ಸಾಬರಮತಿ: ರಿವರ್-ಫ್ರಂಟ್; ಗಾಂಧಿ-ಬ್ಯಾಕ್
ನ್ಯಾಯಾಲಯಗಳು ತನ್ನ ಎದುರಿರುವ ಕಾಗದಪತ್ರಗಳನ್ನಷ್ಟೇ ಗಮನಿಸುತ್ತವೆ. ಅಲ್ಲಿ ಭಾವನೆಗಳಿಗೆ, ನಂಬಿಕೆಗಳಿಗೆ ಬೆಲೆ ಇಲ್ಲ. ಸುಪ್ರೀಂಕೋರ್ಟು ಅದನ್ನೇ ಈ ಪ್ರಕರಣದಲ್ಲಿ ಹೇಳಿದೆ. ಈಗ ನ್ಯಾಯಾಂಗದ ಅಡ್ಡಿಗಳೂ ಇಲ್ಲದಿರುವುದರಿಂದ ಯೋಜನೆ ಸಲೀಸಾಗಿ ಮುಂದುವರಿಯಬಹುದು. ಈಗ ಪ್ರಶ್ನೆ ಇರುವುದು, ಒಂದು ವೇಳೆ ಗಾಂಧಿ ತತ್ವ, ಆಶಯಗಳಿಗೆ ವಿರುದ್ಧವಾಗಿ ‘ಶುದ್ಧ ವಾಣಿಜ್ಯ ಉದ್ದೇಶದ’ ಸಾಬರಮತಿಯೊಂದು ಪುನರುತ್ಥಾನಗೊಂಡರೆ, ದೇಶದ ನಂಬಿಕೆಗೆ, ಅಂತಃಸತ್ವಕ್ಕೆ ಅದು ತರಲಿರುವ ಶಾಶ್ವತ ಹಾನಿಯನ್ನು ಸರಿಪಡಿಸುವುದು ಸಾಧ್ಯವಿದೆಯೇ?;

‘‘ತನ್ನ ಪರಂಪರೆಯನ್ನು ಉಳಿಸಿಕೊಳ್ಳಲಾಗದ ಒಂದು ದೇಶ ತನ್ನ ಭವಿಷ್ಯವನ್ನೂ ಗಳಿಸಿಕೊಳ್ಳದು. ಬಾಪೂ ಅವರ ಸಾಬರಮತಿ ಆಶ್ರಮ ಕೇವಲ ದೇಶದ್ದು ಮಾತ್ರವಲ್ಲ, ಇಡೀ ಮಾನವಕುಲದ ಪರಂಪರೆಯ ಭಾಗ’’.
ಈ ಮಾತನ್ನು ಹೇಳಿದವರು ಭಾರತದ ಪ್ರಧಾನಿ ನರೇಂದ್ರ ಮೋದಿ. ಮಾರ್ಚ್ 12, 2024ರಂದು ಮಹಾತ್ಮಾ ಗಾಂಧಿ ಅವರ ಸಾಬರಮತಿ ಆಶ್ರಮಕ್ಕೆ ಭೇಟಿ ನೀಡಿ ಹೇಳಿದ ಮಾತುಗಳಿವು. ಸಂದರ್ಭ: ಜೀರ್ಣೋದ್ಧಾರಗೊಂಡ ಕೊಚ್ರಾಬ್ ಆಶ್ರಮದ ಉದ್ಘಾಟನೆ ಮತ್ತು ಗಾಂಧಿ ಆಶ್ರಮ ಮೆಮೋರಿಯಲ್‌ನ ಮಾಸ್ಟರ್ ಪ್ಲಾನ್ ಬಿಡುಗಡೆ. (ಈ ಕೊಚ್ರಾಬ್ ಆಶ್ರಮ, ಗಾಂಧಿಯವರು ದ. ಆಫ್ರಿಕಾದಿಂದ 1915ರಲ್ಲಿ ಹಿಂದಿರುಗಿದ ಬಳಿಕ, 1917ರಲ್ಲಿ ಸಾಬರಮತಿ ನದಿ ದಂಡೆಗೆ ಬಂದು ನೆಲೆಸುವ ತನಕ ತಂಗಿದ್ದ ಆಶ್ರಮ).
