ಅತಿ ಶ್ರೀಮಂತಿಕೆಗೆ ತೆರಿಗೆಯ ಕಡಿವಾಣ ಬೇಕು, ಮೇಡಂ

ರೂ. 10 ಕೋಟಿಗಿಂತ ಹೆಚ್ಚಿನ ಸಂಪತ್ತನ್ನು ಹೊಂದಿರುವ ಶ್ರೀಮಂತರಿಗೆ ಕನಿಷ್ಠ ಶೇ. 2-3 ಹೆಚ್ಚುವರಿ ತೆರಿಗೆ, ಕಾರ್ಪೊರೇಟ್‌ಗಳಿಗೆ 2019-20ರ ಪ್ರಮಾಣದಲ್ಲಿ ತೆರಿಗೆಯನ್ನು ವಿಧಿಸುವುದು ಮತ್ತು ಸಂಪತ್ತಿನ ತೆರಿಗೆಯನ್ನು ಪುನರಾರಂಭಿಸುವ ಸಾಧ್ಯತೆಗಳನ್ನು ಪರಿಶೀಲಿಸುವುದಕ್ಕೆ ಇದು ಸಕಾಲ. ಜೊತೆಗೆ, ತೆರಿಗೆ ಬಲೆಯನ್ನು ಇನ್ನಷ್ಟು ವಿಸ್ತರಿಸಿಕೊಳ್ಳುವುದು ಹಾಗೂ ತೆರಿಗೆ ಕಳ್ಳರನ್ನು ಪತ್ತೆ ಹಚ್ಚಿ ತೆರಿಗೆ ವಸೂಲಿ ಮಾಡುವತ್ತ ಹೆಚ್ಚಿನ ಆದ್ಯತೆ ನೀಡುವುದು ಕೂಡ ಆಗಬೇಕಿದೆ.;

Update: 2025-02-01 10:35 IST
ಅತಿ ಶ್ರೀಮಂತಿಕೆಗೆ ತೆರಿಗೆಯ ಕಡಿವಾಣ ಬೇಕು, ಮೇಡಂ
  • whatsapp icon

ಇಂದು (ಫೆಬ್ರವರಿ 01) ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸತತ 8ನೇ ಬಾರಿಗೆ ಸಂಸತ್ತಿನಲ್ಲಿ ಬಜೆಟ್ ಮಂಡನೆ ಮಾಡಲಿದ್ದು, ಅದು ಒಂದು ದಾಖಲೆ. ಆದರೆ, ಈ ಬಾರಿ ಅವರ ಹಾದಿ ಸುಗಮವಾಗಿಲ್ಲ. ಬಾಯ್ದಾರೆ ಎಷ್ಟೇ ಹೇಳಿದರೂ, ಆರ್ಥಿಕತೆ ಚೇತರಿಸಿಕೊಂಡಿಲ್ಲ. ಆರ್ಥಿಕ ಶಿಸ್ತು ಕಾಪಾಡಿಕೊಳ್ಳಲು ಹಣಕಾಸು ಕೊರತೆ-ಆದಾಯ ಕೊರತೆಗಳ ಮೇಲ್ಮಿತಿ ದಾಟದಂತೆ ಎಚ್ಚರಿಕೆಯ ಹೆಜ್ಜೆ ಇಟ್ಟುಕೊಂಡೇ ಆರ್ಥಿಕತೆಗೆ ಚೇತರಿಕೆ ನೀಡುವ ಹರಸಾಹಸದ ಸವಾಲು ಅವರ ಮುಂದಿದೆ. ಇಲ್ಲಿಯ ತನಕ ಆರ್ಥಿಕತೆ ಚೇತರಿಕೆಗೆ ನೀಡಲಾದ ಯಾವ ಔಷಧಿಗಳೂ ಪರಿಣಾಮಕಾರಿ ಅನ್ನಿಸಿಲ್ಲ. ಸರಕಾರ, ಕಳೆದ ಸಾಲಿನ ತನ್ನ ಇಕನಾಮಿಕ್ ಸರ್ವೇಯಲ್ಲಿ ಯೋಜಿಸಿಕೊಂಡಿದ್ದ ಜಿಡಿಪಿ ದರ ಶೇ. 6.5-7 ತಲುಪುವ ಬದಲು, ಶೇ. 6.4ರಲ್ಲಿ ಏದುಸಿರು ಬಿಡುತ್ತಿದೆ.

