ಮಾನವ ಕಳ್ಳ ಸಾಗಣೆ ಜಾಲ: ಮಂಗಳೂರಿನಲ್ಲಿ ನರ್ಸಿಂಗ್ ಪದವಿ ಅಧ್ಯಯನ ಮಾಡಿದ್ದ 32 ನರ್ಸ್‌ಗಳ ರಕ್ಷಣೆ

Update: 2018-11-28 12:49 GMT

ಬೆಂಗಳೂರು, ನ.27: ನರ್ಸಿಂಗ್ ಕೋರ್ಸ್, ಉದ್ಯೋಗದ ನೆಪವೊಡ್ಡಿ 32 ನರ್ಸ್‌ಗಳನ್ನು ವಿದೇಶಕ್ಕೆ ಅಕ್ರಮ ಸಾಗಾಟ ಮಾಡುತ್ತಿದ್ದ ಓರ್ವನನ್ನು ಬಂಧಿಸಿ ಮಾನವ ಕಳ್ಳಸಾಗಣೆ ಮಾಡುತ್ತಿದ್ದ ಜಾಲವೊಂದನ್ನು ಬೆಂಗಳೂರಿನ ಕೆಂಪೇಗೌಡ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ಭೇದಿಸಿದ್ದಾರೆ.

ಟೋನಿ ಟಾಮ್ ಎಂಬಾತ ಬಂಧಿತ ಆರೋಪಿ ಎನ್ನಲಾಗಿದ್ದು, ಈತ ಮಂಗಳೂರಿನ ಕಂಕನಾಡಿಯಲ್ಲಿ ಹೋಪ್ಸ್ ಇನ್ ಎಜುಕೇಷನಲ್ ಇಂಟರ್ ನ್ಯಾಷನಲ್ ಹೆಸರಿನ ಸಂಸ್ಥೆಯ ಪ್ರಮುಖ ಸಂಚಾಲಕನಾಗಿದ್ದ. ಪ್ರಕರಣ ಸಂಬಂಧ ಕೇರಳದ ಮೂಲದ 32 ನರ್ಸ್‌ಗಳನ್ನು ರಕ್ಷಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಯಾರು ಈ ಟಾಮ್?: ಜರ್ಮನಿ ಭಾಷೆ ಕಲಿತರೆ ವಿದೇಶಗಳಲ್ಲಿ ನರ್ಸ್‌ಗಳಿಗೆ ಭಾರೀ ಬೇಡಿಕೆ ಇದೆ. ಜೊತೆಗೆ ಕೈತುಂಬಾ ಸಂಬಳ ದೊರೆಯುತ್ತದೆ ಎಂದೆಲ್ಲಾ ನಂಬಿಸಿ, ಪತ್ರಿಕೆಗಳಲ್ಲಿ ಜಾಹೀರಾತು ನೀಡಿದ್ದ. ಇದನ್ನು ನಂಬಿ ಕೇರಳ ಮೂಲದ 32 ನರ್ಸ್‌ಗಳು ಆರೋಪಿ ಟಾಮ್ ಅನ್ನು ಸಂಪರ್ಕಿಸಿದ್ದಾರೆ ಎನ್ನಲಾಗಿದೆ.

ಅರ್ಮೇನಿಯಾ ದೇಶದ ಯುನಿವರ್ಸಿಟಿ ಆಫ್ ಟ್ರೆಡಿಷನಲ್ ಮೆಡಿಸನ್ ಆಫ್ ಅರ್ಮೇನಿಯ(ಯುಟಿಎಂಎ) ವಿಶ್ವವಿದ್ಯಾನಿಲಯದಲ್ಲಿ 2 ತಿಂಗಳ ಕಾಲ ಜರ್ಮನ್ ಭಾಷೆ ಕಲಿಕೆ ತರಗತಿ ನೀಡಲಾಗುತ್ತಿದೆ. ತದನಂತರ, ವಿದೇಶಗಳಲ್ಲಿ ಉತ್ತಮ ಉದ್ಯೋಗ, ಸೌಲಭ್ಯಗಳು ದೊರೆಯುತ್ತದೆ ಎಂದು ಹೇಳಿದ್ದಾನೆ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

