ಕನ್ನಡ ಪದ ಸೃಷ್ಟಿ- ಸ್ವೀಕರಣ, ಬಳಕೆ- ಪ್ರೊ.ಕೃಷ್ಣೇಗೌಡ

Update: 2018-11-16 13:57 GMT

ಮೂಡುಬಿದಿರೆ, ನ. 16: ಭಾಷೆಯನ್ನು ಬಳಸದೇ ಇದ್ದರೆ ಭಾಷೆ ಬೆಳೆಯಲು ಸಾಧ್ಯವಿಲ್ಲ. ಶಿಷ್ಠ ಜ್ಞಾನರಿಗೆ ಭಾಷೆಯ ಬಳಕೆಯೂ ಇಲ್ಲ, ಭಾಷಾಜ್ಞಾನದ ಬಗ್ಗೆ ಅರಿವು ತುಂಬಾ ಕಡಿಮೆ. ಇವರಿಗಿಂತ ಹೆಚ್ಚು  ಗ್ರಾಮೀಣ ಪ್ರದೇಶದ ಜನರು ಪದಗಳನ್ನು ಮಾತಿನ ಮೂಲಕವೇ ಸೃಷ್ಠಿಸುತ್ತಾರೆ. ಈ ಜನರ ಭಾಷೆಗಳಲ್ಲಿ ಭಾವನೆಗಳಿರುತ್ತವೆ. ಆದ್ದರಿಂದ ಇವರು ಸೃಷ್ಟಿಸುವ ಪದಗಳು ವೇಗವಾಗಿ ವಿಸ್ತರವಾಗುತ್ತದೆ ಎಂದು ಸಾಹಿತಿ ಪ್ರೊ.ಎಂ. ಕೃಷ್ಣೇ ಗೌಡ ಹೇಳಿದರು.

ಆಳ್ವಾಸ್ ನುಡಿಸಿರಿಯಲ್ಲಿ ಕನ್ನಡ ಪದಸೃಷ್ಟಿ- ಸ್ವೀಕರಣ ಮತ್ತು ಬಳಕೆ ಎಂಬ ವಿಷಯದ ಕುರಿತು ರತ್ನಾಕರವರ್ಣಿ ವೇದಿಕೆಯಲ್ಲಿ ನಡೆದ ವಿಶೇಷೋಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನ್ನಡ ಭಾಷೆಯೂ ಅನುಭವದಿಂದ ತನ್ನದೇ ಸ್ವರೂಪ ಪಡೆದಿದೆ. ಆದ್ದರಿಂದ ಈ ಭಾಷೆಯನ್ನು ಅರಗಿಸಿಕೊಳ್ಳುವುದು ಸುಲಭ. ಪದಗಳ ಸೃಷ್ಠಿಗೆ ಅಗತ್ಯವಾದದ್ದು ಸಹಜವಾದ ಮಾತುಗಳು. ಎಲ್ಲರೊಂದಿಗೆ ಬೆರೆತು ಮಾತನಾಡಿದಾಗಲೇ ಪದ ಸೃಷ್ಠಿಯಾಗುವುದು. ಮಕ್ಕಳೊಂದಿಗೆ ಮಾತನಾಡುವಾಗ ಶಿಶುವಿನ ಕೆಲವು ಪದಗಳನ್ನು ಬಳಸುತ್ತೇವೆ. ಅದು ಮಕ್ಕಳಿಗಾಗಿಯೇ ಜನಿಸಿದ ಪದಗಳು. ಕನ್ನಡ ಭಾಷೆಯ ಒಂದು ಪದದಿಂದ ಅನೇಕ ಪದಗಳು ಹುಟ್ಟುತ್ತವೆ ಎಂದು ತಿಳಿಸಿದರು.

ಕ್ನನಡ ಭಾಷೆಯ ಬಹುತ್ವದ ಬಗ್ಗೆ ವಿವರಿಸಿದ ಪ್ರೊ.ಎಂ.ಕೃಷ್ಣೇಗೌಡ, ಇಂಗ್ಲಿಷ್‍ನಲ್ಲಿ ಒಂದೇ ರೀತಿಯ ಶಿಶುಗೀತೆಗಳು ಕಂಡುಬರುತ್ತವೆ. ಆದರೆ ಕನ್ನಡ ಭಾಷೆಗಳು ಪ್ರದೇಶಕ್ಕನುಸಾರವಾಗಿ ಬದಲಾಗುವುದರಿಂದ ಅತೀ ಹೆಚ್ಚು ಮತ್ತು ಸುಂದರವಾದ ಶಿಶು ಗೀತೆಗಳು ಹುಟ್ಟಿಕೊಂಡಿವೆ. ಕನ್ನಡ ಪದವನ್ನು ಬೆಳೆಸಿ ಉಳಿಸುವವರು ಗ್ರಾಮೀಣ ಪ್ರದೇಶದವರು ಎಂಬುದು ನಮ್ಮ ಕಣ್ಮುಂದೆ ಕಾಣಿಸುತ್ತಿದೆ. ನಗರ ಪ್ರದೇಶದವರು ಒಂದು ದಿನದಲ್ಲಿ 100 ಕನ್ನಡ ಪದಗಳನ್ನು ಮಾತನಾಡಿದರೆ, ಹಳ್ಳಿಗರು ಅದ್ಭುತ ಪದ ಜೋಡಣೆಗಳಿಂದ 500ಕ್ಕೂ ಹೆಚ್ಚು ಶಬ್ಧಗಳನ್ನು ಮಾತನಾಡುತ್ತಾರೆ ಎಂದು ಕನ್ನಡ ಭಾಷೆಯ ಸೌಂದರ್ಯದ ಬಗ್ಗೆ ವಿವರಿಸಿದರು.

ಕರ್ನಾಟಕದ ಒಂದು ಭಾಗವಾದ ತುಳು ಭಾಷೆಯೂ ಸಾಹಿತ್ಯ, ಮಾಧ್ಯಮ, ಸಿನೆಮಾ ಕ್ಷೇತ್ರದಲ್ಲಿ ಬೆಳೆಯದಿದ್ದರೂ ಇವರಲ್ಲಿ ಜನಪದ ಸಂಪತ್ತು ಅಗಾಧವಾಗಿದೆ. ಕೇವಲ ಮಾತಿನ ಮೂಲಕವೇ ತಮ್ಮ ಭಾಷೆಯನ್ನು ಬೆಳೆಸುತ್ತಾರೆ ಉಳಿಸುತ್ತಾರೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ನುಡಿಸಿರಿ ಸಮ್ಮೇಳನದ ಅಧ್ಯಕ್ಷೆ ಡಾ.ಮಲ್ಲಿಕಾ ಎಸ್. ಘಂಟಿ ಮತ್ತು ನುಡಿಸಿರಿ ಸಮಿತಿ ಉಪಾಧ್ಯಕ್ಷ ಡಾ.ಸಂಪತ್ ಕುಮಾರ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕನ್ನಡ ವಿಭಾಗದ ಉಪನ್ಯಾಸಕಿ ಸುಧಾರಾಣಿ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News