2019ರ ಹೊತ್ತಿಗೆ ನಿರುದ್ಯೋಗ, ತಗ್ಗಿದ ರಫ್ತು ಬೆಳವಣಿಗೆ ಮತ್ತಿತರ ಕಾರಣಗಳಿಂದಾಗಿ ಜಿಡಿಪಿಯು 15 ವರ್ಷಗಳಲ್ಲಿ ಅತ್ಯಂತ ಕೆಳಮಟ್ಟ ತಲುಪಿತ್ತು; ಮನೆವಾರ್ತೆಯ ಬಳಕೆಗಳು 40ವರ್ಷಗಳಲ್ಲೇ ಅತ್ಯಂತ ಕಳಪೆ ಆಗಿದ್ದವು; ನಿರುದ್ಯೋಗ 45ವರ್ಷಗಳಲ್ಲೇ ಅತ್ಯಂತ ಹೆಚ್ಚಾಗಿತ್ತು; ಬ್ಯಾಂಕ್ ಸುಸ್ತಿಸಾಲದ ಮೊತ್ತ ಭಾರತದ ಇತಿಹಾಸದಲ್ಲೇ ಅತ್ಯಂತ ಹೆಚ್ಚಿತ್ತು. ಇಂತಹದೊಂದು ಸನ್ನಿವೇಶವನ್ನು ಸುಧಾರಿಸುವ ನಿಟ್ಟಿನಲ್ಲಿ ಸರಕಾರ ಕಾರ್ಪೊರೇಟ್ ತೆರಿಗೆಗಳಲ್ಲಿ ವಿನಾಯಿತಿ ಪ್ರಕಟಿಸಿತ್ತು. ಇದು ಹಣ ಚಲಾವಣೆಗೆ ದಾರಿ ಮಾಡಿಕೊಟ್ಟು, ಆರ್ಥಿಕತೆಯನ್ನು ಚೇತರಿಸಲಿದೆ ಎಂದು ಸರಕಾರ ನಿರೀಕ್ಷಿಸಿತ್ತು. 2014ರಿಂದ 2022ರ ತನಕವೂ ಸರಕಾರಕ್ಕೆ ಮನೆವಾರ್ತೆಯ ಖರ್ಚುಗಳ ವಿನ್ಯಾಸದಲ್ಲಿ ಹಾಗೂ ವಾಣಿಜ್ಯ ವ್ಯವಹಾರಗಳಲ್ಲಿ ಚೇತರಿಕೆ ತರುವುದು ಸಾಧ್ಯ ಆಗಲಿಲ್ಲ. ಸಾಲ ತಂದೇ ಆರ್ಥಿಕತೆಯನ್ನು ಜೀವಂತ ಇರಿಸಿಕೊಳ್ಳಲು ಪ್ರಯತ್ನಿಸಲಾಗಿತ್ತು. ಇಂತಹ ಸನ್ನಿವೇಶದಲ್ಲಿಯೇ ಕೋವಿಡ್ ಕೂಡ ಬಂದೆರಗಿದ್ದು, ಸರಕಾರವನ್ನು ಆರ್ಥಿಕವಾಗಿ ಕಂಗಾಲು ಮಾಡಿತ್ತು.

