ಸಿಎಜಿ: ಹರ ಕೊಲ್ಲಲ್ ಪರ ಕಾಯ್ವನೆ?

Update: 2025-03-22 11:21 IST
ಸಿಎಜಿ: ಹರ ಕೊಲ್ಲಲ್ ಪರ ಕಾಯ್ವನೆ?
  • whatsapp icon

ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ನೇಮಕಾತಿಯಲ್ಲಿ ಭಾರತ ಸರಕಾರವು ಪಾರದರ್ಶಕವಾಗಿಲ್ಲದಿರುವುದರಿಂದ, ಅದನ್ನು ಪರಿಶೀಲಿಸಿ, ಆ ನೇಮಕಾತಿ ಪ್ರಕ್ರಿಯೆಯು ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ನಡೆಯುವಂತೆ ಬದಲಾಯಿಸಬೇಕೆಂದು ಸೆಂಟರ್ ಫಾರ್ ಪಬ್ಲಿಕ್ ಇಂಟರೆಸ್ಟ್ ಲಿಟಿಗೇಷನ್ (ಸಿಪಿಐಎಲ್) ಭಾರತದ ಸುಪ್ರೀಂಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಸಿದೆ. ಈ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿರುವ ಸುಪ್ರೀಂಕೋರ್ಟು, ಮಾರ್ಚ್ 17ರಂದು ಈ ಬಗ್ಗೆ ಭಾರತ ಸರಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಎನ್. ಕೋಟೇಶ್ವರ ಸಿಂಗ್ ಅವರನ್ನೊಳಗೊಂಡ ವಿಭಾಗ ಪೀಠ ಈ ನೋಟೀಸು ಜಾರಿಗೊಳಿಸಿದ್ದು, ಸಿಪಿಐಎಲ್ ಪರವಾಗಿ ಸುಪ್ರೀಂಕೋರ್ಟಿನಲ್ಲಿ ವಾದ ಮಂಡಿಸಿದ ವಕೀಲ ಪ್ರಶಾಂತ್ ಭೂಷಣ್ ಅವರು, ಹಾಲಿ ಇರುವ ವ್ಯವಸ್ಥೆಯಲ್ಲಿ, ಪ್ರಧಾನ ಮಂತ್ರಿಗಳ ನೇತೃತ್ವದ ಕಾರ್ಯಾಂಗ ನೇರವಾಗಿ ಈ ನೇಮಕಾತಿ ಮಾಡುತ್ತಿದ್ದು, ರಾಷ್ಟ್ರಪತಿಗಳು ಅನುಮೋದಿಸುತ್ತಿದ್ದಾರೆ. ಇದು ಸಂವಿಧಾನದ 14ನೇ ವಿಧಿಯ ಆಶಯಗಳ ಸ್ಪಷ್ಟ ಉಲ್ಲಂಘನೆ ಎಂದಿದ್ದಾರೆ.

ಭಾರತದ ಸಂವಿಧಾನ ರಚನಾ ಸಭೆಯಲ್ಲಿ 1949ರ ಮೇ 30ರಂದು ಮಾತನಾಡಿದ ಡಾ. ಬಿ.ಆರ್. ಅಂಬೇಡ್ಕರ್ ಅವರು, ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಹುದ್ದೆಯು ‘‘ದೇಶದ ಸಂವಿಧಾನದ ಅಡಿಯಲ್ಲಿ ಅತ್ಯಂತ ಮುಖ್ಯವಾದ ಅಧಿಕಾರಿ ಹುದ್ದೆಯಾಗಿದೆ’’ ಎಂದು ಅಭಿಪ್ರಾಯಪಟ್ಟಿದ್ದರು. ಅವರ ಈ ಆಶಯವನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ, ಸಿಎಜಿ ನೇಮಕಾತಿಯನ್ನು ರಾಷ್ಟ್ರಪತಿಗಳು ಮಾಡಬೇಕು ಮತ್ತು ಹಾಗೆ ಮಾಡುವಾಗ, ಅವರು ಒಂದು ಸ್ವತಂತ್ರ ಮತ್ತು ನಿಷ್ಪಕ್ಷಪಾತ ಸಮಿತಿಯ ಜೊತೆ ಚರ್ಚಿಸಿ, ಅವರ ಶಿಫಾರಸಿನ ಮೇರೆಗೆ ಆ ಹುದ್ದೆಗೆ ಅರ್ಹರನ್ನು ನಿರ್ಧರಿಸಬೇಕು. ಆ ಸಮಿತಿಯಲ್ಲಿ ಭಾರತದ ಪ್ರಧಾನಿ, ಪ್ರತಿಪಕ್ಷ ನಾಯಕರು, ಭಾರತದ ಮುಖ್ಯ ನ್ಯಾಯಮೂರ್ತಿಗಳು ಸೇರಿರಬೇಕು; ಮಾತ್ರವಲ್ಲದೆ ನೇಮಕಾತಿ ಪ್ರಕ್ರಿಯೆ ನ್ಯಾಯಯುತವೂ, ಹೊಣೆಗಾರಿಕೆಯುಳ್ಳದ್ದೂ ಆಗಿರಬೇಕು ಎಂದು ಸಿಪಿಐಎಲ್ ಪರ ವಕೀಲರು ವಾದಿಸಿದ್ದಾರೆ. ನ್ಯಾಯಾಲಯವು ಈ ವಿಷಯಕ್ಕೆ ಸಂಬಂಧಿಸಿ, ಈಗಾಗಲೇ ತಮ್ಮೆದುರು ವಿಚಾರಣೆ ಬಾಕಿ ಇರುವ 2024 ಜನವರಿಯ ಇನ್ನೊಂದು ಅರ್ಜಿಯನ್ನು ಕೂಡ ಈ ಹೊಸ ಅರ್ಜಿಯೊಂದಿಗೆ ಸೇರಿಸಿಕೊಂಡು, ಭಾರತ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.

