ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸೂಚನೆಗೆ ಮನ್ನಣೆ ನೀಡದ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪೆನಿ

Update: 2018-11-23 17:00 GMT

ಬೆಂಗಳೂರು, ನ.23: ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪೆನಿಯ ರಾಜ್ಯದ ವಿವಿಧ ಕಚೇರಿಗಳಲ್ಲಿ 42 ‘ಸಿ’ ವೃಂದದ ಹುದ್ದೆಗಳಿಗೆ ನೇಮಕಾತಿ ನಡೆಸುತ್ತಿದ್ದು, ಅರ್ಹ ಅಭ್ಯರ್ಥಿಗಳಿಗೆ ಕನ್ನಡ ಮಾತನಾಡಲು, ಬರೆಯಲು, ಓದಲು ಬರುವುದನ್ನು ಖಾತ್ರಿಪಡಿಸಿಕೊಳ್ಳಲು ನ.24ರಂದು ನಡೆಸುತ್ತಿರುವ ಪರೀಕ್ಷೆಯನ್ನು ಸ್ಥಗಿತಗೊಳಿಸುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ನೀಡಿರುವ ಸೂಚನೆಗೆ ಮನ್ನಣೆ ಸಿಕ್ಕಿಲ್ಲ.

ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಬ್ಯಾಂಕಿನ ಅಧಿಕಾರಿಗಳನ್ನೊಳಗೊಂಡ ಆಂತರಿಕ ಸಮಿತಿಯ ಸಮ್ಮುಖದಲ್ಲಿ ಸಂದರ್ಶನ ಮಾದರಿಯ ಪರೀಕ್ಷೆ ನಡೆಸುತ್ತಿದ್ದು, ಅದರಲ್ಲಿ ಹೆಚ್ಚಿನ ಅನ್ಯ ಭಾಷಿಕರಿಗೆ ಅವಕಾಶ ಮಾಡಿಕೊಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ ಎಂದರು.

ಈ ಹಿನ್ನೆಲೆಯಲ್ಲಿ ಈ ಪರೀಕ್ಷೆಯನ್ನು ಸ್ಥಗಿತಗೊಳಿಸಲು ಸಂಸ್ಥೆಯ ಪ್ರಾದೇಶಿಕ ಮುಖ್ಯಸ್ಥ ಚಿರಂಜೀವಿ ರೆಡ್ಡಿ ಎಂಬುವವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಅವರು, ಉದ್ದೇಶಿತ ಭಾಷಾ ಪರೀಕ್ಷೆಯಲ್ಲಿ ಪಾಲ್ಗೊಳ್ಳುತ್ತಿರುವ ಅನ್ಯ ಭಾಷಿಕರ ವಿವರ ಹಾಗೂ ಈ ಭಾಷಾ ಪ್ರೌಢಿಮೆಯ ಸಂದರ್ಶನವನ್ನು ನಡೆಸುವ ಭಾಷಾ ತಜ್ಞರ ವಿವರಗಳನ್ನು ಕೂಡಲೇ ಒದಗಿಸಲು ಸೂಚಿಸಿದರು.

ಆದರೆ, ಕೇಂದ್ರ ಸಂಸ್ಥೆಯ ಸೂಚನೆಯಂತೆ ಈ ಪರೀಕ್ಷೆ ನಡೆಸುತ್ತಿದ್ದು, ಇದನ್ನು ನಿಲ್ಲಿಸಲು ಅವಕಾಶವಿಲ್ಲ ಎಂದು ಚಿರಂಜೀವಿ ರೆಡ್ಡಿ ಮೌಖಿಕ ಸ್ಪಷ್ಟೀಕರಣ ನೀಡಿದರು. ಇದು ಸಂವಿಧಾನಿಕ ಆಶಯಗಳನ್ನು ವಿರೋಧಿಸುವ ಉದ್ಯೋಗ ನೀತಿಯ ಫಲವಾಗಿದೆ. ಒಕ್ಕೂಟ ವ್ಯವಸ್ಥೆಯ ಇಂತಹ ವಿರೋಧಿ ಘಟನೆಗಳ ವಿರುದ್ಧ ರಾಜ್ಯಗಳು ಸಂಘಟಿತವಾಗುವ ಅವಶ್ಯಕತೆ ಇದೆ ಎಂದು ಸಿದ್ದರಾಮಯ್ಯ ಪ್ರತಿಪಾದಿಸಿದರು.

