ಸರಕಾರ ಉದ್ದೇಶಪೂರ್ವಕವಾಗಿ ಮಾಡಿದ ನಾಟಕ: ಯತ್ನಾಳ್ ಆರೋಪ
ಬೆಂಗಳೂರು ನ.22: ರಾಜ್ಯ ಸರಕಾರದ ಮಹತ್ವದ ಜಾತಿ ಗಣತಿ ವರದಿ ಅನುಷ್ಠಾನ ವಿಚಾರವಾಗಿ ಸಾಕಷ್ಟು ಚರ್ಚೆಗಳಾಗುತ್ತಿವೆ. ಈ ನಡುವೆ ಆಯೋಗದ ಕಚೇರಿಯಲ್ಲಿರಿಸಿದ್ದ ಸೀಲ್ಡ್ ಬಾಕ್ಸ್ನಲ್ಲಿ ಸಮೀಕ್ಷೆಯ ಮೂಲ ಪ್ರತಿ ಅಥವಾ ಹಸ್ತಪ್ರತಿ ಲಭ್ಯ ಇರಲಿಲ್ಲ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ 2021ರಲ್ಲಿ ಅಂದಿನ ರಾಜ್ಯ ಸರಕಾರಕ್ಕೆ ಬರೆದಿದ್ದ ಪತ್ರ ಮತ್ತೆ ಮುನ್ನೆಲೆಗೆ ಬಂದಿದೆ.
ಜಯಪ್ರಕಾಶ್ ಹೆಗ್ಡೆ 2021ರಲ್ಲಿ ಬರೆದಿದ್ದ ಆ ಪತ್ರದ ಪ್ರತಿಯನ್ನು ತನ್ನ 'ಎಕ್ಸ್' ಖಾತೆಯಲ್ಲಿ ಲಗತ್ತಿಸಿ ಪೋಸ್ಟ್ ಒಂದನ್ನು ಹಾಕಿರುವ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್, “ಮುಖ್ಯಮಂತ್ರಿಗೆ ಸಲ್ಲಿಸಿರುವ ಜಾತಿ ಗಣತಿ ವರದಿಯ ಮೂಲ ಪ್ರತಿಯೇ ಇಲ್ಲ. ಇದರಲ್ಲಿ ಜವಾಬ್ದಾರಿಯ ಕೊರತೆ ಎದ್ದು ಕಾಣುತ್ತಿದ್ದು, ಇದರಲ್ಲಿ ಪಿತೂರಿ ಅಡಗಿದೆ. ಸದಸ್ಯ ಕಾರ್ಯದರ್ಶಿಯ ಸಹಿ ಇಲ್ಲದ ಈ ದಾಖಲೆಯ ಸಿಂಧುತ್ವವು ಪ್ರಶ್ನಾರ್ಹವಾಗಿದೆ. ಇಂತಹ ಬೆಳವಣಿಗೆಗಳು ಗೌಪ್ಯವಾಗಿದ್ದರೂ ಸರಕಾರ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿಲ್ಲ. ಇದು ಸರಕಾರ ಉದ್ದೇಶಪೂರ್ವಕವಾಗಿ ಮಾಡಿದ ನಾಟಕ ಎಂದೆನಿಸುತ್ತಿದೆ" ಎಂದು ಆರೋಪಿಸಿದ್ದಾರೆ.
ಜಯಪ್ರಕಾಶ್ ಹೆಗ್ಡೆ ಪತ್ರದಲ್ಲಿ ಏನಿದೆ?
2015 ರಲ್ಲಿ ಆಯೋಗದ ವತಿಯಿಂದ ಕೈಗೊಂಡ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಮುಖ್ಯ ವರದಿಯಲ್ಲಿ ಸದಸ್ಯ ಕಾರ್ಯದರ್ಶಿಯವರ ಸಹಿ ಇಲ್ಲದಿರುವ ಬಗ್ಗೆ 2021ರ ಅಕ್ಟೋಬರ್ 5ರಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಸರಕಾರದ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದರು.
“ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2015 (ಜಾತಿ ಗಣತಿ ವರದಿ)ಯನ್ನು 2021ರ ಅಗಸ್ಟ್ 26 ರಂದು ಹಿಂದುಳಿದ ವರ್ಗಗಳ ಆಯೋಗ ಕಚೇರಿಯಲ್ಲಿ ಇರಿಸಲಾಗಿತ್ತು. ಈ ಸಮೀಕ್ಷೆಯಲ್ಲಿ ಸಂಗ್ರಹಿಸಿದ ಅಂಕಿ ಅಂಶಗಳು ಹಾಗೂ ಇತರ ವಿವರಗಳನ್ನೊಳಗೊಂಡ ಸೀಲ್ಡ್ ಬಾಕ್ಸ್ಗಳನ್ನು ಆಯೋಗದ ಅಧ್ಯಕ್ಷರು, ಸದಸ್ಯರು ಸದಸ್ಯ ಕಾರ್ಯದರ್ಶಿಯವರ ಸಮ್ಮುಖದಲ್ಲಿ ಮಹಜರು ನಡೆಸಿ 2021ರ ಅಕ್ಟೋಬರ್ 5 ರಂದು ತೆರೆಯಲಾಗಿತ್ತು. ಈ ವೇಳೆ ಮುದ್ರಿತ ಮುಖ್ಯ ವರದಿಯಲ್ಲಿ ಸದಸ್ಯ ಕಾರ್ಯದರ್ಶಿಯವರ ಸಹಿ ಇರಲಿಲ್ಲ. ಅಲ್ಲದೆ, ಇದಕ್ಕೆ ಸಂಬಂಧಿಸಿದ ಮುಖ್ಯ ವರದಿಯ ಮೂಲ ಅಥವಾ ಹಸ್ತಪ್ರತಿ ಸೀಲ್ಡ್ ಬಾಕ್ಸ್ ನಲ್ಲಿ ಲಭ್ಯವಿಲ್ಲ. ಹೀಗಾಗಿ ಹಸ್ತಪ್ರತಿಯನ್ನು ಕೂಡಲೇ ಆಯೋಗದ ಕಚೇರಿಗೆ ಸಲ್ಲಿಸಲು ಸಂಬಂಧಪಟ್ಟ ಅಧಿಕಾರಿಗೆ ಸೂಚಿಸಲಾಗಿತ್ತು. ಈ ವಿಷಯವನ್ನು ಸರಕಾರದ ಗಮನಕ್ಕೆ ತರಬಯಸುತ್ತಾ, ಮುಂದೆ ಈ ವಿಷಯಕ್ಕೆ ಸಂಬಂಧಪಟ್ಟಂತೆ ಯಾವ ರೀತಿ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಸ್ಪಷ್ಟಪಡಿಸುವಂತೆ ಸರಕಾರಕ್ಕೆ ಮನವಿ ಮಾಡಿದ್ದರು.