ಗಮನಿಸಬೇಕಾದ ಸಂಗತಿಯೊಂದಿದೆ. ಅದೇನೆಂದರೆ, ಈಗ ಸುಪ್ರೀಂಕೋರ್ಟಿನಲ್ಲಿ ಸಿಪಿಐಎಲ್ ಕೇಳಿರುವುದನ್ನೇ 2012ರಲ್ಲಿ ಅಂದಿನ ವಿಪಕ್ಷ ನಾಯಕ ಎಲ್.ಕೆ. ಅಡ್ವಾಣಿ ಅವರೂ ಕೇಳಿದ್ದರು. ತಮಿಳುನಾಡು ಅಂದಿನ ಮುಖ್ಯಮಂತ್ರಿ ಎಂ. ಕರುಣಾನಿಧಿ ಸೇರಿದಂತೆ ಹಲವರು ಇದನ್ನು ಬೆಂಬಲಿಸಿದ್ದರು. ಆದರೆ ಅದು ಜಾರಿಗೆ ಬಂದಿರಲಿಲ್ಲ.

ಚಾರಿತ್ರಿಕ ಹಿನ್ನೆಲೆ

ಭಾರತದ ಸಿಎಜಿ ವ್ಯವಸ್ಥೆಗೆ ಚಾರಿತ್ರಿಕ ಹಿನ್ನೆಲೆ ಇದೆ. 1857-58ರ ಹೊತ್ತಿಗೆ ಲಾರ್ಡ್ ಕ್ಯಾನಿಂಗ್ ಅವರು ಈಸ್ಟ್ ಇಂಡಿಯಾ ಕಂಪೆನಿಯ ಪರವಾಗಿ ಆಡಿಟರ್ ಜನರಲ್ (ಎಜಿ) ಹುದ್ದೆಯನ್ನು ಆರಂಭಿಸಿದ್ದರು. 1860ರಲ್ಲಿ ಮೊದಲ ಎಜಿ ಆಗಿ ಎಡ್ವರ್ಡ್ ಡ್ರಮ್ಮಾಂಡ್ ನೇಮಕ ಆಗಿತ್ತು. ಆಗ ಈ ಹುದ್ದೆಯ ಹೆಸರು ಸಿಎಜಿ ಎಂದಾದದ್ದು 1884ರಲ್ಲಿ. ಭಾರತ ಸ್ವತಂತ್ರಗೊಂಡ ಬಳಿಕ, ಸಂವಿಧಾನದ 148-151ನೇ ವಿಧಿಗಳಲ್ಲೇ ಸಿಎಜಿ ಬಗ್ಗೆ ಉಲ್ಲೇಖ ಇದೆ; ಅದೊಂದು ಸಾಂವಿಧಾನಿಕ ಹುದ್ದೆ. ವ್ಯಾಕರಣ ನರಹರಿ ರಾವ್ ಭಾರತದ ಮೊದಲ ಸಿಎಜಿ (1948-1954).

