ಬೆಂಗಳೂರು: ಕಾಡುಮಲ್ಲೇಶ್ವರ ಕಡಲೆಕಾಯಿ ಪರಿಷೆಗೆ ಚಾಲನೆ

Update: 2018-11-23 13:46 GMT

ಬೆಂಗಳೂರು, ನ.23: ಕಾಡುಮಲ್ಲೇಶ್ವರ ಗೆಳೆಯರ ಬಳಗ ಸಹಯೋಗದೊಂದಿಗೆ ನಗರದ ಮಲ್ಲೇಶ್ವರಂನ ಕಾಡುಮಲ್ಲೇಶ್ವರ ಬಯಲು ರಂಗ ಮಂಟಪದಲ್ಲಿ ಇಂದಿನಿಂದ ನಾಲ್ಕು ದಿನಗಳವರೆಗೆ ನಡೆಯುವ ಕಡಲೆಕಾಯಿ ಪರಿಷೆಗೆ ಚಾಲನೆ ದೊರಕಿದೆ.

ಶುಕ್ರವಾರ ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಚಾಲನೆ ನೀಡಿದರು. ಬಳಿಕ ಅವರು, ನಮ್ಮ ಸಂಸ್ಕೃತಿ, ಪರಂಪರೆಯನ್ನು ಯುವ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಕಡಲೆಕಾಯಿ ಪರಿಷೆ ಹಮ್ಮಿಕೊಳ್ಳುತ್ತ ಬರಲಾಗಿದೆ. ಇದರಿಂದ ಕಡಲೆಕಾಯಿ ಬೆಳೆಗಾರರಿಗೂ ಮಾರಾಟಗಾರರಿಗೂ ಅನುಕೂಲವಾಗಲಿದೆ. ಪರಿಷೆಗೆ ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ ಎಂದು ಹೇಳಿದರು.

ಶಾಸಕ ಅಶ್ವಥ್ ನಾರಾಯಣ ಮಾತನಾಡಿ, ಅಕ್ಕ-ಪಕ್ಕದ ಊರುಗಳಿಂದ ಬಂದ ರೈತರು ತಾವು ಬೆಳೆದ ಕಡಲೆ ಕಾಯಿಗಳನ್ನು ಇಲ್ಲಿಗೆ ಹೊತ್ತು ತರುತ್ತಾರೆ. ಇದರಿಂದ ಅವರಿಗೆ ವ್ಯಾಪಾರ ಆಗುವ ಜೊತೆಗೆ, ಬೆಂಗಳೂರಿಗರಿಗೆ ಹತ್ತಾರು ಮಾದರಿಯ ಕಡಲೆಕಾಯಿ ಕೊಳ್ಳಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಮಲ್ಲೇಶ್ವರ ಚಿತ್ರ ಪರಿಷೆಗೆ ಚಾಲನೆ ನೀಡಿ ಮಾತನಾಡಿದ ಚಿತ್ರಕಲಾ ಪರಿಷತ್ತು ಅಧ್ಯಕ್ಷ ಬಿ.ಎಲ್.ಶಂಕರ್, ಕಡಲೆಕಾಯಿ ಮಾತ್ರವಲ್ಲದೆ, ಚಿತ್ರ ಕಲಾವಿದರಿಗೆ ವೇದಿಕೆ ಕಲ್ಪಿಸಿರುವುದು ಸಂತಸ ತಂದಿದೆ. ಇದರಿಂದ ಕಲೆಗಾರರಿಗೆ ಪ್ರೋತ್ಸಾಹ ದೊರೆಯಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಬಿಬಿಎಂಪಿ ಸದಸ್ಯ ಜಿ.ಮಂಜುನಾಥ ರಾಜು, ಪತ್ರಕರ್ತ ಶಿವಾನಂದ ತಗಡೂರು, ಕಾಡುಮಲ್ಲೇಶ್ವರ ಗೆಳೆಯರ ಬಳಗದ ಅಧ್ಯಕ್ಷ ಬಿ.ಕೆ.ಶಿವರಾಂ ಸೇರಿದಂತೆ ಪ್ರಮುಖರಿದ್ದರು.

ಹತ್ತಾರು ಕಾರ್ಯಕ್ರಮಗಳು

ನ.24 ರಂದು ಹಸಿರು ಚೈತನ್ಯ ಪುನಶ್ಚೇತನೋತ್ಸವ, ಡಾ.ರಾಜ್ ನೆನಪಿನ ಹುಣ್ಣಿಮೆ ಹಾಡು ಕಾರ್ಯಕ್ರಮ ಆಯೋಜಿಸಲಾಗಿದ್ದು, ನಿರ್ದೇಶಕ ಎಚ್.ಆರ್.ಭಾರ್ಗವ, ರಂಗಕರ್ಮಿ ಶ್ರೀನಿವಾಸ ಜಿ.ಕಪ್ಪಣ್ಣ, ಮಾಜಿ ಸಚಿವ ಎಚ್.ಎಂ.ರೇವಣ್ಣ ಪಾಲ್ಗೊಳ್ಳಲಿದ್ದಾರೆ. ಅದೇ ರೀತಿ, ನ.25ರಂದು ಸಂಜೆ 5.30ಕ್ಕೆ ಹಮ್ಮಿಕೊಳ್ಳಲಾಗಿರುವ ಸಮಾರಂಭದಲ್ಲಿ ಪದ್ಮಶ್ರೀ ಸೂಲಗಿತ್ತಿ ನರಸಮ್ಮ ಹಾಗೂ ಕಾಮೇಗೌಡ ಮಳವಳ್ಳಿ ಅವರಿಗೆ ಹುಣ್ಣಿಮೆ ಹಾಡು ವಾರ್ಷಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಇದೆ.

ಕೊನೆಯ ದಿನ ನ.26 ರಂದು ಸಂಜೆ 4 ಗಂಟೆಗೆ ಕಾಡುಮಲ್ಲೇಶ್ವರ ದೇವಾಲಯದ ಆವರಣದಲ್ಲಿ ಕಾಡು ಮಲ್ಲೇಶ್ವರ ಸ್ವಾಮಿಗೆ ಕಡಲೆಕಾಯಿ ಅಭಿಷೇಕ ನಡೆಯಲಿದೆ. ಸಂಜೆ 6ಕ್ಕೆ ಸಮಾರೋಪ ಸಮಾರಂಭ ಕಾರ್ಯಕ್ರಮ ಆಯೋಜಿಸಲಾಗಿದೆ.

ವಿವಿಧ ಪ್ರದೇಶಗಳ ಕಡಲೆಕಾಯಿ ಪರಿಷೆಯಲ್ಲಿ ತುಮಕೂರು, ದೇವನಹಳ್ಳಿ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ವಿಜಯಪುರ, ಹೊಸಕೋಟೆ, ಗೌರಿಬಿದನೂರು, ಯಲಹಂಕ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳ ಕಡಲೇಕಾಯಿ ವ್ಯಾಪಾರಿಗಳು ಭಾಗವಹಿಸಿ, ನಾಟಿ, ಸಮ್ರಾಟ್, ಜೆಎಲ್ ಮತ್ತಿತರ ಜಾತಿಯ ಕಡಲೇಕಾಯಿ ಅನ್ನು ಪ್ರತಿ ಕೆಜಿಗೆ 50ರಿಂದ 60 ರೂ. ದರದಂತೆ ಮಾರಾಟ ಮಾಡುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News