ಮೈತ್ರಿ ಸರಕಾರದ ಸಾಧನೆ ಶೂನ್ಯ: ವಿಪಕ್ಷ ನಾಯಕ ಯಡಿಯೂರಪ್ಪ

Update: 2018-11-24 14:32 GMT

ಬೆಂಗಳೂರು, ನ. 24: ‘ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಆಡಳಿತಕ್ಕೆ ಬಂದ ಆರು ತಿಂಗಳು ಕಳೆದರೂ, ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದು, ಸರಕಾರದ ಸಾಧನೆ ಶೂನ್ಯ’ ಎಂದು ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಟೀಕಿಸಿದ್ದಾರೆ.

ಶನಿವಾರ ಮಲ್ಲೇಶ್ವರಂನ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈವರೆಗೂ ರೈತರ ಸಾಲಮನ್ನಾ ಆಗಿಲ್ಲ. ಬ್ಯಾಂಕ್ ಅಧಿಕಾರಿಗಳು ರೈತರಿಗೆ ನೋಟಿಸ್ ನೀಡುತ್ತಿದ್ದು, ರಾಜ್ಯದಲ್ಲಿ ಸರಕಾರ ಇರುವುದು ಅನುಮಾನ ಎಂದು ಲೇವಡಿ ಮಾಡಿದರು.

ರಾಜ್ಯದ ನೂರು ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಿದ್ದು, ಯಾವುದೇ ಪರಿಹಾರ ಕಾಮಗಾರಿಗಳನ್ನು ಕೈಗೊಂಡಿಲ್ಲ. ಜನತೆ ಗುಳೆ ಹೋಗುತ್ತಿದ್ದರೂ ಯಾವೊಬ್ಬ ಉಸ್ತುವಾರಿ ಸಚಿವರೂ ಬರ ಪೀಡಿತ ಪ್ರದೇಶಗಳ ಪ್ರವಾಸವನ್ನು ಮಾಡುತ್ತಿಲ್ಲ. ಇತ್ತ ವಿಧಾನಸೌಧದಲ್ಲಿ ಕೂತು ಕೆಲಸವನ್ನೂ ಮಾಡುತ್ತಿಲ್ಲ ಎಂದು ದೂರಿದರು.

ರಿಪೋರ್ಟ್ ಕಾರ್ಡ್: ಹಣಕಾಸು ಖಾತೆ ಹೊಂದಿರುವ ಸಿಎಂ ಕುಮಾರಸ್ವಾಮಿ ಶೇ.39ರಷ್ಟು ಸಾಧನೆ ಮಾಡಿದ್ದು, ಕಳೆದ ವರ್ಷ ಈ ವೇಳೆಗೆ ಶೇ.42ರಷ್ಟು ಸಾಧನೆ ಆಗಿತ್ತು. ಸಣ್ಣ ನೀರಾವರಿ-ಶೇ.29, ಹಿಂದುಳಿದ ವರ್ಗಗಳ ಇಲಾಖೆ-ಶೇ.26, ಸಮಾಜ ಕಲ್ಯಾಣ-ಶೇ.24, ಲೋಕೋಪಯೋಗಿ-ಶೇ.24, ಕಂದಾಯ ಇಲಾಖೆ ಶೇ.15ರಷ್ಟು ಸಾಧನೆ ಮಾಡಿದೆ. ಇನ್ನೂ ಕೆಲ ಇಲಾಖೆಗಳು ಶೂನ್ಯ ಸಾಧನೆ ಮಾಡಿವೆ ಎಂದು ಹೇಳಿದರು.

