ರಾಜ್ಯ ರಾಜಧಾನಿಯಲ್ಲಿ ಟ್ಯಾಕ್ಸಿಗಳ ನೋಂದಣಿ ಏಕಾಏಕಿ ಇಳಿಮುಖ

Update: 2018-11-27 15:47 GMT

ಬೆಂಗಳೂರು, ನ.27: ಟ್ಯಾಕ್ಸಿ ಮಾರುಕಟ್ಟೆಯನ್ನು ಆ್ಯಪ್ ಆಧರಿತ ಕಂಪನಿಗಳು ಆಳುತ್ತಿದ್ದು, ಟ್ಯಾಕ್ಸಿಗಳ ನೋಂದಣಿ ಏಕಾಏಕಿ ಇಳಿಮುಖವಾಗಿದೆ. ಆ್ಯಪ್ ಆಧರಿತ ಕಂಪನಿಗಳು ವಿಧಿಸುವ ಬಾಡಿಗೆ ದರ ಟ್ಯಾಕ್ಸಿ ವಹಿವಾಟಿನಲ್ಲಿ ಹೊಂದಾಣಿಕೆ ಆಗದೆ, ನಗರದಲ್ಲಿ ಎರಡು ವರ್ಷಗಳ ಕಾಲ ಏರುಮುಖದಲ್ಲಿದ್ದ ಟ್ಯಾಕ್ಸಿಗಳ ನೋಂದಣಿ ಏಕಾಏಕಿ ಇಳಿಮುಖವಾಗಿದೆ. ಜನರು ಆ್ಯಪ್ ಆಧರಿತ ಟ್ಯಾಕ್ಸಿಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದು, ಹೆಚ್ಚಿರುವ ವಾಹನ ದಟ್ಟಣೆ, ನಿರ್ವಹಣಾ ವೆಚ್ಚ, ಇಂಧನ ದರದಿಂದ ವಾಹನ ನಿರ್ವಹಿಸಲಾಗದೆ ಟ್ಯಾಕ್ಸಿಗಳ ನೋಂದಣಿ ಕಡಿಮೆಯಾಗಿದೆ.

ಟ್ಯಾಕ್ಸಿ ವಹಿವಾಟಿನಲ್ಲಿ ಆದಾಯ ತೀರಾ ಇಳಿಮುಖವಾಗಿರುವುದು, ಅಗ್ಗದ ದರದಲ್ಲಿ ಆ್ಯಪ್ ಆಧರಿತ (ಓಲಾ, ಉಬರ್) ಟ್ಯಾಕ್ಸಿಗಳು ಪ್ರಯಾಣಿಕರಿಗೆ ಸಿಗುತ್ತಿರುವುದು ಇತರ ಟ್ಯಾಕ್ಸಿ ಮಾಲಕರ ಆದಾಯಕ್ಕೆ ತೀರಾ ಹೊಡೆತ ನೀಡಿದೆ. ಹೀಗಾಗಿ, ನಿಧಾನಗತಿಯಲ್ಲಿ ಅವರು ಈ ವಹಿವಾಟಿನಿಂದ ಹಿಂದಕ್ಕೆ ಸರಿಯುತ್ತಿದ್ದಾರೆ.

ನೋಟುಗಳ ಅಪಮೌಲ್ಯ ಆದ ಮೇಲೆ ಎಲ್ಲ ವಹಿವಾಟುಗಳು ಇಳಿಮುಖವಾಗಿವೆ. ಅದರ ಪರಿಣಾಮ ವಾಹನ ಮಾರುಕಟ್ಟೆಗೂ ಬಲವಾಗಿ ತಟ್ಟಿದೆ. ಹೀಗಾಗಿ ಹೊಸ ವಾಹನ ಖರೀದಿಗೆ ಯಾರೂ ಮುಂದಾಗುತ್ತಿಲ್ಲ.

