ವಿವಿಗಳಲ್ಲಿ ವಿಷಯಾಧಾರಿತ ಮೀಸಲಾತಿ ಜಾರಿಯಾಗಲಿ: ಪಶು ವೈದ್ಯ ವಿವಿ ಪ್ರಾಧ್ಯಾಪಕ ಡಾ.ಎಂ.ನಾರಾಯಣಸ್ವಾಮಿ

Update: 2018-11-26 17:17 GMT

ಬೆಂಗಳೂರು, ನ.26: ವಿಶ್ವವಿದ್ಯಾಲಯಗಳಲ್ಲಿ ಖಾಲಿಯಿರುವ ಹುದ್ದೆಗಳಿಗೆ ನೇಮಕಾತಿ ಸಂದರ್ಭದಲ್ಲಿ ವಿಷಯ ಆಧಾರಿತ ಮೀಸಲಾತಿಯನ್ನು ಕಲ್ಪಿಸಬೇಕು ಎಂದು ಪಶು ವೈದ್ಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಎಂ.ನಾರಾಯಣಸ್ವಾಮಿ ಹೇಳಿದ್ದಾರೆ.

ಸೋಮವಾರ ಸಮತಾ ಸೈನಿಕ ದಳದ ವತಿಯಿಂದ ನಗರದ ಖಾಸಗಿ ಹೊಟೇಲ್‌ನಲ್ಲಿ ಆಯೋಜಿಸಿದ್ದ ಭಾರತ ಸಂವಿಧಾನ ದಿನಾಚರಣೆ ಅಂಗವಾಗಿ ‘ಸಂವಿಧಾನ ನಿರ್ಮಾಣದ ಅಂದಿನ ಆಶಯಗಳು ಮತ್ತು ಇಂದಿನ ಅನುಷ್ಥಾನ’ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಸಂವಿಧಾನದಲ್ಲಿ ಸಮಾನವಾದ ಮೀಸಲಾತಿ ಕಲ್ಪಿಸಿದ್ದರೂ, ಅದು ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ ಎಂದರು.

ದೇಶದ ವಿಶ್ವವಿದ್ಯಾಲಯಗಳಲ್ಲಿ ಕಸ ಗುಡಿಸುವವರಿಂದ ಹಿಡಿದು, ಪ್ರಾಧ್ಯಾಪಕರು, ಪ್ರಾಂಶುಪಾಲರು, ಕುಲಪತಿವರೆಗೂ ವಿಷಯವಾರು ಮೀಸಲಾತಿ ಕಲ್ಪಿಸಬೇಕಿದೆ. ಈಗಾಗಲೇ ವಿಜ್ಞಾನ ವಿಷಯದಲ್ಲಿ ದಲಿತರಿಗೆ ಅವಕಾಶ ಸಿಗುವುದೇ ಕಡಿಮೆಯಾಗುತ್ತಿದೆ. ಹೀಗಾಗಿ, ವಿಷಯ ಆಧಾರಿತ ರೋಸ್ಟರ್ ಪದ್ಧತಿ ಅಡಿಯಲ್ಲಿ ಮೀಸಲಾತಿ ನೀಡಿದರೆ ದಲಿತರಿಗೆ ಅನೇಕ ಸೌಲಭ್ಯಗಳು ಮತ್ತು ಪ್ರಾತಿನಿಧ್ಯ ಸಿಗುತ್ತದೆ ಎಂದು ಅವರು ಹೇಳಿದರು.

ಸಂವಿಧಾನ ಚೆನ್ನಾಗಿದ್ದರೂ ಅದನ್ನು ಅನುಷ್ಠಾನ ಮಾಡುವವರು ಸರಿಯಿಲ್ಲದಿದ್ದರೆ ಅದು ಕೆಟ್ಟದಾಗಿರುತ್ತದೆ. ಅದೇ ಸಂವಿಧಾನ ಸರಳವಾಗಿದ್ದರೂ, ಅದನ್ನು ಅನುಷ್ಠಾನ ಮಾಡುವವರಿಗೆ ಮನಸ್ಸಿದ್ದರೆ ಅತ್ಯದ್ಭುತವಾಗಿ ಕಾಣುತ್ತದೆ ಎಂದು ಅಂದೇ ಅಂಬೇಡ್ಕರ್ ಹೇಳಿದ್ದರು. ಆದರೆ, ಇಂದು ಸಂವಿಧಾನದ ಆಶಯಗಳನ್ನು ಸಂಪೂರ್ಣವಾಗಿ ಜಾರಿ ಮಾಡುವ ಮನಸ್ಸು ಯಾರಿಗೂ ಇಲ್ಲ ಎಂದು ನುಡಿದರು.

