ವ್ಯಾಪಾರಿಗಳದು ಎಲ್ಲೆಲ್ಲೂ ವ್ಯಾಪಾರವೇ...

ಭಾರತ ಸರಕಾರವು ತನ್ನ ಕೈಯಲ್ಲಿರುವ ಪರಮಾಣು ಶಕ್ತಿ ಕ್ಷೇತ್ರದಂತಹ ಆಯಕಟ್ಟಿನ ಕ್ಷೇತ್ರ ಗಳನ್ನು ಖಾಸಗಿಯವರ ಮತ್ತು ವಿದೇಶಿ ಉದ್ಯಮಗಳ ಸುಪರ್ದಿಗೆ ಹರಿವಾಣದಲ್ಲಿಟ್ಟು ಒಪ್ಪಿಸುವ ಮತ್ತು ಆಪತ್ತಿನ ಸ್ಥಿತಿಗಳಲ್ಲಿ ನಮ್ಮ ಹಿತಾಸಕ್ತಿಗಳ ರಕ್ಷಣೆಗೆಂದು ಮಾಡಿಕೊಂಡಿರುವ ಕಾನೂನುಗಳನ್ನು ಖಾಸಗಿಯವರ ಮೂಗಿನ ನೇರಕ್ಕೆ ಹೊಂದುವಂತೆ ಸಡಿಲುಗೊಳಿಸುವ ತೀರ್ಮಾನಗಳು ಸಂಸತ್ತಿನಲ್ಲಿ ಮತ್ತು ಸಾರ್ವಜನಿಕವಾಗಿ ಸಾಕಷ್ಟು ಚರ್ಚೆ ಆಗದೇ ಜಾರಿಗೆ ಬರುವುದು ದೇಶದ ಹಿತದೃಷ್ಟಿಯಿಂದ ಒಳ್ಳೆಯ ನಿರ್ಧಾರವಲ್ಲ.;

Update: 2025-04-26 11:27 IST
ವ್ಯಾಪಾರಿಗಳದು ಎಲ್ಲೆಲ್ಲೂ ವ್ಯಾಪಾರವೇ...
  • whatsapp icon

ಅಮೆರಿಕದ ಉಪಾಧ್ಯಕ್ಷ ಜೇಮ್ಸ್ ಡೇವಿಡ್ ವ್ಯಾನ್ಸ್ ತಮ್ಮ ನಾಲ್ಕು ದಿನಗಳ ಭಾರತ ಪ್ರವಾಸ ಮುಗಿಸಿ ತೆರಳಿದ್ದಾರೆ. ಅವರು ಪ್ರಧಾನಮಂತ್ರಿ ಮೋದಿ ಅವರನ್ನು ಭೇಟಿ ಆದ ಬಳಿಕ, ಜೈಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಭಾರತ-ಅಮೆರಿಕ ವಾಣಿಜ್ಯ ಸಂಬಂಧಗಳು ಇನ್ನಷ್ಟು ಬಿರುಸುಗೊಳ್ಳುವ ನಿಟ್ಟಿನಲ್ಲಿ ಸುಂಕಕ್ಕೆ ಹೊರತಾದ ಬೇರಿನ್ನಿತರ ನೀತ್ಯಾತ್ಮಕ ಅಡ್ಡಿತಡೆಗಳನ್ನು ನಿವಾರಿಸುವತ್ತ ಭಾರತ ಸರಕಾರ ಗಮನ ನೀಡಬೇಕು. 2030ರ ಹೊತ್ತಿಗೆ ನಮ್ಮ ನಡುವೆ 5 ಲಕ್ಷ ಕೋಟಿ ಡಾಲರ್ ಗಾತ್ರದ ದ್ವಿಪಕ್ಷೀಯ ವಾಣಿಜ್ಯ ವ್ಯವಹಾರಗಳ ಗುರಿ ತಲುಪುವುದು ಆಗ ಮಾತ್ರ ಸಾಧ್ಯವಾದೀತು ಎಂದು ಕಿವಿಮಾತು ಹೇಳಿದ್ದರು. 2024ರಲ್ಲಿ ಭಾರತ-ಅಮೆರಿಕ ನಡುವಣ ವಾಣಿಜ್ಯ ವ್ಯವಹಾರಗಳ ಗಾತ್ರ 1.91 ಲಕ್ಷ ಕೋಟಿ ಡಾಲರ್ ಆಗಿತ್ತು.