ಕೋವಿಡ್‌ನಿಂದ ಸುಧಾರಿಸಿಕೊಳ್ಳುವ ಹೊತ್ತಿಗೆ, ಸರಕಾರಕ್ಕೆ ಆರ್ಥಿಕತೆ ಚೇತರಿಸಿಕೊಳ್ಳಲು ರೈಲ್ವೆ, ರಸ್ತೆ, ನಗರ ಸಾರಿಗೆ, ನೀರು, ಇಂಧನ, ರಕ್ಷಣಾ ಉತ್ಪಾದನೆಗಳಲ್ಲಿ ಹೂಡಿಕೆ ಮಾಡಬೇಕೆಂಬ ‘ಕ್ಯಾಪೆಕ್ಸ್’ ಜ್ಞಾನೋದಯ ಆಯಿತು. 2023-24ರಲ್ಲಿ 10 ಲಕ್ಷ ಕೋಟಿ ರೂ. ಮತ್ತು 2024-25ರಲ್ಲಿ 11.11ಲಕ್ಷ ಕೋಟಿ ರೂ. ಗಳನ್ನು ಇದಕ್ಕೆಂದು ಮೀಸಲಿಡಲಾಯಿತಾದರೂ, ಸರಕಾರದ ಈ ವೆಚ್ಚಗಳು ತಳಮಟ್ಟಕ್ಕೆ ಹನಿದು ಬಂದು ಆರ್ಥಿಕ ಸನ್ನಿವೇಶವನ್ನು ಸುಧಾರಿಸಲಿಲ್ಲ. ಬದಲಾಗಿ, ಅತಿ ಶ್ರೀಮಂತರು ಮತ್ತಷ್ಟು ಶ್ರೀಮಂತರಾದರು. ಆರ್ಥಿಕ ಅಸಮಾನತೆ ಚಾರಿತ್ರಿಕ ಮಟ್ಟಕ್ಕೆ ಏರಿತು. ಮನೆವಾರ್ತೆಯ ಖರ್ಚುಗಳ ವಿನ್ಯಾಸ ಸುಧಾರಿಸಿಕೊಳ್ಳಲಿಲ್ಲ. ಖಾಸಗಿ ಬಂಡವಾಳ ಹೂಡಿಕೆಗಳು ನಿರೀಕ್ಷಿತ ಪ್ರಮಾಣದಲ್ಲಿ ಆಗಲಿಲ್ಲ. ಮೇಲಾಗಿ ರಫ್ತು ದುರ್ಗಮವಾಯಿತು ಮತ್ತು ಡಾಲರ್ ಎದುರು ರೂಪಾಯಿ ದುರ್ಬಲಗೊಂಡಿತು. ಈ ಎಲ್ಲ ಬೆಳವಣಿಗೆಗಳು ಸರಕಾರಕ್ಕೆ ಆತಂಕ ತಂದಿವೆ. ತಾನು 2024-25ನೇ ಸಾಲಿಗೆ ಯೋಜಿಸಿದ್ದ 11.11ಲಕ್ಷ ಕೋಟಿ ಕ್ಯಾಪೆಕ್ಸ್ ಹೂಡಿಕೆಯಲ್ಲಿ ಅರ್ಧದಷ್ಟನ್ನೂ ಸರಕಾರ ಮಾಡದಿರುವುದು (2024 ಎಪ್ರಿಲ್-ನವೆಂಬರ್ ನಡುವೆ 5.13 ಲಕ್ಷ ಕೋಟಿ ರೂ. ಕ್ಯಾಪೆಕ್ಸ್ ಹೂಡಿಕೆ ಆಗಿದೆ ಅಂದರೆ ಬಜೆಟ್ ಅಂದಾಜಿನ ಶೇ. 46 ಮಾತ್ರ) ಈ ಎಲ್ಲ ಆತಂಕಗಳ ಕಾರಣಕ್ಕೇ. ಯಾಕೆಂದರೆ, ಇದು ಬಜೆಟ್ ಮಂಡನೆಯ ವೇಳೆ ಹಣಕಾಸು ಕೊರತೆಯಲ್ಲಿ ಆರ್ಥಿಕ ಶಿಸ್ತಿನ ಕಾನೂನಿನಲ್ಲಿ ಹೇಳಲಾಗಿರುವ ಮೇಲ್ಮಿತಿಯನ್ನು ಮೀರಬಹುದೆಂಬ ಭಯ ಸರಕಾರಕ್ಕೆ ಇರುವಂತಿದೆ.