ದೇಶದಲ್ಲಿಂದು ಶೋಷಿತರಿಗೆ, ದಲಿತರಿಗೆ ಸಂವಿಧಾನದಿಂದಾಗಿ ರಾಜಕೀಯ ಮೀಸಲಾತಿ ಸಿಗುತ್ತಿದೆ. ಆದರೆ, ಉದ್ಯೋಗದಲ್ಲಿ ಮೀಸಲಾತಿ ಸಿಗುತ್ತಿಲ್ಲ. ಹೀಗಾಗಿ, ಸಾಮಾಜಿಕ, ಆರ್ಥಿಕತೆಯಲ್ಲಿ ಇಂದಿಗೂ ಹಿಂದುಳಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಿಟ್ಟಿನಲ್ಲಿ ದಲಿತರ ಅಭಿವೃದ್ಧಿಯಾಗಬೇಕಾದರೆ ಸಂವಿಧಾನದ ಆಶಯಗಳು ಸಂಪೂರ್ಣ ಅನುಷ್ಠಾನಗೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ಸಮತಾ ಸೈನಿಕ ದಳದ ಅಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ ಮಾತನಾಡಿ, ದೇಶದ ಜನರು ಸಂವಿಧಾನವನ್ನು ನಮ್ಮ ಜೀವನ ವಿಧಾನದ ಗ್ರಂಥ ಎಂದುಕೊಂಡರೆ ಅದು ಅರ್ಥವಾಗುತ್ತದೆ. ನಮ್ಮ ಸಂವಿಧಾನ ಇಲ್ಲಿನ ಮೂಲ ನಿವಾಸಿಗಳಿಂದ ಸ್ಪೂರ್ತಿ ಪಡೆದಿದೆ ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಹೇಳುತ್ತಿದ್ದರು ಎಂದು ತಿಳಿಸಿದರು.

ಬಾಬಾ ಸಾಹೇಬ್ ಸಂವಿಧಾನ ರಚನೆ ಸಂದರ್ಭದಲ್ಲಿ ಮೀಸಲಾತಿಯನ್ನು ವಿರೋಧಿಸಿದವರು ಇಂದು ಸಂವಿಧಾನವನ್ನು ವಿರೋಧ ಮಾಡುತ್ತಿದ್ದಾರೆ. ಅವರೇ ಸಂವಿಧಾನವನ್ನು ಬದಲಿಸಿ ಮನುವಾದವನ್ನು ಹೇರುವ ಪ್ರಯತ್ನ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಂವಿಧಾನದ ಆಶಯಗಳ ಉಳಿವಿಗಾಗಿ ತೀವ್ರ ಚಳವಳಿ ನಡೆಸಬೇಕಾದ ಅಗತ್ಯವಿದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಚಿಂತಕ ಲೋಲಾಕ್ಷ, ಜೈಭೀಮ್ ಲಾ ಅಸೋಸಿಯೇಷನ್‌ನ ಅಧ್ಯಕ್ಷ ಉಮಾಶಂಕರ್, ಮು.ತಿಮ್ಮಯ್ಯ, ವೈ.ಎಸ್.ದೇವೂರ್, ಎಂ.ಶ್ರೀನಿವಾಸ್, ಆರ್.ಕೇಶವಮೂರ್ತಿ, ಅನಂತರಾಯಪ್ಪ, ಎಂ.ಎಂ.ರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸಂವಿಧಾನ ನಮ್ಮ ಧರ್ಮಗ್ರಂಥ

ದೇಶ ವ್ಯಾಪ್ತಿಯಲ್ಲಿ ನೆಲೆಸಿರುವ ಎಲ್ಲ ಜಾತಿ, ಧರ್ಮದ ಜನರ ಹಕ್ಕುಗಳನ್ನು ಎತ್ತಿ ಹಿಡಿದಿರುವ ಸಂವಿಧಾನ ನಮ್ಮೆಲ್ಲರಿಗೂ ಧರ್ಮಗ್ರಂಥವಾಗಿದೆ. ಆದರೆ, ಇಂದು ಅಧಿಕಾರದಲ್ಲಿರುವವರು ಸಂವಿಧಾನವನ್ನು ಬದಲಿಸುವ ಮಾತುಗಳಾನ್ನಾಡುತ್ತಿದ್ದಾರೆ. ಅಲ್ಲದೆ, ಅಧಿಕಾರ ಕೇಂದ್ರ ಸ್ಥಾನದಲ್ಲಿಯೇ ಸಂವಿಧಾನದ ಪ್ರತಿಗಳನ್ನು ಸುಡುವಷ್ಟರ ಮಟ್ಟಿಗೆ ಮನುವಾದಿಗಳ ಸಂತತಿ ಬೆಳೆದಿರುವುದು ದುರಂತ.

-ಡಾ.ಎಂ.ವೆಂಕಟಸ್ವಾಮಿ, ಸಮತಾ ಸೈನಿಕ ದಳದ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News