ಸಂಸ್ಕೃತಿಯೊಂದಿಗೆ ಮಾನವ ಧರ್ಮವಿದ್ದಾಗ ಬದುಕು: ಪ್ರಕಾಶ್ ರೈ
ಮಂಗಳೂರು, ಡಿ.1: ನುಡಿಯಂತೆ ಧರ್ಮ, ಆಚಾರ ವಿಚಾರ, ಸಂಸ್ಕೃತಿಯೂ ಬದುಕು. ಇವೆಲ್ಲದರ ಜತೆ ಮಾನವ ಧರ್ಮ ಇದ್ದಾಗ ಮಾತ್ರ ಅದು ನೈಜ ಬದುಕಾಗುತ್ತದೆ. ಮಾನವ ಧರ್ಮ, ಮಾನವೀಯತೆ ಇಲ್ಲದಿದ್ದಾಗ ಅದು ಕೇವಲ ಶಬ್ಧವಾಗುತ್ತದೆ ಎಂದು ಖ್ಯಾತ ಚಲನಚಿತ್ರ ನಟ ಪ್ರಕಾಶ್ ರೈ ಅಭಿಪ್ರಾಯಿಸಿದ್ದಾರೆ.
ನಂತೂರಿನ ಶಾಂತಿಕಿರಣ ಸಭಾಂಗಣದಲ್ಲಿ ಇಂದು ‘ಜನನುಡಿ’ ಐದನೆ ಆವೃತ್ತಿಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ನುಡಿಯು ಸಿರಿಯಲ್ಲ ಬದುಕು ಎಂಬುದು ಅದ್ಭುತವಾದ ಸತ್ಯ ಎಂದು ಹೇಳಿದ ಅವರು, ಒಂದು ಧರ್ಮವನ್ನು ಹಿಡಿದು ರಾಜಕೀಯ ಮಾಡುವುದನ್ನು ನಾವು ವಿರೋಧಿಸುತ್ತೇವೆ. ಹಾಗಂತ ನಾವು ಯಾವುದೇ ಒಂದು ಧರ್ಮದ ವಿರೋಧಿಯಲ್ಲ ಎಂದರೆ ಅದನ್ನು ಕೇಳಿಸಿಕೊಳ್ಳುವುದಿಲ್ಲ. ಇದು ನನ್ನ ಆವೇದನೆಯ ಮಾತುಗಳು ಎಂದವರು ಹೇಳಿದರು.
ಶಬರಿಮಲೆಯಂತಹ ಜನರ ನಂಬಿಕೆಯನ್ನು ಕೇಂದ್ರ ಸರಕಾರವನ್ನು ಆಳುತ್ತಿರುವ ವ್ಯಕ್ತಿಯೊಬ್ಬ ಬಹಿರಂಗವಾಗಿ ತನ್ನ ಸದಸ್ಯರಿಗೆ, ಇದೊಂದು ಸುವರ್ಣಾವಕಾಶ, ಇದನ್ನು ಬಳಸಿಕೊಂಡು ಕೇರಳ ರಾಜ್ಯದಲ್ಲಿ ರಾಜಕೀಯ ಪಕ್ಷವಾಗಿ ಬೆಳೆಯಬಹುದು ಎಂಬ ರೀತಿಯಲ್ಲಿ ಕೆಟ್ಟ ಮಾತು, ಆಲೋಚನೆಗಳನ್ನು ಮಾಡುತ್ತಿದ್ದಾರೆ. ಆದರೆ ನಾವು ಮೌನವಾಗಿದ್ದೇವೆ. ಧರ್ಮ, ಆಚಾರ, ವಿಚಾರ ವೈಯಕ್ತಿಕ ಅಭಿಪ್ರಾಯ, ಬದುಕು. ಅದು ಉದ್ಯೋಗ ನೀಡದು, ಹಸಿವನ್ನು ನೀಗಿಸದು, ಮಕ್ಕಳಿಗೆ ವಿದ್ಯಾಭ್ಯಾಸ ನೀಡದು. ಸಮಾಜ ವೈಜ್ಞಾನಿಕವಾಗಿ ಬೆಳೆಯಲು ಬಿಡದು. ಇದನ್ನು ಅರ್ಥ ಮಾಡಿಕೊಳ್ಳದೆ, ಅತೀ ಪ್ರೀತಿಯನ್ನು ಉಪಯೋಗಿಸಿ ಸುಳ್ಳು ಹೇಳಿ ಬದುಕುವವರ ಬಗ್ಗೆ ಎಚ್ಚರಿಕೆ ಅಗತ್ಯ ಎಂದು ಪ್ರಕಾಶ್ ರೈ ನುಡಿದರು.
