ನಾಗರಿಕ ಸಮಾಜ: ರೊಹಿಂಗ್ಯಾ ನಿರಾಶ್ರಿತರು

Update: 2018-12-14 09:05 GMT

70ರ ದಶಕದ ಸಾಂಸ್ಕೃತಿಕ ಚಳವಳಿಯ ಮಹತ್ವದ ಭಾಗವಾಗಿದ್ದವರು ಶೂದ್ರ ಶ್ರೀನಿವಾಸ್. ಶೂದ್ರ ಸಾಹಿತ್ಯ ಪತ್ರಿಕೆಯ ಮೂಲಕ ಶ್ರೀನಿವಾಸ್ ಅವರು ಶೂದ್ರ ಶ್ರೀನಿವಾಸ್ ಆಗಿ ಗುರುತಿಸಿಕೊಂಡವರು. ಲಂಕೇಶ್, ಡಿ. ಆರ್. ನಾಗರಾಜ್, ಅನಂತಮೂರ್ತಿ ತಲೆಮಾರಿನ ಕೊನೆಯ ಕೊಂಡಿಯಾಗಿ ನಮ್ಮ ನಡುವೆ ಇರುವ ಶೂದ್ರ ಅವರು ಸಾಹಿತ್ಯಕವಾಗಿ ಮತ್ತು ಸಾಂಸ್ಕೃತಿಕವಾಗಿ ತಮ್ಮ ಕೆಲಸದಲ್ಲಿ ದಣಿದಿಲ್ಲ. ಯಾತ್ರೆ ಇವರ ಇತ್ತೀಚಿನ ಮಹತ್ವದ ಕಾದಂಬರಿ.

ಮ್ಯಾನ್ಮಾರ್‌ನಲ್ಲಾಗಲಿ, ಬಾಂಗ್ಲಾದೇಶದಲ್ಲಾಗಲಿ ನಿರಾಶ್ರಿತ ಶಿಬಿರಗಳು ಆರೋಗ್ಯ ಪೂರ್ಣವಾಗಿಲ್ಲ. ಅಪೌಷ್ಟಿಕ ಆಹಾರದ ಜೊತೆಗೆ ಸಂದೇಹ ಮತ್ತು ಹಿಂಸೆಯ ಮೂಲಕ ಮತ್ತಷ್ಟು ಕ್ರೌರ್ಯವನ್ನು ಎದುರಿಸುತ್ತಿದ್ದಾರೆ. ಸಾವಿರಾರು ಮಕ್ಕಳು ಪೌಷ್ಟಿಕ ಆಹಾರದ ಕೊರತೆಯಿಂದ ಸಾವಿನ ಮೊರೆಹೋಗಿರುತ್ತಾರೆ. ಇಂಥ ಹಿಂಸಾತ್ಮಕ ವಾತಾವರಣದ ನಡುವೆಯೂ ಜನ ಅವರನ್ನು ನಂಬದಂತೆ ಮಾಡುತ್ತಿದ್ದಾರೆ. ಮುಖ್ಯವಾಗಿ ಅವರಲ್ಲಿ ಬಹುಪಾಲು ಮಂದಿ ಕಳ್ಳರು, ದರೋಡೆಕೋರರು, ಭಯೋತ್ಪಾದಕರು ಇದ್ದಾರೆಂದು ಅಪಪ್ರಚಾರದ ಮೂಲಕ ಜನರ ನಡುವೆ ಭೀತಿಯನ್ನು ಬಿತ್ತಿಬಿಟ್ಟಿದ್ದಾರೆ.