ಈಗ ಹೊಸ ಬೆಳವಣಿಗೆ ಏನೆಂದರೆ, ಈ ಆಶ್ರಮವನ್ನು ಮನಬಂದಂತೆ ಜೀರ್ಣೋದ್ಧಾರಗೊಳಿಸುವ ಯೋಜನೆಯನ್ನು ಕೈಬಿಟ್ಟು ಮಹಾತ್ಮಾ ಗಾಂಧಿಯವರ ಆಶಯದಂತೆ ಕಾರ್ಯಾಚರಿಸಬೇಕು ಎಂದು ಅವರ ಮರಿಮೊಮ್ಮಗ ತುಷಾರ್ ಗಾಂಧಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಮೊನ್ನೆ ಸೋಮವಾರ ಎಪ್ರಿಲ್ ಒಂದರಂದು, ಭಾರತದ ಸುಪ್ರೀಂಕೋರ್ಟು ತಿರಸ್ಕರಿಸಿದೆ. ನ್ಯಾ. ಎಂ.ಎಂ. ಸುಂದರೇಶ್ ಮತ್ತು ನ್ಯಾ. ರಾಜೇಶ್ ಬಿಂದಾಲ್ ಅವರ ನ್ಯಾಯಪೀಠವು ಈಗಾಗಲೇ ಗುಜರಾತ್ ಸರಕಾರವು ಈ ಜೀರ್ಣೋದ್ಧಾರ ಯೋಜನೆಯು ಗಾಂಧಿ ತತ್ವಗಳಿಗೆ ಅನುಸಾರವಾಗಿ ನಡೆಯಲಿದೆ ಎಂದು ಅಫಿಡವಿಟ್ ಸಲ್ಲಿಸಿರುವುದನ್ನು ಅನುಲಕ್ಷಿಸಿ, ಒಂದು ವೇಳೆ ಅದರ ಪಾಲನೆ ಆಗದಿದ್ದಲ್ಲಿ ನ್ಯಾಯಾಲಯಕ್ಕೆ ಹೋಗಬಹುದು ಎಂದು ಅರ್ಜಿದಾರರಿಗೆ ಸೂಚಿಸಿದೆ.
ಯೋಜನೆಯ ಹಿನ್ನೆಲೆ
ದೇಶದಲ್ಲಿ ಪ್ರತಿಯೊಂದನ್ನೂ ತಮ್ಮ ಮೂಗಿನ ನೇರಕ್ಕೆ ಬದಲಾಯಿಸುವ ಪಣ ತೊಟ್ಟಿರುವ ಹಾಲಿ ಭಾರತ ಸರಕಾರವು ‘ಸಾಬರಮತಿ ರಿವರ್‌ಫ್ರಂಟ್’ ಎಂದು ಕರೆಯಲಾಗುವ ‘ಗಾಂಧಿ ಆಶ್ರಮ ಸ್ಮಾರಕ ಮತ್ತು ಪರಿಸರ ಅಭಿವೃದ್ಧಿ ಯೋಜನೆ’ ಎಂಬ 1,246 ಕೋಟಿ ರೂ.ಗಳ ಯೋಜನೆಯ ಕುರಿತು ಚಿಂತನೆ ಆರಂಭಿಸಿದ್ದು 2019ರಲ್ಲೇ. ಗುಜರಾತ್ ಸಂಪುಟ ಮಾರ್ಚ್ 05, 2021ರಂದು ಈ ಬಗ್ಗೆ ನಿರ್ಣಯ ಸ್ವೀಕರಿಸಿತ್ತು. ಭಾರತ ಸರಕಾರ-ಗುಜರಾತ್ ಸರಕಾರಗಳ ಜಂಟೀ ಯೋಜನೆ ಇದು.
