ಕಾಂಗ್ರೆಸ್‌ಗೆ ಸ್ಥಾನ ಉಳಿಸಿಕೊಳ್ಳುವ ಹವಣಿಕೆ, ಬಿಜೆಪಿಗೆ ಗೆಲ್ಲುವ ತವಕ!

Update: 2018-10-25 07:17 GMT

ಬಂಟ್ವಾಳ, ಅ.18: ಬಂಟ್ವಾಳ ವಿಧಾನಸಭಾ ಕ್ಷೇತ್ರದ ಪುರಸಭೆಯ ಚುನಾವಣಾ ಕಾವು ಮುಗಿದು ಕೊಂಚ ನಿಟ್ಟುಸಿರು ಬಿಡುತ್ತಿರುವ ರಾಜಕಾರಣಿಗಳಿಗೆ ಇದೀಗ ಸಂಗಬೆಟ್ಟು ತಾಪಂ ಉಪಚುನಾವಣೆ ಎದುರಾಗಿದೆ. ಈ ಕ್ಷೇತ್ರಕ್ಕೆ ಸಂಬಂಧಿಸಿ ಈಗಾಗಲೇ ರಾಜಕೀಯ ಚಟುವಟಿಕೆ ಶುರುವಾಗಿದ್ದು, ನಾಮಪತ್ರ ಪ್ರಕ್ರಿಯೆ ಮುಕ್ತಾಯವಾಗಿದೆ.

ಅ.28ರಂದು ಬೆಳಗ್ಗೆ 7ರಿಂದ ಸಂಜೆ 5ರವರೆಗೆ ಚುನಾವಣೆ ನಡೆಯಲಿದ್ದು, ಅ. 31ರಂದು ಬೆಳಗ್ಗೆ 8ರಿಂದ ಮತ ಎಣಿಕಾ ಕಾರ್ಯವು ಬಂಟ್ವಾಳ ಮಿನಿವಿಧಾನ ಸೌಧದಲ್ಲಿ ನಡೆಯಲಿದೆ.

ಯಾಕಾಗಿ ಉಪಚುನಾವಣೆ?

 ಮಾಜಿ ಸಚಿವ ಬಿ. ರಮಾನಾಥ ರೈ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ, ಸಂಗಬೆಟ್ಟು ತಾಪಂ ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲಿತ ಅ್ಯರ್ಥಿಯಾಗಿ ಗೆದ್ದಿರುವ ಪ್ರಭಾಕರ ಪ್ರಭು ಕಳೆದ ವಿಧಾಸಭಾ ಚುನಾವಣೆಯ ಸಂದಭರ್ದಲ್ಲಿ ತಾಪಂ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಬಿಜೆಪಿಗೆ ಸೇರಿದ್ದರಿಂದ ಈ ಸ್ಥಾನ ತೆರವಾಗಿದೆ. ಈ ಹಿನ್ನೆಲೆಯಲ್ಲಿ ಉಪಚುನಾವಣೆ ನಡೆಯಲಿದೆ.

ಕಣದಲ್ಲಿ ಯಾರ್ಯಾರು?

ಈಗಾಗಲೇ ಇಬ್ಬರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಕಾಂಗ್ರೆಸ್‌ನಿಂದ ದಿನೇಶ್ ಸುಂದರ ಶಾಂತಿ ಹಾಗೂ ಬಿಜೆಪಿಯಿಂದ ಪ್ರಭಾಕರ ಪ್ರಭು ನಡುವೆ ನೇರ ಸ್ಪರ್ಧೆ ನಡೆಯಲಿದೆ. ದಿನೇಶ್ ಸುಂದರ ಕಾಂಗ್ರೆಸ್ ಪಕ್ಷದಲ್ಲಿ ಓಡಾಟ ನಡೆಸಿದ್ದು, ಕುಕ್ಕಿಪ್ಪಾಡಿ ಗ್ರಾಪಂನ ಅಧ್ಯಕ್ಷರಾಗಿದ್ದಾರೆ. ಯುವ ನಾಯಕರಾಗಿ ಈ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಪ್ರಭಾಕರ ಪ್ರಭು, ಸಂಗಬೆಟ್ಟು ಪಂಚಾಯತ್‌ನಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ, ಮಾಜಿ ತಾಪಂ ಸದ್ಯರಾಗಿ ಅನುಭವ ಹೊಂದಿದವರು.

ಮಾಜಿ-ಹಾಲಿ ಶಾಸಕರ ಫೀಲ್ಡ್

ಎರಡೂ ಕಡೆಯಿಂದ ಭರದಿಂದ ಚುನಾವಣಾ ಮತಯಾಚನೆ ನಡೆಯುತ್ತಿದೆ. ಕಾಂಗ್ರೆಸ್‌ನಿಂದ ಮಾಜಿ ಸಚಿವ ಬಿ.ರಮಾನಾಥ ರೈ ಚುನಾವಣೆಯ ಮತಯಾಚನೆಯ ಅಖಾಡಕ್ಕಿಳಿದರೆ, ಬಿಜೆಪಿಯಿಂದ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ರಾಜೇಶ್ ನಾಯ್ಕಿ ಅವರು ಸಂಗಬೆಟ್ಟು ಕ್ಷೇತ್ರದಲ್ಲಿಯೇ ಬೀಡುಬಿಟ್ಟಿದ್ದು, ಹಲವಾರು ಸಭೆೆ ನಡೆಸುವ ಮೂಲಕ ಗೆಲ್ಲಲು ಪ್ರಯತ್ನ ನಡೆಸುತ್ತಿದ್ದಾರೆ.

