30 ಲಕ್ಷ ಫಲಾನುಭವಿಗಳಿಗೆ ‘ಅನಿಲಭಾಗ್ಯ ಯೋಜನೆ’: ಸಚಿವ ಝಮೀರ್ ಅಹ್ಮದ್ ಖಾನ್

Update: 2018-11-28 13:21 GMT

ಬೆಂಗಳೂರು, ನ. 28: ರಾಜ್ಯ ಸರಕಾರದ ‘ಸಿಎಂ ಅನಿಲಭಾಗ್ಯ ಯೋಜನೆ’ಯಡಿ 30ಲಕ್ಷ ಫಲಾನುಭವಿಗಳನ್ನು ಗುರುತಿಸಿ, ಅವರಿಗೆ ಅಡುಗೆ ಅನಿಲ ಸಂಪರ್ಕ, ಎರಡು ಸಿಲಿಂಡರ್ ಸೌಲಭ್ಯ ಕಲ್ಪಿಸುವ ಯೋಜನೆ ಜಾರಿಗೆ ಕ್ರಮ ವಹಿಸಲಾಗುವುದು ಎಂದು ಆಹಾರ ಸಚಿವ ಬಿ.ಝಡ್.ಝಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.

ಬುಧವಾರ ವಿಕಾಸಸೌಧದಲ್ಲಿ ಆಹಾರ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನಿಲಭಾಗ್ಯ ಯೋಜನೆಯಡಿ 30ಲಕ್ಷ ಫಲಾನುಭವಿಗಳಿಗೆ 3 ಹಂತದಲ್ಲಿ ಸೌಲಭ್ಯ ವಿತರಿಸುವ ಗುರಿ ಹೊಂದಲಾಗಿದೆ. ಮೊದಲ ಹಂತದಲ್ಲಿ 1ಲಕ್ಷ ಮಂದಿ ಫಲಾನುಭವಿಗಳನ್ನು ಗುರುತಿಸಲಾಗಿತ್ತು. ಆದರೆ, ಆ ಪೈಕಿ 31 ಸಾವಿರ ಮಂದಿ ‘ಪಿಎಂ ಉಜ್ವಲ ಯೋಜನೆ’ಯಡಿ ಅನಿಲ ಸಂಪರ್ಕ ಪಡೆದುಕೊಂಡಿರುವ ಹಿನ್ನೆಲೆಯಲ್ಲಿ ಅರ್ಜಿಗಳು ತಿರಸ್ಕೃತಗೊಂಡಿವೆ. ಹೀಗಾಗಿ ಫಲಾನುಭವಿಗಳನ್ನು ಡಿ.15ರೊಳಗೆ ಆಯ್ಕೆ ಮಾಡಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಹೊರಗುತ್ತಿಗೆ: ನ್ಯಾಯಬೆಲೆ ಅಂಗಡಿಗಳಲ್ಲಿ ಬಯೋಮೆಟ್ರಿಕ್ ವ್ಯವಸ್ಥೆ ಅಳವಡಿಸಲಾಗಿದೆ. ಆದರೆ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಸೇರಿ ಗುಡ್ಡಗಾಡು ಪ್ರದೇಶದಲ್ಲಿ ಬಯೋಮೆಟ್ರಿಕ್ ವ್ಯವಸ್ಥೆ ಅಳವಡಿಕೆ ಸಾಧ್ಯವಾಗಿಲ್ಲ. ಹೀಗಾಗಿ ಬಿಎಸ್‌ಎನ್‌ಎಲ್ ಸೇರಿದಂತೆ ಖಾಸಗಿ ಸಂಸ್ಥೆಗಳಿಗೆ ಬಯೋಮೆಟ್ರಿಕ್ ಅಳವಡಿಕೆಗೆ ಹೊರಗುತ್ತಿಗೆ ನೀಡಲು ಚಿಂತನೆ ನಡೆಸಲಾಗಿದೆ ಎಂದರು.