ಮನುಷ್ಯ ಪ್ರಕೃತಿಯನ್ನು ಕಾಪಾಡುತ್ತೇನೆಂಬ ಅಹಂಕಾರದಲ್ಲಿ ಜೀವಿಸಲು ಸಾಧ್ಯವಿಲ್ಲ. ನಾಗರಿಕತೆ, ಸಮಾಜ ಕಿಡಿಗೇಡಿಗಳಿಂದ ಹಾಳಾಗಿ ನಮ್ಮನ್ನೆಲ್ಲಾ ಅಳಿಸುತ್ತೆ. ಅಂತಹ ಅಳಿವಿನ ಶಕ್ತಿ ದೊಡ್ಡದಾದಗ, ಪ್ರಕೃತಿಯು ಕಿಡಿಗೇಡಿಗಳನ್ನು ಎದುರಿಸುವ, ಅಳಿಸುವ ಮತ್ತು ಮನುಷ್ಯತ್ವ ಹಾಗೂ ಮನುಷ್ಯರನ್ನು ಉಳಿಸಿಕೊಳ್ಳುವ ವೈರಸ್‌ಗಳನ್ನು ಸೃಷ್ಟಿಸುತ್ತದೆ ಎಂದು ಪ್ರಕಾಶ್ ರೈ ನುಡಿದರು.
ಇನ್ನೋರ್ವ ಮುಖ್ಯ ಅತಿಥಿ ದಲಿತ ಮುಖಂಡ ಎಂ. ದೇವದಾಸ್ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಸಂವಿಧಾನ ಬಹಳ ಮಹತ್ವವಾದ ಪಾತ್ರವನ್ನು ವಹಿಸಿದೆ. ಈ ಸಂವಿಧಾನದ ಅಡಿಯಲ್ಲೇ ನಾವೆಲ್ಲರು ಬದುಕುತ್ತಿದ್ದು, ಇಡೀ ವಿಶ್ವದಲ್ಲಿಯೇ ಭಾರತದ ಸಂವಿಧಾನ ಶ್ರೇಷ್ಠವಾಗಿ ಗುರುತಿಸಲ್ಪಟ್ಟಿದೆ ಎಂದರು.
ಇನ್ನೋರ್ವ ಮುಖ್ಯ ಅತಿಥಿ ಡಾ. ಹಸೀನಾ ಖಾದ್ರಿ ಮಾತನಾಡಿ, ದೇಶದಲ್ಲಿ ಸೌಹಾರ್ದತೆಯ ವಾತಾವರಣ ಸೃಷ್ಟಿಯಾಗಬೇಕಾದರೆ ಮನಸ್ಸುಗಳ ಬೆಸುಗೆ ಆಗಬೇಕು ಎಂದರು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿನಯಾ ವಕ್ಕುಂದ, ಅಭಿವ್ಯಕ್ತಿ ಸ್ವಾತಂತ್ರವಿಂದು ಅಪಾಯದ ಅಂಚಿನಲ್ಲಿದ್ದು, ವಿರೋಧದ ಧ್ವನಿಗಳನ್ನು ಅಡಗಿಸುವ ಪ್ರಯತ್ನಗಳು ನಡೆಯುತ್ತಲೇ ಇದೆ. ಅತ್ಯಾಚಾರ, ಹಲ್ಲೆ, ದೌರ್ಜನ್ಯಗಳು ಬದುಕಿನ ಸಹಜ ವಿಧಾನಗಳು ಎಂದು ನಂಬುವ ಕೆಟ್ಟ ಪರಿಸ್ಥಿತಿಯಲ್ಲಿ ನಾವಿಂದು ಬದುಕುತ್ತಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿದರು.
