ನಂದಿ ಬೆಟ್ಟದ ಪ್ರವೇಶ ಶುಲ್ಕ ಹೆಚ್ಚಳ

Update: 2018-12-09 14:20 GMT

ಬೆಂಗಳೂರು, ಡಿ.9: ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಸಿದ್ಧ ಪ್ರವಾಸಿತಾಣವಾದ ನಂದಿ ಬೆಟ್ಟದ ಟಿಕೆಟ್ ದರವನ್ನು ಶೀಘ್ರದಲ್ಲಿಯೇ ಹೆಚ್ಚಳ ಮಾಡಲು ತೋಟಗಾರಿಕೆ ಇಲಾಖೆ ಮುಂದಾಗಿದೆ.

ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ಜಾರಿಯಾದ ಬಳಿಕ ಲಾಲ್‌ಬಾಗ್ ಹಾಗೂ ನಂದಿಬೆಟ್ಟಗಳ ಟಿಕೆಟ್ ದರಕ್ಕೆ ಜಿಎಸ್ ಟಿ ಅನ್ವಯಿಸುತ್ತದೆಯೋ ಇಲ್ಲವೋ ಎಂಬ ಗೊಂದಲವಿತ್ತು. ಹೀಗಾಗಿ, ಎಲ್ಲ ಗೊಂದಲಗಳು ಪೂರ್ತಿಯಾದ ಬಳಿಕ ದರ ನಿಗಧಿ ಮಾಡಲು ನಿರ್ಧರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕಳೆದ ತಿಂಗಳು ಲಾಲ್‌ಬಾಗ್‌ಗೆ ಹೊಸ ದರ ಜಾರಿ ಮಾಡಲಾಗಿದೆ. ಅದರ ಬೆನ್ನೆಲ್ಲೇ ನಂದಿಬೆಟ್ಟಕ್ಕೂ ಹೊಸ ದರ ಜಾರಿಗೆ ಚಿಂತನೆ ನಡೆಸಿದ್ದು, ಶೀಘ್ರದಲ್ಲಿಯೇ ಟೆಂಡರ್ ಕರೆಯುವ ಸಾಧ್ಯತೆ ಇದೆ.

ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ನಂದಿಬೆಟ್ಟಕ್ಕೆ ಪ್ರತಿದಿನ ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಶನಿವಾರ ಮತ್ತು ರವಿವಾರದಂದು 7-8 ಸಾವಿರಕ್ಕೂ ಅಧಿಕ ಜನ ಭೇಟಿ ನೀಡಲಿದ್ದಾರೆ. ಅಲ್ಲದೆ, ಬೆಟ್ಟವು ಬೆಂಗಳೂರು ನಗರಕ್ಕೆ ತುಂಬಾ ಹತ್ತಿರದಲ್ಲಿರುವುದರಿಂದ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಈ ನಿಟ್ಟಿನಲ್ಲಿ ಬೆಟ್ಟಕ್ಕೆ ಹಿಂದೆ ಇದ್ದ 10 ರೂ.ಗಳ ಶುಲ್ಕವನ್ನು 20 ರೂ.ಗೆ ಏರಿಕೆ ಮಾಡಲಾಗಿದೆ. ಅಲ್ಲದೆ, ದ್ವಿಚಕ್ರ ವಾಹನಗಳ ನಿಲುಗಡೆಗೆ 20 ರೂ.ನಿಂದ 30 ರೂ.ಗಳಿಗೆ ಹೆಚ್ಚಳ ಮಾಡಲಾಗಿದೆ ಹಾಗೂ ಕಾರುಗಳಿಗೆ 100 ರೂ.ಗಳಿದ್ದ ಶುಲ್ಕವನ್ನು 125 ಕ್ಕೆ ಏರಿಸಲಾಗಿದೆ. ಜತೆಗೆ ಬೆಟ್ಟದ ಮಾರ್ಗದಲ್ಲಿ ನಿಲ್ಲಿಸಲಾಗುವ ವಾಹನಗಳಿಗೆ 175 ರೂ.ಗಳು ಶುಲ್ಕ ವಿಧಿಸಲು ಇಲಾಖೆ ನಿರ್ಧರಿಸಿದೆ.

ಎರಡು ತಿಂಗಳಲ್ಲಿ ಟೆಂಡರ್: ಇದುವರೆಗೂ ನಂದಿ ಬೆಟ್ಟಕ್ಕೆ ಆಗಮಿಸುವ ಪ್ರವಾಸಿಗರ ಟಿಕೆಟ್ ದರಕ್ಕೆ ಜಿಎಸ್ಟಿ ವಿಧಿಸುತ್ತಿರಲಿಲ್ಲ. ಆದರೆ, ಮುಂದಿನ ದಿನಗಳಲ್ಲಿ ಹೆಚ್ಚುವರಿ ಟಿಕೆಟ್ ದರ ನಿಗಧಿ ಮಾಡಲಿದ್ದು, ಆ ಸಂಬಂಧ ಮುಂದಿನ ಎರಡು ತಿಂಗಳೊಳಗೆ ಟೆಂಡರ್ ಕರೆಯಲಿದ್ದು, ಎರಡು ವರ್ಷಗಳಲ್ಲಿ 4 ಕೋಟಿ ರೂ. ಸಂಗ್ರಹವಾಗುವ ನಿರೀಕ್ಷೆಯಿದೆ. ಟಿಕೆಟ್ ಮೇಲೆ ಶೇ.18 ರಷ್ಟು ಜಿಎಸ್ಟಿ ವಿಧಿಸಲಾಗುತ್ತಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News