ತಮಾಷೆ ಎಂದರೆ, ಸರಕಾರದ ‘ಪ್ರಚಾರಾಂಗಗಳು’ ಮಾತ್ರ, ತಮ್ಮ ತುತ್ತೂರಿಯನ್ನು ಇನ್ನೂ ಗರಿಷ್ಠ ಪಿಚ್‌ನಲ್ಲೇ ಇರಿಸಿಕೊಂಡಿವೆ.ಅಮೆರಿಕದ ಜಿಡಿಪಿ ಬೆಳವಣಿಗೆ ಶೇ. 2.7, ಚೀನಾದ್ದು ಶೇ. 4.9 ಇರುವಾಗ, ಭಾರತದ್ದು ಶೇ. 6.4 ಇದೆ ಎಂದು ಎದೆ-ಬೆನ್ನು ತಟ್ಟಿಕೊಳ್ಳುತ್ತಿವೆ. ಆದರೆ, ಈ ಜಿಡಿಪಿಯ ಒಟ್ಟು ಗಾತ್ರ ಅಮೆರಿಕದ್ದು 78,700 ಕೋಟಿ ಡಾಲರ್; ಚೀನಾದ್ದು 89,500 ಕೋಟಿ ಡಾಲರ್ ಮತ್ತು ಭಾರತದ್ದು ಕೇವಲ 25,600 ಕೋಟಿ ಡಾಲರ್ ಎಂಬ ವಾಸ್ತವವನ್ನು ಅವು ಮುಚ್ಚಿಟ್ಟುಕೊಳ್ಳುತ್ತಿವೆ. ಅಮೆರಿಕ ಮತ್ತು ಚೀನಾಗಳ ಗಾತ್ರದ ಜಿಡಿಪಿ ಹೊಂದಲು, ಅವರ ಆರ್ಥಿಕತೆಯ ಗಾತ್ರದ ಜೊತೆ ನಮ್ಮನ್ನು ಹೋಲಿಸಿಕೊಳ್ಳಲು, ವಿಶ್ವಗುರುಗಳಾಗಿಬಿಟ್ಟಿರುವ ನಾವು ಈಗಿರುವುದರ ಮೂರು ಪಟ್ಟು ಉತ್ಪಾದನೆ ಸಾಧಿಸಬೇಕಾಗುತ್ತದೆ!

ತೆರಿಗೆಯ ಹೊರೆಯನ್ನು ಯಾರು ಹೊರಬೇಕು?

2023-24ನೇ ಸಾಲಿನಲ್ಲಿ, ದೇಶದ 140 ಕೋಟಿ ಜನರಲ್ಲಿ ತೆರಿಗೆ ರಿಟರ್ನ್ಸ್ ಸಲ್ಲಿಸಿದವರು ಕೇವಲ 8.09 ಕೋಟಿ ಮಂದಿ. ಅವರಲ್ಲೂ, ಶೂನ್ಯ ತೆರಿಗೆಯ ಟ್ಯಾಕ್ಸ್ ರಿಟರ್ನ್ಸ್ ಸಲ್ಲಿಸಿದವರ ಪ್ರಮಾಣ 4.90 ಕೋಟಿ. ಅಂದರೆ, ನೇರ ತೆರಿಗೆ ಕಟ್ಟಿದವರ ಸಂಖ್ಯೆ ಕೇವಲ 3.19 ಕೋಟಿ. ಹಾಗೆಂದು ಉಳಿದ ಎಲ್ಲರೂ ಪರೋಕ್ಷ ತೆರಿಗೆ ಕಟ್ಟುವವರೇ. ಈಗ ತೆರಿಗೆ ಸ್ಲ್ಯಾಬ್ ಇಳಿಸಬೇಕು ಎಂದು ಮಾಧ್ಯಮಗಳು ಅಭಿಪ್ರಾಯ ಮೂಡಿಸುತ್ತಿರುವುದು ಕೇವಲ ಈ ಮೇಲುಮಧ್ಯಮ ವರ್ಗದ 2-3 ಕೋಟಿ ಜನರ ಉಪಕಾರಕ್ಕೆ! ಅದು ಭಾರತ ಅಲ್ಲ ಎಂಬುದು ನಮ್ಮ ಮಾಧ್ಯಮಗಳಿಗೆ ಇನ್ನೂ ಅರಿವಾದಂತಿಲ್ಲ!!

