ಮಕ್ಕಳೇ ಮುಂದಿನ ಆಸ್ತಿಯಾಗಲಿ : ಎ.ಕೆ ರಾಮೇಶ್ವರ
ಮೂಡುಬಿದಿರೆ, ನ.15: ವಿದ್ಯಾರ್ಥಿಸಿರಿಯಲ್ಲಿ ನೃತ್ಯ, ಸಂಗೀತ, ಕವನವನ್ನು ಪ್ರಸ್ತುತಪಡಿಸಿದ್ದು, ಅದು ಮಕ್ಕಳಲ್ಲಿ ಕೊನೆಯವರೆಗೂ ಮುಂದುವರೆಸಿಕೊಂಡು ಹೋಗಬೇಕು.ಮಕ್ಕಳು ಮುಂದೆ ತಮ್ಮ ವೃತ್ತಿ ಜೀವನದಲ್ಲಿ ಆಸ್ತಿ ಮಾಡುವುದರ ಬದಲು, ಮಕ್ಕಳೇ ಮುಂದಿನ ಆಸ್ತಿಯಾಗಬೇಕು, ವಿದ್ಯಾರ್ಥಿಸಿರಿಯಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಭಾಗವಹಿಸಿದ್ದನ್ನು ನೋಡಿದಾಗ ಡಾ.ಮೋಹನ್ ಆಳ್ವರಿಗೆ ಮಕ್ಕಳ ಮೇಲೆ ಇರುವಂತಹ ವಿಶ್ವಾಸ ಹಾಗೂ ಪ್ರೀತಿ ಅನನ್ಯವಾದುದು ಎಂದು ವಿದ್ಯಾರ್ಥಿಸಿರಿ ಗೌರವ ಪ್ರಶಸ್ತಿ ಪುರಸ್ಕøತ ಎ.ಕೆ ರಾಮೇಶ್ವರ ಅಭಿಪ್ರಾಯಪಟ್ಟರು.
ಆಳ್ವಾಸ್ ವಿದ್ಯಾರ್ಥಿಸಿರಿ-2018ರ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.ವಿದ್ಯಾರ್ಥಿಸಿರಿಯಿಂದಾಗಿ ಅನೇಕ ಮಕ್ಕಳ ಪ್ರತಿಭೆ ಅನಾವರಣಗೊಂಡಿರುವುದರಿಂದ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಉನ್ನತ ಸ್ಥಾನವನ್ನು ಅಲಂಕರಿಸಲು ಸಾಧ್ಯವಾಗಿದೆ. ಮಕ್ಕಳ ಸಾಹಿತಿಯಾಗಿ ವಿದ್ಯಾರ್ಥಿಸಿರಿ ಪ್ರಶಸ್ತಿ ಪಡೆದಿರುವುದು ಸಂತಸ ತಂದಿದೆ ಎಂದರು.
ಆಳ್ವಾಸ್ ಆಂಗ್ಲ ಶಾಲಾ ವಿದ್ಯಾರ್ಥಿ ದೀಕ್ಷಿತ್ ಸಮಾರೋಪ ಭಾಷಣದ ಮಾತುಗಳನ್ನಾಡಿ, ಕನ್ನಡ ಸಾಹಿತ್ಯದಂತಹ ಅದೆಷ್ಟೋ ಸಮ್ಮೇಳನಗಳು ನಡೆದರೂ ಕೂಡ ಅದು ಕಾರ್ಯರೂಪಕ್ಕೆ ಬರಬೇಕು. ಜೊತೆಗೆ ಅವರನ್ನು ಸಾಹಿತ್ಯದೆಡೆಗೆ ಸೆಳೆಯುವ ಇನ್ನಷ್ಟು ಪ್ರಯತ್ನ ನಡಯಬೇಕು. ಇಂದಿನ ಆಂಗ್ಲ ಕವಿತೆಗಳಿಂದ ಮಕ್ಕಳು ಅರ್ಥವಿಲ್ಲದ ಕವಿತೆಯನ್ನು ಹಾಡುವ ಸ್ಥಿತಿ ಉಂಟಾಗಿದೆ. ಇಂದಿನ ಶಿಕ್ಷಣ ಸಂಸ್ಥೆಗಳು ಹಣಗಳ ಯಂತ್ರದಂತೆ ಕಾರ್ಯನಿರ್ವಹಿಸುತ್ತಿದೆ. ಶಾಲೆಗಳಲ್ಲಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚಾಗಿದ್ದು, ವಿದ್ಯಾರ್ಥಿಗಳು ತಮಗೆ ಬಂದ ಅವಕಾಶವನ್ನು ಸರಿಯಾಗಿ ಉಪಯೋಗಿಸಬೇಕು ಎಂದು ಹೇಳಿದರು.
ವಿದ್ಯಾರ್ಥಿಸಿರಿ ಸಮ್ಮೇಳನಾಧ್ಯಕ್ಷೆ ಸನ್ನಿಧಿ ಟಿ.ರೈ ಪೆರ್ಲ, ಆಳ್ವಾಸ್ ವಿದ್ಯಾರ್ಥಿಸಿರಿಯ ಉಪಾಧ್ಯಕ್ಷ ಅಂಡಾರು ಗುಣಪಾಲ ಹೆಗ್ಡೆ ಉಪಸ್ಥಿತರಿದ್ದರು. ಮೂಡುಬಿದಿರೆ ರೋಟರಿ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿನಿ ನಿಹಾರಿಕಾ ಶೆಟ್ಟಿ ಸ್ವಾಗತಿಸಿದರು. ಕಿನ್ನಿಗೋಳಿ ರೋಟರಿ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿನಿ ಶ್ರುತಿಕಾ ನಿರೂಪಿಸಿದರು. ಮೂಡುಬಿದಿರೆ ಆಳ್ವಾಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಮ್ರಿಡಾನಿ ವಂದಿಸಿದರು.