ಅಂಬೇಡ್ಕರ್‌ರ ಪರಿನಿಬ್ಬಾಣ ದಿನ: ಬಿಎಸ್ಪಿ ನಾಯಕರಿಂದ ನಮನ

Update: 2018-12-06 17:46 GMT

ಬೆಂಗಳೂರು, ಡಿ.6: ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ 62ನೇ ಪರಿನಿಬ್ಬಾಣ ದಿನದ ಅಂಗವಾಗಿ ಗುರುವಾರ ಶಿವಾಜಿನಗರದ ಬಿಎಸ್ಪಿ ಕೇಂದ್ರ ಕಚೇರಿಯಲ್ಲಿ ಮಾಜಿ ಸಚಿವ ಎನ್.ಮಹೇಶ್ ಸೇರಿದಂತೆ ಪ್ರಮುಖ ಬಿಎಸ್ಪಿ ನಾಯಕರು ಅಂಬೇಡ್ಕರ್‌ರ ಭಾವಚಿತ್ರಕ್ಕೆ ಪುಪ್ಪ ನಮನ ಸಲ್ಲಿಸಿದರು.

ಬಳಿಕ ಮಹೇಶ್ ಮಾತನಾಡಿ, ಅಂಬೇಡ್ಕರ್ ಈ ದೇಶದ ಸಾಮಾನ್ಯ ಜನರ ಬದುಕನ್ನು ದೃಷ್ಟಿಯಲ್ಲಿಟ್ಟುಕೊಂಡು ಅವರ ಸರ್ವತೋಮುಖ ಬೆಳವಣಿಗೆಗೆ ಪೂರಕ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೆ ತರುವ ಅವಕಾಶವನ್ನು ಸಂವಿಧಾನದ ಮೂಲಕ ಮಾಡಿಕೊಟ್ಟಿದ್ದಾರೆ. ಅವರು ಯಾವುದೇ ಜಾತಿ, ಧರ್ಮಕ್ಕೆ ಸೀಮಿತವಾದವರಲ್ಲ ಎಂದು ತಿಳಿಸಿದರು.

ಇದಕ್ಕೂ ಮೊದಲು ಬಿಎಸ್ಪಿ ರಾಜ್ಯ ಉಪಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಮಾತನಾಡಿ, ಭಾರತದಂತಹ ವೈವಿಧ್ಯಮಯ ಮತ್ತು ವಿಶಾಲ ರಾಷ್ಟ್ರಕ್ಕೆ ಎಲ್ಲರೂ ಒಪ್ಪುವಂತಹ ಸಂವಿಧಾನ ನೀಡಿದ ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯ ಪೂರ್ಣಗೊಳ್ಳಲು ಸಮ ಸಮಾಜ ನಿರ್ಮಾಣವಾಗಬೇಕು ಎಂದು ನುಡಿದರು.

ಬಾಬಾ ಸಹೇಬ್ ಅವರು ಪಡೆದುಕೊಂಡ ಅಪ್ರತಿಮ ಜ್ಞಾನದ ಫಲವಾಗಿ ದೇಶಕ್ಕೆ ಅತ್ಯುನ್ನತ ಸಂವಿಧಾನವನ್ನು ಕೊಡುಗೆಯಾಗಿ ನೀಡಿದ್ದಾರೆ ಎಂದ ಅವರು, ವಿಚಾರಧಾರೆಗಳು ವಿಶ್ವ ವ್ಯಾಪಿಯಾದದ್ದು. ಅವರನ್ನು ವಿಶ್ವದಾದ್ಯಂತ ಜನ ಸ್ಮರಿಸುತ್ತಿದ್ದಾರೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಬಿಎಸ್ಪಿ ರಾಜ್ಯ ಉಸ್ತುವಾರಿ ಎಂ.ಎಲ್.ತೋಮರ್, ಬಿಎಸ್ಪಿ ರಾಜ್ಯ ಘಟಕದ ಅಧ್ಯಕ್ಷ ಹರಿರಾಮ್ ಸೇರಿದಂತೆ ಬಿಎಸ್ಪಿ ನಗರ ಘಟಕದ ಮುಖಂಡರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News