ಕೆಲವು ವರ್ಷಗಳಿಂದ ಜಗತ್ತಿನ ಉದ್ದಗಲಕ್ಕೂ ಕೆಲವು ಜನಾಂಗದ ನಿರಾಶ್ರಿತರು ಒಂದೇ ಸಮನೆ ಎಲ್ಲೆಲ್ಲಿಗೋ ಅನಾಥರಾಗಿ ಕಾಲು ಚೆಂಡಿನ ರೀತಿಯಲ್ಲಿ ಒದೆಸಿಕೊಳ್ಳುತ್ತಿದ್ದಾರೆ. ಅವರಿಗೆ ಸರಿಯಾಗಿ ಮೈಮೇಲೆ ಬಟ್ಟೆಯಿರುವುದಿಲ್ಲ. ಪುಟ್ಟ ಪುಟ್ಟ ಮಕ್ಕಳನ್ನು ಕಂಕುಳಲ್ಲಿ ಮತ್ತು ಬೆನ್ನಿಗೆ ಕಟ್ಟಿಕೊಂಡು, ತಮ್ಮ ಸಂಸಾರವೆಂಬ ನಾಲ್ಕೈದು ಪಾತ್ರೆಗಳನ್ನು ತಲೆಭಾರ ಮಾಡಿಕೊಂಡಿರುತ್ತಾರೆ. ಅವರು ಈ ನೆಲದ ಮಕ್ಕಳು ಅಲ್ಲ ಎನ್ನುವ ರೀತಿಯಲ್ಲಿ; ಎಂತೆಂಥದೋ ಅನಾಗರಿಕ ಹಣೆ ಪಟ್ಟಿಗಳನ್ನು ಅಂಟಿಸಿ ಅವರನ್ನು ಗುಮಾನಿಯಿಂದ ನೋಡುತ್ತಿರುತ್ತಾರೆ. ಸುಮಾರು ವರ್ಷಗಳ ಹಿಂದೆ ಅಂಡಮಾನ್‌ನಲ್ಲಿ ಸುತ್ತಾಡುವಾಗ; ಎಲ್ಲೋ ಬೆರಳೆಣಿಕೆಯಷ್ಟು ಕಾಣಿಸಿಕೊಳ್ಳುವ ಅಲ್ಲಿಯ ಮೂಲನಿವಾಸಿಗಳ ಕಂಡಾಗ ಕರುಳು ಚುರುಕ್ ಎನ್ನುತ್ತಿತ್ತು. ಕೊನೆಗೆ ಅವರು ಹಾಗೆಯೇ ನಿರ್ನಾಮವಾಗಬಹುದು. ಎಲ್ಲೋ ಕಾಡಿನಲ್ಲಿ ಅವಿತುಕೊಂಡು ಮೈಮೇಲೆ ಬಟ್ಟೆಯಿಲ್ಲದೆ ಬಿಲ್ಲು ಬಾಣಗಳನ್ನು ಹಿಡಿದು ಸುತ್ತಾಡುವರು.ಈ ರೀತಿಯಲ್ಲಿ, ಈ ಭೂ ಮಂಡಲದಲ್ಲಿ ಎಲ್ಲೆಲ್ಲೋ ಯಾರ್ಯಾರೋ ಹೇಗೋ ಬದುಕಿ ಮರೆಯಾಗುತ್ತಿರುತ್ತಾರೆ.ಇಂಥದ್ದನ್ನೆಲ್ಲ ದೊಡ್ಡ ಪ್ರಮಾಣದಲ್ಲಿ ಪ್ರತಿನಿಧಿಸುವ ಕೆಲವು ಲಕ್ಷ ರೊಹಿಂಗ್ಯಾ ಮುಸ್ಲಿಮರ ಸ್ಥಿತಿ-ಗತಿ ಅತ್ಯಂತ ಹೀನಾಯವಾಗಿದೆ. ಒಂದು ನಾಗರಿಕ ಸಮಾಜ,ಅವರನ್ನು ಹೀಗೆ ನೋಡಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ ಎಂದು ಪದೇ ಪದೇ ಮನಸ್ಸಿನಲ್ಲಿ ಕಾಡುತ್ತಿರುತ್ತದೆ.ಆಗ ಪಾಪ ಪ್ರಜ್ಞೆಯಿಂದ, ನನ್ನ ಪಾತ್ರವೂ ಸ್ವಲ್ಪಮಟ್ಟಿಗೆ ಇರಬಹುದಲ್ಲವೇ? ಎಂಬ ಪ್ರಶ್ನೆಯು ಮುಖಾಮುಖಿಯಾಗುವುದು.