ತಣ್ಣಗೆ ಅದರಷ್ಟಕ್ಕೇ ಕಾರ್ಯಾಚರಿಸುತ್ತಿದ್ದ ಸಿಎಜಿ ವ್ಯವಸ್ಥೆ, ಮೊದಲ ಬಾರಿಗೆ ಸಾರ್ವಜನಿಕವಾಗಿ ಸುದ್ದಿ ಆಗ ತೊಡಗಿದ್ದು, ವಿನೋದ್ ರಾಯ್ (2008-2013) ಅವರು ಭಾರತದ ಸಿಎಜಿ ಆಗಿ ಕಾರ್ಯಾಚರಿಸಿದ ಅವಧಿಯಲ್ಲಿ. ಕಾಮನ್‌ವೆಲ್ತ್ ಗೇಮ್ಸ್ ಹಗರಣ, 2ಜಿ ಸ್ಪೆಕ್ಟ್ರಂ, ಕಲ್ಲಿದ್ದಲು ಗಣಿ ಹಂಚಿಕೆ, ಆದರ್ಶ ಸೊಸೈಟಿ ಸೇರಿದಂತೆ ಹಲವು ‘ಹಗರಣ’ಗಳನ್ನು ಆ ಕಾಲದಲ್ಲಿ ಬೆಳಕಿಗೆ ತರಲಾಯಿತು. ಅದು ಮುಂದೆ ಎನ್‌ಡಿಎ ಸರಕಾರ ಕೇಂದ್ರದಲ್ಲಿ ಅಧಿಕಾರ ಹಿಡಿಯಲು ಹಾದಿಮಾಡಿಕೊಟ್ಟದ್ದು ಮತ್ತು ತಾನು ಸ್ವತಃ ವಿವಾದಾತ್ಮಕ ಅನ್ನಿಸಿಕೊಂಡದ್ದು, ಈಗ ಇತಿಹಾಸ.

ಇನ್ನೊಬ್ಬರು ಸಿಎಜಿ, ಗಿರೀಶ್‌ಚಂದ್ರ ಮುರ್ಮು (2020-2024) ಕೂಡ ಈ ಹಿಂದೆ, ಗುಜರಾತ್‌ನಲ್ಲಿ ಮುಖ್ಯಮಂತ್ರಿ ಆಗಿದ್ದ ನರೇಂದ್ರ ಮೋದಿ ಮತ್ತು ಅಂದಿನ ಗುಜರಾತ್ ಗೃಹಸಚಿವರಾಗಿದ್ದ ಅಮಿತ್ ಶಾ ಅವರ ‘ನಂಬಿಗಸ್ಥ’ ಅಧಿಕಾರಿ ಎಂದು ಹೆಸರಾಗಿದ್ದವರು. ಗುಜರಾತ್ ಗೃಹ ಇಲಾಖೆಯ ಜಂಟಿ ಕಾರ್ಯದರ್ಶಿ ಆಗಿ, 2002ರ ಗುಜರಾತ್ ಗಲಭೆ ಪ್ರಕರಣಗಳನ್ನು ನಿಭಾಯಿಸಿದವರು. ಆ ಹಿನ್ನೆಲೆಯಲ್ಲಿ, ಸಿಎಜಿ ಆಗಿ ಅವರ ನೇಮಕ ವಿವಾದಾಸ್ಪದ ಅನ್ನಿಸಿತ್ತು. ಅವರ ಅವಧಿಯಲ್ಲೇ ಸಿಎಜಿ ವರದಿಗಳ ಗುಣಮಟ್ಟ-ಪ್ರಮಾಣಗಳೆಲ್ಲ ತಗ್ಗಿರುವ ಬಗ್ಗೆ ಟೀಕೆಗಳು ಕೇಳಿಬರತೊಡಗಿದ್ದು.

 

ಹಣಿಯುವ ‘ಟೂಲ್’ ಆಗಿ ಬಳಕೆ?

