ಆಳ್ವಾಸ್ ನುಡಿಸಿರಿಯು ಕನ್ನಡಿಗರ ವಿವೇಕವನ್ನು ಪರಿಚಯಿಸಿದೆ: ಡಾ. ಮಲ್ಲಿಕಾ.ಎಸ್.ಘಂಟಿ
ಮೂಡುಬಿದಿರೆ, ನ. 18: ರಾಮಾಯಣದಿಂದ ಹಿಡಿದು ಜಾನಪದ ಜಗತ್ತಿನ ವರೆಗೆ ಸಾಹಿತ್ಯವನ್ನು ಪರಿಚಯಿಸಿದ ಆಳ್ವಾಸ್ ನುಡಿಸಿರಿ ಕನ್ನಡ ಸಾಹಿತ್ಯವನ್ನು ಯಾವ ರೀತಿಯಾಗಿ ನೋಡಬೇಕು ಎಂಬುದನ್ನು ಪುರಾವೆ ಸಹಿತವಾಗಿ ಕನ್ನಡ ನಾಡಿನ ಜನತೆಯ ಮಂದೆ ಇರಿಸಿದೆ. ನುಡಿಸಿರಿಗೆ ಬಂದು ಕನ್ನಡ ನಾಡಿನ ಜನರು ವಿವೇಕವಂತರಾಗಿರುದಲ್ಲದೆ ಕನ್ನಡಿಗರ ವಿವೇಕವನ್ನು ಆಳ್ವಾಸ್ ನುಡಿಸಿರಿಯು ಪರಿಚಯಿಸಿದೆ ಎಂದು ಸಮ್ಮೇಳನಾಧ್ಯಕ್ಷೆ ಡಾ. ಮಲ್ಲಿಕಾ. ಎಸ್. ಘಂಟಿ ಅಭಿಪ್ರಾಯಪಟ್ಟರು.
ವಿದ್ಯಾಗಿರಿಯಲ್ಲಿ ಸತತ ಮೂರು ದಿನಗಳ ಕಾಲ ನಡೆದ 'ಆಳ್ವಾಸ್ ನುಡಿಸಿರಿ-2018' ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಆಳ್ವಾಸ್ ನುಡಿಸಿರಿಯು ಮನುಷ್ಯನ ಘನತೆ ಹೆಚ್ಚಿಸಬಹುದಾದ ಅರಿವಿನ ಲೋಕವಿದ್ದಂತೆ, ಈ ನುಡಿಸಿರಿಯನ್ನು ಕರ್ನಾಟಕ ಅನುಕರಣೆ ಮಾಡಬೇಕು, ಪ್ರಸಕ್ತ ಸಮಾಜದಲ್ಲಿರುವ ಆತಂಕವನ್ನು ನೀಗಿಸಬೇಕಾದರೆ ನಾವು ಸಾಹಿತ್ಯ, ಕಲೆ, ಸಂಸ್ಕೃತಿಯತ್ತ ಮುಖ ಮಾಡಬೇಕು ಇದನ್ನು ಆಳ್ವಾಸ್ ನುಡಿಸಿರಿ ಸತ್ಯ ಮಾಡಿದೆ ಎಂದರು.
ಕೊಳು-ಕೊಡುಗೆ ಏರ್ಪಡಿಸೋಣ: ಮನೆತನದ ಪ್ರೀತಿ ಸೌಂದರ್ಯವನ್ನು ನೋಡಬೇಕಾದರೆ ಕರಾವಳಿಗರು ಉತ್ತರ ಕನ್ನಡದ ಕಡೆಗೆ ಬರಬೇಕು, ಅಷ್ಟು ಮಾತ್ರವಲ್ಲದೆ ಹೆಣ್ಣು ಮಕ್ಕಳನ್ನು ಹೇಗೆ ನೋಡಿಕೊಳ್ಳಬೇಕು, ಹೇಗೆ ನಡೆಸಿಕೊಳ್ಳಬೇಕು ಎಂಬುದನ್ನು ಕರಾವಳಿಗರಿಂದ ಉತ್ತರ ಕರ್ನಾಟಕದ ಜನರು ತಿಳಿದುಕೊಳ್ಳಬೇಕು ಆ ಮೂಲಕ ಸೈದ್ಧಾಂತಿಕ ಕೊಳು-ಕೊಡುಗೆಯನ್ನು ಮಾಡಿಕೊಳ್ಳಬೇಕು ಎಂದರು.