ವೃತ್ತಿಯಿಂದ ವಕೀಲರಾಗಿರುವ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್, ಅಮೆರಿಕದ ಪ್ರಮುಖ ವೆಂಚರ್ ಕ್ಯಾಪಿಟಲ್ ಹೂಡಿಕೆದಾರರೂ ಹೌದು. ಅವರ ಮಾಲಕತ್ವದ ಸಂಸ್ಥೆ Narya Capitalಗೆ ಜೈವಿಕ ತಂತ್ರಜ್ಞಾನ (AmplifyBio), ಯುದ್ಧ ಸಾಮಗ್ರಿ ಮತ್ತು ಭದ್ರತೆ (Anduril Industries), ವೀಡಿಯೊ ಪ್ಲಾಟ್‌ಫಾರ್ಮ್ (Rumble) ಹಾಗೂ ಬಾಹ್ಯಾಕಾಶ ಮತ್ತು ನ್ಯೂಕ್ಲಿಯರ್ ವಿದ್ಯುತ್ (Atomos Nuclear and Space) ಉತ್ಪಾದಕ ಕಂಪೆನಿಗಳಲ್ಲಿ ದೊಡ್ಡ ಪ್ರಮಾಣದ ಹೂಡಿಕೆಗಳಿವೆ. ಸಹಜವಾಗಿಯೇ ಭಾರತ ಭೇಟಿಯ ವೇಳೆ ಅವರು, ಈ ರಂಗಗಳಲ್ಲಿ ಭಾರತದೊಂದಿಗೆ ಕೈಜೋಡಿಸುವ ಮಾತುಗಳನ್ನಾಡಿದ್ದಾರೆ. ಸ್ವತಃ ಭಾರತದ ಪ್ರಧಾನಮಂತ್ರಿಯವರ ಕಚೇರಿ ಕೂಡ ವ್ಯಾನ್ಸ್ ಜೊತೆ ಮಾತುಕತೆಯ ವೇಳೆ ಭಾರತ-ಅಮೆರಿಕ ನಡುವೆ ಇಂಧನ, ರಕ್ಷಣೆ, ಸ್ಟ್ರಾಟೆಜಿಕ್ ತಂತ್ರಜ್ಞಾನ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಯೋಗದ ಚರ್ಚೆಗಳು ನಡೆದವು ಎಂದು ಹೇಳಿದೆ.

ಇವೆಲ್ಲ ಸಾಕಷ್ಟು ಪೂರ್ವತಯಾರಿ ಇದ್ದೇ ನಡೆಯುತ್ತಿರುವ ಬೆಳವಣಿಗೆಗಳು ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ. ನ್ಯೂಕ್ಲಿಯರ್ ವಿದ್ಯುತ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಈ ವಿಚಾರವನ್ನು ಸ್ವಲ್ಪ ವಿವರವಾಗಿ ಗಮನಿಸಿದರೆ, ಈ ವ್ಯಾಪಾರ ರಾಜಕೀಯದ ಆಳ ಅರ್ಥ ಆದೀತು.

