ಪದ್ಮಶ್ರೀ ಪುರಸ್ಕೃತೆ ಸೂಲಗಿತ್ತಿ ನರಸಮ್ಮ ವಿಧಿವಶ

Update: 2018-12-25 12:59 GMT

ಬೆಂಗಳೂರು, ಡಿ.25: ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಪದ್ಮಶ್ರೀ ಪುರಸ್ಕೃತೆ ಡಾ.ಸೂಲಗಿತ್ತಿ ನರಸಮ್ಮ(98) ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ನಗರದ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.

ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಕೃಷ್ಣಾಪುರದವರಾದ ಸೂಲಗಿತ್ತಿ ನರಸಮ್ಮ ಆಸ್ಪತ್ರೆ ಹಾಗೂ ವೈದ್ಯರಿಲ್ಲದ ಕಾಲದಲ್ಲಿ ಹೆರಿಗೆ ತಜ್ಞೆಯಾಗಿದ್ದರು. ತಮ್ಮ ಜೀವಿತಾವಧಿಯಲ್ಲಿ ನರಸಮ್ಮ 1,500ಕ್ಕೂ ಹೆಚ್ಚು ಹೆರಿಗೆ ಮಾಡಿಸಿದ್ದಾರೆ.

ಸೂಲಗಿತ್ತಿ ನರಸಮ್ಮ ಗ್ರಾಮೀಣ ಭಾಗದ ಗರ್ಭಿಣಿ ಮಹಿಳೆಯರ ಪಾಲಿಗೆ ದೇವರು ಕೊಟ್ಟ ವರವಾಗಿದ್ದರು. ಆಸ್ಪತ್ರೆ, ವೈದ್ಯರು ಇಲ್ಲದ ಕಾಲದಲ್ಲಿ ಪ್ರಸೂತಿ ತಜ್ಞೆಯಾಗಿದ್ದ ನರಸಮ್ಮನವರ ಅಪರಿಮಿತವಾದ ಸಾಧನೆಯನ್ನು ಗುರುತಿಸಿ ಕೇಂದ್ರ ಸರಕಾರವು 2018ನೇ ಸಾಲಿನಲ್ಲಿ ದೇಶದ ಪ್ರತಿಷ್ಠಿತ ನಾಗರಿಕ ಸನ್ಮಾನ ‘ಪದಶ್ಮೀ’ ನೀಡಿ ಗೌರವಿಸಿತ್ತು.

ನರಸಮ್ಮನವರ ಸೇವೆಯನ್ನು ಗುರುತಿಸಿರುವ ಹಲವು ಸಂಘ ಸಂಸ್ಥೆಗಳು, ಪ್ರಶಸ್ತಿ, ಪುರಸ್ಕಾರಗಳನ್ನು ನೀಡಿ ಗೌರವಿಸಿವೆ. 2012ರಲ್ಲಿ ಡಿ.ದೇವರಾಜ ಅರಸು ಪ್ರಶಸ್ತಿ, 2013ರಲ್ಲಿ ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ, ವಯೋಶ್ರೇಷ್ಠ ಸಮ್ಮಾನ್ ರಾಷ್ಟ್ರೀಯ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಳು ಸೇರಿದಂತೆ ಹತ್ತಾರು ಪ್ರಶಸ್ತಿ, ಪುರಸ್ಕಾರಗಳು ಸೂಲಗಿತ್ತಿ ನರಸಮ್ಮನವರಿಗೆ ಲಭಿಸಿವೆ. 2018ರಲ್ಲಿ ತುಮಕೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಪಡೆದಿದ್ದರು.

ಉಸಿರಾಟ ಹಾಗೂ ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಅವರಿಗೆ ಕೆಲ ದಿನಗಳ ಹಿಂದೆ ತುಮಕೂರಿನ ಸಿದ್ಧಗಂಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಟ್ರೆಕ್ಯಾಸ್ಟಮಿ ಚಿಕಿತ್ಸೆಯನ್ನು ನೀಡಲಾಗಿತ್ತು. ಆದರೆ, ಅವರ ಆರೋಗ್ಯ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಅವರನ್ನು ಕೆಂಗೇರಿ ಬಳಿಯ ಬಿಜಿಎಸ್ ಆಸ್ಪತ್ರೆಗೆ ಕರೆ ತಂದು ದಾಖಲಿಸಲಾಗಿತ್ತು.

ಸೂಲಗಿತ್ತಿ ನರಸಮ್ಮ ಅವರಿಗೆ 8 ಮಂದಿ ಗಂಡು ಹಾಗೂ ನಾಲ್ವರು ಹೆಣ್ಣು ಸೇರಿದಂತೆ ಒಟ್ಟು 12 ಮಂದಿ ಮಕ್ಕಳು, 36 ಮೊಮ್ಮಕ್ಕಳು ಇದ್ದಾರೆ. ಇವರಲ್ಲಿ ಹಿರಿಯ ಮಗಳು ಸೇರಿದಂತೆ ಈಗಾಗಲೇ ನಾಲ್ವರು ಮೃತಪಟ್ಟಿದ್ದಾರೆ. ಕೆಲ ದಿನಗಳಿಂದ ಉಸಿರಾಟದ ಸಮಸ್ಯೆಯಿಂದ ನರಸಮ್ಮ ಬಳಲುತ್ತಿದ್ದರು ಎಂದು ಅವರ ಪುತ್ರ ಪಾವಗಡ ಶ್ರೀರಾಮ್ ಮಾಧ್ಯಮಗಳಿಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News