ಈ ಯೋಜನೆಯ ನಿರ್ವಹಣೆಯನ್ನು ಇಲ್ಲಿಯ ತನಕ ಗಾಂಧಿ ಆಶ್ರಮದ ನಿರ್ವಹಣೆ ಮಾಡುತ್ತಿದ್ದ ಸಾಬರಮತಿ ಆಶ್ರಮ್ ಪ್ರಿಸರ್ವೇಶನ್ ಆಂಡ್ ಮೆಮೋರಿಯಲ್ ಟ್ರಸ್ಟ್ (ಎಸ್‌ಎಪಿಎಮ್‌ಟಿ) ಕೈಯಿಂದ ಕಸಿದು, ಹೊಸದಾಗಿ ರೂಪುಗೊಂಡ ಮಹಾತ್ಮಾಗಾಂಧಿ ಸಾಬರಮತಿ ಆಶ್ರಮ್ ಮೆಮೋರಿಯಲ್ ಟ್ರಸ್ಟ್ (ಎಂಜಿಎಸ್‌ಎಎಂಟಿ)ಗೆ ವರ್ಗಾಯಿಸಲಾಗಿದೆ. ಈ ಹಿಂದೆ 120 ಎಕರೆ ವಿಸ್ತಾರವಾಗಿದ್ದ ಈ ಆಶ್ರಮದಲ್ಲಿ ಈಗ ಲೋಕಮುಖಕ್ಕೆ ಉಳಿದಿರುವುದು ಕೇವಲ 5 ಎಕರೆ ಮಾತ್ರ. ಈಗ ಹೊಸ ಯೋಜನೆಯ ಪ್ರಕಾರ, ಇಡಿಯ ರಿವರ್‌ಫ್ರಂಟ್ ಯೋಜನೆಗೆ 322 ಎಕರೆ ಜಾಗ ಗೊತ್ತು ಮಾಡಲಾಗಿದೆ, ಅದರಲ್ಲಿ 55 ಎಕರೆ ಭಾಗದಲ್ಲಿ ಆಶ್ರಮ ಬರಲಿದೆ.
ಆಶ್ರಮದಲ್ಲಿ ಈಗ ಉಳಿದಿರುವ 36 ಮನೆಗಳಲ್ಲಿ, ಗಾಂಧಿ-ಕಸ್ತೂರ್ಬಾ ಅವರು 1917ರಿಂದ 1930ರ ತನಕ 13 ವರ್ಷ ಜೀವಿಸಿದ್ದ ‘ಹೃದಯ ಕುಂಜ’ ಮನೆ ಸೇರಿದಂತೆ 20ನ್ನು ಹಾಗೆಯೇ ಸಂರಕ್ಷಿಸಲಾಗುತ್ತದೆ; 13ನ್ನು ಜೀರ್ಣೋದ್ಧಾರ ಮಾಡಲಾಗುತ್ತದೆ ಹಾಗೂ 3ನ್ನು ಪುನಃ ನಿರ್ಮಿಸಲಾಗುತ್ತದೆ ಎಂದು ಹೇಳಲಾಗಿದೆ. ಆದರೆ ಈ ಯೋಜನೆ ಇಷ್ಟಕ್ಕೇ ಮುಗಿಯುವುದಿಲ್ಲ. ಆ 322 ಎಕರೆ ಜಾಗದಲ್ಲಿ ಮಕ್ಕಳ ಪಾರ್ಕ್, ಅಮ್ಯೂಸ್‌ಮೆಂಟ್ ಪಾರ್ಕ್, ನದೀ ತಟದ ವಿಹಾರಪಥ, ಪಾರ್ಕ್, ಬೋಟಿಂಗ್ ಸೆಂಟರ್, ಮಾರುಕಟ್ಟೆ, ಕ್ರೀಡಾಕೇಂದ್ರ, ಕಾರ್ಯಕ್ರಮ ಮೈದಾನ, ಕ್ರೀಡಾ ಮೈದಾನ, ನಗರಾರಣ್ಯ ಇತ್ಯಾದಿಗಳೆಲ್ಲ ತುಂಬಿ ತುಳುಕಲಿವೆ!