ಜಿಎಸ್‌ಟಿ ಅನ್ವಯ: ಸಂಚಾರ ದಟ್ಟಣೆ ಗಮನಿಸಿದ ಜನರು ಹೊಸ ಕಾರು ಕೊಳ್ಳಲು ಮುಂದಾಗುವುದಿಲ್ಲ. ಟ್ಯಾಕ್ಸಿ ಆಪರೇಟರ್‌ಗಳಿಗೂ ಜಿಎಸ್‌ಟಿ ಅನ್ವಯಿಸಲು ಕೇಂದ್ರ ಸರಕಾರ ಮುಂದಾಗಿದ್ದು, ಮೊದಲೇ ಆದಾಯ ತೆರಿಗೆ ಕಟ್ಟುವ ಚಾಲಕರಿಗೆ ಜಿಎಸ್‌ಟಿಯನ್ನೂ ಕಟ್ಟುವುದು ಕಷ್ಟವಾಗಿದೆ. ಸ್ವಂತ ಉದ್ಯೋಗ ಮಾಡಿಕೊಂಡು ಅಲ್ಪ ಆದಾಯದಲ್ಲಿ ಬದುಕುವ ಟ್ಯಾಕ್ಸಿ ಚಾಲಕ/ಮಾಲಕರು ಈ ಹೆಚ್ಚುವರಿ ತೆರಿಗೆ ಹೇಗೆ ಭರಿಸಬೇಕು ಎಂಬುದು ಟ್ಯಾಕ್ಸಿಗಳ ಮಾಲಕರ ಕೊರಗಾಗಿದೆ.

ಗಳಿಸಿದ್ದು ಸಿಗಲ್ಲ: ಸ್ವಂತ ಟ್ಯಾಕ್ಸಿ ಕೊಳ್ಳಲು ಆರ್ಥಿಕ ಸಾಮರ್ಥ್ಯ ಇಲ್ಲದವರು ಆ್ಯಪ್ ಆಧರಿತ ಟ್ಯಾಕ್ಸಿ ಸಂಸ್ಥೆಯ ವಾಹನದಲ್ಲಿ ದುಡಿಯುತ್ತಾರೆ. ಪ್ರತಿದಿನ 12 ಗಂಟೆ ಕೆಲಸನಿರ್ವಹಿಸಿ, ಸಾವಿರ ರೂಪಾಯಿ ಕಂಪೆನಿಗೆ ಕೊಡುತ್ತಾರೆ. ಎಲ್ಲವೂ ಸರಿಯಾಗಿದ್ದರೆ ಗ್ರಾಹಕರ ರೇಟಿಂಗ್, ಸಮಯಪಾಲನೆ, ಸೇವಾ ಗುಣಮಟ್ಟ, ಇಂಧನ ಉಳಿತಾಯ ದಿಂದ ದಿನಕ್ಕೆ 400ರಿಂದ 500ರೂ. ಕೈಗೆ ಸಿಗುತ್ತದೆ. ಕೆಲವೊಮ್ಮೆ ಗಳಿಸಿದ್ದನ್ನೂ ಕಳೆದುಕೊಳ್ಳಬೇಕಾಗುತ್ತದೆ.

ಐದು ವರ್ಷಗಳ ಬಳಿಕ ವಾಹನ ನಮ್ಮ ಸ್ವಂತದ್ದಾಗುತ್ತದೆ ಎಂದು ಕಂಪನಿ ಹೇಳುತ್ತದೆ. ಆದರೆ, ವಾಹನ ಅಷ್ಟೇ ಹಳೆಯದೂ ಆಗಿರುತ್ತದೆಯಲ್ಲವೇ.

-ಪುನೀತ್, ಆ್ಯಪ್ ಆಧರಿತ ಟ್ಯಾಕ್ಸಿ ಚಾಲಕ

ಅಂಕಿ-ಅಂಶ

* ನಗರದಲ್ಲಿ 1.25 ಲಕ್ಷ ಟ್ಯಾಕ್ಸಿಗಳು.

* ಪ್ರಸ್ತುತ 60 ಸಾವಿರಕ್ಕೆ ಇಳಿಕೆ.

* 4-5 ಸಾವಿರ ಟ್ಯಾಕ್ಸಿಗಳು ಸೆಕೆಂಡ್‌ಹ್ಯಾಂಡ್ ವಾಹನ ಶೋರೂಂ ಸೇರಿವೆ.

* 16 ಸಾವಿರ ವಾಹನಗಳು ಜಪ್ತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News