ಗಮನಿಸಬೇಕಾದ ಸಂಗತಿ ಎಂದರೆ, 2019ರಲ್ಲಿ ಕಾರ್ಪೊರೇಟ್ ತೆರಿಗೆ ತಗ್ಗಿಸಿಕೊಳ್ಳಲು ಯಶಸ್ವಿ ಆಗಿರುವ ಕಾರ್ಪೊರೇಟ್‌ಗಳು, ಈಗ ಸರಕಾರದಿಂದ ಕ್ಯಾಪೆಕ್ಸ್ ಹೂಡಿಕೆಯ ಗರಿಷ್ಠ ಲಾಭ ಪಡೆದಿರುವುದಲ್ಲದೇ ಪಿಎಲ್‌ಐ, ಇಎಲ್‌ಐ ಮತ್ತಿತರ ಪ್ರತ್ಯಕ್ಷ-ಪರೋಕ್ಷ ಸಬ್ಸಿಡಿಗಳು, ಸವಲತ್ತುಗಳು, ಸಸ್ತಾ ಬೆಲೆಯಲ್ಲಿ ಭೂಮಿ... ಇತ್ಯಾದಿಗಳನ್ನು ಪಡೆದು ಗಂಟುಕಟ್ಟಿಕೊಳ್ಳುತ್ತಿದ್ದಾರೆಯೇ ಹೊರತು ಹಂಚಿ ತಿನ್ನುತ್ತಿಲ್ಲ. 2022-23ರಲ್ಲಿ 10.88 ಲಕ್ಷ ಕೊಟಿ ರೂ. ಇದ್ದ ಒಟ್ಟು ಕಾರ್ಪೊರೇಟ್ ಲಾಭದ ಪ್ರಮಾಣವು 2023-24ರಲ್ಲಿ 14.11 ಲಕ್ಷ ಕೋಟಿ ರೂ.ಗಳಿಗೆ ಏರಿದೆ. ವಾಣಿಜ್ಯ ಬ್ಯಾಂಕುಗಳು ಈ ಎರಡು ವರ್ಷಗಳಲ್ಲಿ ಅಂದಾಜು 3.79 ಲಕ್ಷ ಕೋಟಿ ರೂ.ಗಳ ಸಾಲವನ್ನು ಕಾರ್ಪೊರೇಟ್‌ಗಳಿಗೆ ರೈಟ್‌ಆಫ್ ಮಾಡಿವೆ. ಈ ಎಲ್ಲ ಲಾಭಗಳನ್ನೂ ಗರಿಷ್ಠ ಪ್ರಮಾಣದಲ್ಲಿ ಪಡೆದಿರುವುದು ಕಾರ್ಪೊರೇಟ್‌ಗಳೇ.