ಆ ಜಾಗದಲ್ಲಿ, ಈ ಹಿಂದೆ ಸಾಬರಮತಿ ಹರಿಜನ ಆಶ್ರಮ ಟ್ರಸ್ಟ್, ಆಶ್ರಮ ಗೋಶಾಲೆ, ಖಾದಿ ಗ್ರಾಮೋದ್ಯೋಗ ಮಂಡಳಿ, ಖಾದಿ ಪ್ರಯೋಗ ಸಮಿತಿ, ಗುಜರಾತ್ ಹರಿಜನ ಸೇವಕ್ ಸಂಘ- ಹೀಗೆ ಗಾಂಧೀಜಿಯವರ ಸೇವಾಕಾರ್ಯಗಳನ್ನು ಮುಂದುವರಿಸಿಕೊಂಡು ಬಂದಿದ್ದ ಹಲವು ಟ್ರಸ್ಟ್ ಗಳು, ಸಂಸ್ಥೆಗಳು ಇದ್ದವು ಈಗ ಅವನ್ನೆಲ್ಲ ಅಲ್ಲಿಂದ ಸ್ಥಳಾಂತರಿಸಲಾಗಿದೆ. 200ಕ್ಕೂ ಮಿಕ್ಕಿ ಕಟ್ಟಡಗಳನ್ನು ನೆಲಸಮ ಮಾಡಲಾಗಿದೆ. ಗಾಂಧಿ ಆಶ್ರಮವಾಸಿಗಳ ಪೀಳಿಗೆಯವರು ಸುಮಾರು 301 ಕುಟುಂಬಗಳು ಅಲ್ಲಿ ಬದುಕಿದ್ದರು. ಅವರಲ್ಲಿ ಈಗಾಗಲೇ 280 ಕುಟುಂಬಗಳಿಗೆ ಪರ್ಯಾಯ ವಸತಿ ವ್ಯವಸ್ಥೆ ಮಾಡಲಾಗಿದೆ, ಅವರಿಗೆಲ್ಲ ಪರಿಹಾರಧನವನ್ನೂ ನೀಡಲಾಗಿದೆ ಎಂದು ಭಾರತ ಸರಕಾರ ಸಂಸತ್ತಿನಲ್ಲಿ ಹೇಳಿತ್ತು (ರಾಜ್ಯಸಭೆಯ ಚುಕ್ಕೆ ಗುರುತಿಲ್ಲದ ಪ್ರಶ್ನೆ 16, ದಿನಾಂಕ: 02-02-2023)
ಈ ಗಾಂಧಿ ಆಶ್ರಮದ ಮತ್ತು ಸಾಬರಮತಿ ರಿವರ್‌ಫ್ರಂಟ್‌ನ ಜೀರ್ಣೋದ್ಧಾರದ ಗುತ್ತಿಗೆ ಪಡೆದಿರುವುದು, ಭಾರತದ ಹಳೆಯ (1912) ಎಡ್ವಿನ್ ಲ್ಯುಟೆನ್ಸ್ ಯೋಜಿತ ಸಂಸತ್ ಭವನವನ್ನು ಸೆಂಟ್ರಲ್ ವಿಸ್ಟಾ ಯೋಜನೆಯಡಿ (2023) ಪುನರ‌್ರಚಿಸಿದ ಬಿಮಲ್ ಪಟೇಲ್ ಅವರ ‘ಎಚ್‌ಸಿಪಿ ಡಿಸೈನ್, ಪ್ಲಾನಿಂಗ್ ಆಂಡ್ ಮ್ಯಾನೇಜ್‌ಮೆಂಟ್ ಪ್ರೈವೇಟ್ ಲಿಮಿಟೆಡ್’ ಸಂಸ್ಥೆ. ಈ ಲೇಖನದ ಆರಂಭದಲ್ಲಿ ನೀಡಿರುವ ಪ್ರಧಾನಮಂತ್ರಿಗಳ ಹೇಳಿಕೆ ಬಂದದ್ದು, ಈ ರಿವರ್ ಫ್ರಂಟ್ ಯೋಜನೆ ಅನಾವರಣಗೊಂಡ 2024 ಮಾರ್ಚ್ 12ರಂದು. ಅದು ದಾಂಡೀ ಮಾರ್ಚ್‌ನ 94ನೇ ವರ್ಷಾಚರಣೆಯ ದಿನ ಕೂಡ ಹೌದು.
