ಮೇಕೆದಾಟು ನೀರಿಗಾಗಿ ಕೋಲಾರ-ಚಿಕ್ಕಬಳ್ಳಾಪುರ ನೀರಾವರಿ ಹೋರಾಟ ಸಮಿತಿ ಒತ್ತಾಯ

Update: 2018-12-22 16:33 GMT

ಬೆಂಗಳೂರು, ಡಿ.22: ಮೇಕೆದಾಟು ಯೋಜನೆಯಿಂದ ಸುಮಾರು 66 ಟಿಎಂಸಿ ನೀರು ಸಂಗ್ರಹವಾಗುತ್ತದೆ. ಹೀಗಾಗಿ, ಈ ಯೋಜನೆಯಿಂದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಶುದ್ಧ ಕುಡಿಯುವ ನೀರು ಹರಿಸಬೇಕೆಂದು ಕೋಲಾರ-ಚಿಕ್ಕಬಳ್ಳಾಪುರ ನೀರಾವರಿ ಹೋರಾಟ ಸಮಿತಿ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ಕುರುಬರಪೇಟೆ ವೆಂಕಟೇಶ್, ರಾಜ್ಯ ಸರಕಾರ ಮೇಕೆದಾಟು ಯೋಜನೆ ಮಾಡಲು ಚಿಂತಿಸಿದ್ದು, ಕೇಂದ್ರ ಸರಕಾರದ ಕೇಂದ್ರ ಜಲ ಆಯೋಗ ಈ ಯೋಜನೆಗೆ ಹಸಿರು ನಿಶಾನೆ ತೋರಿಸಿದೆ ಹಾಗೂ ಯೋಜನೆಯ ಪೂರ್ಣ ವರದಿ(ಡಿಪಿಆರ್)ಯನ್ನು ನೀಡಲು ರಾಜ್ಯ ಸರಕಾರಕ್ಕೆ ತಿಳಿಸಿದೆ. ಆದ್ದರಿಂದ, ಡಿಪಿಆರ್‌ನಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವುದಾಗಿ ತಿಳಿಸಬೇಕೆಂದು ಆಗ್ರಹ ಮಾಡಿದರು.

ಜಿಲ್ಲೆಗೆ ಕೆಸಿ ವ್ಯಾಲಿ ಮೂಲಕ ಬರುವ ಕಲುಷಿತ ನೀರು ಎಲ್ಲ ತಾಲೂಕುಗಳಿಗೂ ತಲುಪುವುದಿಲ್ಲ. ಅಲ್ಪಸಲ್ಪ ಕಲುಷಿತ ನೀರು ಜನತೆ, ಜಾನುವಾರು ಹಾಗೂ ವ್ಯವಸಾಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಹೀಗಾಗಿ, ಈ ಯೋಜನೆಯನ್ನು ಪುನರ್ ಪರಿಶೀಲಿಸಿ ಒಳ್ಳೆಯ ಯೋಜನೆ ತರುವ ಅವಶ್ಯಕತೆ ಇದೆ ಎಂದು ಹೇಳಿದರು.

ಕೋಲಾರ ಜಿಲ್ಲೆ ಇಡೀ ದೇಶಕ್ಕೆ, ವಿಶ್ವಕ್ಕೆ ಚಿನ್ನ ಕೊಟ್ಟಿದೆ, ಆದರೆ ಕೋಲಾರ ಜನತೆಗೆ ಮಾತ್ರ ಜನಪ್ರತಿನಿಧಿಗಳು ಕುಡಿಯುವ ನೀರು ಕೊಡುವಲಿ ವಿಫಲರಾಗಿದ್ದಾರೆ. ಸಮಿತಿ ಅನೇಕ ಹೋರಾಟಗಳನ್ನು ಮಾಡಿ ಸರಕಾರದ ಗಮನ ಸೆಳೆದರೂ, ಈ ಜಿಲ್ಲೆಗಳಿಗೆ ಇದುವರೆಗೂ ಒಂದು ಟಿಎಂಸಿ ನೀರನ್ನೂ ಕುಡಿಯಲು ನೀಡದೆ ಇರುವುದು ದುರಂತ ಎಂದು ಬೇಸರ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News