ಸಂವಿಧಾನದ ತತ್ವವನ್ನು ಯುವಜನತೆಗೆ ಮನವರಿಕೆ ಮಾಡುವಲ್ಲಿ ಶಿಕ್ಷಣ ವ್ಯವಸ್ಥೆ ಇಂದು ಮರೆತಿದೆ. ಜಾಗತೀಕರಣ, ಬಂಡವಾಳವಾದ ಅಪಾಯವನ್ನು ಯುವಜನತೆಗೆ ತಿಳಿಸಲಾಗುತ್ತಿಲ್ಲ. ದೇಶದೊಳಗೆ ಚುನಾವಣೆ ಗೆಲ್ಲುವುದೆಂದರೆ ಮಾಧ್ಯಮಗಳನ್ನು ಖರೀದಿಸಿ ಜಾಹೀರಾತು ನೀಡುವುದು ಒಂದು ಅಸ್ತ್ರವಾಗಿದೆ. ಇಂತಹ ವ್ಯವಸ್ಥೆಯಲ್ಲಿ ಸಮುದಾಯವನ್ನು ತಿದ್ದುವ, ಮಕ್ಕಳ ಮನಸ್ಸನ್ನು ಸ್ಪರ್ಶಿಸುವ ನಿಟ್ಟಿನಲ್ಲಿ ನಮ್ಮನ್ನು ನಾವು ಬೇಟೆ ಮಾಡಿಕೊಳ್ಳಲು ಸಿದ್ಧರಾಗಬೇಕಿದೆ. ಮಹಿಳಾ ಚಳವಳಿಗಳು ಸೇರಿದಂತೆ ಎಲ್ಲಾ ಚಳವಳಿಗಳು ತಮಗೆ ತಾವೇ ವೈಚಾರಿಕ ಗುಂಡು ಹೊಡಿಸಿಕೊಳ್ಳಲು ಸಿದ್ಧರಾಬೇಕಿದೆ ಎಂದು ಅವರು ಹೇಳಿದರು.
ದ್ವೇಷಿಸುವುದು ನನಗೆ ಗೊತ್ತಿಲ್ಲ
ಇತ್ತೀಚೆಗೆ ಬಹಳ ಜನ ನನ್ನ ಜಪ ಮಾಡುತ್ತಿರುತ್ತಾರೆ. ಈಗಲೂ ಕೆಲ ಜನ ಬಂದು ಜಪ ಮಾಡಿದರಂತೆ. ಹೋದಲ್ಲೆಲ್ಲಾ ಬರುವುದು, ಜನರಿಂದ ಪೊಲೀಸರಿಂದ ಬೈಸಿಕೊಳ್ಳುವುದು. ಅದೇನು ಅವರಿಗೆ ಸಿಗುತ್ತೋ ? ನನಗೆ ಮೊದಲೇ ಗೊತ್ತಿದ್ದರೆ ಪೊಲೀಸರಲ್ಲಿ ಅವರನ್ನು ಒಳಗೆ ಬಿಡುವಂತೆ ಹೇಳಿ, ಅವರ ಜತೆ ಸಂವಾದ ಮಾಡಿ ಮಾತನಾಡೋಣ ಅಂದುಕೊಂಡಿದ್ದೆ. ಯಾಕೆಂದರೆ ನಮಗೆ ದ್ವೇಷಿಸುವುದು, ಜಗಳವಾಡುವುದು ಗೊತ್ತಿಲ್ಲ. ನಮಗೆ ಸಂವಾದ ಮಾಡಲು ಗೊತ್ತು. ಆದರೆ ಕೇಳಿಸಿಕೊಳ್ಳಲ್ಲ ಎಂದರೆ ಏನು ಮಾಡುವುದು ?
-ಪ್ರಕಾಶ್ ರೈ, ಚಲನಚಿತ್ರ ನಟ