ಸ್ವಚ್ಛ ಸರ್ವೇಕ್ಷಣ ಅಭಿಯಾನ: ಅತ್ಯುತ್ತಮ ಸ್ಥಾನಕ್ಕಾಗಿ ಬಿಬಿಎಂಪಿ ಸರ್ವ ಪ್ರಯತ್ನ

Update: 2018-12-04 17:04 GMT

ಬೆಂಗಳೂರು, ಡಿ.4: ಕೇಂದ್ರದಿಂದ ನಡೆಯುವ ಸ್ವಚ್ಛ ಸರ್ವೇಕ್ಷಣ ಅಭಿಯಾನದ ಅಡಿಯಲ್ಲಿ ಬೆಂಗಳೂರು ನಗರಕ್ಕೆ ಅತ್ಯುತ್ತಮ ಸ್ಥಾನ ದೊರಕಿಸಿಕೊಡುವ ಸಲುವಾಗಿ ಈ ಬಾರಿ ಪಾಲಿಕೆಯು ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ. ಸಾಮಾಜಿಕ ಜಾಲತಾಣ ಹಾಗೂ ರೇಡಿಯೋಗಳ ಮೂಲಕ ಪ್ರಚಾರ ಮಾಡಲಾಗುತ್ತಿದೆ.

ಹಿಂದಿನ ಮೂರು ವರ್ಷಗಳಿಂದಲೂ ಸರ್ವೇಕ್ಷಣ ಅಭಿಯಾನದಲ್ಲಿ ಬೆಂಗಳೂರು ನಗರಕ್ಕೆ ಅತ್ಯಂತ ಕಳಪೆ ಸ್ಥಾನ ಸಿಗುತ್ತಿದೆ. ಹೀಗಾಗಿ, ಈ ಬಾರಿ ಹೇಗಾದರೂ ಮಾಡಿ ಉತ್ತಮ ಸ್ಥಾನ ಪಡೆಯಬೇಕು ಎಂದು ಅಭಿಲಾಷೆ ಹೊಂದಿರುವ ಬಿಬಿಎಂಪಿ, ಅದಕ್ಕಾಗಿ ಶತಪ್ರಯತ್ನ ಮಾಡುತ್ತಿದೆ.

ಸಾರ್ವಜನಿಕರು ಅಭಿಯಾನದಲ್ಲಿ ಭಾಗವಹಿಸಿ ನಗರದ ಸ್ವಚ್ಛತೆ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಹಿಂದೇಟು ಹಾಕುತ್ತಿರುವುದೂ ಕಳಪೆ ಸ್ಥಾನ ಸಿಗಲು ಕಾರಣವಾಗುತ್ತಿದೆ. ಆದುದರಿಂದಾಗಿ 2019ರ ಅಭಿಯಾನದಲ್ಲಿ ಸಾರ್ವಜನಿಕರು ಅತಿಹೆಚ್ಚು ಪ್ರಮಾಣದಲ್ಲಿ ಭಾಗವಹಿಸುವಂತೆ ಮಾಡಲು ಸಾಮಾಜಿಕ ಜಾಲತಾಣವನ್ನು ಬಳಸಿಕೊಳ್ಳಲಾಗುತ್ತಿದೆ.

ಖಾಸಗಿ ಸಂಸ್ಥೆಗೆ ಹೊಣೆ: ಬಿಬಿಎಂಪಿ ಪಾಲಿಕೆಯು ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ಇನ್ಸ್‌ಸ್ಟಾಗ್ರಾಂ, ಟ್ವಿಟರ್ ಸೇರಿದಂತೆ ಮತ್ತಿತರೆ ಕಡೆಗಳಲ್ಲಿ ಸರ್ವೇಕ್ಷಣ ಅಭಿಯಾನದ ಕುರಿತು ಪ್ರಚಾರ ಮಾಡುವ ಜವಾಬ್ದಾರಿಯನ್ನು ಖಾಸಗಿ ಸಂಸ್ಥೆಯೊಂದಕ್ಕೆ ವಹಿಸಲು ಪಾಲಿಕೆ ನಿರ್ಧಾರ ಮಾಡಿದೆ. ಅಭಿಯಾನಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರ ಪಾಲ್ಗೊಳ್ಳುವಿಕೆ ಹಾಗೂ ಸ್ವಚ್ಛತೆಗಾಗಿ ಕೈಗೊಳ್ಳುತ್ತಿರುವ ಕ್ರಮಗಳ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಬೇಕಾಗಿದೆ.

ಎಫ್‌ಎಂ ರೇಡಿಯೊದ ಸಹಯೋಗವನ್ನೂ ಪಾಲಿಕೆ ಪಡೆದುಕೊಂಡಿದ್ದು, ಅದರ ಮೂಲಕ ಪ್ರತಿದಿನ ಬೆಳಗ್ಗೆಯಿಂದ ಸಂಜೆವರೆಗೂ ಮಾಹಿತಿ ನೀಡಲಾಗುತ್ತಿದೆ. ಅಲ್ಲದೆ, ಜನರು ಏನು ಮಾಡಬೇಕು ಎಂಬುದನ್ನು ತಿಳಿಸಲಾಗುತ್ತಿದೆ.

2018ರ ಸ್ವಚ್ಛ ಸರ್ವೆಕ್ಷಣ ಅಭಿಯಾನದಲ್ಲಿ ದೇಶದ 4,041 ನಗರಗಳು ಪಾಲ್ಗೊಂಡಿದ್ದವು. ಅದರಲ್ಲಿ ರಾಜ್ಯದ 277 ನಗರಗಳು ಸೇರಿದ್ದವು. ಒಟ್ಟು 1,14,162 ಜನ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ, ಬಿಬಿಎಂಪಿ ವ್ಯಾಪ್ತಿಯಲ್ಲಿ 3,175 ಜನ ಮಾತ್ರ ಅಭಿಪ್ರಾಯ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News