ಪರಭಾಷಾ ಚಿತ್ರ ನೀತಿ ವಿರೋಧಿಸಿ ವಾಟಾಳ್ ನಾಗರಾಜ್ ಪ್ರತಿಭಟನೆ

Update: 2018-12-01 14:15 GMT

ಬೆಂಗಳೂರು, ಡಿ.1: ಕನ್ನಡ ಚಲನಚಿತ್ರಗಳ ನಿರ್ಲಕ್ಷ ಧೋರಣೆ ಖಂಡಿಸಿ ಪರಭಾಷಾ ಚಿತ್ರಗಳ ವೈಭವೀಕರಣ ಮಾಡುವುದನ್ನು ವಿರೋಧಿಸಿ ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು.

ಶನಿವಾರ ನಗರದ ವಾಣಿಜ್ಯ ಮಂಡಳಿ ಎದುರು ಒಕ್ಕೂಟದ ಸದಸ್ಯರೊಂದಿಗೆ ಪ್ರತಿಭಟನೆ ನಿರತರಾಗಿ ಮಾತನಾಡಿದ ಅವರು, ಪರಭಾಷೆ ಚಿತ್ರಗಳ ಹಾವಳಿಯಿಂದ ಕನ್ನಡ ಚಿತ್ರೋದ್ಯಮ ಕುಸಿಯುತ್ತಿದೆ. ಕನ್ನಡ ಚಿತ್ರದ್ಯೋಮವನ್ನು ಬೆಳೆಸಬೇಕಾದ ಚಲನಚಿತ್ರ ವಾಣಿಜ್ಯ ಮಂಡಳಿ ಕಣ್ಮುಚ್ಚಿ ಕುಳಿತಿದೆ. ಇದೇ, ಪರಿಸ್ಥಿತಿ ಮುಂದುವರೆದರೆ ಕನ್ನಡ ಚಲನಚಿತ್ರದ ಪರಿಸ್ಥಿತಿ ಚಿಂತಾಜನಕವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ತಮಿಳು, ತೆಲಗು, ಮಲೆಯಾಳಿ ಚಿತ್ರಗಳಿಗೆ ಚಿತ್ರಮಂದಿರಗಳು ಧಾರಾಳವಾಗಿ ದೊರೆಯುತ್ತವೆ. ಆದರೆ, ಕನ್ನಡ ಚಿತ್ರಗಳಿಗೆ ಚಿತ್ರಮಂದಿರಗಳು ಲಭ್ಯವಾಗುವುದಿಲ್ಲ. ಲಭಿಸಿದರೂ, ಒಂದು ವಾರ ಪೂರ್ತಿ ಪ್ರದರ್ಶನವಾಗುವುದಿಲ್ಲ. ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಬೇರೆ ಭಾಷೆಯ ನಿರ್ಮಾಪಕರು, ನಿರ್ದೇಶಕರು, ವಿತರಕರು, ಪ್ರದರ್ಶಕರು ಎಲ್ಲರೂ ಇದ್ದಾರೆ. ಹೀಗಾಗಿ ಕನ್ನಡ ಭಾಷೆಗೆ ಒತ್ತು ಕೊಡುವವರು ಕಡಿಮೆಯಾಗಿದ್ದಾರೆ ಎಂದು ಬೇಸರಪಟ್ಟರು.

ನಾಡು-ನುಡಿ, ನೆಲ-ಜಲ, ಸಾಹಿತ್ಯ-ಸಂಸ್ಕೃತಿ ಉಳಿವಿಗಾಗಿ ಕಳೆದ 50ವರ್ಷಗಳಿಂದ ಹೋರಾಟ ಮಾಡುತ್ತ ಬಂದಿದ್ದೇನೆ. ಕನ್ನಡಕ್ಕಾಗಿ ಹೋರಾಟವನ್ನು ಮುಂದುವರಿಸುತ್ತೇನೆ ಎಂದ ಅವರು, ಕನ್ನಡ ಚಲನಚಿತ್ರಗಳ ಪ್ರದರ್ಶನಕ್ಕೆ ಚಿತ್ರಮಂದಿರಗಳೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿರುವುದಕ್ಕೆ ಚಲನಚಿತ್ರ ವಾಣಿಜ್ಯ ಮಂಡಳಿಯೇ ಕಾರಣ ಎಂದು ಗಂಭೀರ ಆರೋಪ ಮಾಡಿದರು.

ರಜನಿಕಾಂತ್ ಅಭಿನಯದ 2.0 ಚಿತ್ರ ಚೆನ್ನೈನಲ್ಲಿ 500 ಪ್ರದರ್ಶನ ಕಂಡರೆ, ಬೆಂಗಳೂರಿನಲ್ಲಿ 950 ಪ್ರದರ್ಶನ ಕಾಣುತ್ತಿರುವುದು ಕನ್ನಡ ಚಲನಚಿತ್ರಗಳಿಗೆ ಮಾಡಿರುವ ಅಪಮಾನ.

-ವಾಟಾಳ್ ನಾಗರಾಜ್, ಕನ್ನಡ ಒಕ್ಕೂಟದ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News