ಭಾರತ್ ಸ್ಮಾಲ್ ರಿಯಾಕ್ಟರ್ಸ್

2024ರ ತನ್ನ ಬಜೆಟ್ ಭಾಷಣದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಭಾರತವು ತಲಾ 55MW ಸಾಮರ್ಥ್ಯದ ಸಣ್ಣ ಮಾಡ್ಯುಲರ್ ರಿಯಾಕ್ಟರ್‌ಗಳನ್ನು (ಬಿಎಸ್‌ಎಂಆರ್) ಭಾರತದಲ್ಲೇ ಉತ್ಪಾದಿಸಲು ಅನುವಾಗುವಂತೆ 20,000ಕೋಟಿ ರೂ.ಗಳನ್ನು ತೆಗೆದಿರಿಸುವುದಾಗಿ ಪ್ರಕಟಿಸಿದ್ದರು. ಈ ರಿಯಾಕ್ಟರ್‌ಗಳಿನ್ನೂ ಅಭಿವೃದ್ಧಿಯ ಹಂತದಲ್ಲಿದ್ದು, ಪೂರ್ಣಗೊಳ್ಳಲು ಇನ್ನೂ ಐದಾರು ವರ್ಷಗಳು ಬೇಕಾಗುತ್ತವೆ (2033ಕ್ಕೆ ಸಿದ್ಧಗೊಳ್ಳಬಹುದು ಎಂಬ ನಿರೀಕ್ಷೆ ಇದೆ). 2047ರ ಹೊತ್ತಿಗೆ ದೇಶದಲ್ಲಿ 100ಉW ವಿದ್ಯುತ್ತನ್ನು ನ್ಯೂಕ್ಲಿಯರ್ ಮೂಲದಿಂದ ಉತ್ಪಾದಿಸುವ ಉದ್ದೇಶ ಇದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಇದೇ ಮಾರ್ಚ್ 12ರಂದು ಸಂಸತ್ತಿಗೆ ವಿವರಿಸಿದ್ದರು.

ಭಾರತದದ್ದೇ ಆದ ಬಿಎಸ್‌ಎಂಆರ್ ತಂತ್ರಜ್ಞಾನ ಬೆಳವಣಿಗೆಗೆ ಸಮಯ ಅಗತ್ಯವಿರುವ ಹಿನ್ನೆಲೆಯಲ್ಲಿ, ಭಾರತ ಈ ಕ್ಷೇತ್ರದಲ್ಲಿ ವಿದೇಶೀ ಪಾಲ್ಗೊಳ್ಳುವಿಕೆಯನ್ನು ಬಯಸಿದಂತಿದೆ. ಹಾಗಾಗಿ, ಸದ್ಯ ಸರಕಾರಿ ಹಿಡಿತದಲ್ಲಿರುವ ಪರಮಾಣು ಶಕ್ತಿ ಕ್ಷೇತ್ರವನ್ನು ಖಾಸಗಿ ರಂಗಕ್ಕೆ ವರ್ಗಾಯಿಸಲು ಭಾರತ ಸರಕಾರ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಪರಮಾಣು ಶಕ್ತಿ ಕಾಯ್ದೆ ಹಾಗೂ ಪರಮಾಣು ದುರಂತಗಳ ವೇಳೆ ನಾಗರಿಕ ಹೊಣೆಗಾರಿಕೆ ಕಾಯ್ದೆ ((Civil Liability for Nuclear Damage Act- 2010)ಗಳನ್ನು ಸಡಿಲಗೊಳಿಸುವ ಬಗ್ಗೆ ಸರಕಾರ ಯೋಚಿಸುತ್ತಿದೆ (PIB Release ID: 2099244). ಮುಂದಿನ ಮುಂಗಾರು ಅಧಿವೇಶನದಲ್ಲೇ ಈ ತಿದ್ದುಪಡಿಗಳನ್ನು ಸರಕಾರ ಸಂಸತ್ತಿನಲ್ಲಿ ಮಂಡಿಸುವ ಸಾಧ್ಯತೆಗಳಿವೆ.

ಈ ಬೆಳವಣಿಗೆಗಳಿಗೆಲ್ಲ ಪೂರಕವಾಗಿ, ದೇಶದ ಎರಡು ಬೃಹತ್ ‘ಆನಿಗಳು’ ನ್ಯೂಕ್ಲಿಯರ್ ವಿದ್ಯುತ್ ಕ್ಷೇತ್ರ ಪ್ರವೇಶಿಸುವುದಾಗಿ ಪ್ರಕಟಿಸಿವೆ. ಇದೇ ಫೆಬ್ರವರಿ 16ರಂದು ಅದಾನಿ ಬಳಗದ ಮುಖ್ಯಸ್ಥ ಗೌತಮ್ ಅದಾನಿ ಅವರು ನ್ಯೂಕ್ಲಿಯರ್ ಘಟಕ ಹೇಗಿರುತ್ತದೆ ಎಂಬ ಪ್ರಾಥಮಿಕ ಕಲ್ಪನೆ ಪಡೆಯಲೋಸುಗ ಮಹಾರಾಷ್ಟ್ರದ ತಾರಾಪುರ್ ಅಟಾಮಿಕ್ ಪವರ್ ಸ್ಟೇಷನ್ (ಟಿಎಪಿಎಸ್)ಗೆ ತಮ್ಮ ಹಿರಿಯ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿದ್ದಾರೆ. ಈಗಾಗಲೇ ವಿದ್ಯುತ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಅವರ ಸಂಸ್ಥೆ, ಮುಂದಿನ ಕೆಲವು ವರ್ಷಗಳಲ್ಲಿ 30ಉW ನ್ಯೂಕ್ಲಿಯರ್ ವಿದ್ಯುತ್ ಉತ್ಪಾದಿಸುವ ಉದ್ದೇಶ ಹೊಂದಿದೆ. ಇದು ಅಂದಾಜು 21,000 ಕೋಟಿ ರೂ.ಗಳ ಬಾಬ್ತು. ಇದಲ್ಲದೆ ಅಂಬಾನಿಯವರ ರಿಲಯನ್ಸ್ ಬಳಗವು ಅಸ್ಸಾಮಿನಲ್ಲಿ ನ್ಯೂಕ್ಲಿಯರ್ ವಿದ್ಯುತ್ ಮತ್ತು ಎಐ ಕ್ಷೇತ್ರಕ್ಕೆ 50,000 ಕೋಟಿ ರೂ.ಗಳ ಹೂಡಿಕೆ ಪ್ರಕಟಿಸಿದೆ. ಇವರಿಬ್ಬರಲ್ಲದೆ ಟಾಟಾ, ಜಿಂದಾಲ್, ವೇದಾಂತ ಬಳಗಗಳೂ ನ್ಯೂಕ್ಲಿಯರ್ ವಿದ್ಯುತ್ ಉತ್ಪಾದನೆಯತ್ತ ಮನಸ್ಸು ಮಾಡಿವೆ.

ಸುಂಕ ಚೌಕಾಸಿಯ ಫಲವೆ?

ಅಮೆರಿಕದಲ್ಲಿ ಜನರಲ್ ಇಲೆಕ್ಟ್ರಿಕ್ ಕಂಪೆನಿ, ವೆಸ್ಟಿಂಗ್ ಹೋಮ್ ಇಲೆಕ್ಟ್ರಿಕಲ್ ಕಂಪೆನಿ ಮೊದಲಾದ ಬೃಹತ್ ನ್ಯೂಕ್ಲಿಯರ್ ವಿದ್ಯುತ್ ಉತ್ಪಾದಕ ಸಂಸ್ಥೆಗಳು ಭಾರತಕ್ಕೆ ಕಾಲಿರಿಸಲು ಕಾತರದಿಂದಿವೆ. ಅವುಗಳಿಗೆ ಇಲ್ಲಿಗೆ ಬರಲು ಇರುವ ಪ್ರಮುಖ ಅಡ್ಡಿ ಎಂದರೆ, ಪರಮಾಣು ಶಕ್ತಿ ಸದ್ಯಕ್ಕೆ ಭಾರತ ಸರಕಾರದ ಸ್ವಾಮ್ಯದಲ್ಲಿದೆ. ಅದು ಇನ್ನಷ್ಟೇ ಖಾಸಗೀಕರಣಗೊಳ್ಳಬೇಕಿದೆ. ಈ ಹಿನ್ನೆಲೆಯಲ್ಲಿ ಅಮೆರಿಕ ಉಪಾಧ್ಯಕ್ಷರ ‘‘ಟಾರಿಫ್ ಹೊರತು ಪಡಿಸಿ ಬೇರೆ ಅಡ್ಡಿತಡೆಗಳ ನಿವಾರಣೆ ಆಗಬೇಕು’’ ಎಂಬ ಒತ್ತಾಯವನ್ನು ಗಮನಿಸಿದರೆ, ವಿಷಯ ಸ್ಪಷ್ಟವಾಗುತ್ತದೆ. (ಈ ಬೇರೆ ಅಡ್ಡಿತಡೆಗಳು ಏನೆಲ್ಲ ಎಂದು ಅಮೆರಿಕ ಅಧ್ಯಕ್ಷರ ವಾಣಿಜ್ಯ ಸಲಹೆಗಾರ ಪೀಟರ್ ನವಾರೊ ಅವರು ವಿವರಿಸಿದ್ದನ್ನು ಇದೇ ಅಂಕಣದ ಎಪ್ರಿಲ್ 12ರ ಕಂತಿನಲ್ಲಿ ಹೇಳಲಾಗಿದೆ.) ಫೆಬ್ರವರಿಯಲ್ಲಿ ಮೋದಿಯವರನ್ನು ಭೇಟಿ ಆದ ಬಳಿಕ ಅವರೊಂದಿಗೆ ಫೋನ್ ಸಂಪರ್ಕದಲ್ಲಿರುವ ಎಲಾನ್ ಮಸ್ಕ್ (ಅಮೆರಿಕ ಅಧ್ಯಕ್ಷರ ಖಾಸ್ ಗೆಳೆಯ) ಕೂಡ ತನ್ನ ಟೆಸ್ಲಾ ವಾಹನ, ಸ್ಟಾರ್‌ಲಿಂಕ್ ಸ್ಯಾಟಲೈಟ್ ಸಂಪರ್ಕ ಮತ್ತು ಸ್ಪೇಸ್‌ಎಕ್ಸ್ ಬಾಹ್ಯಾಕಾಶಯಾನ ಯೋಜನೆಗಳಿಗೆ ಭಾರತ ಸರಕಾರದ ಜೊತೆ ಇದೇ ರೀತಿಯ ಚೌಕಾಸಿಯಲ್ಲಿ ಇರುವಂತಿದೆ.