ಪಡಿತರ ಚೀಟಿಗಳಿಗೆ ಆಧಾರ್ ಕಾರ್ಡ್ ಜೋಡಣೆ ಕಾರ್ಯ ಶೇ.99ರಷ್ಟು ಆಗಿದ್ದು, ಇದರಿಂದ 4.5ಲಕ್ಷ ನಕಲಿ ಪಡಿತರ ಚೀಟಿಗಳನ್ನು ರದ್ದುಗೊಳಿಸಲಾಗಿದೆ ಎಂದ ಅವರು, ರಾಜ್ಯದಲ್ಲಿ 1.31ಕೋಟಿ ಪಡಿತರ ಚೀಟಿಗಳಿವೆ. ಹೊಸ ಪಡಿತರ ಚೀಟಿಗೆ 8ಲಕ್ಷ ಅರ್ಜಿಗಳು ಬಂದಿದ್ದು, ಆ ಪೈಕಿ 6.26ಲಕ್ಷ ಅರ್ಜಿಗಳು ಬಾಕಿ ಇದ್ದು, ಅವುಗಳನ್ನು ವಿಲೇ ಮಾಡಲು ಸೂಚಿಸಲಾಗಿದೆ ಎಂದರು.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಸ್ಟೆಲ್ ಮತ್ತು ಖಬರಸ್ತಾನ್‌ಗೆ ಅಗತ್ಯವಿರುವ ಭೂಮಿಯನ್ನು ಕೂಡಲೇ ಒದಗಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜತೆಗೆ ಇಲಾಖೆಗೆ ನೀಡಿರುವ ಅನುದಾನವನ್ನು 1 ತಿಂಗಳಲ್ಲಿ ಬಳಕೆ ಮಾಡಿ, ಅದಕ್ಕೆ ದಾಖಲೆ ಒದಗಿಸಬೇಕೆಂದು ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಕಾರ್ಯದರ್ಶಿ ಎಂ.ವಿ.ಸಾವಿತ್ರಿ, ಆಯುಕ್ತ ಟಿ.ಎಚ್.ಎಂ.ಕುಮಾರ್, ಆಹಾರ ನಿಗಮದ ವ್ಯವಸ್ಥಾಪಕ ನಿರ್ದೇಶಕ ಹೇಮಾಜಿ ನಾಯಕ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ರೇವಣ್ಣ ಆಸಕ್ತಿಯಿಂದ ಹಾಸನಕ್ಕೆ ಅನುದಾನ

ಸಚಿವ ರೇವಣ್ಣ ಹೆಚ್ಚಿನ ಆಸಕ್ತಿ ವಹಿಸಿರುವ ಕಾರಣಕ್ಕೆ ಹಾಸನಕ್ಕೆ ಹೆಚ್ಚಿನ ಅನುದಾನ ತೆಗೆದುಕೊಂಡಿದ್ದಾರೆ. ಸಿಎಂ ಯಾರಿಗೂ ಅನುದಾನ ನೀಡುವುದಿಲ್ಲವೆಂದು ಹೇಳುವುದಿಲ್ಲ. ನಾನು ಕೂಡ ಹಾವೇರಿ ಜಿಲ್ಲೆಗೆ ವೈದ್ಯಕೀಯ ಕಾಲೇಜಿನ ಬೇಡಿಕೆ ಇಟ್ಟಿದ್ದು, ವಕ್ಫ್ ಆಸ್ತಿ ಸಂರಕ್ಷಣೆಗೆ 100ಕೋಟಿ ರೂ.ಅನುದಾನ ಕೋರಿದ್ದು, ನೀಡುವ ಭರವಸೆ ಇದೆ.

-ಬಿ.ಝಡ್.ಝಮೀರ್ ಅಹ್ಮದ್ ಖಾನ್ ಆಹಾರ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News