ಒಲಿದ ಸ್ವರಗಳು
1. ಬೆಟ್ಟ
ಎಷ್ಟು ನುಣ್ಣಗೆ!
ದೂರದ ಬೆಟ್ಟವನ್ನು ನೋಡಿ
ಕಣ್ಣು ಹೇಳಿತು
ಅದ ಕೇಳಿ
ಪಾದ ನಿಟ್ಟುಸಿರಿಟ್ಟಿತು
2. ತೋಟ
ಹೂವು ತೋಟ ತುಂಬಾ
ಮಾಲಿಯ
ಬೆವರಿನ ಪರಿಮಳ
3.ಸಭ್ಯ!
ಕಳ್ಳರ ಊರಿನಲ್ಲಿ
ಜೈಲಿನೊಳಗಿರುವವನೇ
ಸಭ್ಯ !
4. ಕೊನೆಯ ಪ್ರಯತ್ನ
ಕವಿಯ ನಾಲಗೆಯನ್ನು
ಕತ್ತರಿಸು
ಕಣ್ಣುಗಳನ್ನು ಕಿತ್ತು ಹಾಕು
ಕೈಗಳನ್ನೂ ತುಂಡರಿಸು
ಕಾಲನ್ನು ಮುರಿ
ಕಿವಿಗೆ ಕಾದ
ಸೀಸವನ್ನು ಹೊಯ್ಯಿ
ಅದರೂ ನಿನಗೆ
ಕೇಳುತ್ತಿದೆ ಗುಡುಗಿನಂತೆ
ಅವನ ಎದೆ ಬಡಿತ
ಬಿರುಗಾಳಿಯಂತೆ
ಅವನ ಏದುಸಿರು
ಸರ್ವಾಧಿಕಾರಿಯೇ ...
ಅದು ನಿಂತ ಬಳಿಕವಷ್ಟೇ
ನೀನು ಆ ಸಿಂಹಾಸನವನ್ನು
ಏರಬೇಕಾಗುತ್ತದೆ...!
ಅವನನ್ನು ಕೊಲ್ಲುವ
ಕೊನೆಯ ಪ್ರಯತ್ನವಾಗಿ
ಅವನಿಗೊಂದು ಪ್ರಶಸ್ತಿ
ಕೊಟ್ಟು ನೋಡು....
5. ಪದ್ಯ
ಒಲಿದ ಪದಗಳ
ಹೊಲಿದೆ
ಪದ್ಯವಾಯಿತು
6. ರಿಂಗ್ ಟೋನ್
ಇಲ್ಲವಾಗುತ್ತಿರುವ
ಹಕ್ಕಿಗಳ ಇಂಚರ
ಮೊಬೈಲ್ ರಿಂಗ್ ಟೋನ್‌ಗಳಾಗಿ
ಬದಲಾಗುತ್ತಿವೆ !!
7. ಪ್ರತಿಮೆ
ಪ್ರತಿಮೆ ಏಕತೆಯನ್ನು ಸೃಷ್ಟಿಸುತ್ತದೆಯೇ?
ಮೊನ್ನೆ ಯಾರೋ ಪ್ರತಿಮೆಗೆ
ಚಪ್ಪಲಿ ಹಾರ ಹಾಕಿದರೆಂದು
ಊರಿಗೆ ಊರೇ ಬೆಂದು ಹೋಯಿತಲ್ಲ!!!
ಅದೇನದು?
8.ಬಾಲ್ಯ
ನೆನಪುಗಳ
ಗಾಜಿನ ಚೂರುಗಳು
ಚೆಲ್ಲಿರುವ ಆ
ಬಾಲ್ಯದ ಓಣಿಯಲ್ಲಿ
ನಾ ಮತ್ತೊಮ್ಮೆ
ನಡೆಯಲಾರೆ!
9. ಶಿಲ್ಪಿ
ಮುಗಿಲೆತ್ತರದ ದೇವರನ್ನು
ಕಡೆಯಲು ಹೊರಟ ಶಿಲ್ಪಿ
ಕಡೆದಂತೆ
ಇನ್ನೂ ಖಾಲಿ ಉಳಿಯುತ್ತಿರುವ
ಅನಂತ ಆಕಾಶವನ್ನು ನೋಡಿ
ತಲೆತಗ್ಗಿಸುತ್ತಾನೆ