ಈ ಹಿನ್ನೆಲೆಯಲ್ಲಿ ಮೂರು ವರ್ಷಗಳ ಹಿಂದೆ ಪೋಪ್ ಫ್ರಾನ್ಸಿಸ್ ಅವರು ಮೊದಲನೆಯ ಬಾರಿಗೆ ಅಮೆರಿಕಕ್ಕೆೆ ಹೋದಾಗ; ಹೋದ ಕಡೆಯಲ್ಲೆಲ್ಲಾ; ನಾಗರಿಕ ಸಮಾಜದಲ್ಲಿ ನಿರಾಶ್ರಿತರು ಎಂಬ ಸಮಸ್ಯೆ ಇರಲೇ ಕೂಡದು. ಅವರು ಯಾವುದೇ ಜನಾಂಗಕ್ಕೆ ಸೇರಿದ್ದರೂ, ಅವರು ನಮ್ಮಂತೆಯೇ ದೇವರ ಮಕ್ಕಳು ಎಂಬ ಮನಃಸ್ಥಿತಿ ನಮ್ಮಲ್ಲಿ ಗಾಢಗೊಂಡು, ಸದಾ ಅಂತರಾಳದಲ್ಲಿ ಮಿಡಿಯುತ್ತಿರಬೇಕು.ಅದೇ ಸಂದರ್ಭದಲ್ಲಿ ಪೋಪ್ ಫ್ರಾನ್ಸಿಸ್ ಅಮೆರಿಕದ ಶ್ವೇತಭವನದಲ್ಲಿ ಸುಮಾರು ಒಂದು ಗಂಟೆಗೂ ಮೇಲ್ಪಟ್ಟು ಸೆನೆಟರ್ಸ್ ಅನ್ನು ಮತ್ತು ಬೇರೆ ಬೇರೆ ಮುಖ್ಯಸ್ಥರನ್ನು ಉದ್ದೇಶಿಸಿ ಮಾತನಾಡುವಾಗ; ನಾನು ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಅಮೆರಿಕದಂತಹ ದೊಡ್ಡ ದೇಶ ನಿರಾಶ್ರಿತರ ಸಮಸ್ಯೆಗಳ ಬಗ್ಗೆ ಕೈ ಜೋಡಿಸಬೇಕು. ಅವರು ಎಂದೆಂದಿಗೂ ಅತಂತ್ರ ಸ್ಥಿತಿಯಲ್ಲಿ ನರಳಿ ನರಳಿ, ಅವರು, ಅವರ ಭಾಷೆ ಮತ್ತು ಸಂಸ್ಕೃತಿ ನಾಶವಾಗಬಾರದು ಎಂದು ಮನವಿ ಮಾಡಿಕೊಂಡರು. ಆ ಮಾತುಗಳನ್ನು ನಾನು ಬಾಸ್ಟನ್‌ನ ಗೆಳೆಯರ ಮನೆಯಲ್ಲಿ ಕೂತು ಮನಸ್ಸಿನಲ್ಲಿ ತುಂಬಿಕೊಂಡಿದ್ದೆ. ಅದರಲ್ಲೂ ಒತ್ತಿ ಹೇಳಿದ್ದು; ರೊಹಿಂಗ್ಯಾ ಅಲ್ಪಸಂಖ್ಯಾತ ಮುಸ್ಲಿಮರ ಬಗ್ಗೆ. ಈಗಲೂ ಅವರ ಅಂತಃಕರಣ ಪೂರ್ಣ ಮಾತು ರೊಹಿಂಗ್ಯಾ ಜನಾಂಗದವರ ಸಮಸ್ಯೆಗಳ ಬಗ್ಗೆ ದಿಕ್ಸೂಚಿಯಾಗಿದೆ. ಪ್ರತಿ ದಿವಸ ಒಂದಲ್ಲ ಒಂದು ಪತ್ರಿಕೆಯಲ್ಲಿ ಮತ್ತು ಸ್ವಲ್ಪ ಮಟ್ಟಿಗೆ ಇತರ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಲೇ ಇದೆ. ಹಾಗೆಯೇ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಆಂಗ್ ಸಾನ್ ಸೂಕಿಯಂಥ ಮಹಾನ್ ನಾಯಕಿಗೆ ಕೊಟ್ಟಿದ್ದ ಕೆಲವು ಪ್ರಶಸ್ತಿಗಳನ್ನು ಮತ್ತು ಗೌರವ ಡಾಕ್ಟರೇಟ್ ಪದವಿಗಳನ್ನು ವಾಪಸು ಪಡೆದಿದ್ದಾರೆ. ಯಾಕೆಂದರೆ, ಆಕೆ ಮ್ಯಾನ್ಮಾರ್‌ನ ನಾಯಕಿಯಾಗಿ ಮಾನವೀಯ ನೆಲೆಯಲ್ಲಿ ರೊಹಿಂಗ್ಯಾ ಸಮಸ್ಯೆಯನ್ನು ನಿರ್ವಹಿಸಿಲ್ಲ ಎಂದು. ಇದಕ್ಕೆ ಸಂಬಂಧಿಸಿದಂತೆ ಆಕೆಯೂ ತನ್ನ ನಿಲುವನ್ನು ನಿರ್ದಾಕ್ಷಿಣ್ಯವಾಗಿ ಹೀಗೆ ಎಂದು ಎಲ್ಲಿಯೂ ಹೇಳಲು ಹೋಗಿಲ್ಲ. ಆಕೆಯೂ ಆಂತರಿಕವಾಗಿ ನಾನಾ ಸಮಸ್ಯೆಗಳನ್ನು ಎದುರಿಸುತ್ತಿರುವಂಥವರು. ಸೈನ್ಯದ ಆಡಳಿತದಿಂದ ಹೊರಬಂದು, ಅಧಿಕಾರವನ್ನು ಕೈಗೆ ತೆಗೆದುಕೊಂಡಿದ್ದರೂ; ಆ ಸೇನಾಡಳಿತದ ಸರ್ಪಗಾವಲಿನಿಂದ ಬಿಡುಗಡೆಯಾಗಿಲ್ಲವೆಂಬುದು ಆಕೆಯ ಅಸಹಾಯಕ ನಿಲುವಿನಿಂದ ಗೊತ್ತಾಗುತ್ತದೆ. ಅದರಲ್ಲೂ ರೊಹಿಂಗ್ಯಾ ಸಮಸ್ಯೆ ಇಷ್ಟೊಂದು ತೀವ್ರವಾಗುವುದಕ್ಕೆ ಜನಾಂಗೀಯ ದ್ವೇಷ ಬೆಳೆದು ಬಂದಿರುವ ರೀತಿ ಕಾರಣ ಎಂಬುದು ಆಕೆಗೆ ಗೊತ್ತು. ಜೊತೆಗೆ ಸೈನ್ಯ ಅವರನ್ನು ಹೀನಾಯವಾಗಿಯೇ ನೋಡಿಕೊಂಡು ಬಂದಿದೆ. ಆಕೆ ಸೈನ್ಯದಿಂದ ಅಧಿಕಾರ ಪಡೆದಿದ್ದರೂ; ಅತ್ಯಂತ ಪ್ರಿಡಾಮಿನೆಂಟ್ ಲೀಡರ್ ಎಂದು ಕರೆಸಿಕೊಂಡಿದ್ದರೂ; ಸೈನ್ಯದ ಬಿಗಿಮುಷ್ಟಿ ಎಲ್ಲೆಲ್ಲಿ ಕೆಲಸ ಮಾಡುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ಆಕೆಗೆ ಕಷ್ಟವಾಗುತ್ತಿದೆ. ಅದೂ ಅಲ್ಲದೆ ಆಕೆ ಗೃಹಬಂಧನದಿಂದ ಹೊರಗೆ ಬಂದು ಮತ್ತೆ ಚುನಾವಣೆಯ ಮೂಲಕ ಅಧಿಕಾರ ಪಡೆಯಬೇಕಾದರೆ; ಎಲ್ಲಾ ಪ್ರಜಾಪ್ರಭುತ್ವ ವಾದಿಗಳು ತನಗೆ ಬೆಂಬಲಿಸಲಿದ್ದಾರೆಂಬುದು ಆಕೆಗೆ ಗೊತ್ತು. ಆದರೂ ಯಾವುದೇ ಸಮಾಜದಲ್ಲೂ ಜನಾಂಗೀಯ ದ್ವೇಷವೆಂಬುದು ಸಾಂಕ್ರಾಮಿಕ ಪಿಡುಗು ಇದ್ದಂತೆ. ಈ ಪಿಡುಗೆ ರೊಹಿಂಗ್ಯಾ ಜನಾಂಗದ ಬಾಂಧವರನ್ನು ಕಾಲು ಚೆಂಡಾಟದ ರೀತಿಯಲ್ಲಿ, ರಾಕ್ಷಸಿ ಮನೋಭಾವನೆಯಿಂದ ಅಲ್ಲಿಯ ಜನ ನಡೆಸಿಕೊಳ್ಳುತ್ತಿದ್ದಾರೆ. ಜೊತೆಗೆ ಸೈನ್ಯವೂ ಭಾಗಿಯಾಗಿದೆ. ಹೊರಗೆ ಎಲ್ಲರಿಗೂ ಗೊತ್ತಾಗುವಂತೆ ‘‘ನೀವು ಮಾಡುತ್ತಿರುವುದು ತಪ್ಪು’’ ಎಂದು ನೇರವಾಗಿ ಹೇಳಲಾಗುವುದಿಲ್ಲ ಸೂಕಿಯಂಥವರಿಗೆ.