ಸರಕಾರದ ಲೆಕ್ಕಪತ್ರಗಳು-ಖರ್ಚುಗಳ ಬಗ್ಗೆ ನಿಗಾ ಇರಿಸಿಕೊಂಡಿರುವ ‘ಕಾವಲು ನಾಯಿ’ ಆಗಿ ಸಿಎಜಿ ವರ್ತಿಸಬೇಕಿರುತ್ತದೆ. ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ಅಥವಾ ಬೇರೆ ಸಂಸದೀಯ ಸಮಿತಿಗಳಿಗೆ ಸರಕಾರದ ಚಟುವಟಿಕೆಗಳ ಮೇಲೆ ನಿಗಾ ಇರಿಸಿಕೊಳ್ಳಲು, ಸರಕಾರದ ನೀತಿ ನಿರೂಪಣೆಗಳನ್ನು ನಿಕಷಕ್ಕೆ ಒಡ್ಡಲು, ಸಿಎಜಿ ಒದಗಿಸುವ ಮಾಹಿತಿಗಳು ಮಹತ್ವದ್ದಾಗಿರುತ್ತವೆ. ಹೀಗೆ, ನಿಷ್ಪಕ್ಷವಾಗಿ ಕಾರ್ಯಾಚರಿಸಿ, ಪ್ರಜಾತಂತ್ರದ ಗುಣಮಟ್ಟಕ್ಕೆ ‘ಡಿಪ್‌ಸ್ಟಿಕ್’ ಮಾಪನ ಆಗಬೇಕಿದ್ದ ಸಿಎಜಿ ಬರಬರುತ್ತ, ಕಳೆದ 10-12 ವರ್ಷಗಳಲ್ಲಿ ಆಳುವ ಸರಕಾರಕ್ಕೆ ತನ್ನ ವಿರೋಧಿಗಳನ್ನು ಆಯಕಟ್ಟಿನ ಜಾಗದಲ್ಲಿ ಹಣಿಯುವ ಟೂಲ್ ಆಗಿ ಬಳಕೆ ಆಗುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ. ಮಾತ್ರವಲ್ಲದೆ, ಅಲ್ಲಿನ ನೇಮಕಾತಿಗಳಲ್ಲಿ ಸ್ವಜನ ಪಕ್ಷಪಾತ, ಭ್ರಷ್ಟಾಚಾರ, ಮತ್ತಿತರ ಆರೋಪಗಳೂ ಗಟ್ಟಿ ಧ್ವನಿಯಲ್ಲೇ ಕೇಳಿಸತೊಡಗಿವೆ.

ಸಾಂಪ್ರದಾಯಿಕವಾಗಿ ಬಜೆಟ್ ಅಧಿವೇಶನದ ಮುನ್ನ ತನ್ನ ವರದಿಗಳನ್ನು ಬಿಡುಗಡೆಗೊಳಿಸಿ, ಸರಕಾರದ ಉತ್ತರದಾಯಿತ್ವವನ್ನು ಸಾರ್ವಜನಿಕರಿಗೆ ತೋರಿಸಿ ಕೊಡುವ ಜವಾಬ್ದಾರಿ ಇರುವ ಸಿಎಜಿ, ಈಗೀಗ ತನ್ನ ಆಡಿಟ್ ವರದಿಗಳನ್ನು ಸಕಾಲದಲ್ಲಿ ಒದಗಿಸುವುದು ಬಿಡಿ, ತಾನು ಆಡಿಟ್‌ಗೆ ಅಯ್ದುಕೊಳ್ಳುವ ವಿಷಯಗಳಲ್ಲಿ ಆಳುವ ಸರಕಾರಕ್ಕೆ ಹಾನಿ ಆಗದಂತೆ ಎಚ್ಚರ ವಹಿಸುವ ಬಗ್ಗೆ, ಆಡಿಟ್ ಪ್ರಮಾಣವನ್ನು ತಗ್ಗಿಸಿಕೊಂಡಿರುವ ಬಗ್ಗೆ, ಸಿದ್ಧಪಡಿಸಿದ ವರದಿಗಳು ಸಂಸತ್ತಿನಲ್ಲಿ ಸಲ್ಲಿಕೆ ಆಗದಿರುವ ಬಗ್ಗೆ ಆಗಾಗ ದೂರುಗಳು ಕೇಳಿ ಬರುತ್ತಿವೆಯಾದರೂ, ಅವು ಅರಣ್ಯರೋದನವಾಗಿಯೇ ಉಳಿದಿವೆ.

