ದೇಶದಲ್ಲಿ ಏಕ ಸಂಸ್ಕೃತಿ ಹೇರಿಕೆ ಕಳವಳಕಾರಿ: ನ್ಯಾ. ನಾಗಮೋಹನದಾಸ್

Update: 2018-12-01 08:37 GMT

ಮಂಗಳೂರು, ಡಿ.1: ಒಬ್ಬರನ್ನೊಬ್ಬರು ಪ್ರೀತಿಸಿ ಜೀವನ ನಡೆಸುವ ಬಹುತ್ವದ ದೇಶದಲ್ಲಿ ಒಂದೇ ದೇಶ, ಧರ್ಮ, ಭಾಷೆ, ನೀತಿ, ಸಂಸ್ಕೃತಿ, ಆಹಾರ ಪದ್ಧತಿ, ಉಡುಪು ಇರಬೇಕೆಂಬ ಫರ್ಮಾನು ಹೊರಡಿಸುವ ಅಪಾಯಕಾರಿ ಸನ್ನಿವೇಶದಲ್ಲಿ ನಾವಿದ್ದೇವೆ ಎಂದು ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ ದಾಸ್ ಕಳವಳ ವ್ಯಕ್ತಪಡಿಸಿದ್ದಾರೆ.

ಅಭಿಮತ ಮಂಗಳೂರು ವತಿಯಿಂದ ನಗರದ ಶಾಂತಿಕಿರಣ ಸಭಾಂಗಣದಲ್ಲಿ ಇಂದು ಜನನುಡಿ 5ನೆ ಆವೃತ್ತಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಏಕ ಸಂಸ್ಕೃತಿಯ ಮೂಲಕ ಸಂವಿಧಾನೇತರ ಶಕ್ತಿಗಳು ಜನರ ಬದುಕನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿವೆ. ಬಹುತ್ವವನ್ನು ನಾಶ ಮಾಡಲು ಸಂಚು ನಡೆಸುತ್ತಿವೆ. ಇದಕ್ಕೆ ಅಧಿಕಾರದಲ್ಲಿ ಕುಳಿತವರು ಬೆಂಬಲಿಸುತ್ತಿರುವುದು ಅಪಾಯಕಾರಿ ಎಂದು ಅವರು ಹೇಳಿದರು.

ಈ ಹಿಂದೆ ಸಂವಿಧಾನೇತರ ಶಕ್ತಿಗಳು ಕ್ರೈಸ್ತರು, ಮುಸ್ಲಿಮರು, ದಲಿತರ ಮೇಲೆ ದಾಳಿ ನಡೆಸಿದವು. ಆಗ ಜನರು ಮೌನವಾಗಿದ್ದರು. ಆದರೆ ಈಗ ಸಂವಿಧಾನದ ಮೇಲೆ ಆ ಶಕ್ತಿಗಳು ದಾಳಿ ನಡೆಸುವ ಮೂಲಕ ಅಪಾಯವನ್ನು ಸೃಷ್ಟಿಸಿವೆ. ನಮ್ಮ ಸಂವಿಧಾನ ಸಹಿಷ್ಣುತೆಯ ಪಾಠವನ್ನು ನೀಡುತ್ತದೆಯೇ ಹೊರತು ಸುಡುವ ಅನಾಗರಿಕ ಪ್ರವೃತಿಯನ್ನು ಕಲಿಸುವುದಿಲ್ಲ. ಹಾಗಾಗಿ ಈ ದುಷ್ಟ ಶಕ್ತಿಗಳು ಸಂವಿಧಾನದ ಮೇಲೆ ದಾಳಿ ನಡೆಸುವ ಮೂಲಕ ಅರಾಜಕತೆಯನ್ನು ಸೃಷ್ಟಿಸಲು ಹುನ್ನಾರ ನಡೆಸುತ್ತಿವೆ ಎಂದು ನ್ಯಾ. ನಾಗಮೋಹನ ದಾಸ್ ಕಳವಳ ವ್ಯಕ್ತಪಡಿಸಿದರು.

ನ್ಯಾಯಾಂಗದ ಮೇಲೂ ಬಾಹ್ಯ ಒತ್ತಡ ಹೇರಲಾಗುತ್ತಿದೆ. ಇದೇ ರೀತಿಯ ತೀರ್ಪು ನೀಡಬೇಕು, ವಿರುದ್ಧವಾದ ತೀರ್ಪು ನೀಡಿದರೆ ಒಪ್ಪುವುದಿಲ್ಲ ಎಂಬ ಬೆದರಿಕೆಗಳನ್ನು ಹಾಕಲಾಗುತ್ತಿದೆ. ಅಯೋಧ್ಯೆಯ ಪ್ರಕರಣದಲ್ಲೂ ಹೀಗೆಯೇ ಒತ್ತಡ ಹೇರಲಾಗುತ್ತಿದೆ ಎಂದು ಅವರು ಹೇಳಿದರು.