ದೇಶದ 140 ಕೋಟಿ ಜನಸಂಖ್ಯೆಯಲ್ಲಿ ಶ್ರೀಮಂತರು ಮತ್ತು ಬಡವರ ನಡುವಿನ ಅಂತರ ಗಮನಾರ್ಹವಾಗಿ ಹೆಚ್ಚುತ್ತಿದ್ದು, ಕಳೆದ 10 ವರ್ಷಗಳಲ್ಲಂತೂ ಇದು ಎಲ್ಲ ಸಜ್ಜನಿಕೆಯ ಮೇರೆಗಳನ್ನು ಮೀರಿ ಅಸಹ್ಯವೆನ್ನಿಸುವಷ್ಟು ಹೆಚ್ಚತೊಡಗಿದೆ ಎಂದು ಬಹುತೇಕ ಎಲ್ಲ ಸಮೀಕ್ಷೆಗಳೂ ಬೊಟ್ಟು ಮಾಡುತ್ತಿವೆ. ದೇಶದ ಶೇ. 1 ಶ್ರೀಮಂತರು, ದೇಶದ ಒಟ್ಟು ಸಂಪತ್ತಿನ ಶೇ. 40.1 ಸಂಪತ್ತಿನ ಮೇಲೆ ಹಿಡಿತ ಹೊಂದಿದ್ದಾರೆ. ಈ ಪ್ರಮಾಣ ಏರುತ್ತಲೇ ಇದೆ. ಅವರಿಗೆ ಸರಕಾರದ ಕಡೆಯಿಂದ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಇನ್ನಷ್ಟು ಸಂಪತ್ತು ಶೇಖರಣೆಗೆ ಸಹಕಾರ ಸಿಗುತ್ತಲೇ ಇದೆ. ಇದು ಬದಲಾಗದೆ, ದೇಶದ ಆರ್ಥಿಕ ಸ್ಥಿತಿ ಸುಧಾರಿಸದು. ಈ ನಿಟ್ಟಿನಲ್ಲಿ ಕರ್ನಾಟಕದ ಗ್ಯಾರಂಟಿ ಸ್ಕೀಮುಗಳ ಮೂಲಕ ನೀಡಲಾದ ಯುಬಿಐ ಮಾದರಿಯ ನಗದು ಹಂಚಿಕೆ ಯೋಜನೆಗಳು ಇಲ್ಲಿನ ಆರ್ಥಿಕತೆಯನ್ನು ಚಿಗುರಿಸಿದ್ದಕ್ಕೆ ಸಾಕ್ಷ್ಯಗಳು ಸಿಗತೊಡಗಿವೆ. ಇದನ್ನು ಅಧ್ಯಯನ ಮಾಡಿ, ಅವಶ್ಯಕತೆ ಇರುವ ಬಹುಸಂಖ್ಯಾತ ಬಡವರಿಗೆ ಅನುಕೂಲ ಆಗುವಂತೆ ಮತ್ತು ಹಣ ಅನಾವಶ್ಯಕ ಪೋಲಾಗದಂತೆ ಯೋಜನೆಗಳನ್ನು ರೂಪಿಸುವ ಬದಲು, ಈ ಯಶಸ್ಸನ್ನು ದೇಶದಾದ್ಯಂತ ಚುನಾವಣೆಗಳನ್ನು ಗೆಲ್ಲಲು ಟೂಲ್ ಆಗಿ ಬಳಸಿಕೊಳ್ಳುವುದನ್ನು ಎಲ್ಲ ರಾಜಕೀಯ ಪಕ್ಷಗಳೂ ಅಭ್ಯಾಸ ಮಾಡಿಕೊಳ್ಳತೊಡಗಿವೆ. ಇದು ಯುಬಿಐ ಅನುಕೂಲಗಳನ್ನು ಜನಸಾಮಾನ್ಯರು ‘ಬಿಟ್ಟಿ ಭಾಗ್ಯ’ ಎಂದು ತಿರಸ್ಕರಿಸುವಂತೆ ಮಾಡುವ, ಉದ್ದೇಶಪೂರ್ವಕ ಅಪಾಯಕಾರಿ ಬೆಳವಣಿಗೆ ಅನ್ನಿಸತೊಡಗಿದೆ.