ರೊಹಿಂಗ್ಯಾ ಸಮುದಾಯವನ್ನು ಅಲ್ಲಿಯೇ ಹುಟ್ಟಿ ಬೆಳೆದವರು ಎಂದು ಸೂಕಿಗಿಂತ ಮುಂಚೆಯೇ ಮಿಲ್ಟ್ರಿ ಆಡಳಿತವು ತೋರಿಸಿಲ್ಲ. ಆದ್ದರಿಂದ ಅವರು ಮ್ಯಾನ್ಮಾರ್‌ನ ನಾಗರಿಕ ಹಕ್ಕುಗಳಿಂದ ವಂಚಿತರಾಗಿದ್ದಾರೆ. ಶಿಕ್ಷಣ, ಆರೋಗ್ಯ ಭಾಗ್ಯ ಯಾವುದೂ ಇಲ್ಲ. ಬೀದಿಯಲ್ಲಿ ಹೋಗುವ ಸ್ಥಳೀಯ ತುಂಟ ಹುಡುಗ ಅವರ ಕಡೆ ಕಲ್ಲು ಬೀಸಿದರೂ ಪ್ರತಿಭಟಿಸುವಂತಿಲ್ಲ. ಅಷ್ಟರ ಮಟ್ಟಿಗೆ ತುಂಬಾ ಹೀನಾಯವಾಗಿ ನೋಡಿಕೊಳ್ಳುತ್ತಿರುವ ಪರಿಸ್ಥಿತಿ ಎದುರಾಗಿದೆ. ಆದರೆ, ಅಲ್ಲಿಯ ಒಟ್ಟು ವಾತಾವರಣ ಎಷ್ಟು ವಿಷಮಯವಾಗಿದೆಯೆಂಬುದು ಗೋಚರವಾಗುತ್ತದೆ. ಹಾಗೆಯೇ ರೊಹಿಂಗ್ಯಾ ಜನಾಂಗದವರು ಬರ್ಮಿ ಭಾಷೆಯಲ್ಲಿ ಮಾತನಾಡುವುದಿಲ್ಲ. ಪರಕೀಯವಾಗಿ ಕಾಣುವುದಕ್ಕೆ ಇದೂ ಒಂದು ಕಾರಣವಾಗಿದೆ. ರೊಹಿಂಗ್ಯಾ ಭಾಷೆಯು ಅರೇಬಿಕ್, ಉರ್ದು ಮತ್ತು ರೋಮನ್ ಧ್ವನಿಯಿಂದ ಕೂಡಿದ್ದರೂ; ಅದರ ಅಕ್ಷರ ಮಾಲೆ ಬರ್ಮಾ ಭಾಷೆಯ ಅಕ್ಷರ ಮಾಲೆಯೇ. ಇವೆಲ್ಲದರ ಜೊತೆಗೆ ರೊಹಿಂಗ್ಯಾ ಜನಾಂಗದ ಆಚಾರ,ವಿಚಾರ ಎಲ್ಲವೂ ಮ್ಯಾನ್ಮಾರ್ ಸಂಸ್ಕೃತಿಯಿಂದ ದೂರ ಉಳಿದಿರುವಂಥದ್ದು. 1992ರ ಗಣತಿಯ ಪ್ರಕಾರ ಅವರನ್ನು ಅಲ್ಲಿಯ ಮೂಲ ನಿವಾಸಿಗಳೆಂದು ಸೇರಿಸಿಲ್ಲ. ಬೇರೆ ಬೇರೆ ಸಂಸ್ಕೃತಿಗೆ ಸೇರಿದ 135 ಕ್ಕೂ ಹೆಚ್ಚು ಬುಡಕಟ್ಟಿನವರನ್ನು ಮ್ಯಾನ್ಮಾರ್ ರಾಜ್ಯಾಂಗದೊಟ್ಟಿಗೆ ಬಿಟ್ಟುಕೊಂಡಿದ್ದಾರೆ. ಮತ್ತೆ ಬಹುದೊಡ್ಡ ದುರಂತವೆಂದರೆ; ರೊಹಿಂಗ್ಯಾ ಜನಾಂಗದವರಲ್ಲಿ ಎಲ್ಲಾ ರೀತಿಯ ಸಮಾಜ ಘಾತುಕ ಶಕ್ತಿಗಳು ಇವೆ. ಅವರಲ್ಲಿ ಬಹಳಷ್ಟು ಮಂದಿ ಭಯೋತ್ಪಾದಕರಾಗಿ ಪರಿವರ್ತನೆಗೊಂಡು; ಮ್ಯಾನ್ಮಾರ್‌ನ ಘನತೆಗೆ ಮತ್ತು ಸ್ಥಳೀಯ ಸಂಸ್ಕೃತಿಗೆ ಧಕ್ಕೆ ತರುವ ರೀತಿಯಲ್ಲಿ ಹೊರಗಿನ ಶಕ್ತಿಗಳಿಗೆ ಸಹಾಯ ಮಾಡುತ್ತಿದ್ದಾರೆಂದು ಒಂದೇ ಸಮನೆ ವಿಷಬೀಜ ಬಿತ್ತುತ್ತಾ ಬಂದಿದ್ದಾರೆ. ಇದರಿಂದ ರೊಹಿಂಗ್ಯಾ ಜನಾಂಗದ ಚಿಂತಕರು ಮತ್ತು ಅವರ ಬಗ್ಗೆ ಅನುಕಂಪ ಇರುವ ಯಾರೇ ಹೇಳಿದರೂ; ಅದು ಜನರ ಮೇಲೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲ. ಮೂಲಭೂತವಾದಿಗಳ ದೊಡ್ಡ ಪಿಡುಗು ಇದೇ ಅಲ್ಲವೇ?

