ಸಮಾಜದ ಕತ್ತಲನ್ನು ಕಳೆದು ಬೆಳಕು ಮೂಡಿಸಿ: ಡಾ ಶ್ರೀನಿವಾಸಮೂರ್ತಿ
ಮೂಡುಬಿದಿರೆ, ನ. 17: ಸ್ವಾತಂತ್ರ್ಯ ಹೋರಾಟ, ಕನ್ನಡಪರ ಹೋರಾಟದಂತಹ ಉತ್ತಮ ಸಮಾಜಮುಖಿ ಚಿಂತನೆಯನ್ನು ಹೊಂದಿರುವವರು ಎಂದಿಗೂ ಆತ್ಮಹತ್ಯೆಯನ್ನು ಮಾಡಿಕೊಳ್ಳುವ ಚಿಂತನೆಯನ್ನು ಕೂಡ ಮಾಡಿಕೊಳ್ಳುದಿಲ್ಲ. ಅದರ ಬದಲು ಸಮಾಜ ಚಿಂತನೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಸಿಡುತ್ತಾರೆ ಎಂದು ಸಾಹಿತಿ ಡಾ. ಕಾ.ವೆಂ.ಶ್ರೀನಿವಾಸಮೂರ್ತಿ ಹೇಳಿದರು.
ಆಳ್ವಾಸ್ ನುಡಿಸಿರಿ ಎರಡನೇ ದಿನ ರತ್ನಾಕರವರ್ಣಿ ವೇದಿಕೆಯಲ್ಲಿ ನಡೆದ ಕವಿಸಮಯ-ಕವಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 'ಸ್ವಕೇಂದ್ರಿತವಾದ ಚಿಂತನೆಯನ್ನು ಒಳಗೊಂಡು ಅಹಂ ಬೆಳೆಸಿದ ಹೇಡಿ ಎಂಬ ವ್ಯಕ್ತಿಯ ಜೊತಗೆ ಸ್ನೇಹವೇ! ಸಮಾಜದಲ್ಲಿ ಸ್ವಹಿತ ಚಿಂತನೆಯನ್ನು ಹೊಂದಿರುವವರೇ ಆತಹತ್ಯೆಯಂತಹ ಹೇಡಿತನದ ಚಿಂತನೆಯನ್ನು ಹೊಂದಿರುತ್ತಾರೆ. ಆದರೆ ಸದಾ ಸಮಾಜಮುಖಿ ಚಿಂತನೆಯನ್ನು ಒಳಗೊಂಡಿರುವವರು ಎಂದಿಗೂ ಅಂತಹ ಚಿಂತನೆಗಳನ್ನು ಮಾಡುವುದಿಲ್ಲ' ಎಂದರು.
ಪ್ರಸ್ತುತ ಸಮಾಜದ ಸ್ಥಿತಿಯನ್ನು ವಿಶ್ಲೇಷಿಸಿದ ಅವರು, ಇಂದು ವ್ಯಕ್ತಿ-ವ್ಯಕ್ತಿಗಳ ನಡುವೆ ಯಾವುದೇ ರೀತಿಯಲ್ಲಿ ಪರಸ್ಪರ ಸಂಬಧವೇ ಇಲ್ಲ.ಎಲ್ಲರು ತಮಗೆ ತಾವೇ ಸುತ್ತಲೂ ನಾಲ್ಕು ಗೋಡೆಗಳನ್ನು ನಿರ್ಮಿಸಿ ಕತ್ತಲಲ್ಲಿ ಇದ್ದಾರೆ.ಇಂದಿನ ಸಮಾಜದಲ್ಲಿ ವ್ಯಕ್ತಿಗಳ ನಡುವೆ ದೂರ ಮಾಡುವ ಆ ಕತ್ತಲನ್ನು ನಾವು ಕಡಿಯಬೇಕು.ನಾವು ಅಂತಹ ಕತ್ತಲನ್ನು ಕಡಿದು ಸಮಾಜದಲ್ಲಿ ಬೆಳಕನ್ನು ಬೆಳಸುವ ಪ್ರಯತ್ನವನ್ನು ಮಾಡಬೇಕು. ಈ ಕೆಲಸ ನಮ್ಮ ಯುವ ಜನತೆಯಿಂದಾಗಬೇಕಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ. ಮಲ್ಲಿಕಾ ಎಸ್ ಘಂಟಿ, ಆಳ್ವಾಸ್ ನುಡಿಸಿರಿ ಸ್ವಾಗತ ಸಮಿತಿ ಉಪಾಧ್ಯಕ್ಷ ಡಾ. ನಾ. ದಾಮೋದರ ಶೆಟ್ಟಿ ಉಪಸ್ಥಿರಿದ್ದರು.