ಎಲ್ಲ ಜಿಲ್ಲೆಗಳಲ್ಲಿ ಹೂಡಿಕೆಗೆ ಅಗತ್ಯ ನೆರವು: ಸಚಿವ ಕೆ.ಜೆ.ಜಾರ್ಜ್

Update: 2018-12-01 16:20 GMT

ಬೆಂಗಳೂರು, ಡಿ.1: ರಾಜಧಾನಿ ಬೆಂಗಳೂರು ಹೊರತುಪಡಿಸಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಹೂಡಿಕೆಗೆ ಮುಂದಾದರೆ ರಾಜ್ಯ ಸರಕಾರ ಅಗತ್ಯ ನೆರವು ಒದಗಿಸಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಕೆ.ಜೆ.ಜಾರ್ಜ್ ಹೇಳಿದರು.

ಶನಿವಾರ ಬೆಂಗಳೂರು ಅರಮನೆಯಲ್ಲಿ ನಡೆಯುತ್ತಿರುವ ಬೆಂಗಳೂರು ಟೆಕ್ ಸಮ್ಮಿಟ್‌ನಲ್ಲಿ ಮಾತನಾಡಿದ ಅವರು, ರಾಜಧಾನಿಯಲ್ಲಿ ಸಂಚಾರ ದಟ್ಟಣೆ, ಮಾಲಿನ್ಯ ಹಾಗೂ ಕಸದ ಸಮಸ್ಯೆ ಕಾರಣದಿಂದ ಇತರೆ ಜಿಲ್ಲೆಗಳಿಗೆ ಕೈಗಾರಿಕೆ ಸ್ಥಾಪಿಸಲು ನೀತಿ ರೂಪಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ವಿವಿಧ ಜಿಲ್ಲೆಗಳಲ್ಲಿ ಹಣ ಹೂಡಿಕೆ ಮಾಡಿ ಕೈಗಾರಿಕೆ ಸ್ಥಾಪಿಸುವ ಉದ್ಯಮಿಗಳಿಗೆ ಸರಕಾರ ಭೂಮಿ, ವಿದ್ಯುತ್, ನೀರು ಸೇರಿದಂತೆ ಕೈಗಾರಿಕೆಗೆ ಅಗತ್ಯವಾದ ಸೌಲಭ್ಯ ಒದಗಿಸಲಿದೆ ಎಂದ ಅವರು, ಕರ್ನಾಟಕವು ಕೈಗಾರಿಕೆಗಳ ನಿರ್ಮಾಣಕ್ಕೆ ಒಳ್ಳೆಯ ವಾತಾವರಣ ಹೊಂದಿದೆ. ಬೆಳಗಾವಿಯಲ್ಲಿ ಏರೋಸ್ಪೆಸ್ ಉದ್ಯಮ ಆರಂಭಿಸಲಾಗುತ್ತಿದೆ. ತುಮಕೂರಿನಲ್ಲಿ ಕೈಗಾರಿಕಾ ಕಾರಿಡಾರ್ ನಿರ್ಮಾಣವಾಗುತ್ತಿದೆ ಎಂದರು.

ಹಿಂದೆ ಕೈಗಾರಿಕೆಗಳೆಂದರೆ ಸರಕಾರಿ ಒಡೆತನದ ಎಚ್‌ಎಎಲ್, ಬಿಇಎಲ್, ಬಿಎಂಎಲ್ ಮಾತ್ರ ಎನ್ನುವಂತ ಭಾವನೆ ಇತ್ತು. ಈಗ ಖಾಸಗಿ ಕಂಪೆನಿಗಳು ಸರಕಾರಿ ಒಡತನದ ಕಂಪೆನಿಗಳಿಗಿಂತ ಬೃಹತ್ ಕೈಗಾರಿಕೆ ಸ್ಥಾಪಿಸುತ್ತಿವೆ ಎಂದು ಜಾರ್ಜ್ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News