ಈ ವಿಷಚಿಂತನೆಯ ಮೂಲಕವೇ ಕಳೆದ ಹಲವು ವರ್ಷಗಳಿಂದ ಸಾಕಷ್ಟು ಮಂದಿ ನಾಪತ್ತೆಯಾಗಿದ್ದಾರೆ. ಚಿತ್ರಹಿಂಸೆಗೆ ಒಳಪಟ್ಟು ಸತ್ತಿದ್ದಾರೆ. ನೂರಾರು ವರ್ಷಗಳಿಂದ ದುಡಿದು ಕಾಪಾಡಿದ್ದ ಆಸ್ತಿ ಪಾಸ್ತಿಯನ್ನು ಕಳೆದುಕೊಂಡಿದ್ದಾರೆ. ನಾಮಕಾವಸ್ಥೆಯ ನಿರಾಶ್ರಿತ ಶಿಬಿರಗಳಲ್ಲಿ ಸೈನ್ಯದ ಅತ್ಯಾಚಾರಕ್ಕೆ ರೊಹಿಂಗ್ಯಾ ಹೆಣ್ಣು ಮಕ್ಕಳು ಆಹುತಿಯಾಗಿದ್ದಾರೆ. ಅಂಕಿ ಅಂಶಗಳ ಸಮೇತ ಪ್ರಮುಖ ಮಾನವ ಹಕ್ಕುಗಳ ಸಂಘಟನೆಗಳು ಎತ್ತಿ ತೋರಿಸಿ ಪ್ರತಿಭಟಿಸಿವೆ. ಪ್ರತಿ ದಿವಸ ಒಂದಲ್ಲ ಒಂದು ಅಂತರ್‌ರಾಷ್ಟ್ರೀಯ ಸಂಘಟನೆಗಳು ರೊಹಿಂಗ್ಯಾ ಜನರ ಹಿಂಸೆಯ ಬಗ್ಗೆ ಪ್ರತಿಭಟನಾ ರೂಪದಲ್ಲಿ ವರದಿಗಳು ಬರುತ್ತಿವೆ. ಈ ಮಧ್ಯೆ ಏನಾದರೂ ಮಾಡಿ ಬದುಕುಳಿದವರನ್ನು ಬಾಂಗ್ಲಾ ದೇಶಕ್ಕೆ ಸಾಗ ಹಾಕಲು ಮ್ಯಾನ್ಮಾರ್ ಸರಕಾರ ಪ್ರಯತ್ನಿಸುತ್ತಿದೆ. ಒಂದಷ್ಟು ಲಕ್ಷ ಮಂದಿ ಬಾಂಗ್ಲಾ ದೇಶಕ್ಕೆ ಹೋಗಿ ನಿರಾಶ್ರಿತ ಶಿಬಿರಗಳಲ್ಲಿ ಏನೇನೂ ಅನುಕೂಲವಿಲ್ಲದೆ ನರಳುತ್ತಿದ್ದಾರೆ. ಇನ್ನು ಒಂದಷ್ಟು ಲಕ್ಷ ಮಂದಿ ಮ್ಯಾನ್ಮಾರ್‌ನ ರಬಿನೆ ಪ್ರದೇಶದಿಂದ ಹೋಗಲು ಪ್ರಯತ್ನಿಸುತ್ತಿಲ್ಲ. ನೂರಾರು ವರ್ಷಗಳಿಂದ ನಾವು ಇಲ್ಲಿ ಬದುಕಿ ಬೆಳೆದವರು; ಯಾಕೆ ನಮ್ಮನ್ನು ಹೀನಾಯವಾಗಿ ಹೊರ ದಬ್ಬುತ್ತಿದ್ದೀರಿ? ಎಂಬ ಪ್ರತಿಭಟನೆಯನ್ನು ಮುಂದಿಟ್ಟುಕೊಂಡು ನರಳುತ್ತಿದ್ದಾರೆ. ಈಗಾಗಲೇ ಅವರನ್ನೆಲ್ಲಾ ತಮ್ಮ ಮೂಲ-ನೆಲದಿಂದ ಬೇರ್ಪಡಿಸಿದ್ದಾರೆ ಹಿಂಸೆಯ ಮೂಲಕ.