ಕಾನೂನು ಸಮರ
1933ರಲ್ಲಿ ಘನಶಾಮ್‌ದಾಸ್ ಬಿರ್ಲಾ ಅವರಿಗೆ ಬರೆದ ಪತ್ರವೊಂದರಲ್ಲಿ ಗಾಂಧಿ ತನ್ನ ಕಾಲದ ಬಳಿಕ ಆಶ್ರಮವನ್ನು ಹೇಗೆ ಮುನ್ನಡೆಸಬೇಕೆಂಬ ಬಗ್ಗೆ ‘ಬಯಕೆ’ ವ್ಯಕ್ತಪಡಿಸಿದ್ದರು. ಹರಿಜನ ಸೇವಕ್ ಸಂಘಕ್ಕೆ ಆಶ್ರಮ ಸೇರಬೇಕೆಂಬುದು ಅವರ ಸ್ಪಷ್ಟ ಬಯಕೆ ಆಗಿತ್ತು.
ಗಾಂಧಿ ತತ್ವಗಳಿಗೆ ಮತ್ತು ಬಯಕೆಗೆ ತದ್ವಿರುದ್ಧವಾದ ಹಾಲಿ ಸರಕಾರದ ನಿಲುವನ್ನು ಪ್ರಶ್ನಿಸಿ, ಗಾಂಧಿಯವರ ಮರಿಮೊಮ್ಮಗ ತುಷಾರ್ ಗಾಂಧಿ ಗುಜರಾತ್ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಹೈಕೋರ್ಟ್ ಅದನ್ನು 2022ರ ಸೆಪ್ಟಂಬರ್ 8ಕ್ಕೆ ನೀಡಿದ ತೀರ್ಪಿನಲ್ಲಿ ತಿರಸ್ಕರಿಸಿತ್ತು. ಈ ನಡುವೆ, 2022ರ ಎಪ್ರಿಲ್‌ನಲ್ಲಿ, ಯೋಜನೆಗೆ ಸಂಬಂಧಿಸಿ ರಾಜ್ಯ ಸಚಿವ ಸಂಪುಟದ ನಿರ್ಣಯವನ್ನು ಪ್ರಶ್ನಿಸಿ ಸುಪ್ರೀಂಕೋರ್ಟಿಗೆ ಹೋದಾಗ, ನ್ಯಾ. ಡಿ.ವೈ. ಚಂದ್ರಚೂಡ್ ಮತ್ತು ನ್ಯಾ. ಸೂರ್ಯಕಾಂತ್ ಅವರ ಪೀಠವು ಆಗಲೇ ಆ ಪ್ರಕರಣಕ್ಕೆ ಸಂಬಂಧಿಸಿ ಇದೇ ಅರ್ಜಿದಾರರ ಇನ್ನೊಂದು ಅರ್ಜಿಯನ್ನು ವಿಚಾರಣೆ ನಡೆಸುತ್ತಿರುವ ಗುಜರಾತ್ ಹೈಕೋರ್ಟಿಗೇ ಈ ಬಗ್ಗೆ ಮತ್ತೆ ಪರಿಶೀಲಿಸುವಂತೆ ಆದೇಶ ನೀಡಿ ಹಿಂದಿರುಗಿಸಿತ್ತು. ಕಡೆಗೆ, ಹೈಕೋರ್ಟು ಅರ್ಜಿದಾರರ ವಾದವನ್ನು ತಿರಸ್ಕರಿಸಿತ್ತು.
ಇದಾಗಿ ಎರಡೂವರೆ ವರ್ಷಗಳ ಬಳಿಕ (ಮೊನ್ನೆ ಸೋಮವಾರ) ಮತ್ತೊಮ್ಮೆ ತುಷಾರ್ ಗಾಂಧಿ ಸುಪ್ರೀಂ ಕೋರ್ಟಿನ ಮೆಟ್ಟಿಲೇರಿದ್ದರು. ಅದರ ತೀರ್ಪು ಕೂಡ ಈಗ ಯೋಜನೆಯ ಪರವಾಗಿಯೇ ಬಂದಿದೆ. ಹಾಗಾಗಿ, ಈಗ ಸಾಬರಮತಿ ರಿವರ್ ಪ್ರಂಟ್ ಯೋಜನೆಗೆ ಅಡ್ಡಿಗಳೆಲ್ಲ ನಿವಾರಣೆ ಆದಂತಾಗಿದೆ.