ಆರೋಪಿ ಟಾಮ್ ಮಾತುಗಳನ್ನು ನಂಬಿದ, ನರ್ಸಿಂಗ್ ವಿದ್ಯಾರ್ಥಿನಿಯರು, ಪಾಸ್‌ಪೋರ್ಟ್, ವೀಸಾಗಾಗಿ ತಲಾ 30 ಸಾವಿರ ರೂ. ಮಾತ್ರವಲ್ಲದೆ, ವಿಶ್ವವಿದ್ಯಾಲಯದ ಶುಲ್ಕ ಎಂದು 1,200 ಡಾಲರ್ ನೀಡಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.

ಸಿಕ್ಕಿದ್ದು, ಹೇಗೆ?: ಮಂಗಳವಾರ ಮುಂಜಾನೆ 4 ಗಂಟೆಗೆ ಅರ್ಮೇನಿಯಾಗೆ ತೆರಳಲು ವಿಮಾನದಲ್ಲಿ ಈ ವಿದ್ಯಾರ್ಥಿನಿಯರಿಗೆ ಟಾಮ್ ಆಸನಗಳನ್ನು ಕಾಯ್ದಿರಿಸಿದ್ದ. ಸೋಮವಾರ ರಾತ್ರಿ 32 ವಿದ್ಯಾರ್ಥಿನಿಯರು ಬೆಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು ಎನ್ನಲಾಗಿದೆ.

ಇವರ ಚಲನವಲನಗಳ ಬಗ್ಗೆ ಅನುಮಾನಗೊಂಡ ವಿಮಾನ ನಿಲ್ದಾಣ ಅಧಿಕಾರಿಗಳು, ಟಾಮ್ ನನ್ನು ವಿಚಾರಣೆಗೊಳಪಡಿಸಿದ್ದಾರೆ. ಆದರೆ, ಆತ, ಅಲ್ಪಾವಧಿ ಕೋರ್ಸ್‌ಗಾಗಿ ಅರ್ಮೇನಿಯಾಗೆ ಕರೆದೊಯ್ಯುತ್ತಿರುವುದಾಗಿ ಸುಳ್ಳು ಹೇಳಿದ್ದಾನೆ. ಯುಟಿಎಂಎ ವಿಶ್ವವಿದ್ಯಾನಿಲಯ ಅರ್ಮೇನಿಯಾದಲ್ಲಿ ಇರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ ಅಧಿಕಾರಿಗಳು ಈತನನ್ನು ಕೂಲಂಕಷವಾಗಿ ವಿಚಾರಿಸಿದಾಗ ಸರಿಯಾದ ಉತ್ತರ ನೀಡಲಿಲ್ಲ. ತಕ್ಷಣ ಆತನನ್ನು ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಈಶಾನ್ಯ ವಲಯದ ಡಿಸಿಪಿ ಕಲಾ ಕೃಷ್ಣಸ್ವಾಮಿ ಮಾಹಿತಿ ನೀಡಿದ್ದಾರೆ.

32 ಮಂದಿ ನರ್ಸಿಂಗ್ ವಿದ್ಯಾರ್ಥಿನಿಯರನ್ನೂ ಸಹ ಪೊಲೀಸರು ವಿಚಾರಣೆಗೊಳಪಡಿಸಿದ್ದು, ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ. ತಾವು ಟಾಮ್ಗೆ ಹಣ ನೀಡಿರುವುದಾಗಿ ಹಾಗೂ ತಾವು ಕೋರ್ಸ್ ನಂತರ ಹಿಂತಿರುಗುವ ಟಿಕೆಟ್ ಸಹ ಪಡೆಯಲಾಗಿದೆ ಎಂದಿದ್ದಾರೆ. ಈ ಸಂಬಂಧ ತನಿಖೆ ಮುಂದುವರೆಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News