ಈ ಚೌಕಾಸಿಗಳಿಗೆ ಭಾರತ ತೆರಬೇಕಾಗಿರುವ ಬೆಲೆ ಅಪಾರವಾದದ್ದು. ಅದಕ್ಕೆ ಸಣ್ಣ ಉದಾಹರಣೆ, ಪರಮಾಣು ದುರಂತಗಳ ವೇಳೆ ನಾಗರಿಕ ಹೊಣೆಗಾರಿಕೆ ಕಾಯ್ದೆ-2010. ಈ ಮಹತ್ವದ ಕಾಯ್ದೆ ಜಾರಿಗೆ ಬರುವುದಕ್ಕೆ ಒಂದು ಹಿನ್ನೆಲೆ ಇದೆ. 1984ರ ಭೋಪಾಲ್ ವಿಷಾನಿಲ ದುರಂತ ದಲ್ಲಿ ಭಾರತ 5,000ಕ್ಕೂ ಮಿಕ್ಕಿ ಜೀವಗಳನ್ನು ಕಳೆದುಕೊಂಡದ್ದಲ್ಲದೇ, ಲಕ್ಷಾಂತರ ಮಂದಿ ಇದರಿಂದ ವಿವಿಧ ತೊಂದರೆಗಳಿಗೆ ಈಡಾಗಿದ್ದರು. ಈ ಸನ್ನಿವೇಶವನ್ನು ನಿಭಾಯಿಸಲು ಸೂಕ್ತ ಕಾಯ್ದೆಗಳಿಲ್ಲದ ಹಿನ್ನೆಲೆಯಲ್ಲಿ ಭಾರತದ ಕೈ ಕಟ್ಟಿತ್ತು. ನ್ಯಾಯಾಲಯದಿಂದ ಹೊರಗೆ 47 ಕೋಟಿ ಡಾಲರ್ ಪರಿಹಾರ ಒಪ್ಪಂದದೊಂದಿಗೆ ಯೂನಿಯನ್ ಕಾರ್ಬೈಡ್ ಬಹುರಾಷ್ಟ್ರೀಯ ಕಂಪೆನಿ ಈ ಪ್ರಕರಣ ದಿಂದ ಕೈತೊಳೆದುಕೊಂಡಿತ್ತು. ಅಲ್ಲಿ ಕಲಿತ ಪಾಠಗಳ ಹಿನ್ನೆಲೆಯಲ್ಲಿ ಭಾರತವು ಪರಮಾಣು ದುರಂತಗಳ ವೇಳೆ ನಾಗರಿಕ ಹೊಣೆಗಾರಿಕೆ ಕಾಯ್ದೆ 2010ನ್ನು ಜಾರಿಗೆ ತಂದಿತ್ತು. ಈ ಕಾಯ್ದೆಯ ಕೆಲವು ಅಂಶಗಳು ವಿದೇಶಿ ಕಂಪೆನಿಗಳಿಗೆ ಹಿತವೆನ್ನಿಸುತ್ತಿಲ್ಲ. ಹಾಗಾಗಿ ಅವು ಅಣುಶಕ್ತಿಯನ್ನು ಖಾಸಗೀಕರಿಸಿದರೆ ಸಾಲದು, ಭಾರತ ಸರಕಾರ ಇಂತಹ ಬೇರೆ ಅಡ್ಡಿತಡೆಗಳನ್ನು ನಿವಾರಿಸಬೇಕು ಎಂದು ಒತ್ತಡ ಹೇರುತ್ತಿವೆ.