ಒಂದು ದಶಕದಿಂದೀಚೆಗೆ ಗಾಂಧಿ, ಗಾಂಧಿ ತತ್ವ ಈಗ ಮೇಲು ನೋಟಕ್ಕೆ ‘ಹಳಸಲು’ ಅನ್ನಿಸತೊಡಗಿರಬಹುದು. ಆದರೆ ಅದು ಈ ದೇಶದ ನಂಬಿಕೆಗಳ ತಳಪಾಯ, ಮೂಲಸತ್ವ. ಆದರೆ, ಗಾಂಧಿತತ್ವಕ್ಕೆ ತನ್ನ ನಿಷ್ಠೆಯ ಕುರಿತು ‘ನಂಬಿಕೆ ಕೊರತೆ’ ಅನುಭವಿಸುತ್ತಿರುವ ಮತ್ತು ಅದನ್ನು ಬಹಿರಂಗವಾಗಿ ಹೇಳುವುದಕ್ಕೂ ಹಿಂಜರಿಯದ ಸಿದ್ಧಾಂತಗಳನ್ನು ಪ್ರತಿಪಾದಿಸುವ ಸರಕಾರವೊಂದು ದೇಶದ ನಂಬಿಕೆಯ ತಳಪಾಯಕ್ಕೆ ಕೈಹಾಕಿದಾಗ ಆತಂಕಗಳೇಳುವುದು ಸಹಜ. ಅದೂ ಕೂಡ, ಅಲ್ಲಿ ಸಾಬರಮತಿ ರಿವರ್ ಫ್ರಂಟ್ ಹೆಸರಲ್ಲಿ ಗಾಂಧಿಯ ಸರಳತೆ, ಸತ್ಯಗಳ ಬದಲು ಅದ್ದೂರಿಯಾದ ‘ಮಾಯಾಲೋಕ’ವೊಂದು ಪ್ರವಾಸಿಗರ ಅನುಕೂಲಕ್ಕಾಗಿ ಸಿದ್ಧಗೊಳ್ಳಲಿದೆ ಎಂಬುದು ಸ್ಪಷ್ಟ.
ನ್ಯಾಯಾಲಯಗಳು ತನ್ನ ಎದುರಿರುವ ಕಾಗದಪತ್ರಗಳನ್ನಷ್ಟೇ ಗಮನಿಸುತ್ತವೆ. ಅಲ್ಲಿ ಭಾವನೆಗಳಿಗೆ, ನಂಬಿಕೆಗಳಿಗೆ ಬೆಲೆ ಇಲ್ಲ. ಸುಪ್ರೀಂಕೋರ್ಟು ಅದನ್ನೇ ಈ ಪ್ರಕರಣದಲ್ಲಿ ಹೇಳಿದೆ. ಈಗ ನ್ಯಾಯಾಂಗದ ಅಡ್ಡಿಗಳೂ ಇಲ್ಲದಿರುವುದರಿಂದ ಯೋಜನೆ ಸಲೀಸಾಗಿ ಮುಂದುವರಿಯಬಹುದು. ಈಗ ಪ್ರಶ್ನೆ ಇರುವುದು, ಒಂದು ವೇಳೆ ಗಾಂಧಿ ತತ್ವ, ಆಶಯಗಳಿಗೆ ವಿರುದ್ಧವಾಗಿ ‘ಶುದ್ಧ ವಾಣಿಜ್ಯ ಉದ್ದೇಶದ’ ಸಾಬರಮತಿಯೊಂದು ಪುನರುತ್ಥಾನಗೊಂಡರೆ, ದೇಶದ ನಂಬಿಕೆಗೆ, ಅಂತಃಸತ್ವಕ್ಕೆ ಅದು ತರಲಿರುವ ಶಾಶ್ವತ ಹಾನಿಯನ್ನು ಸರಿಪಡಿಸುವುದು ಸಾಧ್ಯವಿದೆಯೇ? ಹೀಗೆ ಇಂಚಿಂಚಾಗಿ ದೇಶ ಬದಲಿಸಿದರೆ ಕಡೆಗೆ ಸಂವಿಧಾನ ಕೂಡ ತನ್ನಿಂತಾನೆ ಬದಲಾಗುತ್ತದೆ ಎಂಬ ಸೈದ್ಧಾಂತಿಕ ನಂಬಿಕೆ, ಈ ಬೆಳವಣಿಗೆಗಳ ಹಿಂದೆ ಇದೆ ಅನ್ನಿಸುತ್ತದೆ.