ಬೇಧವೆಂಬ ಗೋಡೆ: ವೈಜ್ಞಾನಿಕ ಮನೋಭಾವ, ಮಾನವೀಯತೆ, ಸಾಮಾಜಿಕ ನೆಲೆಯ ಬಗ್ಗೆ ಅರಿವಿಲ್ಲದವರು ದೇವರು ಮತ್ತು ಭಕ್ತರ ನಡುವೆ ಒಂದು ತೆರನಾದ ಗೋಡೆಯನ್ನು ನಿರ್ಮಿಸಿದ್ದಾರೆ. ಇದನ್ನು ತಡೆದು ನಾವು ಮೂಂದುವರಿಯಬೇಕು ಎಂದು ಹೇಳಿದರು. ಆಳ್ವರಿಗೆ ಈ ಸಂಭ್ರಮದಿಂದ ಏನು ಲಾಭ ? ಎಂಬುದನ್ನು ಅವರ ಬಳಿ ಪ್ರಶ್ನಿಸಿದರೆ ಅವರ ಬಳಿ ಉತ್ತರ ಇರಲಾರದು ಎಂದು ಹೇಳಿದರು.
ಆಳ್ವಾಸ್ ನುಡಿಸಿರಿ ಪ್ರಶಸ್ತಿ
ಕನ್ನಡ ನಾಡು, ನುಡಿಗೆ ಶ್ರಮಿಸಿದ 12 ಮಂದಿ ಸಾಧಕರಾದ ಡಾ.ಜಿ.ಡಿ ಜೋಶಿ ಮುಂಬೈ (ಸಾಹಿತ್ಯ, ಶಿಕ್ಷಣ), ಡಾ.ಎ.ವಿ.ನರಸಿಂಹಮೂರ್ತಿ ಮೈಸೂರು (ಇತಿಹಾಸ ತಜ್ಞ), ಡಾ. ಭಾರತಿ ವಿಷ್ಣುವರ್ಧನ ಬೆಂಗಳೂರು ( ಸಿನಿಮಾ), ಡಾ. ಅರುಂಧತಿ ನಾಗ್ (ರಂಗಭೂಮಿ), ಎಲ್. ಬಂದೇನವಾಝ್ ಖಲೀಫ್ ಆಲ್ದಾಳ ಕಲಬುರಗಿ (ರಂಗ ನಿರ್ದೇಶನ), ಡಾ.ಕೆ. ರಮಾನಂದ ಬನಾರಿ ಕಾಸರಗೋಡು ( ಸಾಹಿತ್ಯ), ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ (ಸಾಹಿತ್ಯ,ವಿಮರ್ಶೆ), ಪ್ರೊ. ಎ.ವಿ ನಾವಡ ಮಂಗಳೂರು ( ಸಾಹಿತ್ಯ), ಫಾದರ್ ಪ್ರಶಾಂತ್ ಮಾಡ್ತ (ಸಾಹಿತ್ಯ ಸೇವೆ) ಹೊ.ನಾ. ರಾಘವೇಂದ್ರ (ಸುಗಮ ಸಂಗೀತ), ಅರುವಕೊರಗಪ್ಪ ಶೆಟ್ಟಿ (ಯಕ್ಷಗಾನ) ಡಾ. ಮೈಸೂರು ನಟರಾಜ, ವಾಷಿಂಗ್‍ಟನ್ (ಸಾಹಿತ್ಯ ಸೇವೆ) ಇವರಿಗೆ 25,000 ನಗದು ಪುರಸ್ಕಾರ, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ಸಹಿತ ಆಳ್ವಾಸ್ ನುಡಿಸಿರಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಹಿರಿಯ ಸಂಶೋಧಕ ಡಾ. ಷ. ಶೆಟ್ಟರ್, ಶಾಸಕ ಉಮಾನಾಥ ಕೋಟ್ಯಾನ್, ವಿಧಾನ ಪರಿಷತ್ ಸದಸ್ಯ ಎಸ್. ಎಲ್. ಭೋಜೇಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಉಪಸ್ಥಿತರಿದ್ದರು.
ಆಳ್ವಾಸ್ ನುಡಿಸಿರಿ ರೂವಾರಿ ಡಾ. ಎಂ. ಮೋಹನ ಆಳ್ವ ಸ್ವಾಗತಿಸಿ, ಪ್ರಾಸ್ತವಿಕ ನುಡಿಗಳನ್ನಾಡಿದರು. ಅಂಡಾರು ಗುಣಪಾಲ ಹೆಗ್ಡೆ ವಂದಿಸಿದರು. ಉಪನ್ಯಾಸಕ ಕಿದೂರು ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.