ಹಾಗಾಗಿ ಈ ಉಪಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸ್ಥಾನವನ್ನು ತಮ್ಮ ಕೈಯಲ್ಲೆ ಉಳಿಸುವ ಪ್ರತಿಷ್ಠೆಯಾಗಿದ್ದರೆ, ಬಿಜೆಪಿಗೆ ಅಧಿಕಾರವನ್ನು ಪಡೆಯುವ ಉತ್ಸುಕವಾಗಿದೆ. ಇಲ್ಲಿ ಎಸ್‌ಡಿಪಿಐ ಹಾಗೂ ಜೆಡಿಎಸ್, ಅ್ಯರ್ಥಿಗಳನ್ನು ಕಣಕ್ಕಿಲಿಸದೆ ಸ್ಪರ್ಧೆಯಿಂದ ದೂರ ಉಳಿದಿದೆ.

ಮತದಾರರೆಷ್ಟು - ಎಲ್ಲೆಲ್ಲಿ ಮತಗಟ್ಟೆಗಳು?

ಒಟ್ಟು 10 ಮತಗಟ್ಟೆಗಳಿವೆ. ಇವುಗಳಲ್ಲಿ ಎರಡು ಸಾಮಾನ್ಯ ಮತಗಟ್ಟೆಗಳಾದರೆ, ಉಳಿದ 8 ಮತಗಳು ಸೂಕ್ಷ್ಮ ಮತಗಟ್ಟೆಗಳಾಗಿವೆ. ಅವುಗಳೆಂದರೆ, ಕೆರಬಳಿ ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ-ಸೂಕ್ಷ್ಮ ಮತಗಟ್ಟೆ, ಸಿದ್ಧಕಟ್ಟೆ ಸರಕಾರಿ ಪದವಿಪೂರ್ವ ಕಾಲೇಜು-ಸೂಕ್ಷ್ಮ ಮತಗಟ್ಟೆ, ಸಿದ್ಧಕಟ್ಟೆ ಸೇಂಟ್ ಪ್ಯಾಟ್ರಿಕ್ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ (ಪೂರ್ವ ಹಾಗೂ ಪಶ್ಚಿಮ ಬಾಗ) 2 ಸೂಕ್ಷ್ಮ ಮತಗಟ್ಟೆಗಳು, ಕರ್ಪೆ ಸಮುದಾಯ ವನ-ಸೂಕ್ಷ್ಮ ಮತಗಟ್ಟೆ, ಕುಕ್ಕಿಪಾಡಿ ಸೇಂಟ್ ಬಾರ್ತಲೋಮಿಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ (ಪೂರ್ವ ಹಾಗೂ ಪಶ್ಚಿಮ ವಿಬಾಗ) 2 ಸೂಕ್ಷ್ಮ ಮತಗಟ್ಟೆಗಳು,

ಸಿದ್ಧಕಟ್ಟೆ ಸೇಂಟ್ ಪ್ಯಾಟ್ರಿಕ್ ಇಂಗ್ಲಿಷ್ ಮೀಡಿಯಂ ಸ್ಕೂಲ್(ಚರ್ಚ್ ಬಳಿ) ಸೂಕ್ಷ್ಮ ಮತಗಟ್ಟೆ, ಎಲಿಯನಡುಗೋಡು ಹಿರಿಯ ಪ್ರಾಥಮಿಕ ಶಾಲೆ ಹಾಗೂ ಎಲಿಯನಡುಗೋಡು ಅಂಗನವಾಡಿ ಕೇಂದ್ರ 2 ಸಾಮಾನ್ಯ ಮತಗಟ್ಟೆಗಳು.

ಸಂಗಬೆಟ್ಟು ಕ್ಷೇತ್ರದಲ್ಲಿ 4,685 ಪುರುಷರು, 4,768 ಮಹಿಳೆಯರು ಸೇರಿ ಒಟ್ಟು 9,453 ಮತದಾರರು ತಮ್ಮ ಹಕ್ಕನ್ನು ಚಲಾಯಿಸುವರು.

ಸಂಗಬೆಟ್ಟು ಉಪಚುನಾವಣೆಗೆ ತಾಲೂಕಾಡಳಿತ ಸಕಲ ಪೂರ್ವ ತಯಾರಿಯನ್ನು ಮಾಡಿ ಕೊಂಡಿದ್ದು, ಶಾಂತ ಮತದಾನಕ್ಕೆ ಸಿದ್ಧತೆ ನಡೆಸಿದೆ.

 ಪುರಂದರ ಹೆಗ್ಡೆ, ಬಂಟ್ವಾಳ ತಹಶೀಲ್ದಾರ್

Writer - ಅಬ್ದುಲ್ ರಹಿಮಾನ್ ತಲಪಾಡಿ

contributor

Editor - ಅಬ್ದುಲ್ ರಹಿಮಾನ್ ತಲಪಾಡಿ

contributor

Similar News