ಇಂತಹದೊಂದು ಸನ್ನಿವೇಶದಲ್ಲಿ, ಸರಕಾರ ತನ್ನ ಸಾಸಿವೆ ಡಬ್ಬಿ ಮೂಲೆಯಲ್ಲಿರುವ ಹಣವನ್ನೆಲ್ಲ ತೆಗೆದು ಮತ್ತೆ ಶ್ರೀಮಂತರಿಗೇ ಹಂಚುವ ಬದಲು (ಗಮನಿಸಿ: ಈ ವರ್ಷವೂ ಭಾರತದ ರಿಸರ್ವ್ ಬ್ಯಾಂಕ್ 2.11 ಲಕ್ಷ ಕೋಟಿ ರೂ. ಗಳ ಡಿವಿಡೆಂಡ್‌ಅನ್ನು ಸರಕಾರಕ್ಕೆ ಹಸ್ತಾಂತರಿಸುವುದಾಗಿ ಪ್ರಕಟಿಸಿದೆ!) ಅಸಹ್ಯ ಅನ್ನಿಸುವಷ್ಟಿರುವ ಶ್ರೀಮಂತರು-ಬಡವರ ನಡುವಿನ ಅಂತರವನ್ನು ತೊಡೆದುಹಾಕಲು ಈ ಅವಕಾಶವನ್ನು ಬಳಸಿಕೊಳ್ಳಬೇಕು. ರೂ. 10 ಕೋಟಿಗಿಂತ ಹೆಚ್ಚಿನ ಸಂಪತ್ತನ್ನು ಹೊಂದಿರುವ ಶ್ರೀಮಂತರಿಗೆ ಕನಿಷ್ಠ ಶೇ. 2-3 ಹೆಚ್ಚುವರಿ ತೆರಿಗೆ, ಕಾರ್ಪೊರೇಟ್‌ಗಳಿಗೆ 2019-20ರ ಪ್ರಮಾಣದಲ್ಲಿ ತೆರಿಗೆಯನ್ನು ವಿಧಿಸುವುದು ಮತ್ತು ಸಂಪತ್ತಿನ ತೆರಿಗೆಯನ್ನು ಪುನರಾರಂಭಿಸುವ ಸಾಧ್ಯತೆಗಳನ್ನು ಪರಿಶೀಲಿಸುವುದಕ್ಕೆ ಇದು ಸಕಾಲ. ಜೊತೆಗೆ, ತೆರಿಗೆ ಬಲೆಯನ್ನು ಇನ್ನಷ್ಟು ವಿಸ್ತರಿಸಿಕೊಳ್ಳುವುದು ಹಾಗೂ ತೆರಿಗೆ ಕಳ್ಳರನ್ನು ಪತ್ತೆ ಹಚ್ಚಿ ತೆರಿಗೆ ವಸೂಲಿ ಮಾಡುವತ್ತ ಹೆಚ್ಚಿನ ಆದ್ಯತೆ ನೀಡುವುದು ಕೂಡ ಆಗಬೇಕಿದೆ.

ಆಗ ಮಾತ್ರ ಸರಕಾರಕ್ಕೆ ಆರ್ಥಿಕ ಶಿಸ್ತನ್ನು ಕಾಯ್ದುಕೊಂಡೇ, ಆರ್ಥಿಕತೆಗೆ ಚೇತರಿಕೆ ತರುವುದನ್ನೂ, ಬಡವರು-ಶ್ರೀಮಂತರ ನಡುವಿನ ಅಸಹ್ಯ ತಾರತಮ್ಯವನ್ನು ಸುಧಾರಿಸುವ ಕುರಿತೂ ಯೋಜಿಸುವುದು ಸಾಧ್ಯ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ರಾಜಾರಾಂ ತಲ್ಲೂರು

contributor

Similar News