ಮ್ಯಾನ್ಮಾರ್‌ನಲ್ಲಾಗಲಿ, ಬಾಂಗ್ಲಾದೇಶದಲ್ಲಾಗಲಿ ನಿರಾಶ್ರಿತ ಶಿಬಿರಗಳು ಆರೋಗ್ಯ ಪೂರ್ಣವಾಗಿಲ್ಲ. ಅಪೌಷ್ಟಿಕ ಆಹಾರದ ಜೊತೆಗೆ ಸಂದೇಹ ಮತ್ತು ಹಿಂಸೆಯ ಮೂಲಕ ಮತ್ತಷ್ಟು ಕ್ರೌರ್ಯವನ್ನು ಎದುರಿಸುತ್ತಿದ್ದಾರೆ. ಸಾವಿರಾರು ಮಕ್ಕಳು ಪೌಷ್ಟಿಕ ಆಹಾರದ ಕೊರತೆಯಿಂದ ಸಾವಿನ ಮೊರೆಹೋಗಿರುತ್ತಾರೆ. ಇಂಥ ಹಿಂಸಾತ್ಮಕ ವಾತಾವರಣದ ನಡುವೆಯೂ ಜನ ಅವರನ್ನು ನಂಬಂದಂತೆ ಮಾಡುತ್ತಿದ್ದಾರೆ. ಮುಖ್ಯವಾಗಿ ಅವರಲ್ಲಿ ಬಹುಪಾಲು ಮಂದಿ ಕಳ್ಳರು, ದರೋಡೆಕೋರರು, ಭಯೋತ್ಪಾದಕರು ಇದ್ದಾರೆಂದು ಅಪಪ್ರಚಾರದ ಮೂಲಕ ಜನರ ನಡುವೆ ಭೀತಿಯನ್ನು ಬಿತ್ತಿಬಿಟ್ಟಿದ್ದಾರೆ. ಆದರೆ ಅವರ ನಡುವೆಯೇ ಸೇವಾ ಮನೋಭಾವನೆಯಿಂದ ಕೆಲಸ ಮಾಡುವ ಮುಖ್ಯ ಸಂಘಟಕರು, ಅಂಥವರು ರೊಹಿಂಗ್ಯಾ ನಿರಾಶ್ರಿತರಲ್ಲಿ ಯಾರೂ ಇಲ್ಲ. ದಿನ ನಿತ್ಯ ಅವರು ಬದುಕನ್ನು ಎದುರಿಸುವುದೇ ಮುಖ್ಯವಾಗಿದೆ ಎಂದು ಹೇಳುತ್ತಿದ್ದರೂ; ಅಪಪ್ರಚಾರ ಒಂದೇ ಸಮನೆ ಮುಂದುವರಿಯುತ್ತಿದೆ. ಇದರ ಜೊತೆಗೆ ಬಾಂಗ್ಲಾದೇಶದಲ್ಲಿ ನಿರಾಶ್ರಿತರ ಶಿಬಿರಗಳು ಹೆಚ್ಚು ಚಂಡಮಾರುತ ಮತ್ತು ಅಧಿಕ ಮಳೆ ಸುರಿಯುವ ಪ್ರದೇಶಗಳಲ್ಲಿವೆ. ಅದರಲ್ಲೂ ಆಗಸ್ಟ್, ಸೆಪ್ಟಂಬರ್ ತಿಂಗಳಲ್ಲಿ ಜನರು ಪ್ರವಾಹದ ಭೀತಿಯಿಂದ ತತ್ತರಿಸಿ ಹೋಗಿರುತ್ತಾರೆ. ಇನ್ನು ಏನೇನೂ ಭದ್ರತೆಯಿಲ್ಲದ ಶಿಬಿರಗಳಲ್ಲಿನ ಜನರು ಪ್ರಕೃತಿಯ ನಾನಾ ವಿಧವಾದ ಭೀಕರ ಏರು ಪೇರುಗಳಿಂದ ಜರ್ಜರಿತರಾಗಿರುತ್ತಾರೆ. ಪಾಪ ಆ ನೊಂದ ಜನ ಯಾರ ಮೊರೆ ಹೋಗಬೇಕಾಗಿದೆ?. ಪತ್ರಿಕೆಗಳಲ್ಲಿ ಅವರ ವಿದ್ರಾವಕ ಚಿತ್ರಗಳನ್ನು ಮತ್ತು ವರದಿಗಳನ್ನು ಕಂಡು ನಾವೇ ನರಳಬೇಕಾದರೆ; ಪ್ರತಿಹಿಂಸೆಗೂ ಮುಖಾ-ಮುಖಿಯಾಗುವ ಆ ಜನರ ನೋವು, ವಿಷಾದ, ಆತಂಕ ಯಾವ ಪ್ರಮಾಣದಲ್ಲಿರಬಹುದು ಅನ್ನಿಸುತ್ತದೆ. ಒಮ್ಮಿಮ್ಮೆ ಮತ, ಧರ್ಮ, ಭಾಷೆ, ಪ್ರಾದೇಶಿಕತೆ ಎಂಬ ಸಂಕುಚಿತ ಮಾನದಂಡಗಳಿಂದ ನಾಗರಿಕ ಸಮಾಜವೆಂದು ಕರೆದುಕೊಳ್ಳುವ ಜನ ಸಮೂಹ ಹೇಗೆ ಅನಾಗರಿಕರಾಗುತ್ತಾರೆ, ರಾಕ್ಷಸರಾಗುತ್ತಾರೆ ಅನ್ನಿಸುತ್ತದೆ. ಮಾನವೀಯತೆಯನ್ನು ಕಳೆದುಕೊಂಡ ಎಲ್ಲಾ ಮೂಲಭೂತವಾದಿಗಳಲ್ಲಿ ಇದು ತಾಂಡವವಾಡುತ್ತಿರುತ್ತದೆ. ನೀತಿ, ನಿಯಮ, ಕಾನೂನು ಎಲ್ಲವನ್ನೂ ಪಕ್ಕಕ್ಕೆ ತಳ್ಳಿ ವ್ಯವಹರಿಸುತ್ತಿರುತ್ತಾರೆ. ಎಲ್ಲಾ ಸಮಾಜಗಳಲ್ಲೂ ಗೂಂಡಾಗಿರಿ, ದಬ್ಬಾಳಿಕೆಯೆಂಬುದು ಬಹುದೊಡ್ಡ ಪ್ರಮಾಣದಲ್ಲಿ ಬೆಳೆಯತ್ತಿದೆ. ಅವರೇ ಪ್ರತ್ಯೇಕ ಚಕ್ರಾದಿಪತ್ಯವನ್ನು ಕಟ್ಟಿಕೊಂಡಂತೆ ಅವರ ನಡಾವಳಿ ಬೆಳೆಯುತ್ತಿದೆ. ಇಂಥದ್ದನ್ನೆಲ್ಲಾ ನಿಯಂತ್ರಿಸತಕ್ಕಂಥ ನೈತಿಕ ಧೋರಣೆಯ ನಾಯಕರು ಅಸ್ತಿತ್ವ ಕಂಡುಕೊಳ್ಳುತ್ತಿಲ್ಲ. ಈ ನೆಲೆಯಲ್ಲಿ ನಮ್ಮ ನಡುವೆಯೇ ಪುಟ್ಟ ಪುಟ್ಟ ನಿರಾಶ್ರಿತ ಸಮುದಾಯಗಳು ಕಾಣಿಸಿಕೊಳ್ಳುತ್ತಿವೆ. ಇತ್ತೀಚೆಗೆ ಕೊಡಗು ಮತ್ತು ಕೇರಳದಲ್ಲಿ ಪ್ರವಾಹದಿಂದ ತತ್ತರಿಸಿ ಹೋಗಿರುವ ಸಾವಿರಾರು ಕುಟುಂಬಗಳು ಮತ್ತೆ ತಮ್ಮ ಹಳೆಯ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾ ಅನ್ನಿಸುತ್ತದೆ. ಕೊನೆಗೂ ಈ ಸಮಾಜ ಪರೋಕ್ಷವಾಗಿ ಉಳ್ಳವರು ಮತ್ತು ದರೋಡೆಕೋರರನ್ನು ಪೋಷಿಸುತ್ತಿರುತ್ತದೆಯೇನೋ ಅನ್ನಿಸುತ್ತದೆ.