ಕನ್ನಡ ಭಾಷಾ ಪ್ರೌಢಿಮೆಯನ್ನು ಪರೀಕ್ಷಿಸಲು ಬ್ಯಾಂಕಿನ ಅಧಿಕಾರಿಗಳನ್ನೇ ಒಳಗೊಂಡ ಆಂತರಿಕ ಸಮಿತಿಯನ್ನು ರಚಿಸಿಕೊಂಡು ತಮಗೆ ಸೂಕ್ತವೆನಿಸುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಕೇಂದ್ರ ಸರಕಾರ 2016ರಲ್ಲಿ ಮಾರ್ಪಡಿಸಿದ ಉದ್ಯೋಗ ನೀತಿಯೂ ಪರೋಕ್ಷವಾಗಿ ಕಾರಣವಾಗಿದೆ ಎಂದು ಸಿದ್ದರಾಮಯ್ಯ ದೂರಿದರು. 2016ರಲ್ಲಿ ಕೇಂದ್ರ ಸರಕಾರದ ಹಾಗೂ ಅದರ ಅಂಗ ಸಂಸ್ಥೆಗಳ ಸಿಬ್ಬಂದಿ ನೇಮಕಾತಿಯಲ್ಲಿ ಸಂದರ್ಶನವನ್ನು ರದ್ದು ಪಡಿಸಲು ಆದೇಶ ನೀಡಿದ ಬಳಿಕ 2016 ರಲ್ಲಿ ಐಬಿಪಿಎಸ್ ಸಂಸ್ಥೆಯು ಬ್ಯಾಂಕ್‌ಗಳಲ್ಲಿ ನೇಮಕಗೊಳ್ಳುವ ಸಿಬ್ಬಂದಿಯ ಭಾಷಾ ಪ್ರೌಢಿಮೆಯನ್ನು ಪರೀಕ್ಷಿಸುವ ವಿಧಾನವನ್ನು ಸರಳಗೊಳಿಸಿ ಅನ್ಯ ಪ್ರಾಂತಿಯ ಅಭ್ಯರ್ಥಿಗಳ ನೇಮಕಾತಿಗೆ ಪರೋಕ್ಷ ಅವಕಾಶವನ್ನು ಕಲ್ಪಿಸಿದೆ ಎಂದು ಅವರು ತಿಳಿಸಿದರು.

ಈ ರೀತಿ ಮಾರ್ಪಡಿಸಿರುವ ಸಾರ್ವಜನಿಕ ಉದ್ಯೋಗ ನೀತಿಯ ಫಲವಾಗಿ ನಮ್ಮ ರಾಜ್ಯದ ವಿವಿಧ ಬ್ಯಾಂಕ್‌ಗಳಲ್ಲಿ 2016 ರಿಂದ ಐಬಿಪಿಎಸ್ ಅಧೀನದ ಬ್ಯಾಂಕಿಂಗ್ ಸಂಸ್ಥೆಗಳಲ್ಲಿ ಅನ್ಯ ಭಾಷಿಕರ ನೇಮಕಾತಿ ಹೆಚ್ಚಿದೆ. ಇದು ಈ ನೆಲದ ಪ್ರತಿಭಾನ್ವಿತ ಅಭ್ಯರ್ಥಿಗಳ ಅವಕಾಶಗಳನ್ನು ಕಸಿಯುತ್ತಿದೆ. ಅಲ್ಲದೆ, ಇಲ್ಲಿನ ಜನಸಾಮಾನ್ಯರು ಕನ್ನಡ ತಿಳಿಯದ ಅನ್ಯ ಪ್ರಾಂತಿಯ ವ್ಯಕ್ತಿಗಳೊಂದಿಗೆ ಹೊಂದಿಕೊಳ್ಳುವುದರ ಮೂಲಕ ತಮಗೆ ಅವಶ್ಯಕವಿರುವ ಬ್ಯಾಂಕಿಂಗ್ ಸೇವೆಗಳನ್ನು ಪಡೆಯುವ ದೌರ್ಭಾಗ್ಯ ಸ್ಥಿತಿ ಉದ್ಭವಿಸಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News