ಮೂರು ತಿಂಗಳೊಳಗೆ ಕೇಂದ್ರಕ್ಕೆ ಹೆಚ್ಚುವರಿ ಮಾಹಿತಿ: ಸಚಿವ ಪ್ರಿಯಾಂಕ್ ಖರ್ಗೆ

Update: 2018-12-17 16:25 GMT

ಬೆಳಗಾವಿ, ಡಿ.17: ಉತ್ತರ ಕನ್ನಡ ಜಿಲ್ಲೆಯ ದಟ್ಟ ಕಾಡುಗಳಲ್ಲಿ ವಾಸಿಸುವ ಕುಣಬಿ ಜನಾಂಗವನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಲು 2017 ರಲ್ಲಿ ಭಾರತ ಸರಕಾರಕ್ಕೆ ಶಿಫಾರಸ್ಸು ಮಾಡಲಾಗಿತ್ತು. ಆದರೆ, ಕೇಂದ್ರ ಗೃಹ ಮಂತ್ರಾಲಯವು ರಾಜ್ಯ ಸರಕಾರದ ಈ ಪ್ರಸ್ತಾವನೆಗೆ ಬೆಂಬಲ ನೀಡಿರಲಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.

ಸೋಮವಾರ ವಿಧಾನಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಶ್ರೀಕಾಂತ್ ಘೋಟ್ನೇಕರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಭಾರತದ ಮಹಾ ವಿಲೇಖನಾಧಿಕಾರಿ (ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ) ಅವರ ಪರಿಶೀಲನಾ ಅಂಶಗಳ ಬಗ್ಗೆ ಮೂರು ತಿಂಗಳೊಳಗೆ ಕೇಂದ್ರ ಸರಕಾರಕ್ಕೆ ಹೆಚ್ಚುವರಿ ಮಾಹಿತಿ ಒದಗಿಸಲಾಗುವುದು ಎಂದರು.

ಭಾರತ ಸಂವಿಧಾನದ ಅನುಚ್ಛೇದ 342 (1) ಪ್ರಕಾರ ಯಾವುದೇ ಜಾತಿಯನ್ನು ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ ಸೇರ್ಪಡೆ ಮಾಡಲು, ತೆಗೆದುಹಾಕಲು ಅಥವಾ ಮಾರ್ಪಾಡು ಮಾಡಲು ಭಾರತ ಸರಕಾರ ಸಕ್ಷಮ ಪ್ರಾಧಿಕಾರವಾಗಿರುತ್ತದೆ. ಕುಣಬಿ ಸಮುದಾಯವನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸುವ ಬಗ್ಗೆ ಕುಲಶಾಸ್ತ್ರೀಯ ಅಧ್ಯಯನವನ್ನು ನಡೆಸಿ ಈ ಸಮುದಾಯವನ್ನು ರಾಜ್ಯದ ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಲು ಕೇಂದ್ರಕ್ಕೆ 2017ರ ಅಕ್ಟೋಬರ್ 10ರಂದು ಶಿಫಾರಸ್ಸು ಮಾಡಲಾಗಿತ್ತು ಎಂದು ಅವರು ಹೇಳಿದರು.

ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯವು ಇದಕ್ಕೆ ಬೆಂಬಲ ನೀಡದ ಕಾರಣ ಮೂರು ತಿಂಗಳ ಅವಧಿಯಲ್ಲಿ ಮೈಸೂರಿನ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ಮೂಲಕ ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ ಅವರ ಪರಿಶೀಲನೆಯ ಅಂಶಗಳ ಸೂಕ್ತ ಸಮರ್ಥನೆ ಮತ್ತು ಹೆಚ್ಚುವರಿ ವಿವರಗಳನ್ನು ಪಡೆದು ಕೇಂದ್ರಕ್ಕೆ ಕಳುಹಿಸಲಾಗುವುದು ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News