ಪ್ರಜಾಪ್ರಭುತ್ವ ಆಧಾರ ಸ್ತಂಭಗಳಂತೆ ಇರುವ ಸಂಸ್ಥೆಗಳನ್ನು ನಾಶ ಮಾಡುವ ಪ್ರಯತ್ನ ಆರಂಭವಾಗಿದೆ. ಭಿನ್ನ ಧ್ವನಿಗಳನ್ನು ಅಡಗಿಸಲು ಅಧಿಕಾರವನ್ನು ದುರ್ಬಳಕೆ ಮಾಡಲಾಗುತ್ತಿದೆ. ಅಘೋಷಿತ ತುರ್ತು ಪರಿಸ್ಥಿತಿಯನ್ನು ನಾವು ಎದುರಿಸುತ್ತಿದ್ದೇವೆ. ಆದರೆ ಇತಿಹಾಸ ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು. ದೇಶದ ಜನ ಈ ಹಿಂದೆಯೂ ಇತಿಹಾಸ ಮರೆತವರಿಗೆ ಪಾಠ ಕಲಿಸಿದ್ದಾರೆ. ಮುಂದೆಯೂ ಕಲಿಸುತ್ತಾರೆ. ಏಕ ಸಂಸ್ಕೃತಿ ಹೇರಿಕೆಗೆ ಬಹುತ್ವವನ್ನು ಪ್ರೀತಿಸುವ ಜನ ಎಂದೂ ಬಿಡುವುದಿಲ್ಲ. ಅವರು ಈ ಏಕ ಸಂಸ್ಕೃತಿ ವಿರುದ್ಧ ಸಿಡಿದೆದ್ದು ನಿಲ್ಲುವ ವಾತಾವರಣ ನಿರ್ಮಾಣವಾಗಲಿದೆ ಎಂದು ಒಬ್ಬರನ್ನೊಬ್ಬರು ಪ್ರೀತಿಸಿ ಜೀವನ ನಡೆಸುವುದೇ ಬಹುತ್ವ ಎಂದವರು ಸ್ಪಷ್ಟಪಡಿಸಿದರು.

ವೇದಿಕೆಯಲ್ಲಿ ಅತಿಥಿಗಳಾಗಿ ನಟ, ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ರೈ, ಡಾ. ಹಸೀನಾ ಖಾದ್ರಿ, ಎಂ. ದೇವದಾಸ್ ಉಪಸ್ಥಿತರಿದ್ದರು. ವಿನಯಾ ವಕ್ಕುಂದ ಅಧ್ಯಕ್ಷತೆ ವಹಿಸಿದ್ದರು. ಸತ್ಯಾ ಎಸ್. ಕಾರ್ಯಕ್ರಮ ನಿರೂಪಿಸಿದರು.

ದೇಶದಲ್ಲಿ ಸಾಮಾಜಿಕ, ಆರ್ಥಿಕ ಭಯೋತ್ಪಾದನೆ

ದೇಶದಲ್ಲಿ ಈಗ ಆರ್ಥಿಕ ಮತ್ತು ಸಾಮಾಜಿಕ ಭಯೋತ್ಪಾದನೆ ಮೂಲಕ ಅಸಮಾನತೆ ಸೃಷ್ಟಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದ ನ್ಯಾ. ಎಚ್.ಎನ್. ನಾಗಮೋಹನ ದಾಸ್, ಹದಗೆಟ್ಟಿರುವ ನಮ್ಮ ಸಂಸದೀಯ ವ್ಯವಸ್ಥೆಯನ್ನು ಉಳಿಸಬೇಕಾದರೆ ಸಜ್ಜನರು, ಜನಪರರು ಹಾಗೂ ಸಂವಿಧಾನದ ಬಗ್ಗೆ ನಂಬಿಕೆ ಇರುವವರನ್ನು ನಾವು ಪಾರ್ಲಿಮೆಂಟಿಗೆ ಆಯ್ಕೆ ಮಾಡಿ ಕಳುಹಿಸಬೇಕಾಗಿದೆ ಎಂದರು.

ಸಂಪತ್ತಿನ ಶೇಖರಣೆಗೆ ಸರ್ಕಾರವೇ ಬೆಂಬಲ ನೀಡುತ್ತಿದೆ. ಜನರ ಸಂಪತ್ತಿನ ರಕ್ಷಣೆ ಮಾಡಬೇಕಾದ ಬ್ಯಾಂಕ್‌ಗಳು ಲೂಟಿಕೋರರ ಬೆಂಬಲಕ್ಕೆ ನಿಂತಿವೆ. ಆರ್‌ಬಿಐ, ಸಿಬಿಐ, ಮಾತ್ರವಲ್ಲದೆ ಐಟಿ ವ್ಯವಸ್ಥೆಯೂ ಇಂದು ಹದಗೆಟ್ಟಿದ್ದು, ವಿಪಕ್ಷವಿರುವಲ್ಲಿ ಅದನ್ನು ದಮನಿಸಲು ದಾಳಿ ನಡೆಸುವ ವ್ಯವಸ್ಥೆಗಳಾಗಿ ಮಾರ್ಪಟ್ಟಿವೆ ಎಂದು ಅವರು ಹೇಳಿದರು.

ಆರ್ಥಿಕ ಮತ್ತು ಸಾಮಾಜಿಕ ಭಯೋತ್ಪಾದನೆಗೆ ಕಡಿವಾಣ ಹಾಕದಿದ್ದರೆ ದೇಶ ಅರಾಜಕತೆಯತ್ತ ಸಾಗುವ ಸಂಭವವಿದೆ. ಆಗ ಇಡೀ ರಾಷ್ಟ್ರ ಮೂಲಭೂತವಾದಿಗಳು ಮತ್ತು ಕೋಮುವಾದಿಗಳ ಕೈಗೆ ಸಿಲುಕಿ ನಲುಗಿ ಹೋಗಲಿದೆ. ಇಂತಹ ಅಪಾಯ ಎದುರಾಗದಂತೆ ಜನರು ಎಚ್ಚರ ವಹಿಸಬೇಕು ಎಂದು ಅವರು ಕರೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News