ದಲಿತರ ಆಸ್ತಿಯ ಮೇಲೆ ಅತಿಕ್ರಮಣ ಆರೋಪ: ಬಿಬಿಎಂಪಿ ಕಚೇರಿ ಎದುರು ಪ್ರತಿಭಟನೆ

Update: 2018-12-20 16:07 GMT

ಬೆಂಗಳೂರು, ಡಿ.20: ದಲಿತರ ಆಸ್ತಿಯ ಮೇಲೆ ಬಿಬಿಎಂಪಿ ಅಧಿಕಾರಿಗಳು ದುರುದ್ದೇಶಪೂರ್ವಕವಾಗಿ ಅತಿಕ್ರಮಣ ನಡೆಸಲು ಮುಂದಾಗಿರುವುದನ್ನು ಖಂಡಿಸಿ ದಲಿತ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ನಗರದ ಬಿಬಿಎಂಪಿ ಕೇಂದ್ರ ಕಚೇರಿ ಎದುರು ಜಮಾಯಿಸಿದ ನೂರಾರು ಜನರು, ದಲಿತರ ಆಸ್ತಿಯ ಮೇಲೆ ಆಕ್ರಮಣ ನಡೆಸಿ, ದಲಿತರ ಮೇಲೆ ದೌರ್ಜನ್ಯ ಎಸಗಿದ ಬಿಬಿಎಂಪಿ ಅಧಿಕಾರಿಗಳು ವಿರುದ್ಧ ಘೋಷಣೆಗಳು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ದಲಿತ ಮುಖಂಡ ಎಂ.ವೆಂಕಟಸ್ವಾಮಿ, ಕೆ.ಆರ್.ಪುರದ ವಿಜ್ಞಾನ ನಗರ ವಾರ್ಡ್ ವ್ಯಾಪ್ತಿಯ ಬಸವನಗರ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ದಲಿತರಿಗೆ ಸೇರಿದ ಆಸ್ತಿಯ ಮೇಲೆ ನಗರಸಭಾ ಸದಸ್ಯ ಮತ್ತು ಆತನ ಸಹಚರರು ಬಿಬಿಎಂಪಿ ಅಧಿಕಾರಿಗಳೊಂದಿಗೆ ಶಾಮೀಲಾಗಿ ಆಕ್ರಮಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.

ಮನೋಹರ್ ಎಂಬುವವರಿಗೆ ಸೇರಿದ ಈ ಜಾಗದಲ್ಲಿ ಬಿಬಿಎಂಪಿ ಅಧಿಕಾರಿಗಳು ರಾಜಕಾಲುವೆ ಮತ್ತು ಆಸ್ತಿಗೆ ಯಾವುದೇ ಸಂಬಂಧವಿಲ್ಲದಿದ್ದರೂ, ದಲಿತರ ಆಸ್ತಿ ಎನ್ನುವ ಏಕೈಕ ಕಾರಣಕ್ಕೆ ದೌರ್ಜನ್ಯವೆಸಗಿದ್ದಾರೆ. ಅಲ್ಲದೆ, ರಾಜಕಾಲುವೆ ಮೇಲೆ ನಿರ್ಮಿಸಿರುವ ಕಟ್ಟಡಗಳನ್ನು ಹೊರತುಪಡಿಸಿ ದಲಿತರಿಗೆ ಸೇರಿದ ಆಸ್ತಿಯನ್ನು ಕಬಳಿಸಲು ಮುಂದಾಗಿದ್ದಾರೆ ಎಂದು ದೂರಿದರು.

ದಲಿತರ ಮೇಲೆ ದೌರ್ಜನ್ಯ ನಡೆಸಿರುವ ಬಿಬಿಎಂಪಿ ಅಧಿಕಾರಿಗಳಾದ ಸಹಾಯಕ ಇಂಜಿನಿಯರ್ ಮಲ್ಲಿಕಾರ್ಜುನ ಮತ್ತು ರಘು ಎಂಬುವರನ್ನು ಈ ಕೂಡಲೇ ಸೇವೆಯಿಂದ ಅಮಾನತುಗೊಳಿಸಿ ದಲಿತರ ಮೇಲಿನ ದೌರ್ಜನ್ಯ ಕಾಯ್ದೆ ಅಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬೇಕು ಹಾಗೂ ತಪ್ಪಿತಸ್ಥರನ್ನು ಕೂಡಲೇ ಬಂಧಿಸಬೇಕು ಎಂದು ಅವರು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News