ಎಲಿವೇಟೆಡ್ ಕಾರಿಡಾರ್ ಯೋಜನೆ ಬಗ್ಗೆ ಮುಕ್ತ ಚರ್ಚೆಗೆ ಸಿದ್ಧ: ಮುಖ್ಯಮಂತ್ರಿ ಕುಮಾರಸ್ವಾಮಿ

Update: 2018-11-29 18:27 GMT

ಬೆಂಗಳೂರು, ನ. 29: ‘ಬೆಂಗಳೂರು ನಗರದ ವಾಹನ ದಟ್ಟಣೆ ನಿಯಂತ್ರಿಸುವ ದೃಷ್ಟಿಯಿಂದ ನಿರ್ಮಿಸಲು ಉದ್ದೇಶಿಸಿರುವ ಎಲಿವೇಟೆಡ್ ಕಾರಿಡಾರ್ ಯೋಜನೆಯ ಬಗ್ಗೆ ಮುಕ್ತ ಚರ್ಚೆಗೆ ಸಿದ್ಧವಾಗಿದ್ದೇನೆ’ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಇಂದಿಲ್ಲಿ ಘೋಷಿಸಿದ್ದಾರೆ.

ಗುರುವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಅಧಿಕಾರಿಗಳ ಸಭೆ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಸರ ಸಂರಕ್ಷಣೆಯೊಂದಿಗೆ 2019ರ ಜನವರಿಯಲ್ಲಿ ಕಾರಿಡಾರ್ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು. ಪಾರದರ್ಶಕವಾಗಿ ಯೋಜನೆ ಜಾರಿಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.

ಉತ್ತರ-ದಕ್ಷಿಣ ಕಾರಿಡಾರ್: ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ ವರೆಗೆ 26 ಕಿ.ಮೀ -7,224 ಕೋಟಿ ರೂ., ಪೂರ್ವ-ಪಶ್ಚಿಮ-1; ಕೆಆರ್ ಪುರದಿಂದ ಗೊರಗುಂಟೆಪಾಳ್ಯ ವರೆಗೆ 20 ಕಿ.ಮೀ-6,245 ಕೋಟಿ ರೂ., ಪೂರ್ವ-ಪಶ್ಚಿಮ-2; ವರ್ತೂರು ಕೋಡಿಯಿಂದ ಮೈಸೂರು ರಸ್ತೆ 29ಕಿ.ಮೀ-7,083 ಕೋಟಿ ರೂ.

ಸಂಪರ್ಕ ಕಾರಿಡಾರ್: ಸೈಂಟ್‌ಜಾನ್ಸ್ ಆಸ್ಪತ್ರೆಯಿಂದ ಅಗರ-4.48 ಕಿ.ಮೀ -826 ಕೋಟಿ ರೂ., ಸಂಪರ್ಕ ಕಾರಿಡಾರ್-2 2.80 ಕಿ.ಮೀ-733 ಕೋಟಿ ರೂ., ಸಂಪರ್ಕ ಕಾರಿಡಾರ್-3 ವೀಲರ್ಸ್ ಜಂಕ್ಷನ್‌ನಿಂದ ಕಲ್ಯಾಣನಗರ ಹೊರ ವರ್ತುಲ ರಸ್ತೆ-6.46 ಕಿ.ಮೀ-1,653 ಕೋಟಿ ರೂ. ಹಾಗೂ ಹೆಚ್ಚುವರಿ ಕಾರಿಡಾರ್ ರಾಮಮೂರ್ತಿ ನಗರದಿಂದ ಐಟಿಪಿಎಲ್-10.99 ಕಿ.ಮೀ-1,731 ಕೋಟಿ ರೂ. ಸೇರಿದಂತೆ ಒಟ್ಟಾರೆ 25,495 ಕೋಟಿ ರೂ.ವೆಚ್ಚದಲ್ಲಿ 102 ಕಿ.ಮೀ ಉದ್ದದ ಎಲಿವೇಟೆಡ್ ಕಾರಿಡಾರ್ ನಿರ್ಮಿಸಲಾಗುವುದು ಎಂದು ಮಾಹಿತಿ ನೀಡಿದರು.