ವಾರ್ಷಿಕ 2 ಕೋಟಿ ರೂ.ಗಳ ಶಾಸಕರ ನಿಧಿಯ ಪೈಕಿ ಕೇವಲ 50 ಲಕ್ಷ ರೂ.ಗಳನ್ನಷ್ಟೇ ಬಿಡುಗಡೆ ಮಾಡಿದ್ದು, ಕ್ಷೇತ್ರಗಳ ಅಭಿವೃದ್ಧಿಗೆ ಹಣವಿಲ್ಲ. ಸಹಕಾರ ಸಂಘಗಳಿಗೆ 547 ಕೋಟಿ ರೂ.ಬಡ್ಡಿ ಬಾಕಿ ಇದೆ. ಹಾಲಿನ ಪ್ರೋತ್ಸಾಹ ಧನ 400 ಕೋಟಿ ರೂ.ಬಾಕಿ ಇದೆ. ಪರಿಶಿಷ್ಟರಿಗೆ ಗಂಗಾ ಕಲ್ಯಾಣ ಯೋಜನೆಯಡಿ ಒಂದೇ ಒಂದು ಕೊಳವೆ ಬಾವಿ ಕೊರೆಸಿಲ್ಲ ಎಂದು ವಾಗ್ದಾಳಿ ನಡೆಸಿದರು.

ಗೌಡರ ಪಾಪದ ಕೂಸು: ‘ನೈಸ್’ ವಿರುದ್ಧ ಹೋರಾಟ ಆರಂಭಿಸುವುದಾಗಿ ಮಾಜಿ ಪ್ರಧಾನಿ ದೇವೇಗೌಡರು ಹೇಳಿದ್ದು, ಈ ಯೋಜನೆ ಅವರ ಪಾಪದ ಕೂಸು. ನೈಸ್ ಅಕ್ರಮಕ್ಕೆ ಸಂಬಂಧಿಸಿದಂತೆ ಸದನ ಸಮಿತಿ ವರದಿ ಅನುಷ್ಠಾನಕ್ಕೆ ಪುತ್ರನಿಗೆ ಮೊದಲು ದೇವೇಗೌಡ ಸಲಹೆ ನೀಡಬೇಕೆಂದು ಬಿಎಸ್‌ವೈ ಹೇಳಿದರು.

ಹೊಟೇಲ್‌ನಲ್ಲೆ ಇರಿ: ಹೊಟೇಲ್‌ನಲ್ಲೆ ಉಳಿದುಕೊಂಡು ಆಡಳಿತ ನಡೆಸುವ ಪರಿಸ್ಥಿತಿ ಕುಮಾರಸ್ವಾಮಿಗೆ ಬಂದಿರುವುದು ದುರ್ದೈವ. ಯಾವ ಸಿಎಂ ಕೂಡ ಹೊಟೇಲ್‌ನಲ್ಲಿ ಆಡಳಿತ ನಡೆಸುತ್ತಿರಲಿಲ್ಲ. ವಿಧಾನಸೌಧದಲ್ಲಿ ಕೂತು ಆಡಳಿತ ನಡೆಸಲು ಇವರಿಗೆ ಏನು ಸಮಸ್ಯೆ ಎಂದು ಯಡಿಯೂರಪ್ಪ ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ವಿಪಕ್ಷದ ಉಪನಾಯಕ ಗೋವಿಂದ ಕಾರಜೋಳ, ಆರ್.ಅಶೋಕ್, ವೀರಣ್ಣ ಚರಂತಿಮಠ, ಸಿದ್ದು ಸವದಿ, ಉದಯ್ ಗರುಡಾಚಾರ್, ಅಶ್ವಥ್ ನಾರಾಯಣ, ಶೋಭಾ ಕರಂದ್ಲಾಜೆ ಸೇರಿದಂತೆ ಇನ್ನಿತರರು ಹಾಜರಿದ್ದರು.

‘ಡಿ.10ರಿಂದ ಚಳಿಗಾಲದ ಅಧಿವೇಶನ ಆರಂಭಗೊಳ್ಳಲಿದ್ದು, ರಾಜ್ಯ ಸರಕಾರದ ವಿರುದ್ಧ ಸದನದ ಒಳಗೆ ಮತ್ತು ಹೊರಗೆ ಬಿಜೆಪಿಯಿಂದ ಹೋರಾಟ ಕೈಗೊಳ್ಳುವ ಸಂಬಂಧ ನ.29ರಂದು ಶಾಸಕಾಂಗ ಪಕ್ಷದ ಸಭೆ ಹಾಗೂ ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಲಾಗುವುದು’

-ಬಿ.ಎಸ್.ಯಡಿಯೂರಪ್ಪ, ವಿಪಕ್ಷ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News