2014ರಿಂದೀಚೆಗೆ ಭಾರತ ಸರಕಾರವು ನೋಟು ರದ್ದತಿ, ರಾಫೇಲ್ ಸೇರಿದಂತೆ ಹಲವು ಮಹತ್ವದ ರಕ್ಷಣಾ ಒಪ್ಪಂದಗಳು, ಕೋವಿಡ್ ನಿರ್ವಹಣೆ, ಸಾಗರ್ ಮಾಲಾ ಯೋಜನೆ, ಆಧಾರ್ ಯೋಜನೆ ಅನುಷ್ಠಾನ, ಬ್ಯಾಂಕ್ ವಿಲೀನ, ಯುಪಿಐ, ಸ್ಮಾರ್ಟ್ ಸಿಟಿ ಯೋಜನೆ, ಜಲಜೀವನ್ ಮಿಷನ್, ಮಾನೆಟೈಸೇಷನ್ ಪೈಪ್‌ಲೈನ್ ಸೇರಿದಂತೆ ಹಲವು ಮಹತ್ವದ ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಂಡು, ಕಾರ್ಯರೂಪಕ್ಕಿಳಿಸಿದೆ. ಈ ಆಯಕಟ್ಟಿನ ಜಾಗಗಳಲ್ಲಿ ಇವತ್ತಿನ ತನಕ ಎಷ್ಟು ವಿಚಾರಗಳ ಸಿಎಜಿ ಆಡಿಟ್ ನಡೆದಿದೆ? ಎಂಬುದು ಈಗ ಯಕ್ಷ ಪ್ರಶ್ನೆ, ಆಡಿಟ್ ಪ್ರಮಾಣ ಕಡಿಮೆ ಆಗಿದೆ ಎಂಬ ದೂರುಗಳು ಹೆಚ್ಚಾದ ಹಿನ್ನೆಲೆಯಲ್ಲಿ ಈಗೆರಡು ವರ್ಷಗಳಿಂದ ಆಡಿಟ್ ಪ್ರಮಾಣ ಹೆಚ್ಚುತ್ತಿದೆಯಾದರೂ, ಆಗಲೇಬೇಕಾಗಿದ್ದ ವಿಷಯಗಳ ಆಡಿಟ್ ಆಗುತ್ತಿಲ್ಲ.

ಇತ್ತೀಚೆಗಿನ ವರ್ಷಗಳಲ್ಲಿ, ಸಂಸತ್ತಿನಲ್ಲಿ ಮಂಡನೆ ಆಗುತ್ತಿರುವ ಸಿಎಜಿ ಆಡಿಟ್ ವರದಿಗಳ ಸಂಖ್ಯೆಯಲ್ಲಿ ಇಳಿತ ಆಗುತ್ತಿದೆ ಎಂದು ಅಂಕಿ-ಸಂಖ್ಯೆಗಳು ತೋರಿಸುತ್ತಿವೆ. 2014-18ರ ನಡುವೆ ವಾರ್ಷಿಕ ಸರಾಸರಿ 40 ವರದಿಗಳು ಸಂಸತ್ತಿನಲ್ಲಿ ಮಂಡನೆ ಆಗುತ್ತಿದ್ದರೆ, 2019-23ರ ನಡುವೆ ಈ ಸರಾಸರಿ 22ಕ್ಕೆ ಇಳಿದಿದೆ. 2023ರಲ್ಲಿ ಕೇವಲ 18 ವರದಿಗಳು ಸಂಸತ್ತಿನಲ್ಲಿ ಮಂಡನೆ ಆಗಿವೆ, ಅವೂ ಲೆಕ್ಕಭರ್ತಿ ದರ್ಜೆಯವು!

ಅಧಿಕಾರಕ್ಕೆ ಬಂದ ತಕ್ಷಣ, ಯುಪಿಎ ಅವಧಿಯ ಹುಳುಕುಗಳನ್ನು ಕೆದಕುವುದಕ್ಕೆ ಸಿಎಜಿ ಬಳಕೆ ಆದದ್ದು ಮತ್ತು ಹಾಲೀ ಸರಕಾರದ ವ್ಯವಹಾರಗಳ ಸರದಿ ಬಂದಾಗ ಆಡಿಟ್ ಸಂಖ್ಯೆಯೇ ತಗ್ಗಿದ್ದು, ಆ ಬಗ್ಗೆ ತಕರಾರುಗಳು ಏಳತೊಡಗಿದಾಗ, ಆಟಕ್ಕುಂಟು ಲೆಕ್ಕಕ್ಕಿಲ್ಲದ ಆಡಿಟ್‌ವರದಿಗಳು ಹೊರಬರತೊಡಗಿರುವುದು ಸಿಎಜಿಯ ಸಾಂವಿಧಾನಿಕ ಮಹತ್ವಕ್ಕೆ ತಕ್ಕ ವರ್ತನೆ ಅಲ್ಲ. ಇದನ್ನೆಲ್ಲ ಸುಪ್ರೀಂಕೋರ್ಟು ಪರಿಗಣಿಸಿಕೊಂಡು, ಈ ವಿಚಾರದಲ್ಲಿ ತನ್ನ ತೀರ್ಪು ನೀಡೀತೇ? ಕಾದು ನೋಡೋಣ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ರಾಜಾರಾಂ ತಲ್ಲೂರು

contributor

Similar News