ಇಂತಹ ವ್ಯಾಪಾರಿ ಒತ್ತಡಗಳಿಗೆ ತನ್ನ ವ್ಯಾಪಾರಿ ತಂತ್ರವನ್ನೇ ತಿರುಮಂತ್ರ ಮಾಡಿಕೊಂಡಿರುವ ಭಾರತ ಸರಕಾರವು, ಅಮೆರಿಕದ ಜೊತೆ ಪ್ರತಿಸುಂಕದ ಮಾತುಕತೆಗಳಲ್ಲಿ ಇದನ್ನೊಂದು ‘ಟ್ರಂಪ್ ಕಾರ್ಡ್’ ಆಗಿ ಬಳಸಲು ಹೊರಟಂತಿದೆ. ಭಾರತ

ಸರಕಾರವು ಪರಮಾಣು ದುರಂತಗಳ ವೇಳೆ ನಾಗರಿಕ ಹೊಣೆಗಾರಿಕೆ ಕಾಯ್ದೆಯಲ್ಲಿ ವಿದೇಶೀ ಕಂಪೆನಿಗಳ ಅನುಕೂಲಕ್ಕೆ ತಕ್ಕಂತೆ ಬದಲಾವಣೆಗಳನ್ನು ತರಲು ತೀರ್ಮಾನಿಸಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿವೆ.

ಭಾರತ ಸರಕಾರವು ತನ್ನ ಕೈಯಲ್ಲಿರುವ ಪರಮಾಣು ಶಕ್ತಿ ಕ್ಷೇತ್ರದಂತಹ ಆಯಕಟ್ಟಿನ ಕ್ಷೇತ್ರ ಗಳನ್ನು ಖಾಸಗಿಯವರ ಮತ್ತು ವಿದೇಶಿ ಉದ್ಯಮಗಳ ಸುಪರ್ದಿಗೆ ಹರಿವಾಣದಲ್ಲಿಟ್ಟು ಒಪ್ಪಿಸುವ ಮತ್ತು ಆಪತ್ತಿನ ಸ್ಥಿತಿಗಳಲ್ಲಿ ನಮ್ಮ ಹಿತಾಸಕ್ತಿಗಳ ರಕ್ಷಣೆಗೆಂದು ಮಾಡಿಕೊಂಡಿರುವ ಕಾನೂನುಗಳನ್ನು ಖಾಸಗಿಯವರ ಮೂಗಿನ ನೇರಕ್ಕೆ ಹೊಂದುವಂತೆ

ಸಡಿಲುಗೊಳಿಸುವ ತೀರ್ಮಾನಗಳು ಸಂಸತ್ತಿನಲ್ಲಿ ಮತ್ತು ಸಾರ್ವಜನಿಕವಾಗಿ ಸಾಕಷ್ಟು ಚರ್ಚೆ ಆಗದೇ ಜಾರಿಗೆ ಬರುವುದು ದೇಶದ ಹಿತದೃಷ್ಟಿಯಿಂದ ಒಳ್ಳೆಯ ನಿರ್ಧಾರವಲ್ಲ. ಇಂತಹ ನಿರ್ಧಾರಗಳು ಮತ್ತೆ ಹಿಂದಿರುಗಲಾಗದ ಹಲವು ಸನ್ನಿವೇಶಗಳನ್ನು ಸೃಷ್ಟಿಸಬಹುದು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ರಾಜಾರಾಂ ತಲ್ಲೂರು

contributor

Similar News