ಮುಖ್ಯಮಂತ್ರಿ ವಿರುದ್ಧ ಅಪಪ್ರಚಾರ ಆರೋಪ: ನಕಲಿ ಪತ್ರಕರ್ತರ ವಿರುದ್ಧ ಮೊಕದ್ದಮೆ ದಾಖಲು

Update: 2018-11-24 14:34 GMT

ಬೆಂಗಳೂರು, ನ.24: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿ ನಕಲಿ ಪತ್ರಕರ್ತರ ಮೇಲೆ ಇಲ್ಲಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ ಎನ್ನಲಾಗಿದೆ.

ಶುಕ್ರವಾರ ಬೆಂಗಳೂರು ಮಹಾನಗರ ಜೆಡಿಎಸ್ ಅಧ್ಯಕ್ಷ ಪ್ರಕಾಶ್ ಅವರು ನಕಲಿ ಪತ್ರಕರ್ತರ ವಿರುದ್ದ ಕಬ್ಬನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಬಳಿಕ ಈ ಪ್ರಕರಣವನ್ನು ಹೈಗ್ರೌಂಡ್ಸ್ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಹೈಗ್ರೌಂಡ್ಸ್ ಪೊಲೀಸರು ಎಫ್‌ಐಆರ್ ದಾಖಲು ಮಾಡಿದ್ದಾರೆ.

ಮುಖ್ಯಮಂತ್ರಿ ಅವರ ಗೃಹಕಚೇರಿ ಕೃಷ್ಣಾ ಆವರಣಕ್ಕೆ ಬಂದ ಮೂವರು (ಇಬ್ಬರು ಮಹಿಳೆಯರು, ಓರ್ವ ಯುವಕ) ಒತ್ತಾಯ ಪೂರ್ವಕವಾಗಿ ಮುಖ್ಯಮಂತ್ರಿ ಜನತಾ ದರ್ಶನಕ್ಕೆ ಬರುವ ಅಂಗವಿಕಲರು, ವೃದ್ಧರು, ರೈತರನ್ನು ಮಾತನಾಡಿಸಿ, ಮುಖ್ಯಮಂತ್ರಿ ವಿರುದ್ಧ ಪ್ರಚೋದನಕಾರಿ ಹೇಳಿಕೆ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ.

ಈ ರೀತಿ ಓಡಾಡುತ್ತಿರುವುದು ಮುಖ್ಯಮಂತ್ರಿಗಳ ಭದ್ರತೆಗೂ ಅಪಾಯ ತರುವಂತಹ ವಿಚಾರ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರಿಗೆ ದೂರು ನೀಡಲಾಗಿತ್ತು. ಅತಿಕ್ರಮ ಪ್ರವೇಶ, ಉದ್ದೇಶಪೂರ್ವಕವಾಗಿ ಶಾಂತಿಗೆ ಭಂಗ ತಂದಿರುವುದು, ಪ್ರಚೋದನೆ ಆರೋಪದಡಿ ದೂರು ದಾಖಲು ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News