ಮರಗಳ ಸ್ಥಳಾಂತರ: ಮೆಟ್ರೋ ರೈಲು ಮತ್ತು ಎಲಿವೇಟೆಡ್ ಕಾರಿಡಾರ್ ನಡುವೆ ಸಂಪರ್ಕ ಕಲ್ಪಿಸಲು ಉದ್ದೇಶಿಸಿದ್ದು, ಬೆಂಗಳೂರು ನಗರದ ವಾಹನ ದಟ್ಟಣೆ ನಿಯಂತ್ರಣಕ್ಕೆ ಉದ್ದೇಶಿಸಲಾಗಿದೆ. ಈಗಾಗಲೇ ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಪ್ರಾಥಮಿಕ ಡಿಪಿಆರ್ ಸಿದ್ಧವಾಗಿದೆ ಎಂದು ಹೇಳಿದರು.
ಎಲಿವೇಟೆಡ್ ಕಾರಿಡಾರ್ ನಿರ್ಮಾಣದಿಂದ ಪರಿಸರಕ್ಕೆ ಧಕ್ಕೆಯಾಗಲಿದೆ ಎಂದು ಕೆಲವರು ವಿರೋಧಿಸುತ್ತಿದ್ದು, ಅವರಿಗೆ ವಿಧಾನಸೌಧದ ಬಾಗಿಲು ಮುಕ್ತವಾಗಿದೆ. ಚರ್ಚೆಗೆ ಸರಕಾರ ಸಿದ್ಧ ಎಂದ ಅವರು, ಕಾರಿಡಾರ್ ನಿರ್ಮಾಣದ ಮಾರ್ಗದಲ್ಲಿನ 3 ಸಾವಿರಕ್ಕೂ ಹೆಚ್ಚು ಮರಗಳನ್ನು ಸ್ಥಳಾಂತರಕ್ಕೆ ಕ್ರಮ ವಹಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಯಾವುದೇ ಟೋಲ್ ಇಲ್ಲ: ರಾಜ್ಯ ಸರಕಾರ ನಿರ್ಮಿಸಲು ಉದ್ದೇಶಿಸಿರುವ 102 ಕಿ.ಮೀ ರಸ್ತೆಯಲ್ಲಿ ಯಾವುದೇ ಟೋಲ್ ಸಂಗ್ರಹಿಸುವುದಿಲ್ಲ. ನೈಸ್ ರಸ್ತೆಗೂ ಕಾರಿಡಾರ್ ರಸ್ತೆಗೂ ಯಾವುದೇ ಸಂಬಂಧವಿಲ್ಲ. ಈ ವಿಚಾರದಲ್ಲಿ ಯಾರಿಗೂ ರಾಜಿ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

‘ಭವಿಷ್ಯದ ದೃಷ್ಟಿಯಿಂದ ಬೆಂಗಳೂರು ನಗರದ ಅಭಿವೃದ್ಧಿ ಅತ್ಯಗತ್ಯ. ಆದರೆ, ಕೆಲ ಕಾರಣಕ್ಕಾಗಿ ನಗರದ ಅಭಿವೃದ್ಧಿ ವಿಚಾರಗಳಿಗೆ ತೊಡಕಾಗಬಾರದು. ನನ್ನ ಸರಕಾರ ಅತ್ಯಂತ ಪಾರದರ್ಶಕವಾಗಿದ್ದು, ಈ ವಿಚಾರದ ಬಗ್ಗೆ ಮುಕ್ತ ಚರ್ಚೆಗೆ ಸಿದ್ಧ’
-ಕುಮಾರಸ್ವಾಮಿ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News