ಮ್ಯಾನ್ಮಾರ್‌ನಲ್ಲಾಗಲಿ, ಬಾಂಗ್ಲಾದೇಶದಲ್ಲಾಗಲಿ ನಿರಾಶ್ರಿತ ಶಿಬಿರಗಳು ಆರೋಗ್ಯ ಪೂರ್ಣ ವಾಗಿಲ್ಲ. ಅಪೌಷ್ಟಿಕ ಆಹಾರದ ಜೊತೆಗೆ ಸಂದೇಹ ಮತ್ತು ಹಿಂಸೆಯ ಮೂಲಕ ಮತ್ತಷ್ಟು ಕ್ರೌರ್ಯವನ್ನು ಎದುರಿಸುತ್ತಿದ್ದಾರೆ. ಸಾವಿರಾರು ಮಕ್ಕಳು ಪೌಷ್ಟಿಕ ಆಹಾರದ ಕೊರತೆಯಿಂದ ಸಾವಿನ ಮೊರೆ ಹೋಗಿರುತ್ತಾರೆ. ಇಂಥ ಹಿಂಸಾತ್ಮಕ ವಾತಾವರಣದ ನಡುವೆಯೂ ಜನ ಅವರನ್ನು ನಂಬದಂತೆ ಮಾಡುತ್ತಿದ್ದಾರೆ. ಮುಖ್ಯವಾಗಿ ಅವರಲ್ಲಿ ಬಹುಪಾಲು ಮಂದಿ ಕಳ್ಳರು, ದರೋಡೆಕೋರರು, ಭಯೋತ್ಪಾದಕರು ಇದ್ದಾರೆಂದು ಅಪಪ್ರಚಾರದ ಮೂಲಕ ಜನರ ನಡುವೆ ಭೀತಿಯನ್ನು ಬಿತ್ತಿ ಬಿಟ್ಟಿದ್ದಾರೆ.

Writer - ಶೂದ್ರ ಶ್ರೀನಿವಾಸ್

contributor

Editor - ಶೂದ್ರ ಶ್ರೀನಿವಾಸ್

contributor

Similar News

ಗಾಂಧೀಜಿ