ಜೂಜಾಟದ ಅಡ್ಡೆ ಮೇಲೆ ಸಿಸಿಬಿ ದಾಳಿ: 48 ಮಂದಿ ಸೆರೆ

Update: 2018-12-02 14:16 GMT

ಬೆಂಗಳೂರು, ಡಿ.2: ಮನೋರಂಜನಾ ಚಟುವಟಿಕೆಗಳಿಗೆ ಅನುಮತಿ ಪಡೆದು ಕಾನೂನು ಬಾಹಿರವಾಗಿ ಹಣ ಪಣಕ್ಕಿಟ್ಟು ಜೂಜಾಟ ಆಡಿಸುವ ಎರಡು ರಿಕ್ರಿಯೇಷನ್ ಕ್ಲಬ್‌ಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ, 5 ಲಕ್ಷ ರೂ. ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ನಗರದ ಹೊರವಲಯದ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯ ಕಾಚಮಾರನಹಳ್ಳಿ ಮಂಜುನಾಥ ರಿಕ್ರಿಯೇಷನ್ ಕ್ಲಬ್ ಮೇಲೆ ಡಿ.1 ರಂದು ದಾಳಿ ನಡೆಸಿದ ಸಿಸಿಬಿಯ ವಿಚಕ್ಷಣ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿ, ಹಣ ಪಣಕ್ಕಿಟ್ಟು ಜೂಜಾಟ ಆಡುತ್ತಿದ್ದ ಮಂಜುನಾಥ್, ರವಿ, ವಿಶ್ವನಾಥ್, ರಮೇಶ್, ನಾಗೇಶ್, ಸೇರಿದಂತೆ 29 ಮಂದಿಯನ್ನು ಬಂಧಿಸಿದ್ದಾರೆ ಎನ್ನಲಾಗಿದೆ. ದಾಳಿ ವೇಳೆ 3,92,500 ರೂ. ಹಾಗೂ 1,07500 ರೂ. ಬೆಲೆಯ 274 ಟೋಕನ್‌ಗಳು ಸೇರಿ 5 ಲಕ್ಷ ಹಾಗೂ ಪರಿಕರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಅದೇ ರೀತಿ, ಇಲ್ಲಿನ ವಸಂತ ನಗರದ ಜೂಜಾಟ ಅಡ್ಡೆಯೊಂದರ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು 2.25 ಲಕ್ಷ ರೂ.ಗಳನ್ನು ವಶಪಡಿಸಿಕೊಂಡು 19 ಜನರನ್ನು ಬಂಧಿಸಿದ್ದಾರೆ.

ಹೈಗ್ರೌಂಡ್ಸ್ ಪೊಲೀಸ್ ಠಾಣಾ ವ್ಯಾಪ್ತಿಯ ವಸಂತನಗರದ 11ನೇ ಮುಖ್ಯರಸ್ತೆಯ ಆರ್.ಆರ್ .ಛೇಂಬರ್ಸ್ 3ನೆ ಮಹಡಿಯಲ್ಲಿ ಫೈಸ್ಟಾರ್ ರಿಕ್ರಿಯೇಷನ್ ಕ್ಲಬ್ ನಡೆಯುತ್ತಿತ್ತು. ಕ್ಲಬ್‌ನಲ್ಲಿ ಮನೋರಂಜನಾ ಚಟುವಟಿಕೆಗಳ ಬದಲಾಗಿ ಹಣ ಪಣವಾಗಿಟ್ಟುಕೊಂಡು ಜೂಜಾಟ ನಡೆಸಲಾಗುತ್ತಿತ್ತು ಎನ್ನುವ ಆರೋಪ ಕೇಳಿಬಂದಿತ್ತು. ಈ ಸಂಬಂಧ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿರುವ ಸಿಸಿಬಿಯ ಪೊಲೀಸರು 19 ಜನರನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News