ಬಂಡವಾಳಶಾಹಿ ವಿರುದ್ಧ ಹೋರಾಟ ಅಗತ್ಯ: ಚಿಂತಕ ಜಿ. ರಾಜಶೇಖರ್

Update: 2018-12-01 12:37 GMT

ಮಂಗಳೂರು, ಡಿ.1: ಬಂಡವಾಳಶಾಹಿಗಳು ಹಗಲು ದರೋಡೆ ಮಾಡುವ ಮೂಲಕ ಸಂಪತ್ತನ್ನು ಕೊಳ್ಳೆ ಹೊಡೆಯುತ್ತಿದ್ದು, ಶೋಷಿತರ ಹೋರಾಟದಿಂದ ಇದು ಕೊನೆಗೊಳ್ಳಬೇಕು. ಆಗ ಹೊಸ ಸಮಾಜ ಹುಟ್ಟುಹಾಕಲು ಸಾಧ್ಯವಾಗುತ್ತದೆ ಎಂದು ಚಿಂತಕ ಜಿ. ರಾಜಶೇಖರ್ ಅಭಿಪ್ರಾಯಪಟ್ಟರು.

ನಗರದ ನಂತೂರು ಶಾಂತಿಕಿರಣ ಸಭಾಂಗಣದಲ್ಲಿ ಅಭಿಮತ ಮಂಗಳೂರು ವತಿಯಿಂದ ಶನಿವಾರ ಹಮ್ಮಿಕೊಳ್ಳಲಾದ ಜನನುಡಿ 5ನೇ ಆವೃತ್ತಿಯ ‘ಭವಿಷ್ಯದ ಭಾರತ: ಮಾರ್ಕ್ಸ್- ಅಂಬೇಡ್ಕರ್- ಗಾಂಧಿ- ಲೋಹಿಯಾ’ ಎಂಬ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ಪ್ರತಿಯೊಬ್ಬ ಮನುಷ್ಯ ಸಾಮಾಜಿಕ ಜೀವಿಯಷ್ಟೇ ಅಲ್ಲ, ಬುದ್ಧಿಜೀವಿಯೂ ಹೌದು. ಬುದ್ಧಿ ಬಲದಿಂದಲೇ ಎಲ್ಲ ವ್ಯವಹಾರಗಳನ್ನು ನಡೆಸುತ್ತಾನೆ. ಯಾರದೋ ಶ್ರಮದ, ಬೆವರಲ್ಲಿ ಮತ್ತೊಬ್ಬರು ಬದುಕುತ್ತಿದ್ದಾರೆ. ದೇಶದ ಸಂಪತ್ತಿನ ಹಂಚಿಕೆಯಲ್ಲಿ ತಾರತಮ್ಯ ಅನುಸರಿಸಲಾಗುತ್ತಿದೆ. ಎಲ್ಲಡೆಯೂ ಸಮಾನತೆ ಕಾಣಬೇಕೆಂದರೆ ಮಾರ್ಕ್ಸ್‌ವಾದದ ಅವಶ್ಯಕತೆ ಇದೆ ಎಂದು ಹೇಳಿದರು.

ನೊಂದವರು, ಬಡವರು, ಶೋಷಿತರ ಹೋರಾಟದ ಉಜ್ವಲ ಪರಂಪರೆಗೆ ಸಾವಿರಾರು ವರ್ಷಗಳ ಹಿನ್ನೆಲೆಯಿದೆ. ದಲಿತರ ಮೇಲೆ ಹಲ್ಲೆಗಳು ನಡೆಯುತ್ತಾ ಬಂದಿದೆ. ತಿರುವೇಮಣಿ ದುರಂತದಲ್ಲಿ ಹಲವು ಮಂದಿ ಪ್ರಾಣ ಕಳೆದುಕೊಂಡರು. ಅವರನ್ನು ಉಳ್ಳವರು ಮನೆಯಲ್ಲಿ ಕೂಡಿಹಾಕಿ ಬೆಂಕಿ ಇಟ್ಟರು. ಹೊತ್ತಿ ಉರಿಯುತ್ತಿದ್ದ ಬೆಂಕಿಯಿಂದ ಹೊರಬಂದವರನ್ನು ಮತ್ತೆ ಬೆಂಕಿಯಲ್ಲೇ ತಳ್ಳಲಾಯಿತು. ಇದು ಐತಿಹಾಸಿಕ ದುರಂತದ ಘಟನೆಯಾಗಿದೆ. ಕರ್ನಾಟಕದಲ್ಲೂ ಕಂಬಾಲಪಲ್ಲಿಯಲ್ಲಿ ಇಂತಹದ್ದೇ ಘಟನೆ ನಡೆಯಿತು ಎಂದು ವಿವರಿಸಿದರು.

ಬಂಡವಾಳಶಾಹಿ ವ್ಯವಸ್ಥೆಯು ಶೋಷಿತ ವರ್ಗಗಳನ್ನು ನಂಬಿಸಿದೆ, ನಂಬಿಸುತ್ತಾ ಮೋಸ ಮಾಡುತ್ತಿದೆ. ಬಂಡವಾಳಶಾಹಿತ್ವದ ಕಾರ್ಯವೈಖರಿಯಲ್ಲಿ ಹಿಂಸೆ ನೇರವಾಗಿರುವುದಿಲ್ಲ. ದಬ್ಬಾಳಿಕೆ ನಿರಂಕುಶವಾದಕ್ಕಿಂತ ಸೂಕ್ಷ್ಮವಾಗಿರುತ್ತದೆ. ಮನುಷ್ಯ- ಮನುಷ್ಯನ ನಡುವೆ ಕಂದಕವನ್ನು ಉಂಟು ಮಾಡುತ್ತಾ ಮನಸುಗಳನ್ನು ಒಡೆಯುತ್ತಾರೆ ಎಂದು ಹೇಳಿದರು.

ಬರಹಗಾರ ಡಾ.ಡಿ.ಡೊಮಿನಿಕ್ ಮಾತನಾಡಿ, ಲೋಹಿಯಾ ಅವರ ಬದುಕು, ಬರಹ, ವಾಗ್ವಾದಗಳನ್ನು ಚಿಂತನೆ ಮಾಡುವ ಅಗತ್ಯವಿದೆ. ಲೋಹಿಯಾ ಅವರ ಲೇಖನಗಳು ಓದುಗರನ್ನು ಹೆಚ್ಚು ಆಕರ್ಷಿಸುತ್ತವೆ ಎಂದು ಲೋಹಿಯಾ ಅವರ ಜೀವನದ ಬಗ್ಗೆ ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News