ವಾರಣಾಸಿ, ದಿಲ್ಲಿ ವಿವಿಯ ಕನ್ನಡ ಅಧ್ಯಯನ ಪೀಠ ಪುನಾರಂಭಕ್ಕೆ ದಿಲ್ಲಿ ಕರ್ನಾಟಕ ಸಂಘ ಒತ್ತಾಯ

Update: 2018-11-26 14:43 GMT

ಮಂಗಳೂರು/ದಿಲ್ಲಿ, ನ.26: ವಾರಣಾಸಿ ಮತ್ತು ದಿಲ್ಲಿ ವಿಶ್ವವಿದ್ಯಾನಿಲಯಗಳಲ್ಲಿ ಮತ್ತೆ ಕನ್ನಡ ಅಧ್ಯಯನ ಪೀಠ ಪುನರಾರಂಭಿಸಲು ದಿಲ್ಲಿ ಕರ್ನಾಟಕ ಸಂಘ ಒತ್ತಾಯಿಸಿದೆ.

ನವದಿಲ್ಲಿಯಲ್ಲಿ ದಿಲ್ಲಿ ಕರ್ನಾಟಕ ಸಂಘವು ರವಿವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಮಾನವ ಸಂಪನ್ಮೂಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಗಿರೀಶ್ ಹೊಸೂರು, ದಿಲ್ಲಿಯಲ್ಲಿದ್ದು ಹೊರನಾಡ ಕನ್ನಡಿಗರಾದ ನಮಗೆ ಕರ್ನಾಟಕದಲ್ಲಿ ಸಿಗುವ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದೇವೆ. ಸಿಇಟಿ ಪರೀಕ್ಷೆ ಬರೆಯಲು ಹೊರನಾಡ ಕನ್ನಡಿಗರಿಗೆ ಅನೇಕ ಸಮಸ್ಯೆಗಳು ಎದುರಾಗುತ್ತಿವೆ. ಆ ಸೌಲಭ್ಯಗಳನ್ನು ಪಡೆಯಲು ದಿಲ್ಲಿ ಕರ್ನಾಟಕ ಸಂಘವು ವೇದಿಕೆಯಾಗಿ ಕರ್ನಾಟಕ ಸರಕಾರದ ಜೊತೆಗೆ ಕೆಲಸ ಮಾಡಬೇಕು ಎಂದು ಹೇಳಿದರು.

ಮುಖ್ಯಅತಿಥಿಯಾಗಿ ಭಾಗವಹಿಸಿದ್ದ ನವದಿಲ್ಲಿಯ ದೂರದರ್ಶನ ಕಿಸಾನ್ ಚಾನಲ್ ಉಪಮಹಾನಿರ್ದೇಶಕ ಎನ್.ಚಂದ್ರಶೇಖರ್ ಮಾತನಾಡಿ, ದಿಲ್ಲಿ ಕರ್ನಾಟಕ ಸಂಘವು ಕರ್ನಾಟಕದ ಹಲವಾರು ಸಾಂಸ್ಕತಿಕ ಕಾರ್ಯಕ್ರಮಗಳನ್ನು ನಡೆಸುತ್ತಾ ಕರ್ನಾಟಕದ ಕಲೆ, ಸಂಸ್ಕೃತಿಯನ್ನು ಪಸರಿಸುವಂತಹ ಉತ್ತಮ ಕೆಲಸವನ್ನು ಮಾಡುತ್ತಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.

ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ ಮಾತನಾಡಿ, ಜೆಎನ್‌ಯುವಿನ ಕನ್ನಡ ಅಧ್ಯಯನ ಪೀಠಕ್ಕೆ ಯುಜಿಸಿಯಿಂದ ಖಾಯಂ ಪ್ರಾಧ್ಯಾಪಕರ ನೇಮಕವಾಗಬೇಕು. ದಿಲ್ಲಿ ವಿಶ್ವವಿದ್ಯಾನಿಲಯದಲ್ಲಿ ತೆರವಾಗಿರುವ ಕನ್ನಡ ಅಧ್ಯಾಪಕರ ಹುದ್ದೆಗೆ ನೇಮಕವಾಗಬೇಕು. ವಾರಣಾಸಿ ಮತ್ತು ದಿಲ್ಲಿ ವಿಶ್ವವಿದ್ಯಾನಿಲಯ ಮುಚ್ಚಿಹೋಗಿರುವ ಕನ್ನಡ ಅಧ್ಯಯನ ಪೀಠವನ್ನು ಪುನರಾಂಭಿಸುವ ಕೆಲಸವನ್ನು ಮಾಡುವಂತೆ ಮಾನವ ಸಂಪನ್ಮೂಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಶ್ರೀ ಗಿರೀಶ್ ಹೊಸೂರು ಅವರಲ್ಲಿ ಮನವಿ ಸಲ್ಲಿಸಿದರು.

ಕಾರ್ಯಕ್ರಮದ ಆರಂಭದಲ್ಲಿ ಮಾಜಿ ಸಚಿವ ಹಾಗೂ ಚಲನಚಿತ್ರ ನಟ ಅಂಬರೀಶ್ ಮತ್ತು ಕೇಂದ್ರ ಮಾಜಿ ಸಚಿವ ಜಾಫರ್ ಶರೀಫ್ ಅವರ ನಿಧನಕ್ಕೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಕಾರ್ಯಕ್ರಮವನ್ನು ಪೂಜಾ ಪಿ.ರಾವ್ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಸಿ.ಎಂ. ನಾಗರಾಜ ಸ್ವಾಗತಿಸಿ, ವಂದಿಸಿದರು.

ಸಂಘದ ಆಟೋಟ ಸ್ಪರ್ಧೆಗಳ ಬಹುಮಾನ ಹಾಗೂ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಸಾಂಸ್ಕತಿಕ ಕಾರ್ಯಕ್ರಮದಲ್ಲಿ ಸಂಘದ ಚಿಣ್ಣರಿಂದ ಕೃಷಿ ಆಧಾರಿ ನೃತ್ಯ ಕಾರ್ಯಕ್ರಮ ನಡೆಯಿತು.

ಪ್ರಶಸ್ತಿ ಪ್ರದಾನ:
ಎನ್.ಎ. ಮಾಧವ, ಶಾಲನ್ ಮುರಗೋಡ ಮತ್ತು ಕೆ.ಟಿ. ಗಣೇಶ್ ಅವರಿಗೆ ‘ವಿಶಿಷ್ಟ ಕನ್ನಡಿಗ ಪ್ರಶಸ್ತಿ’ಯನ್ನು ನೀಡಿ ಅಭಿನಂದಿಸಲಾಯಿತು. ಇದೇ ಸಂದರ್ಭದಲ್ಲಿ ಕೇಂದ್ರ ಜವಳಿ ಸಚಿವಾಲಯದಿಂದ ಚಿತ್ರಕಲೆಗೆ ರಾಷ್ಟ್ರೀಯ ಪ್ರಶಸ್ತಿ ಪಡೆದ ಸುಧೀರ್ ಫಡ್ನೀಸ್ ಹಾಗೂ ರಂಗಕರ್ಮಿ ಪಿ.ಡಿ. ವಲ್ಸನ್ ಅವರನ್ನು ಅಭಿನಂದಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News