಲ್ಲದೆ ಹೊಸ ಶಿಕ್ಷಣ ನೀತಿಯಲ್ಲಿ (ಎನ್‌ಇಪಿ2020) ಸಮೇಟಿವ್ ವಿಶ್ಲೇಷಣೆಗಳ ಬದಲು ಫಾರ್ಮೇಟಿವ್ ವಿಶ್ಲೇಷಣೆಗಳಿಗೆ ಒತ್ತು ನೀಡಲಾಗುತ್ತದೆ, ಕೋಚಿಂಗ್ ವ್ಯವಹಾರವನ್ನು ಗ್ರಾಹಕ ಸಂರಕ್ಷಣಾ ಕಾಯ್ದೆ 2019ರ ಅಡಿಯಲ್ಲಿ ತಂದು, ಬಾಯಿಗೆ ಬಂದಂತೆ ಆಶ್ವಾಸನೆ ನೀಡಿ ಜನರನ್ನು ಆಕರ್ಷಿಸುವ ಜಾಹೀರಾತುಗಳಿಗೆ ಕಡಿವಾಣ ಹಾಕಲಾಗುತ್ತಿದೆ ಎಂದು ಸರಕಾರ ಹೇಳಿಕೊಂಡಿದೆ. ಈ ಎಲ್ಲ ಸುಧಾರಣಾ ಪ್ರಯತ್ನಗಳ ಹೊರತಾಗಿಯೂ ಕೋಚಿಂಗ್ ವ್ಯವಹಾರ ನಿಯಂತ್ರಣಕ್ಕೆ ಬಂದಂತೆ ಕಾಣಿಸುತ್ತಿಲ್ಲ.

ಇದಕ್ಕೆ ಮೂಲ ಕಾರಣ, ಅಲ್ಲಲ್ಲಿ ತೇಪೆಹಾಕಿ ಸುಧಾರಿಸುವ ಸರಕಾರಿ ಪ್ರಯತ್ನಗಳು ಮತ್ತು ಶಿಕ್ಷಣಕ್ಕೆ ನೀಡಬೇಕಾದ ಮಹತ್ವ ನೀಡುವಲ್ಲಿ ಇಚ್ಛಾಶಕ್ತಿಯ ಕೊರತೆ. ಕೋಚಿಂಗ್ ವ್ಯವಹಾರದ ಮೂಲಗಳನ್ನು ಅರಸಿ ಹೊರಟರೆ, ಸರಕಾರಗಳಲ್ಲಿರುವ ಅದೇ ನೀತಿನಿರ್ಧಾರಕ ಮಂದಿಯ ಕಾಣದ ಕೈಗಳು ಕೋಚಿಂಗ್ ವ್ಯವಹಾರದಲ್ಲೂ ಕಾಣಿಸಿದರೆ ಅಚ್ಚರಿ ಬೇಡ. ಬೆಕ್ಕಿನ ಕೈಗೇ ಮೀನು ಕಾಯುವ ಕೆಲಸ ಕೊಟ್ಟಿದ್ದೇವೆ ನಾವು! ಇರುವ ಸೀಮಿತ ಅವಕಾಶಗಳಲ್ಲಿ ಒಳಗೊಳ್ಳುವಿಕೆಯ ಕೊರತೆ, ಲಾಭದ ದೃಷ್ಟಿಯ ಕಾರಣದಿಂದಾಗಿ ಬಡವರು-ಸಿರಿವಂತರ ನಡುವೆ ತಾರತಮ್ಯ ಮತ್ತು ಎಳವೆಯಲ್ಲೇ ಕೌಶಲಗಳನ್ನು ಗುರುತಿಸಿ ಒರಿಯಂಟ್ ಮಾಡುವ ವ್ಯವಸ್ಥೆ ಇಲ್ಲದಿರುವುದು ಶಿಕ್ಷಣ ಕ್ಷೇತ್ರದಲ್ಲಿನ ಮೂಲಭೂತ ಕೊರತೆಗಳು. ಸೀಮಿತ ವ್ಯವಸ್ಥೆಗಳಿರುವಾಗ ಇಂತಹ ತಳಮಟ್ಟದ ಸುಧಾರಣೆಗಳು ಇಲ್ಲದಿದ್ದರೆ, ಅನಗತ್ಯ ಬಾಟಲ್‌ನೆಕ್‌ಗಳು ರೂಪುಗೊಳ್ಳುವುದು ಮತ್ತು ಆ ಬಾಟಲ್‌ನೆಕ್‌ಗಳನ್ನು ದಾಟುವ ವ್ಯವಹಾರದಲ್ಲಿ ಕಾಸು ಗೋರುವವರು ಅವಕಾಶಗಳಿಗೆ ಹುಡುಕಾಡುವುದನ್ನು ತಪ್ಪಿಸುವುದು ಅಸಾಧ್ಯ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ರಾಜಾರಾಂ ತಲ್ಲೂರು

contributor

Similar News